1950ರಲ್ಲಿ ಚಾಮರಾಜನಗರದಲ್ಲಿ ಆರಂಭವಾದ ಚಿತ್ರಮಂದಿರ
ಕೆ. ವೆಂಕಟರಾಜು
ಇತ್ತೀಚಿನ ದಿನಗಳಲ್ಲಿ ಹಿಂದೆ ವೈಭವದಿಂದ ಮೆರೆದ ಚಲನಚಿತ್ರ ಮಂದಿರಗಳು ಇತಿಹಾಸ ಸೇರುತ್ತಿರುವ ಸುದ್ದಿಗಳೇ ಕೇಳಿಬರುತ್ತಿವೆ. ಪ್ರತಿ ಚಲನಚಿತ್ರ ಮಂದಿರ ನೆಲಸಮವಾದಾಗಲೂ ಅದರೊಡನೆ ಇರುವ ಲಕ್ಷಾಂತರ ಜನರ ಸಾವಿರದ ನೆನಪುಗಳು ಮಣ್ಣಾಗುತ್ತಿವೆ.
ಇಂತಹ ಕಾಲದಲ್ಲಿ ಚಾಮರಾಜನಗರದ ಭ್ರಮರಾಂಬ ಚಿತ್ರಮಂದಿರ ೭೫ನೇ ವರ್ಷ ಪೂರೈಸಿ ೭೬ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ ಎಂಬುದು ಚೇತೋಹಾರಿಯಾದ ಸಂಗತಿ! ಈ ಚಿತ್ರಮಂದಿರ ಬಲಭಾಗದ ಬಡಾವಣೆಗಳಿಗೆ ಭ್ರಮರಾಂಬ ಬಡಾವಣೆ ಎಂಬ ಹೆಸರಿಟ್ಟಿರುವುದು ವಿಶೇಷ. ಒಂದು ಚಿತ್ರಮಂದಿರದ ಕಾರಣ ಒಂದು ಬಡಾವಣೆಗೆ ಆ ಹೆಸರು ಇರುವುದು ರಾಜ್ಯದಲ್ಲಿ ಬಹಳ ಅಪರೂಪ.
ಈ ಚಿತ್ರಮಂದಿರ ೨೨. ೦೧. ೧೯೫೦ರಲ್ಲಿ ಆರಂಭವಾಯಿತು! ಮೊದಲ ಚಿತ್ರ ಎಸ್. ಎಸ್. ವಾಸನ್ ನಿರ್ಮಿಸಿದ ‘ಚಂದ್ರಲೇಖಾ’ ರಂಜನ್, ಟಿ. ಆರ್. ರಾಜಕುಮಾರಿ, ಎಂ. ಕೆ. ರಾಧಾ, ಎನ್. ಎಸ್. ಕೃಷ್ಣನ್, ಟಿ. ಎ. ಮಧುರಂ ನಟಿಸಿದ ಭಾರತೀಯ ಚಲನಚಿತ್ರಗಳಲ್ಲಿ ಇತಿಹಾಸ ನಿರ್ಮಿಸಿದ ಸಿನಿಮಾ. ಈ ಚಿತ್ರದಿಂದಲೇ ನಟರು, ತಂತ್ರಜ್ಞರು, ಸ್ಟುಡಿಯೋಗಳ ಅಥವಾ ಕಂಪೆನಿಗಳ, ವೇತನದಾರರಾಗದೆ ಫ್ರೀಲಾನ್ಸರ್‌ಗಳಾಗಿದ್ದು, ಅದರಲ್ಲಿಯ ‘ಡ್ರಂ ಡಾನ್ಸ್’ ಆ ಕಾಲಕ್ಕೆ ಅತ್ಯಪೂರ್ವವಾದುದು. ದೇಶದ ಎಲ್ಲ ಕಡೆಯೂ ಜನರು ಇದನ್ನು ಮುಗಿಬಿದ್ದು ನೋಡಿದರು. ಇದು ಈ ಚಿತ್ರಮಂದಿರದಲ್ಲಿ ತೆರೆ ಕಂಡ ಮೊದಲ ಚಿತ್ರ! ಈ ಎಲ್ಲ ಕಾರಣಗಳಿಂದಾಗಿ ಇದು ೧೦೦ ದಿನಗಳ ಪ್ರದರ್ಶನ ಕಂಡಿತು ಎಂದು ಹೇಳುತ್ತಾರೆ. ಆ ಕಾರಣಕ್ಕೆ ಸ್ಮರಣಿಕೆ ಪಡೆದ ಮಾಲೀಕರ ಫೋಟೊ ಇದೆ.
ಮಾಂಬಳ್ಳಿ ಸಾಹುಕಾರ್ ರೇವಣ್ಣ ದೇವರು. . .
ಇವರು ತಮ್ಮ ೩೫ನೇ ವಯಸ್ಸಿನಲ್ಲಿ ಈ ಚಿತ್ರಮಂದಿರ ನಿರ್ಮಿಸಿದರು. ಅವರ ಹೆಸರೇ ಹೇಳುವಂತೆ ಇವರು ಈ ಭಾಗದ ಶ್ರೀಮಂತರು. ಮೈಸೂರು, ಹಾಸನ ಇತ್ಯಾದಿ ಕಡೆ ನೂರಾರು ಎಕರೆ ಕೃಷಿ ಭೂಮಿ ಹೊಂದಿದ್ದರು. ಬೆಳೆದ ಫಸಲನ್ನು ವಿಶೇಷವಾಗಿ ಭತ್ತ ಸಂಗ್ರಹಿಸಿಟ್ಟುಕೊಳ್ಳಲು ಮಾಂಬಳ್ಳಿಯ ತಮ್ಮ ಮನೆಯ ಹಿಂಬದಿ ಮತ್ತು ಮೈಸೂರಿನಲ್ಲಿ ಗೋದಾಮುಗಳನ್ನು ನಿರ್ಮಿಸಿಕೊಂಡಿದ್ದರು.
ಆ ಕಾಲದಲ್ಲಿ ಇವರು ಸಣ್ಣ ಪ್ರಮಾಣದಲ್ಲಿ ಸಿನಿಮಾ ಹಂಚಿಕೆದಾರರಾಗಿದ್ದರು ಮತ್ತು ಸ್ವಗ್ರಾಮ ಮಾಂಬಳ್ಳಿಯಲ್ಲಿ ಒಂದು ಸಂಚಾರಿ ಚಿತ್ರಮಂದಿರವನ್ನು ನಡೆಸುತ್ತಿದ್ದರು. ಅವರಿಗೆ ಅಲ್ಲಿಯೇ ಒಂದು ಚಿತ್ರ ಮಂದಿರ ನಿರ್ಮಿಸಬೇಕೆಂಬ ಇರಾದೆಯೂ ಇತ್ತು. ಆಗ ಮಾಂಬಳ್ಳಿ ಮದರಾಸು ಪ್ರೆಸಿಡೆನ್ಸಿಯ ಅಂಚಿನ ಗ್ರಾಮ. ಏಕೀಕರಣದ ಮಾತು ಗಾಳಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಇವರ ಸಂಪರ್ಕಕ್ಕೆ ಬಂದ ಮತ್ತು ಕೊನೆಯ ದಿನಗಳವರೆಗೂ ಇವರ ಒಡನಾಡಿಯಾಗಿದ್ದ ಚಾಮರಾಜನಗರದ ಎನ್. ಅಶ್ವಥ್ ನಾರಾಯಣ್ (ಇವರು ಅಶ್ವಥಪ್ಪ ಎಂದೇ ಹೆಸರುವಾಸಿ) ಚಾಮರಾಜನಗರದಲ್ಲಿ ಚಿತ್ರಮಂದಿರ ನಿರ್ಮಿಸುವಂತೆ ಸಲಹೆ ನೀಡಿದ್ದರು. ಈ ಎಲ್ಲ ಕಾರಣಗಳಿಂದ ಇದು ಚಾಮರಾಜನಗರದಲ್ಲಿ ೨ನೇ ಚಿತ್ರಮಂದಿರವಾಗಿ ಆರಂಭವಾಯಿತು. ಇದಕ್ಕೂ ಮೊದಲು ಸ್ಥಳೀಯರಾಗಿದ್ದ ಬಸವಣ್ಣ ಚಾಮರಾಜನಗರದಲ್ಲಿ ಕೃಷ್ಣ ಚಿತ್ರಮಂದಿರ ನಿರ್ಮಿಸಿದ್ದರು (ಇದು ಈಗ ಇಲ್ಲ).
ಆ ದಿನಗಳು
ಭ್ರಮರಾಂಬ ಚಿತ್ರಮಂದಿರ ಒಂದು ಸುಂದರ ಕಾಂಪ್ಲೆಕ್ಸ್ ಆಗಿತ್ತು. ಅದರ ಮುಂದೆ ಇಲ್ಲಿಯ ಪಿಯುಎಸ್‌ಸಿನವರು ಬಾಲ್ ಬ್ಯಾಡ್ಮಿಂಟನ್ ಮತ್ತು ವಾಲಿಬಾಲ್ ಆಡುತ್ತಿದ್ದರು. ಚಿತ್ರಮಂದಿರದ ಒಳಗೆ ಕ್ಯಾಂಟೀನ್ ಇದ್ದು, ಪಚ್ಚಪ್ಪ ಹೋಟೆಲ್‌ನವರು ಪ್ರದರ್ಶನದ ಸಮಯದಲ್ಲಿ ತಿಂಡಿ, ಕಾಫಿ, ತಯಾರಿಸಿ ಕೊಡುತ್ತಿದ್ದರು. ಅದರ ಪಕ್ಕದಲ್ಲಿ ವಿದ್ಯುತ್ ವ್ಯತ್ಯಯವಾದರೆ ನಡೆಸಲು ಜನರೇಟರ್ ಇತ್ತು. ಅರವತ್ತರ ದಶಕದಲ್ಲಿ ಸಿನಿಮಾ ಟಿಕೆಟ್ ದರ ಮುಂದಿನ ಸೀಟಿಗೆ ೫೦ ಪೈಸೆ, ಹಿಂದೆ ೭೫ ಪೈಸೆ ಮತ್ತು ಬಾಲ್ಕನಿ ೧ ರೂ. ಇತ್ತು. ೭೫ ಪೈಸೆಯ ಸೀಟಿನ ಹಿಂದೆ ಮಹಿಳೆಯರ ಪ್ರತ್ಯೇಕ ಸೀಟುಗಳಿದ್ದವು. ಅದಕ್ಕೆ ಮಾತ್ರ ೫೦ ಪೈಸೆ. (೩೭ ಪೈಸೆ – ಆರು ಆಣೆ) ಪ್ರಾಯಶಃ ಅದಕ್ಕೂ ಹಿಂದೆ ಇನ್ನು ಕಡಿಮೆ ಇದ್ದ ಸಾಧ್ಯತೆ ಇದೆ. ಚಿತ್ರ ಮಂದಿರದ ೨ ಕಡೆ ಸೊಂಪಾಗಿ ಬೆಳೆದ ನೀಲಗಿರಿ ಮರಗಳಿದ್ದವು.
ಬಹುಭಾಷಾ ಚಿತ್ರಮಂದಿರ
ಇದೊಂದು ಬಹುಭಾಷಾ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ಚಿತ್ರಮಂದಿರ ವಾಗಿತ್ತು (ಆಗ ಕನ್ನಡ ಸಿನಿಮಾಗಳ ನಿರ್ಮಾಣ ಕಡಿಮೆ). ಚಂದ್ರಲೇಖಾ ಹಿಂದೆಯೇ ಬೇರೆ ಕಾರಣಗಳಿಗೆ ಇತಿಹಾಸ ನಿರ್ಮಿಸಿತ್ತು.
ಜಗನ್ಮೋಹಿನಿ, ಕನ್ನಡ, ತಮಿಳು ಮುಂತಾದ ಭಾಷೆಗಳಿಗೆ ಡಬ್ ಆದ ತೆಲುಗು ಚಿತ್ರ ಮಾಯಾಬಜಾರ್, ಕನ್ನಡದ ಪ್ರಸಿದ್ಧ ಚಿತ್ರಗಳಾದ ಭೂ ಕೈಲಾಸ, ಭಕ್ತ ಕನಕದಾಸ, ಶಂಕರ್ ಗುರು (೭೫ ದಿವಸ) ಜಗ ಮೆಚ್ಚಿದ ಮಗ, ಪರೋಪಕಾರಿ, ನಳ ದಮಯಂತಿ, ರಾಜಾ ವಿಕ್ರಮ, ಹಿಂದಿಯ ಫಿರ್ ಸುಬಹ ಹೋಗಿ, ನವರಂಗ್, ಝನಕ್ ಝನಕ್ ಫಾಯಲ್ ಬಾಜೆ ಮುಂತಾದ ಹಳೆಯ ಚಿತ್ರಗಳು ಇಲ್ಲಿ ತೆರೆ ಕಂಡಿವೆ. ಈ ಚಿತ್ರಮಂದಿರಕ್ಕೆ ಡಾ. ರಾಜ್ ಕುಮಾರ್ ಮತ್ತು ತೆಲುಗು ಚಿತ್ರಗಳ ನಾಯಕ ನಟ ಎ. ನಾಗೇಶ್ವರರಾವ್ ಬಂದಿ ದ್ದರು. ಒಮ್ಮೆ ಇಲ್ಲಿ ರಾಜಕುಮಾರ್ (೧೯೫೦ ದಶಕದಲ್ಲಿ) ವಾಸ್ತವ್ಯ ಮಾಡಿದ್ದರು.
ಈ ಚಿತ್ರ ಮಂದಿರ ದೊಡ್ಡ ಸಿಬ್ಬಂದಿಯನ್ನು ಸಲಹಿತ್ತು. ಮಾಲೀಕತ್ವದ ವಿಷಯದ ಬಗೆಗಿನ ವಿಷಯವಾಗಿ ೧೭ ವರ್ಷಗಳಷ್ಟು ದೀರ್ಘಕಾಲ ಚಿತ್ರಮಂದಿರ ಕಾರ್ಯ ನಿರ್ವಹಿಸಲಿಲ್ಲ. ಸಹಜವಾಗಿ ಇದರ ಬಗ್ಗೆ ಸಾಹುಕಾರ್ ರೇವಣ್ಣ ದೇವರು ಅವರ ಮಕ್ಕಳಾದ ಶಿವಬಸವ ದೇವರು ಮತ್ತು ಸೋದರರಿಗೆ ಬೇಸರ, ದುಃಖವಿದೆ. ಚಲನಚಿತ್ರದ ಈ ಸಂಕ್ರಮಣ ಕಾಲದಲ್ಲಿ ಇದು ಚಿತ್ರಮಂದಿರವಾಗಿ ಉಳಿಯುವುದೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ನಿತ್ಯ ನೂತನ
ಈಗಲೂ ಹೊಸ ವಿನ್ಯಾಸದಂತೆ ಕಾಣುವ ಭ್ರಮರಾಂಬ ಚಿತ್ರ ಮಂದಿರ ಮೈಸೂರಿನ ರಣಜಿತ್, ಗಣೇಶ, ಲಕ್ಷ್ಮಿ ಚಿತ್ರಮಂದಿರಗಳಂತೆ ಇದೆ. ಈಗಲೂ ಇದು ೭೫ ವರ್ಷಗಳಷ್ಟು ಹಳೆಯದು ಅನಿಸುವುದಿಲ್ಲ. ಬಹುಶಃ ಈ ಎಲ್ಲ ಚಿತ್ರಮಂದಿರಗಳನ್ನೂ ಒಬ್ಬರೇ ವಿನ್ಯಾಸ ಮಾಡಿರುವ ಸಾಧ್ಯತೆ ಇದೆ ಅಥವಾ ಒಬ್ಬರಿಂದ ಒಬ್ಬರು ಪ್ರಭಾವಕ್ಕೆ ಒಳಗಾಗಿರಬಹುದು. ಈ ಚಿತ್ರಮಂದಿರ ಆರಂಭವಾದಾಗಲೇ ೨ ಪ್ರೊಜೆಕ್ಟರ್ ಗಳನ್ನು ಹೊಂದಿತ್ತು. ಹಾಗಾಗಿ ತಡೆಯಿಲ್ಲದೆ ಚಲನಚಿತ್ರಗಳು ಓಡುತ್ತಿದ್ದವು. ೧೯೭೦ರ ದಶಕದಲ್ಲಿಯೂ ಕರ್ನಾಟಕದ ಅನೇಕ ತಾಲ್ಲೂಕು ಕೇಂದ್ರಗಳ ಚಿತ್ರಮಂದಿರಗಳಲ್ಲಿ ಸಿಂಗಲ್ ಪ್ರೊಜೆಕ್ಟರ್ ಗಳಿದ್ದು, ಮೂರು ಅಥವಾ ೪ ಸಲ ರೀಲುಗಳನ್ನು ಬದಲಿಸಬೇಕಿತ್ತು!
ನಮ್ಮ ಕೈಗೆ ಬಂದ ನಂತರ ಈ ಚಿತ್ರಮಂದಿರವನ್ನು ನಮ್ಮ ಅಣ್ಣನ ಆಶಯದಂತೆ ಉಳಿಸಿಕೊಂಡಿದ್ದೇವೆ. ಇನ್ನೂ ೨೦ ವರ್ಷಗಳ ಕಾಲ ಈ ಚಿತ್ರಮಂದಿರ ಏನೂ ಆಗುವುದಿಲ್ಲ ಎಂಬ ತಂತ್ರಜ್ಞರ ಹೇಳಿಕೆಯಿಂದ ಸಿನಿಮಾ ಪ್ರದರ್ಶನ ನಡೆಸುತ್ತಿದ್ದೇವೆ. ಹಿಂದೆಲ್ಲ ಈ ಟಾಕೀಸ್‌ನಲ್ಲಿ ಕಾಲಿಡಲು ಜಾಗ ಇರುತ್ತಿರಲಿಲ್ಲ. ಈಗ ಆ ವೈಭವದ ಪರಿಸ್ಥಿತಿಯಿಲ್ಲ. ಸುಂದರೇಶಮೂರ್ತಿ, ಟಾಕೀಸ್ ಮಾಲೀಕರು.
ಮಾಂಬಳ್ಳಿ ಸಾಹುಕಾರರು ಈ ಚಿತ್ರಮಂದಿರವನ್ನು ಸಾಧನೆ ಮಾಡಿ ಕಟ್ಟಿದ್ದರು. ಆ ಕಾಲಕ್ಕೆ ಭವ್ಯವಾದ ಚಿತ್ರಮಂದಿರವಾಗಿತ್ತು. ಸಾಹುಕಾರರ ಕುಟುಂಬದವರು ಮನಸ್ಸು ಮಾಡಿದ್ದರೆ ಕಲ್ಯಾಣ ಮಂಟಪ ಮಾಡಬಹುದು. ಚಿತ್ರರಂಗದ ಮೇಲಿನ ಪ್ರೀತಿಯಿಂದ ಇದು ಉಳಿದುಕೊಂಡಿದೆ. ಕನ್ನಡ, ತಮಿಳು, ಹಿಂದಿ, ತೆಲುಗು ಸಿನಿಮಾಗಳು ಪ್ರದರ್ಶನಗೊಂಡಿವೆ. ಕನ್ನಡ ಭಾಷೆ ಮತ್ತು ಕನ್ನಡ ಸಿನಿಮಾಗಳ ಬಗ್ಗೆ ಪ್ರೀತಿ ಹುಟ್ಟಿಸಿದ್ದು ಈ ಚಿತ್ರಮಂದಿರ. ಎಸ್. ಲಕ್ಷ್ಮಿನರಸಿಂಹ, ಬರಹಗಾರರು, ಚಾ. ನಗರ