Mysore
35
clear sky

Social Media

ಸೋಮವಾರ, 04 ಮೇ 2026
Light
Dark

ಎಚ್ಚರಿಕೆಯ ಘಂಟೆ ಬಾರಿಸಿದ ಅಕಾಲಿಕ ಮಳೆ

ಬೇಸಿಗೆ ಬಿಸಿಲಿನ ಝಳಕ್ಕೆ ಬೆಂದು ಬಸವಳಿಯುತ್ತಿದ್ದ ಕರ್ನಾಟಕಕ್ಕೆ ಸುರಿದ ಅಕಾಲಿಕ ಮಳೆ ತಂಪೆರೆಯಿತು ಎನ್ನುವಷ್ಟರಲ್ಲಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಅವಾಂತರ ಸೃಷ್ಟಿಸಿ, ಏಳು ಜೀವಗಳನ್ನು ಬಲಿ ಪಡೆದು ನಮ್ಮ ಆಡಳಿತ ವ್ಯವಸ್ಥೆಯನ್ನು ಅಣಕಿಸಿ, ಮುಂಬರುವ ಪೂರ್ವ ಮುಂಗಾರು ಮತ್ತು ಮುಂಗಾರು ಹಂಗಾಮಿಗೆ ಅಣಿಯಾಗುವಂತೆ ಎಚ್ಚರಿಕೆಯ ಘಂಟೆ ಬಾರಿಸಿ ಹೋಗಿದೆ.

ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರ ‘ಗಡಿ ಗೋಪುರ’ಗಳನ್ನು ದಾಟಿ ಹತ್ತಾರು ಕಿಲೋಮೀಟರ್‌ಗಳವರೆಗೆ ಕೆರೆ-ಕಟ್ಟೆಗಳು, ಗುಂಡುತೋಪುಗಳು, ಸಾಮಾಜಿಕ ಅರಣ್ಯಗಳನ್ನೆಲ್ಲವನ್ನೂ ಆಪೋಶನ ತೆಗೆದುಕೊಂಡು, ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸಿ ಅಭಿವೃದ್ಧಿ ಹೆಸರಿನ ಹಣೆಪಟ್ಟಿ ಕಟ್ಟಿದ ಪ್ರತಿಫಲವನ್ನು ಜನ ಸಾಮಾನ್ಯರು ಪ್ರತಿ ಮಳೆಗಾಲದಲ್ಲಿ ಅನುಭವಿಸುವಂತಾಗಿದೆ.

ಹಾಗೆ ನೋಡಿದರೆ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಎರಡು ದರ್ಶಕಗಳ ಹಿಂದೆಯೇ ನಿರ್ಮಿಸಲಾದ ಅವೈಜ್ಞಾನಿಕ ಅಂಡರ್‌ಪಾಸ್‌ಗಳು ಮಳೆಗಾಲದಲ್ಲಿ ‘ಮೃತ್ಯುಕೂಪ’ಗಳಾಗಿ ಪರಿಣಮಿಸುತ್ತಿವೆ. ನಗರದ ಹೃದಯ ಭಾಗದ ಮೆಜೆಸ್ಟಿಕ್‌ನಿಂದ ಯಶವಂತಪುರ ಮೂಲಕ ರಾಷ್ಟ್ರೀಯ ಹೆದ್ದಾರಿ ೪ಕ್ಕೆ ಸಂಪರ್ಕ ಕಲ್ಪಿಸುವ ಶೇಷಾದ್ರಿಪುರಂನ ರೈಲ್ವೆ ಅಂಡರ್ ಪಾಸ್‌ನಲ್ಲಿ ಪ್ರತಿ ಮಳೆಗಾಲದಲ್ಲೂ ಆಳೆತ್ತರ ನೀರು ನಿಂತು ವಾಹನಗಳು ಸಿಲುಕಿ ಸಮಸ್ಯೆ ಸೃಷ್ಟಿಸುತ್ತಿದ್ದರೂ ಈವರೆಗೆ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸವಾಗಿಲ್ಲ.

ಆಡಳಿತದ ಶಕ್ತಿಕೇಂದ್ರ ವಿಧಾನಸೌಧದ ಕೂಗಳತೆ ದೂರದಲ್ಲಿರುವ ಕೆಂಪೇಗೌಡ ವೃತ್ತದಲ್ಲಿ ನಿರ್ಮಿಸಿರುವ ಅಂಡರ್ ಪಾಸ್ ಕೂಡ ಕೆಲ ವರ್ಷಗಳ ಹಿಂದೆ ನೀರು ತುಂಬಿಕೊಂಡು ಜೀವ ಬಲಿಪಡೆದ ದುರಂತ ಸಂಭವಿಸಿತ್ತು.

ಅಂಡರ್ ಪಾಸ್‌ಗಳಷ್ಟೇ ಅಲ್ಲ, ರಸ್ತೆಗಳಲ್ಲಿನ ಗುಂಡಿಗಳು, ರಸ್ತೆ ಬದಿಗಳಲ್ಲಿನ ಮರಗಳ ರೆಂಬೆ ಕೊಂಬೆಗಳು, ಗಗನಚುಂಬಿಯಾಗಿ ತಲೆಎತ್ತಿರುವ ಜಾಹೀರಾತು -ಲಕಗಳು, ನಿರ್ಮಾಣ ಹಂತದ ಬೃಹತ್ ಕಟ್ಟಡಗಳಿಗೆ ಕಚ್ಚಾ ಸಾಮಗ್ರಿ ಸಾಗಿಸುವ ಭಾರೀ ವಾಹನಗಳ ಬೇಕಾಬಿಟ್ಟಿ ಚಾಲನೆ…ಹೀಗೆ ಜೀವನೋಪಾಯಕ್ಕಾಗಿ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಮಂದಿ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಅನಿವಾರ್ಯತೆ ಇದೆ.

ಇದರ ನಡುವೆ ಗುರುವಾರ ಸುರಿದ ಭಾರೀ ಮಳೆ ರಾಜಧಾನಿ ಬೆಂಗಳೂರಿಗರನ್ನು ಅಕ್ಷರಶಃ ಭಯಭೀತಗೊಳಿಸಿದೆ. ಬೆಂಗಳೂರಿನ ಪರಿಸ್ಥಿತಿಯೇ ಹೀಗಿರುವಾಗ ಇನ್ನೂ ರಾಜ್ಯದ ಇತರೆ ನಗರ,ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿನ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಜೋರು ಮಳೆ,ಗಾಳಿಗೆ ಯಾವುದೇ ಸಂದರ್ಭದಲ್ಲಿ ಕುಸಿದು ಬಿದ್ದು ಜೀವಹಾನಿಗೆ ಕಾದುನಿಂತಿರುವ ಬೃಹತ್ ಕಟ್ಟಡಗಳಿಗೆ ‘ಪಾರಂಪರಿಕತೆ’ಯ ಹಣೆಪಟ್ಟಿ ಕಟ್ಟಿ ಸರ್ಕಾರವೇ ಸಂರಕ್ಷಿಸುತ್ತಿರುವುದು ದುರಂತವೇ ಸರಿ. ಇದಕ್ಕಾಗಿ ಸರ್ಕಾರ ಕಾನೂನಿಗೇ ತಿದ್ದುಪಡಿ ತಂದು ನಿಯಮಗಳನ್ನು ರೂಪಿಸಬೇಕಾದ ಅವಶ್ಯವಿದೆ. ಜೊತೆಗೆ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಕಟ್ಟಡಗಳು, ನೀರಿನ ಟ್ಯಾಂಕ್‌ಗಳನ್ನು ಮಳೆಗಾಲ ಆರಂಭಕ್ಕೂ ಮುನ್ನ ದುರಸ್ತಿ ಮಾಡಬೇಕಿದೆ. ಅಪಾಯಕಾರಿಯಾಗಿ ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವ ಬೃಹತ್ ಜಾಹೀರಾತು ಫಲಕಗಳಿಗೂ ಕಡಿವಾಣ ಹಾಕಲು ನಿಯಮಾವಳಿ ರೂಪಿಸಬೇಕಿದೆ.

ಅಕಾಲಿಕ ಮಳೆಯಿಂದಾಗಿ ರಾಜಧಾನಿಯ ಪ್ರಮುಖ ರಸ್ತೆಗಳೆಲ್ಲ ಕಾಲುವೆಗಳಾಗಿ ಮಾರ್ಪಟ್ಟರೆ, ವಿಧಾನಸೌಧದ ಒಳಗೂ ನೀರು ನುಗ್ಗಿ ಅವಾಂತರ ಸೃಷ್ಟಿಸಿದ್ದು ಮಾತ್ರವಲ್ಲ ಶಿವಾಜಿ ನಗರದ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಏಳು ಜೀವಗಳನ್ನು ಬಲಿ ಪಡೆದು ಎಚ್ಚರಿಕೆ ಘಂಟೆ ಬಾರಿಸಿದೆ. ಅವಘಡ ಸಂಭವಿಸಿದ ಕೂಡಲೇ ಮಳೆಯ ನಡುವೆಯೇ ಸ್ಥಳಕ್ಕೆ ದೌಡಾಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಸ್ಥಿತಿಯನ್ನು ಅವಲೋಕಿಸಿ, ಆಸ್ಪತ್ರೆಗೆ ಭೇಟಿ ನೀಡಿ ಮೃತದೇಹಗಳನ್ನು ವೀಕ್ಷಿಸಿ, ಗಾಯಾಳುಗಳಿಂದ ಘಟನೆಯ ಮಾಹಿತಿ ಪಡೆದು, ಮೃತರ ಕುಟುಂಬಕ್ಕೆ ತಲಾ ೫ ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.

ಹಳೇಗೋಡೆ ನೋಡೋಕಾಗಲ್ವಾ…? ನಿಮ್ಮ ಮಧ್ಯೆ ಕೋ ಆರ್ಡಿನೇಷನ್ ಇರಲ್ವಾ? ಎಚ್ಚರವಹಿಸಿದ್ದರೆ ಈ ಅನಾಹುತ ತಪ್ಪಿಸಬಹುದಿತ್ತು ಎಂದು ಜಿಬಿಎ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ. ಮರುದಿನ ಜಿಬಿಎ ಆಯುಕ್ತರುಗಳ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಗರದ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ಕೂಡಲೇ ಕ್ರಮ ವಹಿಸಲು ಸೂಚನೆ ನೀಡಿದ್ದಲ್ಲದೆ, ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿದ ಅವಘಡಕ್ಕೆ ಸಂಬಂಧಪಟ್ಟ ಕಾರ್ಯಪಾಲಕ ಇಂಜಿನಿಯರ್ ಅಮಾನತ್ತಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ಐದೂ ವಲಯಗಳ ಆಯುಕ್ತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಒಣಗಿರುವ ಅಪಾಯಕಾರಿ ಮರಗಳ ರೆಂಬೆಗಳನ್ನು ಕತ್ತರಿಸಬೇಕು. ರಾಜಕಾಲುವೆಗಳಲ್ಲಿನ ಹೂಳು ತೆಗೆದು ಪ್ರವಾಹ ಉಂಟಾಗದಂತೆ ಕ್ರಮ ತೆಗೆದುಕೊಳ್ಳಬೇಕು. ಮಳೆಯಿಂದ ರಸ್ತೆಯಲ್ಲಿ ಬಿದ್ದಿರುವ ಕಸ, ರೆಂಬೆಗಳನ್ನು ಕೂಡಲೇ ತೆರವು ಮಾಡಬೇಕು. ಅಂಡರ್ ಪಾಸ್‌ಗಳಲ್ಲಿ ಮಳೆ ನೀರು ನಿಲ್ಲದಂತೆ ಹಾಗೂ ಜನ ಅಂಡರ್‌ಪಾಸ್ ಬಳಸದಂತೆ ಕೂಡಲೇ ಬ್ಯಾರಿಕೇಡ್ ಅಳವಡಿಸಿ ಎಂದೂ ಅವರು ಸೂಚಿಸಿದ್ದಾರೆ. ಆದರೆ, ಬೆಂಗಳೂರಿಗರಿಗೆ ಪ್ರತಿ ಮಳೆಗಾಲದಲ್ಲೂ ಆಳುವವರ ಈ ‘ಸೂಚನೆ’ಗಳನ್ನು ದಪ್ಪ ಚರ್ಮದ ಅಧಿಕಾರಿಗಳು ಪಾಲಿಸದಿರುವುದನ್ನು ಕಂಡು ಅಧಿಕಾರಿ ವರ್ಗಕ್ಕೆ ಹಿಡಿಶಾಪ ಹಾಕುತ್ತಲೇ ಅದೇ ದುರವಸ್ಥೆಯಲ್ಲಿ ಜೀವನ ಸಾಗಿಸಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ.

” ಕುಸಿದು ಬಿದ್ದು  ಜೀವಹಾನಿಗೆ ಕಾದುನಿಂತಿರುವ ಬೃಹತ್ ಕಟ್ಟಡಗಳಿಗೆ ‘ಪಾರಂಪರಿಕತೆ’ಯ ಹಣೆಪಟ್ಟಿ ಕಟ್ಟಿ ಸರ್ಕಾರವೇ ಸಂರಕ್ಷಿಸುತ್ತಿರುವುದು ದುರಂತವೇ ಸರಿ. ಇದಕ್ಕಾಗಿ ಸರ್ಕಾರ ಕಾನೂನಿಗೇ ತಿದ್ದುಪಡಿ ತಂದು ನಿಯಮಗಳನ್ನು ರೂಪಿಸಬೇಕಾದ ಅವಶ್ಯವಿದೆ.”

 

 

Tags:
error: Content is protected !!