ನಾಡಹಬ್ಬ ದಸರಾ ಮಹೋತ್ಸವ ಯಶಸ್ವಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವಾರು ಒತ್ತಡಗಳ ನಡುವೆಯೂ ದಸರಾ ಹಬ್ಬದಲ್ಲಿ ಯಾವುದಕ್ಕೂ ಕುಂದು ಉಂಟಾಗದಂತೆ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಎಚ್ಚರಿಸುತ್ತಾ 10 ದಿನಗಳು ಬಹುತೇಕ ಎಲ್ಲ ಕಾರ್ಯಕ್ರಮಗಳೂ ನಿರೀಕ್ಷೆಯಂತೆ ಅದ್ದೂರಿಯಾಗಿಯೇ ನಡೆಯುವಂತೆ ಆಸ್ಥೆ ತೋರಿದ್ದು ವಿಶೇಷ. ಅ3ರಿಂದ ನಾಡಹಬ್ಬ ಆರಂಭವಾಗಿ 12ರಂದು ಅಪಾರ ಜನಸ್ತೋಮದ ಸಾಕ್ಷಿಯಾಗಿ ನಡೆದ ಜಂಬೂಸವಾರಿ ಹಾಗೂ ಬನ್ನಿಮಂಟಪದಲ್ಲಿ ನಡೆದ ಪಂಜಿನ ಕವಾಯತು ಪ್ರದರ್ಶನದೊಂದಿಗೆ ಸಂಪನ್ನಗೊಂಡಿದೆ.
ಕಳೆದ ವರ್ಷ ಬರಗಾಲ ಎಂಬ ಕಾರಣಕ್ಕೆ ಸಾಂಪ್ರದಾಯಿಕವಾಗಿ ದಸರಾ ಆಚರಿಸಲಾಗಿತ್ತು. ಈ ಬಾರಿ ಉತ್ತಮವಾಗಿ ಸುರಿದಿದ್ದು, ಅದ್ಧೂರಿಯಾಗಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಅದರಂತೆ ದಸರಾ ವ್ಯವಸ್ಥಿತವಾಗಿ ವೈಭವದಿಂದ ನಡೆಯಿತು. ಜಂಬೂಸವಾರಿಯಲ್ಲಿ ಕಲಾತಂಡಗಳ ವೈಭವ, ಸ್ತಬ್ಧಚಿತ್ರಗಳ ಸಾಮಾಜಿಕ ಸಂದೇಶ ಗಮನ ಸೆಳೆದವು. ಪಂಜಿನ ಕವಾಯತು ಪ್ರದರ್ಶನದ ವೇಳೆ ರಾಜ್ಯಪಾಲರಾದ ಥಾವರ್‌ಚಂದ್`ಗೆಹ್ಲೋಟ್ ಗೌರವ ವಂದನೆ ಸ್ವೀಕರಿಸುವ ಮೂಲಕ ಹಲವು ಅನುಮಾನಗಳಿಗೆ ತೆರೆ ಎಳೆದರು.
ಸುಮಾರು ಒಂದೂವರೆ ತಿಂಗಳ ಮುಂಚೆಯೇ ಗಜಪಡೆಯನ್ನು ಸಾಂಸ್ಕೃತಿಕ ನಗರಿಗೆ ಕರೆತರುವ ಮೂಲಕ ದಸರಾಗೆ ಸಾಂಕೇತಿಕವಾಗಿ ಮುನ್ನುಡಿ ಬರೆಯಲಾಗಿತ್ತು. ಎರಡು ಹಂತಗಳಲ್ಲಿ ಬಂದ ಗಜಪಡೆಯಲ್ಲಿ ಒಟ್ಟು 14 ಅನೆಗಳಿದ್ದವು, ಎಂದಿನಂತೆ ಅಭಿಮನ್ಯುವೇ ಅಂಬಾರಿ ಆನೆಯಾಗಿದ್ದು, ಅರಣ್ಯ ಅಧಿಕಾರಿಗಳು, ಮಾವುತರು, ಸಾರ್ವಜನಿಕರಿಂದಲೂ ವಿಶೇಷ ಗೌರವಕ್ಕೆ ಪಾತ್ರವಾಯಿತು. ಧನಂಜಯ ಮತ್ತು ಕಂಜನ್ ಆನೆಗಳ ನಡುವೆ ಗುದ್ದಾಟ ನಡೆದಾಗ ಸಹಜವಾಗಿ ಸಾರ್ವಜನಿಕರಲ್ಲಿ ಒಂದು ರೀತಿಯ ಭೀತಿ ತಲೆಯೆತ್ತಿತ್ತು, ಆದರೆ, ಮಾವುತರ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿತು. ಅಲ್ಲದೆ, ಹಲವು ದಿನಗಳಲ್ಲಿ ಉಭಯ ಆನೆಗಳೂ ಹೊಂದಿಕೊಂಡಿದ್ದು ಮಾವುತರಿಗೆ, ಅಧಿಕಾರಿಗಳಿಗೆ ಸಮಾಧಾನ ತಂದಿತು.
ಚಾಮುಂಡಿಬೆಟ್ಟದಲ್ಲಿ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರು ದಸರಾ ಉತ್ಸವಕ್ಕೆ ಚಾಲನೆ ನೀಡಿದ್ದರು. ಮೊದಲ ದಿನವೇ ಬಹುತೇಕ ಎಲ್ಲ ವಿಶೇಷ ಕಾರ್ಯಕ್ರಮಗಳೂ ಆರಂಭವಾಗಿದ್ದವು, ಆಹಾರ ಮೇಳ, ಪುಸ್ತಕ ಮೇಳ, ಫಲಪುಷ್ಪ ಪ್ರದರ್ಶನ, ಮೈಸೂರಿನ ಪ್ರಮುಖ ತಾಣಗಳನ್ನು ರಾತ್ರಿವೇಳೆ ವರ್ಣರಂಜಿತಗೊಳಿಸಿ ವಿದ್ಯುತ್ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು ಅಡಚಣೆ ಇಲ್ಲದೆ ನಡೆದವು. ಅದರಲ್ಲಿಯೂ ದಸರಾ ವಸ್ತು ಪ್ರದರ್ಶನವು ಇದೇ ಮೊದಲ ಬಾರಿಗೆ ಉದ್ಘಾಟನೆಯ ದಿನವೇ ಬಹುತೇಕ ಪೂರ್ಣಗೊಂಡಿತ್ತು, ಪ್ರತಿವರ್ಷ ವಸ್ತು ಪ್ರದರ್ಶನದಲ್ಲಿ ಅರೆಬರೆ ಸಿದ್ಧತೆ ಸಾಮಾನ್ಯ ಎಂಬಂತಾಗಿತ್ತು.
ನಿರೀಕ್ಷೆಗಿಂತ ಅಧಿಕವಾಗಿಯೇ ಸುರಿದ ಮಳೆಯು ಆಗೀಗ ದಸರಾದಲ್ಲಿ ಜನರ ಪಾಲ್ಗೊಳ್ಳುವಿಕೆಗೆ ಅಡ್ಡಿ ಉಂಟು ಮಾಡಿತ್ತು. ಇದೇ ಮೊದಲ ಬಾರಿಗೆ ಯುವ ದಸರಾ ಕಾರ್ಯಕ್ರಮವನ್ನು ಮಹಾರಾಜ ಕಾಲೇಜು ಮೈದಾನದಿಂದ ವರ್ತುಲ ರಸ್ತೆಯಲ್ಲಿರುವ ಉತ್ತನಹಳ್ಳಿ ಬಳಿಯ ವಿಶಾಲವಾದ ಮೈದಾನಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆರಂಭದಲ್ಲಿ ಸಾರ್ವಜನಿಕ ವಲಯದಲ್ಲಿ ಜನವಸತಿ ಪ್ರದೇಶದಿಂದ ದೂರವಾಯಿತು ಎಂಬ ಕಾರಣದಿಂದ ದೊಡ್ಡಪ್ರಮಾಣದಲ್ಲಿ ಜನರು ಸೇರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಆದರೆ, ಆ.6ರಿಂದ 10ರವರೆಗೆ ನಡೆದ ಯುವ ದಸರಾ ಇದನ್ನೆಲ್ಲ ಹುಸಿಗೊಳಿಸಿತು. ಪ್ರಥಮ ದಿನ ಚಲನಚಿತ್ರ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಅವರ ಗಾಯನ ಕಾರ್ಯಕ್ರಮದಿಂದ ಆರಂಭವಾದ ಯುವ ದಸರಾ, ರವಿ ಬನ್ನೂರು, ಸಂಗೀತತ ಲೋಕದ ದಿಗ್ಗಜ ಎ.ಆರ್.ರೆಹಮಾನ್ ಮತ್ತು ಸುಪ್ರಸಿದ್ಧ ಸಂಗೀತ ಸಂಯೋಜಕ ಇಳಯರಾಜ ಅವರ ಅದ್ಭುತ ಪ್ರದರ್ಶನಗಳೊಂದಿಗೆ ಯುವಜನರ ಹೃದಯಗಳಲ್ಲಿ ಹರ್ಷೋಲ್ಲಾಸದ ಧಾರೆಯನ್ನೇ ಹರಿಸಿತ್ತು.
ಈ ವರ್ಷದ ದಸರಾದ ಮತ್ತೊಂದು ವಿಶೇಷವೆಂದರೆ ಡ್ರೋನ್ ಚಮತ್ಕಾರ, ಪಂಚಿನ ಕವಾಯತು ವೇಳೆ ಪೊಲೀಸರು ಪ್ರದರ್ಶಿಸಿದ ರೋಮಾಂಚನಕಾರಿ ಕಸರತ್ತುಗಳ ನಂತರ, ಕಾರ್ಮುಗಿಲಿನಲ್ಲಿ ಸೆಸ್ಕ್ ವತಿಯಿಂದ ಪ್ರದರ್ಶಿಸಿದ ಡ್ರೋನ್ ಬೆಳಕಿನ ಚಿತ್ತಾರ ನೋಡುಗರನ್ನು ಬೆರಗುಗೊಳಿಸಿತು.
ಪ್ರತಿವರ್ಷ ಸ್ಕೌಟ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸುತ್ತಿದ್ದ ಆಹಾರ ಮೇಳವನ್ನು ಇದೇ ಮೊದಲ ಬಾರಿಗೆ ಮಹಾರಾಜ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು. ಅರಮನೆ ಅಂಗಳದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗೀತಾ ಕಟ್ಟಿ ಮುಂತಾದ ಸಂಗೀತ ಕ್ಷೇತ್ರದ ಮಹನೀಯರ ಕಾರ್ಯಕ್ರಮಗಳು, ಜಾನಪದ ನೃತ್ಯಗಳು ಕೂಡ ಪ್ರೇಕ್ಷಕರ ಮನಸೂರೆಗೊಂಡವು. ಒಂದೆರಡು ದಿನಗಳು ಮಳೆಯ ನಡುವೆಯೂ ಜನರು ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಿದ್ದು ಗಮನಾರ್ಹ. ಇಡೀ ದಸರಾ ಆಯೋಜನೆಯಲ್ಲಿ ಪೊಲೀಸರ ಶ್ರಮ ಅಪಾರವಾಗಿತ್ತು. ಸರ್ಕಾರಿ ಅಧಿಕಾರಿಗಳು ಕೂಡ ಕಾರ್ಯಕ್ರಮಗಳನ್ನು ಚೆನ್ನಾಗಿ ರೂಪಿಸಿದ್ದರು.