Mysore
29
scattered clouds
Light
Dark

ಜೈಲುಗಳಲ್ಲಿ ‘ವಿಶೇಷ ಆತಿಥ್ಯ’; ಬುಡಮಟ್ಟ ನಿರ್ಮೂಲನೆ ಅಗತ್ಯ

ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ವೇಳೆ ಪಾಲ್ಗೊಂಡ ಚಹ ಕೂಟ ರಾಜ್ಯಾದ್ಯಂತ ಚರ್ಚೆಗೆ ಒಳಗಾಗಿದೆ. ಅದೇ ಕಾರಣಕ್ಕೆ ದರ್ಶನ್ ಅವರನ್ನು ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.

ಜೈಲುಗಳು, ಅಪರಾಧಿ ಅಥವಾ ಆರೋಪಿಗಳು ತಪ್ಪುಗಳನ್ನು ತಿದ್ದಿಕೊಂಡು ಸಕಾರಾತ್ಮಕ ಚಿಂತನೆಗಳಿಗೆ ಪೂರಕವಾಗಿ ಕಠಿಣ ಹಾಗೂ ಶಿಸ್ತುಬದ್ಧ ಜೀವನ ಶೈಲಿಯನ್ನು ಮೈಗೂಡಿಸಿಕೊಳ್ಳುವುದನ್ನು ಕಲಿಸುವ ಶಾಲೆಗಳಾಗಬೇಕು. ಆದರೆ, ದರ್ಶನ್ ಪ್ರಕರಣ ಕಾರಾಗೃಹವು ವಿಲಾಸಿ ಜೀವನಕ್ಕೂ ತೆರೆದುಕೊಂಡಿದೆ ಎಂಬಂತೆ ಬಿಂಬಿತವಾಗಿದೆ. ಹಾಗಂತ ಇದೇ ಮೊದಲೇನಲ್ಲ ಅಥವಾ ಕೇವಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾತ್ರವೇ ಇದು ನಡೆಯುವುದಿಲ್ಲ ಎಂಬುದು ಬಳ್ಳಾರಿ ಕಾರಾಗೃಹದಲ್ಲೂ ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತದೆ ಎಂಬುದಾಗಿ ಮಾಜಿ ಕೈದಿಯೊಬ್ಬರು ಹೇಳಿರುವುದರ ಮೂಲಕ ಬಹಿರಂಗ ವಾಗಿದೆ. ಇದು ಅತ್ಯಂತ ಗಂಭೀರವಾಗಿ ಚಿಂತಿಸಬೇಕಾದ ಸಂಗತಿ.

ದುರುದ್ದೇಶದಿಂದಲೋ ಅಥವಾ ಆಕಸ್ಮಿಕವಾಗಿಯೋ ಅಪರಾಧ ಎಸಗಿದವರು, ಇನ್ನೂ ತೀರ್ಪು ಹೊರಬೀಳದವಿಚಾರಣಾಧೀನ ಕೈದಿಗಳು ಜೈಲುವಾಸ ಅನುಭವಿಸುವುದು ಸಹಜ. ಅಲ್ಲಿ ನ್ಯಾಯ, ಸಾಮಾಜಿಕ ಬದುಕಿನಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾದ ಅನಿವಾರ್ಯತೆಯನ್ನು ಕಲಿಯಬೇಕು. ಇತಿಮಿತಿಯ ಊಟ, ಅತ್ಯಂತ ಕನಿಷ್ಠ ಮೂಲಸೌಕರ್ಯಗಳನ್ನು ಬಳಸುವುದು, ಅದರ ಕಷ್ಟಗಳೇನು ಎಂಬುದೇ ಜೈಲಿನಿಂದ ಹೊರಬರುವವರು ಕಲಿಯಬೇಕಾದ ಪಾಠವಾಗಿರುತ್ತದೆ. ಧನಿಕರು, ಬಡವರು ಯಾರೇ ಆರೋಪಿಯಾಗಿದ್ದರೂ ಕಾರಾಗೃಹಗಳಲ್ಲಿ ಒಂದೇ ಬಗೆಯ ‘ಆತಿಥ್ಯ’ ಎಂಬುದು ಕಾನೂನು. ಹೀಗಿರುವಾಗ ಸೆಲೆಬ್ರಿಟಿಗಳು, ಸಾಹುಕಾರರು ಎಂಬ ವಿಶೇಷಣಗಳನ್ನು ಹೊಂದಿರುವ ಕಾರಣಕ್ಕೆ ಆರೋಪಿಗಳು ಅಥವಾ ಅಪರಾಧಿಗಳಿಗೆ ಐಷಾರಾಮಿ ಸೌಲಭ್ಯ ಕಲ್ಪಿಸುವುದು ಕಾನೂನುಬಾಹಿರವಾಗುತ್ತದೆ.

ದರ್ಶನ್ ಪ್ರಕರಣ ಮಾತ್ರವಲ್ಲದೆ, ರೌಡಿಯೊಬ್ಬ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವ ವಿಡಿಯೋ ಕೂಡ ಬಹಿರಂಗವಾಗಿರುವುದು ಪ್ರಸ್ತಾಪಾರ್ಹ. ಕಾರಾಗೃಹದೊಳಗೆ ‘ಸಂತೋಷ ಕೂಟಗಳು ಪೊಲೀಸರ ಹದ್ದಿನಕಣ್ಣು ತಪ್ಪಿಸಿ ನಡೆಯುವುದು ಸಾಧ್ಯವೇ? ಇಂತಹವು ಹಿಂದಿನಿಂದಲೂ ರಹಸ್ಯವಾಗಿ ನಡೆದುಕೊಂಡು ಬಂದಿವೆ ಎಂಬ ದೂರುಗಳಿವೆ. ಜೊತೆಗೆ ಕಾರಾಗೃಹದೊಳಗೆ ನಿಷೇಧಿತ ವಸ್ತುಗಳು ಕೂಡ ಸಿಗುತ್ತಿವೆ. ಮೊಬೈಲ್ ಫೋನ್ ಇರಲಿ, ಅದಕ್ಕಿಂತಲೂ ಅಪಾಯಕಾರಿ ಎಂದರೆ ಮಾದಕ ದ್ಯವ್ಯಗಳೂ ‘ಜೈಲು ಸೇರುತ್ತಿವೆ’ ಎಂಬ ಆರೋಪಗಳು ಅಲ್ಲಿನ ಭದ್ರತೆ ಬಗ್ಗೆ ಆತಂಕ ಹುಟ್ಟಿಸುತ್ತವೆ. ಮೊದಲು ಇಂತಹ ಬೆಳವಣಿಗೆಗಳನ್ನು ಬುಡಮಟ್ಟ ನಿರ್ಮೂಲನೆ ಮಾಡುವುದಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡಬೇಕು.

ಇಂತಹ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಕೊಲೆ ಅಪರಾಧಕ್ಕಿಂತ ಕಠಿಣವಾದ ಶಿಕ್ಷೆಯನ್ನು ಕೊಡಬೇಕು. ಕಾರಾಗೃಹದ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆ ಯಾಗಬೇಕು. ಪೊಲೀಸರು ನಿಜವಾಗಿಯೂ ತಮ್ಮ ಕುಟುಂಬದವರೇ ಆರೋಪಿ ಸ್ಥಾನದಲ್ಲಿ ಇದ್ದರೂ ಸಂಯಮ ಕಳೆದುಕೊಳ್ಳದೆ, ಕಾನೂನಿನ ನಿಯಮಗಳನ್ನು ಪಾಲಿಸಬೇಕು. ಆದರೆ, ಸೆಲೆಬ್ರಿಟಿಯೊಬ್ಬರು ಆರೋಪಿ ಸ್ಥಾನದಲ್ಲಿದ್ದು, ನ್ಯಾಯಾಂಗ ಬಂಧನಕ್ಕೊಳಗಾಗಿ ಜೈಲು ಸೇರಿದರೆ ಪೊಲೀಸರು ತಮ್ಮ ವೃತ್ತಿಯ ಗಂಭೀರತೆಯನ್ನು ಬದಿಗಿಟ್ಟು ಹಾರ್ದಿಕವಾಗಿ ಸ್ವಾಗತಿಸುವುದು ಅಥವಾ ಬೀಳ್ಕೊಡುವುದು ಕಾನೂನಿಗೆ ಆಪಚಾರ ಮಾಡಿದಂತೆ.

ಇಂತಹ ವಿಶೇಷ ಆತಿಥ್ಯ’ ರಾಜ್ಯದಲ್ಲಿ ಮಾತ್ರವಲ್ಲ ದೇಶದ ಬಹುತೇಕ ಕಾರಾಗೃಹಗಳಲ್ಲಿ ಇದೆ ಎನ್ನಲಾಗಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಬಂದಿಖಾನೆ ಸಚಿವರು ಅಥವಾ ಸಂಬಂಧಪಟ್ಟ ಅಧಿಕಾರಿಗಳು ಆಗಾಗ ಕಾರಾಗೃಹಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಜಾಗೃತ ದಳದ ಅಧಿಕಾರಿಗಳು ಕೂಡ ನಿಯಮಿತವಾಗಿ ತೆರಳಿ ಪರಾಮರ್ಶೆ ಮಾಡಬೇಕು. ಕೈದಿಗಳಲ್ಲಿ ಬಣಗಳಾಗುವುದನ್ನು ನಿಯಂತ್ರಿಸಬೇಕು. ಅಲ್ಲದೆ, ಕಾನೂನುಬಾಹಿರವಾಗಿ ಕೈದಿಗಳಿಗೆ ಸೌಲಭ್ಯಗಳನ್ನು ಒದಗಿಸುವ ಅಥವಾ ಸಹಾಯ ಮಾಡುವ ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ದ ಕಠಿಣ ಶಿಸ್ತುಕ್ರಮ ಜರುಗಿಸಲು ಸರ್ಕಾರ ದೃಢವಾಗಿ ಮುಂದಡಿ ಇಡಬೇಕು.

ಏಕೆಂದರೆ ಬಹುತೇಕ ಕಾರಾಗೃಹಗಳಲ್ಲಿ ವ್ಯವಸ್ಥೆಯೇ ಹಾಳಾಗಿದೆ. ಕಾನೂನು ಉಲ್ಲಂಘನೆಯೇ ಸಾಧನೆ ಎಂಬಂತಾಗಿದೆ. ಅದಕ್ಕೆ ದರ್ಶನ್ ಪ್ರಕರಣ ಚಿಕ್ಕದೊಂದು ಉದಾಹರಣೆ ಎನ್ನಬಹುದು. ಇದನ್ನು ತಡೆಯುವ ನಿಟ್ಟಿನಲ್ಲಿ ರೌಡಿಗಳು, ಸಮಾಜದಲ್ಲಿ ಗುರುತಿಸಿಕೊಂಡಿರುವ ಅಪರಾಧಿಗಳನ್ನು ಅವರ ತವರು ಜಿಲ್ಲೆ ಜೈಲುಗಳಲ್ಲಿ ಇಡಬಾರದು.

ಇನ್ನು ನ್ಯಾಯಾಲಯಗಳು ಕೂಡ ಕಾರಾಗೃಹಗಳಲ್ಲಿ ನಡೆಯುತ್ತಿರುವ ಇಂತಹ ಕಣ್ಣಾಮುಚ್ಚಾಲೆ ಆಟಗಳ ವಿಚಾರದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕು. ನ್ಯಾಯಾಂಗ ಬಂಧನಕ್ಕೆ ನೀಡುವುದೇ ಆರೋಪಿಗಳಿಗೆ ಜೀವನದ ಹಲವು ಕಾಠಿಣ್ಯದ ಮಾರ್ಗಗಳನ್ನು ಅರ್ಥಮಾಡಿಸುವುದಕ್ಕೆ, ಅಂತಹದರಲ್ಲಿ ಅವರಿಗೆ ಸಕಲ ಸೌಕರ್ಯಗಳನ್ನೂ ಕಲ್ಪಿಸುವುದು ಕೂಡ ಅಪರಾಧವಾಗಬಹುದು ಎಂಬುದನ್ನು ಅಧಿಕಾರಿಗಳಿಗೆ ಮನದಟ್ಟು ಮಾಡಬೇಕಾಗಿದೆ. ಇದಲ್ಲದೆ, ಸರ್ಕಾರಗಳು ಪ್ರತಿ ಕಾರಾಗೃಹದ ವ್ಯಾಪ್ತಿಯಲ್ಲಿ ಜಾಗೃತ ಸಮಿತಿಗಳ ರಚನೆಗೆ ಮುಂದಾಗಬೇಕು. ಸ್ಥಳೀಯವಾಗಿ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ಹೋರಾಟ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವವರನ್ನು ಒಳಗೊಂಡು ಸಮಿತಿ ರಚಿಸಿ, ಅವರ ಮೂಲಕ ಕೈದಿಗಳ ಮನಪರಿವರ್ತನೆಗೆ ಪೂರಕವಾದ ಹಾಗೂ ಜೈಲಿನೊಳಗೆ ಅಕ್ರಮಗಳು ನಡೆಯದಂತೆ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ನೀಡಬಹುದು.