Mysore
29
scattered clouds
Light
Dark

ಅತ್ಯಾಚಾರ; ಕಾನೂನು ಕಾಟಾಚಾರ

ಕಾಮಪಿಪಾಸುಗಳಿಗೆ ನಡುಕ
ಹುಟ್ಟಿಸದ ಕಾನೂನು ಕಟ್ಟಳೆ: ಸರ್ಕಾರದ ಕ್ರಮಗಳು

ಹೆಣ್ಣನ್ನು ಪೂಜನೀಯ ದೃಷ್ಟಿಯಲ್ಲಿ ನೋಡುವ ದೇಶ ಎಂದು ಕರೆಸಿಕೊಳ್ಳುವ ಭಾರತದಲ್ಲಿ ಹೆಣ್ಣುಮಕ್ಕಳು ಕಳೆದೆರಡು ವಾರಗಳಲ್ಲಿ ಕಾಮಪಿಪಾಸುಗಳ ದಾಳಿಯಿಂದ ನರಕಯಾತನೆ ಅನುಭವಿಸಿ ಜೀವ ಚೆಲ್ಲಿದ ಘಟನೆಗಳನ್ನು ನೋಡಿದರೆ ಸುರಕ್ಷಿತ ಭಾರತ, ಬೇಟಿ ಬಚಾವ್ ಬೇಟಿ ಪಡಾವ್, ಭಾರತದಲ್ಲಿ ಹೆಣ್ಣುಮಕ್ಕಳ ರಕ್ಷಣೆಗಾಗಿ ಕಠಿಣ ಕಾನೂನುಗಳಿವೆ, ಇಲ್ಲಿ ಹೆಣ್ಣು ಮಕ್ಕಳ ಏಳಿಗೆಗಾಗಿ ಹಲವಾರು ಗುರಿ ಗಳನ್ನು ಹಾಕಿಕೊಳ್ಳಲಾಗಿದೆ ಎನ್ನುವ ಸರ್ಕಾರದ ಭಾಗವಾಗಿರುವ ರಾಜಕೀಯ ನಾಯಕರ ಹೇಳಿಕೆಗಳು ಸವಕಲು ಪದಗಳಂತೆ ಕಾಣುತ್ತವೆ.

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಹನ್ನೆರಡು ವರ್ಷಗಳ ಹಿಂದೆ ನಡೆದ ನಿರ್ಭಯ ಪ್ರಕರಣದ ನಂತರ 2024ರ ಆ.9ರಂದು ಕೊಲ್ಕತ್ತಾದ ತರಬೇತಿ ವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಅಮಾನುಷವಾಗಿ ಕೊಲೆಗೈದ ಘಟನೆ ದೇಶದ ಜನರ ಎದೆ ನಡುಗಿಸಿದೆ. ನರನಾಡಿಗಳಲ್ಲಿ ರಕ್ತ ಹೆಪ್ಪುಗಟ್ಟಿದೆ. ನಿರ್ಭಯ ಪ್ರಕರಣದಂತಹ ಹೇಯ ಘಟನೆ ಭಾರತದಲ್ಲಿ ಮತ್ತೊಮ್ಮೆ ಮರುಕಳಿಸದಿರಲಿ ಎಂದುಕೊಂಡ ಹೆಣ್ಣುಮಕ್ಕಳು ಆತಂಕದಲ್ಲಿದ್ದಾರೆ.

ನಿರ್ಭಯ ಪ್ರಕರಣದ ನಂತರ ಕೊಲ್ಕತ್ತಾದಲ್ಲಿ ತರಬೇತಿ ವೈದ್ಯೆ ಮೇಲೆ ನಡೆದ ಅತ್ಯಾಚಾರ, ಹತ್ಯೆ ಪ್ರಕರಣ ದೇಶದೆಲ್ಲೆಡೆ ಆಕ್ರೋಶದ ಕಿಚ್ಚು ಹಚ್ಚಿತು. ದೇಶಾದ್ಯಂತ ಪ್ರತಿಭಟನೆಗಳು ನಡೆದವು. ನಿರ್ಭಯ ಪ್ರಕರಣದಲ್ಲಿ ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಯಿತು. ಕೊಲ್ಕತ್ತಾ ಪ್ರಕರಣದಲ್ಲೂ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂಬ ಕೂಗು ಕೇಳಿಬಂದಿದೆ. ಆ ನಿಟ್ಟಿನಲ್ಲಿ ಶಿಕ್ಷೆಯೂ ಆಗಬಹುದು.

ಹಾಗೆ ನೋಡಿದರೆ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಕಾನೂನಿನ ಕುಣಿಕೆ ಬಿಗಿಯಾಗಿದೆ ಎಂಬುದು ಕಾಮುಕರಲ್ಲಿ ನಡುಕ ಹುಟ್ಟಿಸಬೇಕಿತ್ತು. ಆದರೆ ಕೊಲ್ಕತ್ತಾ ಪ್ರಕರಣದ ನಂತರವೂ ದೇಶದಲ್ಲಿ ಇನ್ನಷ್ಟು ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಿವೆ. ಮಹಾರಾಷ್ಟ್ರದ ಪಾಲಾರ್ ಜಿಲ್ಲೆಯ ಖಾಸಗಿ ಶಾಲೆಯ ಶಿಶು ವಿಹಾರದ ಮಕ್ಕಳಿಬ್ಬರ ಮೇಲೆ ಆ ಶಾಲೆಯ ಸ್ವಚ್ಛತಾ ಸಿಬ್ಬಂದಿಯೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮತ್ತೊಂದೆಡೆ ಪುಣೆಯ ಪಿಂಪ್ರಿಯಾ ಚಿಂಚ್ಚಾಡದಲ್ಲಿ ಖಾಸಗಿ ಶಾಲೆಯ ದೈಹಿಕ ಶಿಕ್ಷಕನೇ ಆ ಶಾಲೆಯ 12 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ರಾಮ್‌ಪುರದಲ್ಲಿ ಮನೆಪಾಠದ ಶಿಕ್ಷಕ 7 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಬಂಧನಕ್ಕೊಳಗಾಗಿದ್ದಾನೆ.

ಅಸ್ಸಾಂನ ಥಿಂಗ್‌ನಲ್ಲಿ ಮನೆ ಪಾಠ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಗುರುವಾರ ನಡೆದಿದೆ.

ಮಹಾರಾಷ್ಟ್ರದ ಧಾರಾಶಿವದಲ್ಲಿ 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಮೇಲೆ ನಾಲ್ವರನ್ನು ಭಾನುವಾರ ಬಂಧಿಸಲಾಗಿದೆ.

ಕರ್ನಾಟಕದ ಕಾರ್ಕಳ ತಾಲ್ಲೂಕಿನಲ್ಲಿ ಯುವತಿಯೊಬ್ಬಳಿಗೆ ಪರಿಚಿತರೇ ಮಾದಕ ವಸ್ತು ನೀಡಿ ಅತ್ಯಾಚಾರ ಎಸಗಿರುವ ಘಟನೆ ಶುಕ್ರವಾರ ನಡೆದಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ನೆರಳಿನಲ್ಲಿರುವ ನಂಜನಗೂಡು ತಾಲ್ಲೂಕಿನ ಗಟ್ಟವಾಡಿಯ ಬಾಳೆ ತೋಟವೊಂದರಲ್ಲಿ ಪರಿಶಿಷ್ಟ ಸಮುದಾ ಯದಮಹಿಳೆಯೊಬ್ಬರು ಶನಿವಾರಶವವಾಗಿ ಪತ್ತೆಯಾಗಿದ್ದು, ಈ ಸಂಬಂಧ ಆತ್ಯಾಚಾರ, ಕೊಲೆ ಪ್ರಕರಣ ದಾಖಲಾಗಿದೆ. ಪರಿಚಿತನೇ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅಪರಾಧ ಯಾವ ರೂಪದ್ದು ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಮೇಲಿಂದ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ನೋಡಿದರೆ ದೇಶದ ಕಾನೂನು ಕಾಮಾಂಧರ ಮೇಲೆ ಯಾವ ಪರಿಣಾಮವನ್ನೂ ಬೀರುತ್ತಿಲ್ಲ ಎಂಬುದು ಸ್ಪಷ್ಟ ಹಾಗೆಯೇ ಮೇಲಿನ ಪ್ರಕರಣಗಳನ್ನು ಅವಲೋಕಿಸಿದರೆ ಪರಿಚಿತರು ಹಾಗೂ ನೆರೆಹೊರೆಯವರಿಂದಲೇ ಇಂತಹ ಕುಕೃತ್ಯಗಳು ನಡೆದಿವೆ ಎಂಬುದು ನಿಚ್ಚಳ.

ದೇಶದಲ್ಲಿ ದಿನೇದಿನೇ ಕಾಮುಕರ ಪೈಶಾಚಿಕ ಕೃತ್ಯಗಳು ಹೆಚ್ಚಾಗುತ್ತಿದ್ದರೂ ಸರ್ಕಾರಗಳು, ಜನನಾಯಕರು ಜಾಣ ಕುರುಡರಾಗಿದ್ದಾರೆಯೇ? ಕಿವಿ ಊತುಹೋಗಿದೆಯೇ? ಕಾನೂನು ಕಟ್ಟಳೆ ಕಣ್ಣಿಗೆ ಕಾಣದಂತಿವೆಯೇ ಎಂಬ ಪ್ರಶ್ನೆ ಮೂಡುತ್ತದೆ. ಹಾಗಾದರೆ ಸರ್ಕಾರ, ಕಾನೂನು ಏನು ಮಾಡಬೇಕು? ನಿರ್ಭಯ ಪ್ರಕರಣದಲ್ಲಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಿಲ್ಲವೆ, ಹೆಣ್ಣಿನ ಸುರಕ್ಷತೆಗಾಗಿ ಕಾನೂನಿಗೆ ತಿದ್ದುಪಡಿ ತರಲಿಲ್ಲವೆ, ಹೆಣ್ಣಿನ ರಕ್ಷಣೆಗೆ ಕಠಿಣ ಕಾನೂನು ಜಾರಿ ಮಾಡಲಿಲ್ಲವೆ. ಇನ್ನೇನು ಮಾಡಬೇಕು ಎಂದು ತಮ್ಮನ್ನು ಸಮರ್ಥಿಸಿಕೊಳ್ಳಬಹುದು. ಅಪರಾಧಿಗಳಿಗೆ ಶಿಕ್ಷೆ ನೀಡಿ, ಕಾನೂನು ಜಾರಿ ಮಾಡಿ ಕೈತೊಳೆದುಕೊಂಡರೆ ಸಾಕೆ? ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಗಮನಿಸಿದರೆ ಸರ್ಕಾರ, ಕಾನೂನು, ಆಡಳಿತವರ್ಗದ ಜವಾಬ್ದಾರಿ ಅಷ್ಟಕ್ಕೇ ಮುಗಿಯುವುದಿಲ್ಲ ಎಂಬುದು ಸ್ಪಷ್ಟ.

ದೇಶದಲ್ಲಿ 2013ರಿಂದ 2022ರವರೆಗೆ ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆ ನೀಡಿದ ಪ್ರಮಾಣ ಶೇ.29.25ರಷ್ಟು ಮಾತ್ರ. ಇನ್ನು ನಿರ್ಭಯ ಪ್ರಕರಣದ ನಂತರ, ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗೆ ಪೂರಕವಾದ ಕ್ರಮವಹಿಸಲು ಕೇಂದ್ರ ಸರ್ಕಾರ 2013ರಲ್ಲಿ ಸ್ಥಾಪಿಸಿದ ನಿರ್ಭಯ ನಿಧಿಯ ಅನುದಾನ ಪಡೆದಿರುವ ವಿವಿಧ ಇಲಾಖೆಗಳು ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲೂ ಹಿಂದೆ ಬಿದ್ದಿವೆ. ಈ ನಿಟ್ಟಿನಲ್ಲಿ ಇಲಾಖೆಗಳು ಹೆಚ್ಚು ಆಸಕ್ತಿ ವಹಿಸಬೇಕಿದೆ.

ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯ ತೆರೆಯುವುದರೊಂದಿಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆಯನ್ನು ತ್ವರಿತವಾಗಿ ಮುಗಿಸಬೇಕಿದೆ. ಆ ಮೂಲಕ ವಿಚಾರಣೆ ನೆಪದಲ್ಲಿ ಹತ್ತಾರು ವರ್ಷಗಳು ನಿರಾತಂಕವಾಗಿ ಇರಬಹುದು ಎಂಬ ಅಪರಾಧಿ ಮನಸ್ಥಿತಿಗೆ ಕಡಿವಾಣ ಹಾಕಿದಂತಾಗುತ್ತದೆ. ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡಬಾರದು. ಹಾಗಾದರೆ ಆರೋಪಿ ಎಷ್ಟೇ ಬಲಾಡ್ಯನಾದರೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶ ರವಾನೆಯಾಗುತ್ತದೆ. ಅತ್ಯಾಚಾರ ಪ್ರಕರಣಗಳಲ್ಲಿ ಕಾನೂನು ಮತ್ತಷ್ಟು ಬಿಗಿಯಾಗಬೇಕು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಆಗ ತಪ್ಪೆಸಗುವವರು ಹಿಂದೇಟು ಹಾಕುತ್ತಾರೆ.

ಇನ್ನು ಮನೆಗಳಲ್ಲಿ ಗಂಡು ಮಕ್ಕಳಿಗೆ ಚಿಕ್ಕಂದಿನಿಂದಲೇ ಹೆಣ್ಣು ಮಕ್ಕಳ ಬಗ್ಗೆ ಘನತೆ ಮತ್ತು ಸೂಕ್ಷ್ಮತೆಯ ಗುಣಗಳನ್ನು ಕಲಿಸಬೇಕು. ಶಾಲೆಗಳು ಹಾಗೂ ಮಹಿಳೆಯರು ಕೆಲಸ ಮಾಡುವ ಸ್ಥಳಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣು ಮಕ್ಕಳಿಗೆ ಭದ್ರತೆ ಹಾಗೂ ಸುರಕ್ಷತೆ ಒದಗಿಸುವ ಜತೆಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ವಿಧಿಸುವ ಶಿಕ್ಷೆಗಳ ಬಗ್ಗೆ, ಕಠಿಣ ಕಾನೂನುಗಳ ಬಗ್ಗೆ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಮಾಧ್ಯಮಗಳ ಮೂಲಕ ನಿರಂತರ ಜಾಗೃತಿ ಸಂದೇಶ ರವಾನೆಯಾಗಬೇಕು. ಈ ವಿಚಾರ ಶಾಲಾ-ಕಾಲೇಜುಗಳಲ್ಲಿ ಪಠ್ಯವಾಗಬೇಕು.

ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯ ತೆರೆಯುವುದರೊಂದಿಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆಯನ್ನು ತ್ವರಿತವಾಗಿ ಮುಗಿಸಬೇಕಿದೆ. ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಜಾಮೀನು ಕೊಡಬಾರದು. ಕಾನೂನು ಮತ್ತಷ್ಟು ಬಿಗಿಯಾಗಬೇಕು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು.