- ಪ್ರೊ.ಆರ್.ಎಂ.ಚಿಂತಾಮಣಿ
ತನ್ನನ್ನು ಹುಟ್ಟುಹಾಕಿದ್ದ ಮತ್ತು ದೇಶದಲ್ಲಿಯೇ ಮೊದಲ ಗೃಹನಿರ್ಮಾಣ ಸಾಲ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಅನ್ನು (ಎಚ್‌ಡಿಎಫ್‌ಸಿ) ತನ್ನೊಳಗೆ ವಿಲೀನಗೊಳಿಸಿ ಕೊಂಡು ಇದೇ ಶನಿವಾರ ಜುಲೈ 1ರಿಂದ ಎಚ್‌ಡಿಎಫ್‌ಸಿ ಬ್ಯಾಂಕು ದೇಶದಲ್ಲಿಯೇ ಅತಿ ದೊಡ್ಡ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ ಬ್ಲೂಮ್ ಬರ್ಗ್ ಸಂಸ್ಥೆಯ ಲೆಕ್ಕಾಚಾರದಂತೆ ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ಜಾಗತಿಕ ಮಟ್ಟದಲ್ಲಿ ಅತಿ ದೊಡ್ಡ ಜೆ.ಪಿ.ಮಾರ್ಗನ್ ಚೇಸ್ ಬ್ಯಾಂಕ್ (ಅಮೆರಿಕ 417 ಬಿಲಿಯನ್ ಡಾಲರ್), ಇಂಡಸ್ಟ್ರಿಯಲ್ ಅಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ (228 ಬಿಲಿಯನ್ ಡಾಲರ್) ಮತ್ತು ಬ್ಯಾಂಕ್ ಆಫ್ ಅಮೆರಿಕ ಹೊಲ್ಡಿಂಗ್ಸ್ ಪಿಎಲ್‌ಸಿ (227 ಬಿಲಿಯನ್ ಡಾಲರ್) ನಂತರ ನಾಲ್ಕನೇ ಸ್ಥಾನದಲ್ಲಿ 172 ಬಿಲಿಯನ್ ಡಾಲರ್ ಮೌಲ್ಯದೊಂದಿಗೆ ಎಚ್‌ಡಿಎಫ್‌ಸಿ ಬ್ಯಾಂಕು ನಿಂತಿದೆ. ಅಂದರೆ ಘಟಾನುಘಟಿಗಳಾದ ಎಚ್‌ಎಸ್‌ಬಿಸಿ, ಸಿಟಿ ಗ್ರೂಪ್ಸ್ ಮತ್ತು ಅಗ್ರಿಕಲ್ಚರಲ್ ಬ್ಯಾಂಕ್ ಆಫ್ ಚೀನಾದಂತಹವುಗಳನ್ನು ಹಿಂದೆ ಹಾಕಿದಂತಾಗಿದೆ. ಇದು ದೇಶಕ್ಕೆ ಗೌರವ ತಂದ ಸಂಸ್ಥೆಯಾಗಿದೆ.
ವಿಸ್ತಾರಗೊಂಡ ಕಾರ್ಯವ್ಯಾಪ್ತಿ ಮತ್ತು ಹೆಚ್ಚಾದ ಮಾರುಕಟ್ಟೆ ಮೌಲ್ಯಗಳಿಂದ ವಿಲೀನದ ನಂತರ ಎಚ್‌ಡಿಎಫ್‌ಸಿ ಬ್ಯಾಂಕು ಷೇರುಪೇಟೆಗಳಲ್ಲಿ ಪಟ್ಟೀಕರಿಸಲ್ಪಟ್ಟ ಕಂಪೆನಿಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಂತರ ಎರಡನೇ ಅತಿ ಹೆಚ್ಚು ಬೆಲೆ ಬಾಳುವ ಕಂಪೆನಿಯಾಗಿದೆ. ಈ ಎಚ್‌ಡಿಎಫ್‌ಸಿ ಮ್ಯೂಚುವಲ್ ಫಂಡ್, ಎಚ್‌ಡಿಎಫ್‌ಸಿ ಲೈಫ್ ಇನ್ಶೂರನ್ಸ್, ಎಚ್‌ಡಿಎಫ್‌ಸಿ ಎರ್ಗೋ (ಸಾಮಾನ್ಯ ವಿಮೆ) ಮತ್ತು ಎಚ್‌ಡಿಎಫ್‌ಸಿ ಎಎಂಸಿ ಕಂಪೆನಿಗಳು ಈ ಬ್ಯಾಂಕಿನ ಅಂಗ ಸಂಸ್ಥೆಗಳಾಗುತ್ತವೆ.
ಕಳೆದ ಮಾರ್ಚ್ 31ರ ಎರಡೂ ಕಂಪೆನಿಗಳ ವಾರ್ಷಿಕ ವರದಿಗಳನ್ನು ಆಧರಿಸಿ ಇಂದು ಬ್ಯಾಂಕಿನಲ್ಲಿ 1,77,239 ನೌಕರರಿದ್ದಾರೆ. ಒಟ್ಟು 8344 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. 19,727 ಎಟಿಎಂಗಳಿವೆ. ದೊಡ್ಡ ಸಂಖ್ಯೆಯಲ್ಲಿ ಬ್ಯಾಂಕಿನ ವ್ಯವಹಾರ ಪ್ರತಿನಿಧಿಗಳು ತಂತ್ರಜ್ಞಾನ ಸೌಲಭ್ಯಗಳೊಂದಿಗೆ ದೂರದ ಹಳ್ಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಸ್ತಿತ್ವಕ್ಕೆ ಬಂದು ಮೂರು ದಶಕಗಳಿಗಿಂತ ಕಡಿಮೆ ಅವಧಿಯಲ್ಲಿಯೇ ತನ್ನ ವಿಶಿಷ್ಟ ಜನಸ್ನೇಹಿ ಸಂಸ್ಕ ತಿಯಿಂದ ಈ ಬ್ಯಾಂಕು ಅತಿ ದೊಡ್ಡ ಸರ್ಕಾರಿ ಬ್ಯಾಂಕು ಸ್ಟೇಟ್ ಬ್ಯಾಂಕನ್ನು ಮತ್ತು ಐಸಿಐಸಿಐ ಬ್ಯಾಂಕನ್ನು ಹಿಂದೆ ಸರಿಸಿ ಮುನ್ನುಗ್ಗುತ್ತಿರುವುದು ಗಮನಾರ್ಹ.
ಒಂದಿಷ್ಟು ಇತಿಹಾಸ
ವಾಸಕ್ಕಾಗಿ ಮನೆ ಕಟ್ಟುವುದು ಮತ್ತು ಖರೀದಿಸುವುದು ಅನುತ್ಪಾದಕವೆಂಬ ಭಾವನೆ ಬೇರೂರಿದ್ದ ದಿನಗಳಲ್ಲಿ ಇದಕ್ಕಾಗಿ ಬ್ಯಾಂಕುಗಳೂ ಸೇರಿ ಯಾವ ಹಣಕಾಸು ಸಂಸ್ಥೆಗಳೂ ಸಾಲ ಕೊಡುತ್ತಿರಲಿಲ್ಲ. ತಲೆಯ ಮೇಲೊಂದು ‘ಸೂರು’ ಹೊಂದುವುದು (ಆಶ್ರಯ) ಮೂಲಭೂತ ಅವಶ್ಯಕತೆಯಾಗಿದ್ದರೂ ಸಾಲ ಕೊಡುವ ವ್ಯವಸ್ಥೆ ಇಲ್ಲದಿದ್ದದ್ದು ಒಂದು ಕೊರತೆ ಎಂದು ಮುಂಬೈಯ ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ದಿಗ್ಗಜರಲ್ಲಿ ಚರ್ಚೆ ನಡೆಯುತ್ತಿತ್ತು. 1977ರಲ್ಲಿ ಐಸಿಐಸಿಐ ದೀರ್ಘಾವಧಿ ಕೈಗಾರಿಕಾ ಹಣಕಾಸು ಸಂಸ್ಥೆಯಿಂದ ನಿವೃತ್ತರಾದ ಹಸ್ಮುಖ ಠಾಕೂರದಾಸ್ (ಎಚ್.ಟಿ) ಪಾರೆಖ್‌ರವರು ಈ ಚಿಂತಕರ ನಾಯಕತ್ವ ವಹಿಸಿ ಗೃಹನಿರ್ಮಾಣ ಸಾಲ ಸಂಸ್ಥೆ ಸ್ಥಾಪಿಸಲು ನಿರ್ಧರಿಸಿದರು. ಅಂದಿನ ಮೊರಾರ್ಜಿ ದೇಸಾಯಿ (ಜನತಾ ಪಾರ್ಟಿ) ಸರ್ಕಾರವನ್ನು ಒಪ್ಪಿಸಿ ಒಂದಿಷ್ಟು ಬಂಡವಾಳವನ್ನು ಪಡೆಯುವಲ್ಲಿಯೂ ಯಶಸ್ವಿಯಾದರು. ವಿಶ್ವ ಬ್ಯಾಂಕು, ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕು ಮುಂತಾದ ಕಡೆಯಿಂದಲೂ ದೀರ್ಘಾವಧಿ ಹಣಕಾಸು ಸಿಕ್ಕಿತು. ಆಗ ಹುಟ್ಟಿದ್ದೇ ಎಚ್‌ಡಿಎಫ್‌ಸಿ. ಆರಂಭದ ತೊಂದರೆಗಳನ್ನು ನಿವಾರಿಸಿಕೊಂಡು 1928ರಲ್ಲಿ ಕಾರ್ಯಾರಂಭ ಮಾಡಿ ಮುಂಬೈಯ ಮಧ್ಯಮ ವರ್ಗದ ಕುಟುಂಬಕ್ಕೆ ಮೊದಲ ಸಾಲವನ್ನೂ ಕೊಡಲಾಯಿತು. ಅಲ್ಲಿಂದ ಎಚ್.ಟಿ.ಪಾರೆಖ ತಂಡ ಹಿಂದೆ ನೋಡಲೇ ಇಲ್ಲ. ದೇಶಾದ್ಯಂತ ಕಂಪೆನಿಯ ಹೆಸರು ಮನೆ ಮಾತಾಯಿತು. ಮೊದಲ ನಾಲ್ಕ್ತ್ಯೈದು ವರ್ಷ ನಿಧಾನಗತಿಯಲ್ಲಿ ನಡೆದರೂ ನಂತರ ವೇಗ ಪಡೆಯಿತು. ಇತ್ತೀಚಿನ ವರದಿಗಳಂತೆ 9.7 ಕೋಟಿ ಕುಟುಂಬಗಳಿಗೆ ಮನೆ ಹೊಂದಲು ಹಣಕಾಸು ಒದಗಿಸಿದೆ. ದೇಶದ ಅತಿ ದೊಡ್ಡ ಮನೆ ಸಾಲದ ಸಂಸ್ಥೆಯಾಗಿದ್ದು ಇತರ ಉದ್ದೇಶಗಳಿಗೂ ಸಾಲ ಕೊಡುವ ವ್ಯವಸ್ಥೆ ಇದೆ. ಶೈಕ್ಷಣಿಕ ಸಾಲಗಳೂ ಸಿಗುತ್ತವೆ.
ನಂತರದ ಹಂತ ಹಣಕಾಸು ವಲಯದ ಇತರೆ ಸೇವೆಗಳಿಗೆ ಹೊಸ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರುವುದು. ಮ್ಯೂಚುವಲ್ ಫಂಡ್ ಸ್ಥಾಪನೆಯಾಯಿತು. ಅದಕ್ಕಾಗಿ ಅಸೆಟ್ ಮ್ಯಾನೇಜ್‌ಮೆಂಟ್ ಕಂಪೆನಿ ಬಂತು. ಜೀವ ವಿಮೆ ಮತ್ತು ಸಾಮಾನ್ಯ ವಿಮೆ ರಂಗಗಳಲ್ಲೂ ಕಂಪೆನಿಗಳು ಆರಂಭವಾಗಿ ಯಶಸ್ವಿಯಾಗಿ ನಡೆಯುತ್ತಿವೆ.
ಮುಂದಿನ ಮಹತ್ವದ ಬೆಳವಣಿಗೆ ಎಂದರೆ ಎಚ್‌ಡಿಎಫ್‌ಸಿ ಬ್ಯಾಂಕು ಸ್ಥಾಪನೆಯಾದದ್ದು. ಪಿ.ವಿ.ನರಸಿಂಹರಾವ್ ಸರ್ಕಾರದ ಆರ್ಥಿಕ ಸುಧಾರಣೆ ಗಳ ಅಂಗವಾಗಿ ಹೊಸ ಖಾಸಗಿ ಬ್ಯಾಂಕುಗಳ ಸ್ಥಾಪನೆಗೆ ಅನುಮತಿ ಕೊಡ ಲಾಯಿತು. ಅದರಂತೆ 1994ರಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕು ಸ್ಥಾಪನೆಯಾ ಯಿತು. ಇದರಿಂದ ಗುಂಪಿನ ಇತರ ಕಂಪೆನಿಗಳಿಗೆ ಅನುಕೂಲವಾಗುವುದ ಲ್ಲದೆ ಬ್ಯಾಂಕು ತನ್ನದೇ ವೇಗದಲ್ಲಿ ಬೆಳೆಯಲು ಸಾಧ್ಯವಾಯಿತು. ಬ್ಯಾಂಕಿಗೆ ಆದಿತ್ಯ ಪುರಿಯವರಿಂದ ಇಂದಿನ ಶಶಿಧರ್ ಜಗದೀಶನ್‌ವರೆಗೆ ಎಲ್ಲ ಹಂತಗಳಲ್ಲಿ ಸಮರ್ಥ ಸಾರಥಿಗಳು ದೊರಕಿದ್ದಾರೆ. ಇವರೆಲ್ಲರಿಗೂ ಮಾರ್ಗದರ್ಶಕರಾಗಿ ದೀಪಕ್ ಪಾರೆಖ್ ಮಹತ್ವದ ಪಾತ್ರ ವಹಿಸಿದ್ದುಂಟು.
2023ರ ಮಾರ್ಚ್ 31ರಂದು ಇದ್ದಂತೆ ಬ್ಯಾಂಕಿನಲ್ಲಿ ಒಟ್ಟು 18,83,395 ಕೋಟಿ ರೂ. ಠೇವಣಿಗಳಿದ್ದು, 16,00,586 ಕೋಟಿ ರೂ. ವಿವಿಧ ಸಾಲಗಳನ್ನು ಕೊಡಲಾಗಿದೆ. ಈಗ ಎಚ್‌ಡಿಎಫ್‌ಸಿಯ 6,20,567 ಕೋಟಿ ರೂ. ಸಾಲಗಳೂ ಸೇರಿಕೊಂಡು ಗಾತ್ರ ದೊಡ್ಡದಾಗಿರುತ್ತದೆ.
ಅವಕಾಶಗಳು ಮತ್ತು ಸವಾಲುಗಳು
ಈಗ ಸಾಧಿಸಿರುವುದು ಕೇವಲ ಒಂದು ಹಂತ ಮಾತ್ರ. ಇಡೀ ಅರ್ಥ ವ್ಯವಸ್ಥೆಯೇ ಚಲನಶೀಲವಾದದ್ದು. ಬೆಳೆಯುತ್ತಲೇ ನಡೆಯಬೇಕಾಗುತ್ತದೆ. ದೊಡ್ಡ ಗಾತ್ರದ ಅನುಕೂಲಗಳೂ ಇವೆ. ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ಅವುಗಳನ್ನೇ ಅನುಕೂಲತೆಗಳಾಗಿ ಪರಿವರ್ತಿಸಿಕೊಳ್ಳುವ ಸಾಮರ್ಥ್ಯ ಮತ್ತು ತಂತ್ರಗಾರಿಕೆ ಇರಬೇಕು. ಒಂದು ಸಕಾರಾತ್ಮಕ ಅಂಶವೆಂದರೆ ಎಚ್‌ಡಿಎಫ್‌ಸಿಯಲ್ಲಿ ಸಾಲ ಪಡೆದವ ರಲ್ಲಿ ಶೇ.70ರಷ್ಟು ಬ್ಯಾಂಕಿನ ಗ್ರಾಹಕರಲ್ಲ. ಈಗ ಅವರೆಲ್ಲ ಗ್ರಾಹಕರಾಗುತ್ತಾರೆ. ಠೇವಣಿಗಳನ್ನು ಹೆಚ್ಚಿಸಲು ದೊಡ್ಡ ಅವಕಾಶ. ಅದೇ ರೀತಿ ಬ್ಯಾಂಕಿನ ಗ್ರಾಹಕ ರಲ್ಲಿ ಶೇ.02ರಷ್ಟು ಗೃಹ ಸಾಲ ಪಡೆದವರಿದ್ದಾರೆ. ಅವರೆಲ್ಲರಿಗೂ ತಮ್ಮದೇ ಬ್ಯಾಂಕಿನಲ್ಲಿ ಸರಳವಾಗಿ ಕಡಿಮೆ ವೆಚ್ಚದಲ್ಲಿ ಸಾಲ ಪಡೆಯುವ ಅನುಕೂಲ ಕಲ್ಪಿಸಿದೆ. ನೌಕರರಲ್ಲಿ ಬಹುಸಂಖ್ಯೆಯ ಜನರು ತರುಣರು. ಇವರೆಲ್ಲ ಜ್ಞಾನ, ಉತ್ಸಾಹ, ಸಾಮರ್ಥ್ಯ ಮತ್ತು ಕೌಶಲಗಳ ಕಣಜ. ಇವರಿಗೆ ಕಾಲಕಾಲಕ್ಕೆ ಬದಲಾಗುವ ತಂತ್ರಜ್ಞಾನ ಮತ್ತು ಆರ್ಥಿಕ ಸುಧಾರಣೆಗಳಲ್ಲಿ ತರಬೇತಿ ನೀಡಿ ಮಾನವ ಸಂಪನ್ಮೂಲದ ಸಮರ್ಥ ಬಳಕೆ ಅವಕಾಶವೂ ಹೌದು, ಸವಾಲೂ ಹೌದು.
ಒಂದು ಮಾತು : ಎಚ್.ಡಿ.ಪಾರೆಖ್ ದಿನಗಳಿಂದಲೂ ಪಾಲಿಸಿಕೊಂಡು ಬರುತ್ತಿರುವ ಸಿದ್ಧಾಂತವೆಂದರೆ, ಷೇರುದಾರರು, ನೌಕರರು, ಗ್ರಾಹಕರು ಮತ್ತು ಇತರ ಆಸಕ್ತರಲ್ಲಿ ಭೇದವೆಣಿಸದೆ ಕಂಪೆನಿ ಎಲ್ಲರಿಗಾಗಿ ಮತ್ತು ಎಲ್ಲರೂ ಕಂಪೆನಿಗಾಗಿ. ಎಲ್ಲರಲ್ಲಿಯೂ ಸಂಶಯಾತೀತ ನಂಬಿಕೆ ಇರಬೇಕು. ಇವು ಮಾದರಿ ಸೂತ್ರಗಳಲ್ಲವೆ?