- ರಶ್ಮಿ ಕೋಟಿ
ಅದು 1996ನೇ ಇಸವಿ ನಾನಿನ್ನೂ ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಸಮಯ. ಒಂದು ದಿನ ಎಂದಿನಂತೆ ನನ್ನ ದ್ವಿಚಕ್ರ ವಾಹನ ಕೈನೆಟಿಕ್ ಹೊಂಡಾದಲ್ಲಿ ಕಾಲೇಜಿಗೆ ಹೊರಡಲು ಸಿದ್ಧಳಾಗುತ್ತಿದ್ದೆ. ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಅಮ್ಮ ಗಾಬರಿಯ ದನಿಯಲ್ಲಿ “ಇಂದು ನೀನು ಕಾಲೇಜಿಗೆ ಹೋಗದಿರುವುದೇ ಒಳ್ಳೆಯದು” ಎಂದರು. ಏಕೆಂದು ಕೇಳುವಷ್ಟರಲ್ಲಿ ಅಪ್ಪಾಜಿ ರೂಮಿನಿಂದ ಹೊರಬಂದು ತಾವೇ ಕಾಲೇಜಿಗೆ ನನ್ನನ್ನು ಕಾರಿನಲ್ಲಿ ಡ್ರಾಪ್ ಮಾಡುವುದಾಗಿ ತಿಳಿಸಿದರು. ನಾನು ಎಷ್ಟು ಬೇಡವೆಂದರೂ ಕೇಳಲಿಲ್ಲ. ತಾವೇ ನನ್ನನ್ನು ಪಿಕ್ ಅಪ್ ಕೂಡ ಮಾಡುವುದಾಗಿ ಅಪ್ಪಾಜಿ ತಿಳಿಸಿದರು. ಸಾಮಾನ್ಯವಾಗಿ ಅಪ್ಪಾಜಿ ಗಾಡಿಯಲ್ಲಿ ಕುಳಿತರೆಂದರೆ ಆಲ್ ಇಂಡಿಯಾ ರೇಡಿಯೋದಲ್ಲಿ ಸುದ್ದಿ ಇಲ್ಲವೇ ಬಿಸ್ಮಿಲ್ಲಾ ಖಾನರ ಶಹನಾಯ್ ವಾದನದ ಸಿಡಿಯನ್ನು ಹಾಕುತ್ತಿದ್ದರು. ಅಂದು ಕೂಡ ಶಹನಾಯಿ ರಿಂಗಣಿಸುತ್ತಿತ್ತು. ಅದರೊಂದಿಗೆ ನನ್ನ ವಟ ವಟ ನನ್ನ ಹತ್ತು ಮಾತುಗಳಿಗೆ ಅಪ್ಪಾಜಿಯದು ಒಂದೇ ಉತ್ತರ. ಯಾವಾಗಲೂ ಅವರು ಮಿತಭಾಷಿ ಆದರೆ ಅಂದು ಅಪಾಯ ಗಮನ ಬೇರೆಲ್ಲೋ ಇದ್ದಂತಿತ್ತು. ಕಾಲೇಜಿನ ಬಳಿ ಕಾರಿನಿಂದನಾನು ಇಳಿಯುವಾಗ
ಅಪ್ಪಾಜಿ ಕಾಲೇಜು ಮುಗಿಯುವ ಸಮಯವನ್ನು ಕೇಳಿದರು. ಅಪ್ಪಾಜಿ ತಾವು ಹೇಳಿದ್ದಂತೆ ಸರಿಯಾಗಿ ನಾನು ಅಂದಿನ ಕಡೆಯ ತರಗತಿ ಮುಗಿಸಿ ಬರುವುದರೊಳಗೆ ಕಾಲೇಜಿನ ಗೇಟಿನ ಹೊರಗೆ ನನಗಾಗಿ ಕಾಯುತ್ತಿದ್ದರು. ಇದನ್ನು ಕಂಡು ನನಗೆ ಆಶ್ಚರ್ಯ, ಏಕೆಂದರೆ ಪತ್ರಿಕೆಯ ಕೆಲಸದಲ್ಲೇ ಅಪ್ಪಾಜಿ ಸದಾ ಮುಳುಗಿ ಹೋಗಿರುತ್ತಿದ್ದರು. ನಮ್ಮ ರಿಪೋರ್ಟ್ ಕಾರ್ಡ್‌ಗೆ ಅಪ್ಪಾಜಿಯ ಸಹಿ ಬೇಕೆಂದಾಗಲೂ, ನಾವು ಪ್ರೆಸ್‌ಗೆ ಹೋಗಿ ಅವರ ಸಹಿ ಹಾಕಿಸಿಕೊಂಡು ಬರುತ್ತಿದ್ದವು. ಹೀಗಿರುವಾಗ ಅವರು ಸ್ಥತಃ ನನ್ನನ್ನು ಕಾಲೇಜಿಗೆ ಕರೆತಂದು ಬಿಟ್ಟು, ವಾಪಸ್ ಕರೆದೊಯ್ಯಲು ಬಂದುದು ನನಗೆ ಅತ್ಯಾಶ್ಚರ್ಯವೆನಿಸಿತು. ತಡೆಯಲಾಗದೆ ನಾನು ಅಪ್ಪಾಜಿಯನ್ನು ಕೇಳಿದೆ ಅದಕ್ಕವರು ತಮಗೆ ಒಬ್ಬ ಹಿರಿಯ ಪೊಲೀಸ್ ಅಧಿಕಾರಿಯು ಜೀವಬೆದರಿಕೆಯೊಡ್ಡಿದ್ದಾರೆ. ಕುಟುಂಬದವರಿಗೂ ಹಾನಿ ಮಾಡುವ ಸಂಭವವನ್ನು ಅಲ್ಲಗಳೆಯಲಾಗುವುದಿಲ್ಲ ಎಂದರು. ಅಪ್ಪಾಜಿಯ ಮಾತು ಕೇಳಿ ನಾನು ಅವಾಕ್ಕಾದೆ. ನಿಮಗೆ ಜೀವಬೆದರಿಕೆಯೊಡ್ಡಿದರೂ ನೀವು ಹೀಗೆ ಓಡಾಡುತ್ತಿದ್ದೀರಲ್ಲಾ ಎಂದು ಕೇಳಿದೆ. ಅದಕ್ಕವರು ‘ಇದಕ್ಕೆಲ್ಲಾ ಹೆದರಿದರಾಗುತ್ತೇನಪ್ಪ? ಇಂಥ ಬೆದರಿಕೆಗಳಿಗೆ ಅಂಜಿ ವಸ್ತುನಿಷ್ಠಸುದ್ದಿಯನ್ನು ಪ್ರಕಟಿಸುವುದನ್ನು ನಿಲ್ಲಿಸಲಾಗುತ್ತದೆಯೆ? ಈಗಾಗಲೇ ನಾನು ದೆಹಲಿಯ ಭಾರತೀಯ ಪತ್ರಿಕಾ ಮಂಡಳಿಗೆ ದೂರು ಸಲ್ಲಿಸಿದ್ದೇನೆ. ಅದನ್ನು ಸಾಬೀತು ಪಡಿಸಲು ನಮ್ಮಲ್ಲಿ ಎಲ್ಲ ಸಾಕ್ಷಾಧಾರಗಳಿವೆ. ಕಾನೂನಿನ ಮೇಲೆ ನನಗೆ ನಂಬಿಕೆಯಿದೆ’ ಎಂದು ಸಮಾಧಾನಚಿತ್ತದಿಂದಲೇ ಉತ್ತರಿಸಿದರು. ಅಂತಹ ಆತಂಕಕಾರಿ ಸಂದರ್ಭದಲ್ಲೂ ವಿಚಲಿತರಾಗದೆ ತಮ್ಮ ನಿಲುವನ್ನು ಬದಲಿಸದೆ ಅಧಿಕಾರಿಯ ವಿರುದ್ಧಕಾನೂನು ಹೋರಾಟಕ್ಕೂ ಸಿದ್ದರಾಗಿದ್ದ ಅಪ್ಪಾಜಿಯ ಗುಂಡಿಗೆ ಕಂಡು ದಿಗ್ಬ್ರಾಂತಳಾಗಿದ್ದೆ.
ನಡೆದದ್ದಿಷ್ಟು, 1990ರ ದಶಕದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಪೊಲೀಸರಿಗೆ ದುಸ್ವಪ್ನವಾಗಿದ್ದ ನರಹಂತಕ ವೀರಪ್ಪನ್ ನನ್ನು ಸೆರೆಹಿಡಿಯಲು ಕರ್ನಾಟಕ ಸರ್ಕಾರ ಎಸ್‌ಟಿಎಫ್‌ನ ಮುಖ್ಯಸ್ತರನ್ನಾಗಿ ಹಿರಿಯ ಪೊಲೀಸ್ ಅಧಿಕಾರಿ ಶಂಕರ ಬಿದರಿಯವರನ್ನು ನೇಮಿಸಿತ್ತು. ವೀರಪ್ಪನ್ ನನ್ನು ಸೆರೆಹಿಡಿಯಲೇಬೇಕೆಂಬ ಹಠಕ್ಕೆ ಬಿದ್ದಿದ್ದ ಶಂಕರ ಬಿದರಿ ನೇತೃತ್ವದ ವಿಶೇಷ ಕಾರ್ಯಾಚರಣೆ ಪಡೆ (ಎಸ್‌ಟಿಎಫ್)ಯವರು, ಅವನಿಗೆ ಆಹಾರ ಹಾಗೂ ಮಾಹಿತಿ ಪೂರೈಸುತ್ತಿದ್ದಾರೆಂಬ ಸಂಶಯದಿಂದ ಗ್ರಾಮಸ್ಥರು, ಅದರಲ್ಲೂ ಆದಿವಾಸಿಗಳಿಗೆ ವೀರಪ್ಪನ್ ಕುರಿತು ಮಾಹಿತಿ ನೀಡಲು ಒತ್ತಾಯಿಸುತ್ತಿದ್ದರು. ವಿಶೇಷ ಕಾರ್ಯಾಚರಣೆ ಪಡೆಯವರ ದೌರ್ಜನ್ಯ ನಿರಂತರವಾದಾಗ ‘ ಅಂದೋಲನ ದಿನಪತ್ರಿಕೆಯಲ್ಲಿ ಅಂತಹ ಪ್ರಕರಣಗಳನ್ನು ಸಾಕ್ಷಾಧಾರಗಳ ಸಮೇತ ವರದಿ ಮಾಡಲಾಯಿತು. ಇದರಿಂದ ಕುಪಿತಗೊಂಡ ಶಂಕರ ಬಿದರಿಯವರು ಅಪ್ಪಾಜಿಗೆ ಫೋನ್ ಕರೆ ಮಾಡಿ, ಅವರ (ಶಂಕರ ಬಿದರಿ) ವಿರುದ್ಧದ ವರದಿಗಳನ್ನು ಪ್ರಕಟಿಸುವುದನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದರೆ ಗ್ರಾಮಸ್ಥರಿಗಾಗುತ್ತಿರುವ ಗತಿಯೇ ಅಪ್ಪಾಜಿಗೂ ಆಗಲಿದೆ ಎಂದು ಬೆದರಿಕೆಯೊಡ್ಡಿದ್ದರು.
ದೆಹಲಿಯಲ್ಲಿ ನಡೆದ ಪ್ರಕರಣದ ವಿಚಾರಣೆಯ ಮೊದಲ ದಿನ ಶಂಕರ ಬಿದರಿಯವರು ಗೈರು ಹಾಜರಾದದ್ದರಿಂದ ನ್ಯಾಯಮೂರ್ತಿಗಳು ಅಪ್ಪಾಜಿಯ ಸಮಯ ವ್ಯರ್ಥ ಮಾಡಿದ್ದಕ್ಕೆ ಬಿದರಿಯವರಿಗೆ ಒಂದು ಸಾವಿರ ರೂ.ದಂಡವನ್ನು ವಿಧಿಸಿದರು. ಬಿದರಿಯವರು ನಂತರದ ಎಲ್ಲ ವಿಚಾರಣೆಗಳಿಗೂ ಹಾಜರಾದರು. ಕಡೆಗೆ ನ್ಯಾಯಮೂರ್ತಿಗಳು ಅಪ್ಪಾಜಿಗೆ ಜೀವ ಬೆದರಿಕೆ ಹಾಕಿದ ಬಿದರಿಯವರೇ ಅವರಿಗೆ ರಕ್ಷಣೆ ಕೊಡಬೇಕೆಂದು ತೀರ್ಪು ನೀಡುವ ಮೂಲಕ ಪ್ರಕರಣ ಇತ್ಯರ್ಥವಾಯಿತು. ಇದಾದ 16 ವರ್ಷಗಳ ನಂತರ 2012 ರಲ್ಲಿ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರ ಸ್ಥಾನಕ್ಕೆ ಶಂಕರ ಬಿದರಿಯವರ ನೇಮಕಾತಿಯನ್ನು ರದ್ದು ಮಾಡಿ ಉಚ್ಚನ್ಯಾಯಾಲಯವು ತೀರ್ಪು ನೀಡಿತು. ಬಿದರಿಯವರು ಎಸ್ ಟಿಎಫ್‌ನ ಮುಖ್ಯಸ್ಥರಾಗಿದ್ದ ಸಮಯದಲ್ಲಿ ನಡೆಸಿದ ದೌರ್ಜನ್ಯಗಳೇ ಆ ತೀರ್ಪಿಗೆ ಮುಖ್ಯ ಕಾರಣ ಎಂದು ಉಲ್ಲೇಖಿಸಲಾಗಿತ್ತು. ಈ ಘಟನೆಯ ನಂತರ ಅಪ್ಪಾಜಿ ತಾವು ಬರೆಯುತ್ತಿದ್ದ “ಇದ್ದರು. ಇದ್ದಾಂಗ” 2012, ಏಪ್ರಿಲ್ 4ನೇ ತಾರೀಖಿನ ಅಂಕಣದಲ್ಲಿ “ಸತ್ಯ ಎಂದಿಗೂ ಸತ್ಯವೇ… 15 ವರ್ಷಗಳ ನಂತರವೂ!’ ಎಂಬ ಶೀರ್ಷಿಕೆಯಲ್ಲಿ ಇದನ್ನೆಲ್ಲಾ ಪತ್ರಿಕೆಯ ಓದುಗರೊಂದಿಗೆ ಹಂಚಿಕೊಂಡಿದ್ದಾರೆ ಕೂಡ, ಇಂಥ ಹಲವಾರು ಬೆದರಿಕೆಗಳನ್ನು, ಮಾನನಷ್ಟ ಮೊಕದ್ದಮೆಗಳನ್ನು, ಕಡೆಗೆ ಕಿಡಿಗೇಡಿಗಳು ನಮ್ಮ ಪತ್ರಿಕಾ ಕಚೇರಿಯನ್ನು ಧ್ವಂಸ ಮಾಡಿರುವುದನ್ನೂ ಅಪ್ಪಾಜಿ ಎದುರಿಸಿದ್ದಾರೆ. ಆದರೂ ಅವರು ಯಾವುದೇ ಗೊಡ್ಡು ಬೆದರಿಕೆಗಳಿಗೆ ಎದೆಗುಂದಿದ್ದನ್ನು ನಾನು ಎಂದೂ ನೋಡಿಲ್ಲ. ಹೀಗೆಯೇ ನನ್ನ ಸ್ಮೃತಿಪಟಲದಲ್ಲಿ ಅಚ್ಚಳಿಯದಿರುವ
ಮತ್ತೊಂದು ಘಟನೆ ಎಂದರೆ ಜನತಾದಳದ ಸರ್ಕಾರ ರಚನೆಯಾಗಿ ದೇವಗೌಡರು ಮುಖ್ಯಮಂತ್ರಿಯಾಗಿದ್ದ ವೇಳೆ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ 1996ರ ಡಿಸೆಂಬರ್ 19 ರಂದು ಕಾವೇರಿ ನ್ಯಾಯ ಮಂಡಳಿಯು ತಮಿಳು ನಾಡಿಗೆ ನೀರು ಬಿಡಬೇಕು ತೀರ್ಪು ನೀಡಿ ಕರ್ನಾಟಕವನ್ನು ಸಂದಿಗ್ಧತೆಗೆ ತಟ್ಟಿತ್ತು. ಅದೇ ತಿಂಗಳ 28 ರಂದು ದೇವೇಗೌಡರು ಕರೆದ ವಿಧಾನ ಮಂಡಲ ಅಧಿವೇಶನದಲ್ಲಿ ತನಾಡಿಗೆ ನೀರು ಬಿಡುವುದು ಸಾಧ್ಯವಿಲ್ಲ ಎಂಬ ಧ್ವನಿ ಮೊಳಗಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ವೋಚ್ಚ ನ್ಯಾಯಾಲಯವು ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿಯೇ ಸಭೆ ಕರೆಯಲಿ ಎಂದು ಹೇಳಿತ್ತು. ಕಡೆಗೆ ಪ್ರಧಾನಮಂತ್ರಿ ಪಿವಿಎಸ್ ಭೇಟಿಯಾದ ದೇವೇಗೌಡರು ಗತ್ಯಂತರವಿಲ್ಲದೆ ಕಾವೇರಿಯಿಂದ ತಮಿಳುನಾಡಿಗೆ ನೀರು ಬಿಡುಗಡೆಗೆ ಒಪ್ಪಿಗೆ ನೀಡಿದರು. ರಾಜ್ಯ ಸರ್ಕಾರವು ತಮಿಳುನಾಡಿಗೆ 6 ಟಿಎಂಸಿ ಅಡಿ ನೀರು ಬಿಡಲು ಒಪ್ಪಿದ್ದುದನ್ನು ಪ್ರತಿರೋಧಿಸಿ ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು, ಹಾಸನ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆಯಲಾರಂಭಿಸಿದವು.
ಈ ಸಂದರ್ಭದಲ್ಲಿ 1997, ಜನವರಿ 5ರಂದು ದೇವೇಗೌಡರು ರಹಸ್ಯವಾಗಿ ಹೆಲಿಕಾಪ್ಟರ್‌ನಲ್ಲಿ ಮೈಸೂರಿಗೆ ಬಂದಿದ್ದರು. ಈ ವಿಷಯ ಕೆಲವು ಅಧಿಕಾರಿಗಳಿಗೆ ಮಾತ್ರ ತಿಳಿದಿತ್ತು. ಆಡಳಿತ ತರಬೇತಿ ಸಂಸ್ಥೆ (ಎಟಿಐ) ಅತಿಥಿ ಗೃಹದಲ್ಲಿ 45 ನಿಮಿಷಗಳ ಸಭೆಯನ್ನು ಮುಗಿಸಿ ಅಲ್ಲಿಂದ ಮತ್ತೆ ಕಾರಿನಲ್ಲಿ ಹೆಲಿಪ್ಯಾಡ್‌ಗೆ ಆಡಳಿತ ತರಬೇತಿ ಸಂಸ್ಥೆ ರಸ್ತೆಯಲ್ಲಿ ಹಿಂದಿರುತ್ತಿದ್ದಾಗ ಅಪ್ಪಾಜಿಯ ಕಣ್ಣಿಗೆ ಬಿದಿದ್ದಾರೆ. ತಕ್ಷಣ ಅಪ್ಪಾಜಿ ತಮ್ಮ ಜೊತೆಯಲ್ಲಿ ಸದಾ ಇಟ್ಟುಕೊಳ್ಳುತ್ತಿದ್ದ ಕ್ಯಾಮೆರಾ ತೆಗೆದು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಆಗ ಅಪ್ಪಾಜಿಯ ಬಳಿಗೆ ಬಂದ ಅಂದಿನ ಜಿಲ್ಲಾಧಿಕಾರಿ ಅಜಯ್ ಸೇ ಅವರು “ಫೋಟೊ ತೆಗೆಯಬೇಡಿ” ಎಂದು ಹೇಳಿದರು. ಆಗ ಅಪ್ಪಾಜಿ, ”ಫೋಟೊ ತೆಗೆಯಬೇಡಿ ಎಂದರೆ ಏನರ್ಥ, ಇದೇನು ನಿಷೇಧಿತ ಪ್ರದೇಶ ಅಲ್ಲವಲ್ಲ’ ಎಂದಿದ್ದಾರೆ. ಅದೇ ಸಮಯದಲ್ಲಿ ಕಾರಿನೊಳಗೆ ಕುಳಿತುಕೊಳ್ಳುತ್ತಿದ್ದ ದೇವೇಗೌಡರು ಅಪ್ಪಾಜಿ ಫೋಟೊ ಕ್ಲಿಕ್ಕಿಸಿಕೊಂಡದ್ದನ್ನು ಕಂಡು ಜಿಲ್ಲಾಧಿಕಾರಿಗಳನ್ನು ಕರೆದು ಅವರಿಗೆ “ನಾನು ಬಂದಿದ್ದ ಸುದ್ದಿಯನ್ನು ಹಾಕಬೇಡಿ ಎಂದು ತಿಳಿಸಿ’ ಎಂದು ಸೂಚಿಸಿದರಂತೆ ಆದರೆ ಅಪ್ಪಾಜಿ ಮುಖ್ಯಮಂತ್ರಿಗಳ ತೀರಾ ಗುಟ್ಟಿನ ಆ ಭೇಟಿಯನ್ನು ಮರುದಿನದ ಪತ್ರಿಕೆಯಲ್ಲಿ ಸಚಿತ್ರ ವರದಿ ಮಾಡಿದ್ದರು. ಹೀಗೆ ಅಪ್ಪಾಜಿ ಸುದ್ದಿಗಳ ಜೊತೆ ರಾಜಿಯಾಗಿದ್ದನ್ನು ನಾನು ಎಂದೂ ಕಂಡಿಲ್ಲ. ಸತ್ಯವಾದ ವರದಿಯನ್ನು ತಡೆಯಲು ಯಾರೇ ಮುಂದೆ ಬಂದರೂ ಅವರು ಸೊಪ್ಪುಹಾಕುತ್ತಿರಲಿಲ್ಲ. ಅಧಿಕಾರಿಯೇ ಆಗಿರಲಿ, ಜನಪ್ರತಿನಿಧಿಯೇ ಆಗಿರು ಅಪ್ಪಾಜಿಯ ಲೇಖನಿಯ ಮೊನಚಿನಿಂದ ತಪ್ಪಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಕಣ್ಣಿಗೆ ಕಂಡ ಸುದ್ದಿಯ ಪ್ರಾಮುಖ್ಯತೆ ಅರಿವಾದ ತಕ್ಷಣ ವರದಿಯನ್ನು ನಿಷ್ಪಕ್ಷಪಾತವಾಗಿ ನೀಡುವುದಷ್ಟೇ ಅವರ ಗುರಿಯಾಗಿರುತ್ತಿತ್ತು.