Mysore
21
overcast clouds

Social Media

ಭಾನುವಾರ, 10 ನವೆಂಬರ್ 2024
Light
Dark

ಷೇರುಪೇಟೆಯಲ್ಲಿ ಗೂಳಿ, ಕರಡಿ ಕಾಳಗ ತಾರಕಕ್ಕೆ!

ಪ್ರೊ. ಆರ್. ಎಂ. ಚಿಂತಾಮಣಿ

ಬಾಂಬೆ ಸ್ಟಾಕ್ ಎಕ್ಸ್‌ಚೇಂಜಿನ ಪ್ರಾತಿನಿಧಿಕ ೩೦ ಷೇರುಗಳ ಬೆಲೆ ಸೂಚ್ಯಂಕ ಸೆನ್ಸೆಕ್ಸ್ ಸೆಪ್ಟೆಂಬರ್ ೨೫ರಂದೇ ೮೫,೦೦೦ ಮಟ್ಟವನ್ನು ದಾಟಿ ಮುಂದೆ ಹೋದದ್ದು, ಈಗ ೮೦,೦೦೦ದ ಸುತ್ತ ತಿರುಗುತ್ತಿದೆ. ದೇಶದ ಇನ್ನೊಂದು ಮಹತ್ವದ ಷೇರು ಬೆಲೆ ಸೂಚ್ಯಂಕ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜಿನ ಸ್ವಲ್ಪ ವಿಶಾಲ ತಳಹದಿಯ ೫೦ ಷೇರುಗಳ ಬೆಲೆ ಸೂಚ್ಯಂಕ ‘ನಿಫ್ಟಿ’ (ನ್ಯಾಷನಲ್ ಫಿಫ್ಟಿ). ಇದು ಅದೇ ದಿನ ೨೬,೦೦೦ ಹಂತ ದಾಟಿದ್ದು, ಈಗ ೨೪,೦೦೦ಕ್ಕಿಂತ ಸ್ವಲ್ಪ ಮೇಲಿನ ಮಟ್ಟ ದಲ್ಲಿ ಕಳೆದ ವಾರಾಂತ್ಯಕ್ಕೆ ನಿಂತಿತ್ತು. ಸೆನ್ಸೆಕ್ಸ್ ೧೯೭೮ರಲ್ಲಿ ಆರಂಭವಾಗಿದ್ದರೆ, ನಿಫ್ಟಿ ೧೯೯೪ರಲ್ಲಿ. ದೈನಿಕ ವ್ಯವಹಾರಗಳಲ್ಲಿಯೂ ದೊಡ್ಡ ಮಟ್ಟದ ಏರಿಳಿತಗಳನ್ನು ಕಾಣಬಹುದು. ಮೂರು-ನಾಲ್ಕು ವಾರಗಳಲ್ಲಿಯೇ ಇಷ್ಟೊಂದು ಕುಸಿತವೇ? ಎಂಬ ಮುಗ್ದ ಪ್ರಶ್ನೆ ಕೇಳಬಹುದು. ಉತ್ತರಿಸುವ ಪ್ರಯತ್ನ ಇಲ್ಲಿದೆ.

ಪೇಟೆಯಲ್ಲಿ ಷೇರುಗಳ ಬೆಲೆಗಳ ಏರಿಳಿತಗಳಲ್ಲಿಯೇ ಮಾರಿಕೊಂಡು ಲಾಭ ಮಾಡಿಕೊಳ್ಳ ಬಯಸುವ ಹೂಡಿಕೆದಾರರದೇ ಒಂದು ಗುಂಪು ಇರುತ್ತದೆ. ಇವರು ನಿರ್ದಿಷ್ಟ ಷೇರು ಮತ್ತು ಬಾಂಡುಗಳಲ್ಲಿ (ಸಾಲ ಪತ್ರಗಳಲ್ಲಿ) ದೀರ್ಘಾವಽ ಹೂಡಿಕೆ ಮಾಡುವುದಿಲ್ಲ. ವ್ಯವಹಾರದ ದಿನಗಳಲ್ಲಿ ನಿತ್ಯವೂ ಖರೀದಿ, ಮಾರಾಟ ಮಾಡುವುದೇ ಇವರ ಕೆಲಸ. ಇವರನ್ನೇ ‘ಸಚ್ಚಾ ವ್ಯಾಪಾರಿಗಳು’ ಎಂದು ಕರೆಯುವುದು. ಇವರು ಸರ್ಕಾರದ ನೀತಿ, ಪೇಟೆಯಲ್ಲಿಯ ಮತ್ತು ಕಂಪೆನಿಗಳಲ್ಲಿಯ ಎಲ್ಲ ಆಗು ಹೋಗುಗಳನ್ನು, ದೇಶದಲ್ಲಿನ ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳನ್ನು ಮತ್ತು ಅಂತಾರಾಷ್ಟ್ರೀಯ ಸ್ಥಿತಿಗಳನ್ನು ಗಮನಿಸುತ್ತಿರುತ್ತಾರೆ. ಇವರು ಬೆಲೆಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿರುತ್ತಾರೆ. ವ್ಯವಹಾರ ಚತುರರಾಗಿದ್ದು, ಇತರರಿಗೆ ಸಲಹೆ ಕೊಡಬಲ್ಲರು.

ಸ್ಪೆಕ್ಯುಲೇಟರರಲ್ಲಿ ಕೆಲವರು ಬೆಲೆಗಳು ಮುಂದೆ ಏರುತ್ತವೆ ಎಂದು ನಿರೀಕ್ಷೆ ಮಾಡಿ ಖರೀದಿ ಮಾಡುತ್ತಾ ಹೋಗುತ್ತಾರೆ. ಇವರನ್ನು ‘ಗೂಳಿ’ (ಆ ಹೋರಿ, ಎತ್ತು) ಎಂದು ಪೇಟೆ ಪರಿಭಾಷೆಯಲ್ಲಿ ಕರೆಯುತ್ತಾರೆ. ಇನ್ನು ಕೆಲವರು ಬೆಲೆಗಳು ಇಳಿಯುತ್ತವೆ ಎಂದು ನಿರೀಕ್ಷಿಸುತ್ತಾ ಮಾರುತ್ತಿರುತ್ತಾರೆ. ಇವರೇ ‘ಕರಡಿ’ . ವಾಸ್ತವದಲ್ಲಿ ಗೂಳಿ ಯಾವ ಕೆಲಸಕ್ಕೂ ಬಳಸಲಾರದ ನಿರ್ಭಿತ ಪ್ರಾಣಿ. ಯಾವಾಗಲೂ ಮೇಲ್ಮುಖವಾಗಿ ನಡೆಯುವ ಮತ್ತು ಸಿಟ್ಟು ಬಂದಾಗ ಮುಖ ಕೆಳಗೆ ಮಾಡಿ ಕೋಡುಗಳೊಂದಿಗೆ ಗುದ್ದುವ ಪ್ರಾಣಿ. ಕರಡಿ ಕೆಳ ಮುಖವಾಗಿ ನಡೆಯುವ ಹೇಡಿ ಎಂದೂ ಸಿಟ್ಟು ಬಂದಾಗ ಕಚ್ಚುವುದೆಂದೂ ಹೇಳುತ್ತಾರೆ.

ಈ ಗೂಳಿ ಕರಡಿಗಳು ಮೊದಲು ಪೇಟೆಯ ವ್ಯವಹಾರ ಅಖಾಡಾದಲ್ಲಿ (ಟ್ರೇಡಿಂಗ್ ರಿಂಗ್) ಬ್ರೋಕರರೊಂದಿಗೆ ಇದ್ದು ವ್ಯವಹಾರ ಮಾಡುತ್ತಿದ್ದರು. ಈಗ ಹೊಸ ತಂತ್ರಜ್ಞಾನಗಳೊಂದಿಗೆ ಎಲ್ಲ ನಗರ, ಪಟ್ಟಣಗಳಲ್ಲಿ ಷೇರು ಬ್ರೋಕರರ (ಅಽಕೃತವಾಗಿ ನೋಂದಾಯಿತ) ಕಚೇರಿಗಳಲ್ಲಿ ಸ್ಕ್ರೀನ್ ಮುಂದೆ ಕುಳಿತು ಆನ್‌ಲೈನ್ ವ್ಯವಹಾರ ಮಾಡುತ್ತಿದ್ದಾರೆ. ಒಮ್ಮೆ ಬುಲ್ ಇದ್ದವರು ಇನ್ನೊಮ್ಮೆ ಬೀಯರ್ ಆಗಬಹುದು. ಒಂದು ಷೇರು ವಿಷಯದಲ್ಲಿ ಗೂಳಿ ಆದವರು ಇನ್ನೊಂದರ ವಿಷಯದಲ್ಲಿ ಕರಡಿ ಆಗಬಹುದು. ಒಟ್ಟಿನಲ್ಲಿ ಪೇಟೆಯಲ್ಲಿ ವ್ಯವಹಾರ.

ಸಾಂಸ್ಥಿಕ ಹೂಡಿಕೆದಾರರು, ಇತರರು: ಮೊದಲಿನಿಂದಲೂ ಶ್ರೀಮಂತ ದೊಡ್ಡ ಹೂಡಿಕೆದಾರರು ಮತ್ತು ಆಸಕ್ತ ಸಣ್ಣ ಹೂಡಿಕೆದಾರರು ಈ ಬಂಡವಾಳ ಪೇಟೆಗಳಲ್ಲಿ ಚಟುವಟಿಕೆ ಯಿಂದ ಇದ್ದದ್ದು ಗೊತ್ತೇ ಇದೆ. ಇತ್ತೀಚಿನ ದಿನಗಳಲ್ಲಿ ಮಧ್ಯಮ ವರ್ಗದ ಮತ್ತು ಮೇಲ್ಮಧ್ಯಮ ವರ್ಗದ ಕುಟುಂಬಗಳ ಉಳಿತಾಯಗಳು ಷೇರು ಪೇಟೆಯ ಕಡೆಗೆ ಹೆಚ್ಚು ವಾಲಿರುವುದರಿಂದ ಮತ್ತು ಜನರಲ್ಲಿ ಈ ಪೇಟೆಗಳ ಬಗ್ಗೆ ಮಾಹಿತಿ ಹೆಚ್ಚುತ್ತಿರುವುದರಿಂದ ಸಣ್ಣ ಹೂಡಿಕೆಗಳು ಹೆಚ್ಚಾಗುತ್ತಿವೆ. ಈ ದಿನಗಳಲ್ಲಿ ಕೌಟುಂಬಿಕ ಉಳಿತಾಯಗಳು ಕಾರ್ಪೊರೇಟ್ ವಲಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹರಿದುಬರುತ್ತಿವೆ. ವಿದೇಶಿ ಹೂಡಿಕೆ ಸಂಸ್ಥೆಗಳು ಮತ್ತು ವ್ಯಕ್ತಿಗಳು ವಿವಿಧ ಷೇರುಗಳ ಮತ್ತು ಬಾಂಡುಗಳ ಖರೀದಿ, ಮಾರಾಟ ಮಾಡುತ್ತಿವೆ. ಇವುಗಳನ್ನು ವಿದೇಶಿ ಪೋರ್ಟ್ ಪೊಲಿಯೋ ಇನ್ವೆಸ್ಟರ್ಸ್ (ಎಫ್‌ಐಐಗಳು) ಎಂದು ಕರೆಯುತ್ತಾರೆ. ಇವರಿಂದ ಪೇಟೆಯಲ್ಲಿ ಹೆಚ್ಚು ವ್ಯವಹಾರಗಳು ನಡೆದಂತಾಗುತ್ತದೆಯೇ ಹೊರತು ಹೆಚ್ಚಿನ ಲಾಭವಿಲ್ಲ. ಏಕೆಂದರೆ ಇವರು ತಮಗೆ ಹೆಚ್ಚಿನ ಬೆಲೆಗಳು (ಲಾಭ) ದೊರೆಯುವ ದೇಶಗಳಿಗೆ ವಲಸೆ ಹೋಗುತ್ತಲೇ ಇರುತ್ತಾರೆ. ಒಂದಿಷ್ಟು ತೆರಿಗೆ ಸಂಗ್ರಹವಾಗುತ್ತದೆ.

ಇತ್ತೀಚಿನ ದಶಕಗಳಲ್ಲಿ ಷೇರು ಪೇಟೆಗೇ ಮೀಸಲಾದ ಹೂಡಿಕೆ ನಿಽಗಳು ಮತ್ತು ಕಂಪೆನಿಗಳು ನಮ್ಮಲ್ಲಿ ಹೆಚ್ಚಾಗುತ್ತಿವೆ. ಅವುಗಳಲ್ಲಿ ಮ್ಯೂಚುವಲ್ ಫಂಡುಗಳು (ಎಂಎಫ್) ದೊಡ್ಡ ಸಂಖ್ಯೆಯಲ್ಲಿವೆ. ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳ ಅಂಗ ಸಂಸ್ಥೆಗಳಾದ ಎಂಎಫ್‌ಗಳಲ್ಲದೆ ಇತರ ಖಾಸಗಿ ಎಂಎಫ್ ಗಳೂ ಸಾಕಷ್ಟಿದ್ದು, ಷೇರು ಪೇಟೆಗಳಲ್ಲಿ ಪಾತ್ರ ವಹಿಸುತ್ತಿವೆ. ತಮ್ಮವೇ ಆದ ಅಸೆಟ್ ಮ್ಯಾನೇಜ್‌ಮೆಂಟ್ ಕಂಪೆನಿಗಳ ಮೂಲಕ ನಿತ್ಯದ ವ್ಯವಹಾರವನ್ನು ತಜ್ಞರಿಂದ ನಡೆಸುತ್ತವೆ.

ಅಲ್ಲದೆ ಖಾಸಗಿ ಇಕ್ವಿಟಿ ಫಂಡುಗಳು ಮತ್ತು ಹೂಡಿಕೆ ಕಂಪೆನಿಗಳು ತಮ್ಮದೇ ಆದ ಕಾಣಿಕೆ ಸಲ್ಲಿಸುತ್ತಿವೆ. ಬ್ಯಾಂಕೇತರ ಹಣಕಾಸು ಕಂಪೆನಿಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಪೂರ್ಣ ಅಥವಾ ಭಾಗಶಃ ಷೇರು ಪೇಟೆಗಳಲ್ಲಿ ತೊಡಗಿಸಿಕೊಂಡಿರುತ್ತವೆ.

ಈ ದೇಶಿ ಸಂಸ್ಥೆಗಳಿಂದಾಗುವ ಇನ್ನೊಂದು ಅನುಕೂಲವೆಂದರೆ ವಿದೇಶಿಯರು (ಎಫ್‌ಪಿಐಗಳು) ದೊಡ್ಡ ಗಾತ್ರದಲ್ಲಿ ಮಾರುತ್ತಿದ್ದಾಗ ಆ ಷೇರುಗಳನ್ನು ಖರೀದಿಸಿ ಪೇಟೆಯನ್ನು ಸ್ಥಿಮಿತಕ್ಕೆ ತರುತ್ತವೆ. ಇತ್ತೀಚಿನ ವಾರಗಳಲ್ಲಿ ಎಫ್‌ಪಿಐಗಳು ಹೆಚ್ಚಿನ ಲಾಭಕ್ಕಾಗಿ ಚೀನಾಕ್ಕೆ ಬಂಡವಾಳ ಒಯ್ಯಲು ನಮ್ಮ ಪೇಟೆಗಳಲ್ಲಿ ಸತತ ಮಾರುತ್ತಿವೆ. ನಮ್ಮ ದೇಶೀಯ ಸಂಸ್ಥೆಗಳು ಅವುಗಳನ್ನು ಖರೀದಿಸುತ್ತಲೇ ಇರುವುದರಿಂದ ಪೇಟೆಯಲ್ಲಿ ಅಲ್ಲೋಲ ಕಲ್ಲೋಲವಾಗುವುದು ತಪ್ಪಿದೆ.

ಈ ನಡುವೆ ಇತ್ತೀಚಿನ ತಿಂಗಳುಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಹೊಸ ಷೇರುಗಳು ಪೇಟೆಗೆ ಬಂದು ಪಟ್ಟೀಕರಿಸಲ್ಪಡುತ್ತಿವೆ. ಅವುಗಳಲ್ಲಿ ಹೊಂಡೈ ಕಂಪೆನಿ ಸೇರಿದಂತೆ ಏಳು ಕಂಪೆನಿಗಳು ಒಂದೊಂದು ೧೦ ಸಾವಿರ ಕೋಟಿ ರೂ. ಗಳಿಂದ ೨೦ ಸಾವಿರ ಕೋಟಿ ರೂ. ಗಳ ಬೆಲೆಯ ಷೇರುಗಳನ್ನು ಬಿಡುಗಡೆ ಮಾಡಿವೆ. ಎಲ್ಲವೂ ಮುಖಬೆಲೆಯ ಹತ್ತು, ಇಪ್ಪತ್ತು, ಮೂವತ್ತು ಪಟ್ಟು ಪ್ರೀಮಿಯಂ ಹೊಂದಿವೆ. ಅಷ್ಟರ ಮಟ್ಟಿಗೆ ಪೇಟೆಯಲ್ಲಿ ಇರಬೇಕಾಗಿದ್ದ ಬಂಡವಾಳ ನೇರವಾಗಿ ಕಂಪೆನಿಗಳಿಗೆ ಹೋಗಿದೆ. ಗೂಳಿಗಳ ಖರೀದಿಗೆ ಬೇಕಿರುವ ನಗದು ಪೇಟೆಯ ಒಳ ಹರಿವು ಕಡಿಮೆಯಾಗಲಿಲ್ಲವೇ? ಹೀಗೆ ಕರಡಿಗಳ ಮೇಲುಗೈ ಆಗಲು ಇದೂ ಒಂದು ಕಾರಣ.

ಈ ಕೆಲವು ವಾರಗಳಲ್ಲಿ ೨೦೨೪-೨೫ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಕಂಪೆನಿಗಳ ಹಣಕಾಸು ಪರಿಣಾಮಗಳು ಹೊರ ಬೀಳುತ್ತಿವೆ. ಕೆಲವು ಕಂಪೆನಿಗಳಲ್ಲಿ ನಿರೀಕ್ಷೆಗಿಂತ ಕಡಿಮೆ ಒಟ್ಟು ವ್ಯವಹಾರ ಮತ್ತು ಲಾಭ ಬರದೇ ಇರುವುದೂ ಒಂದು ಕಾರಣ.

ಪೇಟೆಯಲ್ಲಿ ಸತತವಾಗಿ ಇಳಿಯುತ್ತಿವೆ ಎಂದೇನೂ ಇಲ್ಲ. ನಡುನಡುವೆ ಶೇ. ೩ ಏರಿದರೆ ಮರುದಿನ ಶೇ. ೪ ಕುಸಿಯಬಹುದು. ನಂತರ ಶೇ. ೮ ಒಮ್ಮೆಲೇ ಹೆಚ್ಚಬಹುದು. ಇದು ಸೂಚ್ಯಂಕಗಳ ಮೇಲೆ ಪರಿಣಾಮ ಬೀರೇ ಬೀರುತ್ತದೆ. ಹಬ್ಬಗಳ ಸಾಲಿನ ಆರಂಭದ ದಿನಗಳಲ್ಲಿ ಆಟೋ ಮೊಬೈಲ್ ಉದ್ದಿಮೆ ಎರಡು ಬೆಳವಣಿಗೆಗಳನ್ನು ಕಾಣುತ್ತದೆ. ಹೆಚ್ಚಿನ ಬೆಲೆಯ (ಪ್ರಿಮಿಯಂ) ಕಾರುಗಳಿಗೆ ಬೇಡಿಕೆ ಅತಿ ಹೆಚ್ಚಾಗಿದೆ. ಆದರೆ ಕಡಿಮೆ ಬೆಲೆ ಕಾರುಗಳಿಗೆ ದೊಡ್ಡ ಡಿಸ್ಕೌಂಟ್ ಕೊಟ್ಟರೂ ಕೇಳುವವರಿಲ್ಲ.

ಮುಂದಿನ ದಿನಗಳಲ್ಲಿ ಬೇರೆ ಬೇರೆ ವಲಯಗಳ ಇನ್ನಷ್ಟು ಕಂಪೆನಿಗಳ ಪರಿಣಾಮಗಳು ಬರಲಿವೆ. ಅವುಗಳ ಹಣಕಾಸು ಸುಸ್ಥಿರವಾಗಿದ್ದರೆ ಪೇಟೆ ಸಾವಿರಾರು ಪಾಯಿಂಟುಗಳಷ್ಟು ಮೇಲೇಳಬಹುದು. ಹೀಗೆ ಏಳುಬೀಳು ನಿರಂತರ.

Tags: