Mysore
27
few clouds

Social Media

ಶುಕ್ರವಾರ, 17 ಜನವರಿ 2025
Light
Dark

ಸಂಪಾದಕೀಯ : ಕೊಡಗು  ರಾಜಕೀಯ ಪಕ್ಷಗಳ ‘ಮತ ಬೆಳೆ’ಗೆ ಪ್ರಾಯೋಗಿಕ ನೆಲೆಯಾಗಬಾರದು!

ಕೊಡಗು ರಾಜ್ಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಆದರೆ, ಅದು ಮೊಟ್ಟೆ ಎಸೆದ ವಿಚಾರಕ್ಕೆ ಎಂಬುದು ವಿಪರ್ಯಾಸ. ಹೌದು. ಕೊಡಗು ಆತಿಥ್ಯಕ್ಕೆ ಹೆಸರುವಾಗಿದೆ. ಕೊಡಗಿಗೆ ಬರುವ ಪ್ರವಾಸಿಗರು ಕೂಡ ಇಲ್ಲಿನ ಆತಿಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದರೆ, ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಕಿಡಿಗೇಡಿಗಳು ಮೊಟ್ಟೆ ಎಸೆದಿರುವುದರಿಂದ ಜಿಲ್ಲೆಯ ಜನತೆ ತಲೆತಗ್ಗಿಸುವಂತಾಗಿದೆ.

ಟಿಪ್ಪು ಕೊಡಗಿನ ಮೇಲೆ ೩೨ ಬಾರಿ ದಂಡೆತ್ತಿ ಬಂದಾಗ ಕೊಡಗಿನ ಜನತೆ ಟಿಪ್ಪು ಸೈನ್ಯವನ್ನು ಸಮರ್ಥವಾಗಿ ಎದುರಿಸುತ್ತಾರೆ. ಬಳಿಕ ದೇವಟಿಪರಂಬು ಎಂಬ ಸ್ಥಳಕ್ಕೆ ಸಂಧಾನಕ್ಕೆಂದು ಕರೆದು ಅಲ್ಲಿ ಕೊಡವರ ನರಮೇಧ ಮಾಡಿರುವುದು ಇತಿಹಾಸ.
ಇದೇ ಕಾರಣಕ್ಕೆ ಟಿಪ್ಪುವಿನ ವಿರುದ್ಧ ಜಿಲ್ಲೆಯಲ್ಲಿ ಆಕ್ರೋಶ, ಅಸಮಾಧಾನವಿದೆ. ಆದರೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಟಿಪ್ಪುವಿನ ಪರವಾಗಿ ನಿರಂತರ ಹೇಳಿಕೆ ನೀಡುತ್ತಿರುವುದು ಕೊಡಗಿನ ಜನತೆಯೆ ಭಾವನೆಯನ್ನು ಕೆರಳಿಸಿದೆ. ಕೊಡಗಿನ ಬಿಜೆಪಿ ಪಾಲಿಗೆ ಇದು ವರದಾನವಾಗಿದೆ. ರಾಜಕೀಯವಾಗಿ ಈ ವಿಚಾರವನ್ನು ಸಾಧ್ಯವಾದಷ್ಟರ ಮಟ್ಟಿಗೆ ಬಳಸಿಕೊಳ್ಳಲಾಗುತ್ತಿದೆ. ಅದರ ಮುಂದುವರಿದ ಭಾಗವೇ ಮೊಟ್ಟೆ ಎಸೆತ. ಬಿಜೆಪಿ ಯುವ ಮೋರ್ಚಾದಿಂದಲೇ ಅಂದು ಪ್ರತಿಭಟನೆ ಆರಂಭವಾಗಿತ್ತು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದಲ್ಲದೆ, ಸಾವರ್ಕರ್ ಚಿತ್ರವನ್ನು ಕಾರಿನೊಳಗೆ ಎಸೆಯಲಾಗಿತ್ತು. ಆ ಬಳಿಕವೂ ಪೊಲೀಸರು ಎಚ್ಚೆತ್ತುಕೊಳ್ಳಲಿಲ್ಲ.
ಮಡಿಕೇರಿಗೆ ಸಿದ್ದರಾಮಯ್ಯ ಬಂದ ಸಂದರ್ಭ ಅವರು ತೆರಳುವ ರಸ್ತೆಯಲ್ಲೇ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಕೆರಳಿದ ಕಾಂಗ್ರೆಸ್ ಕಾರ್ಯಕರ್ತರು ಹಲವು ವರ್ಷಗಳ ಬಳಿಕ ಬಿಜೆಪಿಗೆ ಪ್ರತಿರೋಧ ಒಡ್ಡಿದರು. ಬಿಜೆಪಿ ಕಾರ್ಯಕರ್ತರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಾಲ್ನಡಿಗೆಯಲ್ಲಿ ಬಂದು ಸಿದ್ದರಾಮಯ್ಯ ಪರ ಘೋಷಣೆ ಕೂಗುತ್ತಾ ಸಿದ್ದರಾಮಯ್ಯ ತೆರಳಲು ಅನುವು ಮಾಡಿಕೊಟ್ಟರು. ಈ ಸಂದರ್ಭ ಪ್ರತಿಭಟನಾ ಸ್ಥಳದಿಂದ ಕೆಲ ಕಾರ್ಯಕರ್ತರು ಮೊಟ್ಟೆ ಎಸೆದಿರುವ ಚಿತ್ರಣ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವಿಪಕ್ಷ ನಾಯಕನಿಗೆ ಮೊಟ್ಟೆ ಎಸೆದ ಪ್ರಕರಣವನ್ನು ರಾಜ್ಯ ಬಿಜೆಪಿ ಮುಖಂಡಡು ಸೇರಿದಂತೆ ಎಲ್ಲಾ ಪಕ್ಷಗಳ ಮುಖಂಡರು ಖಂಡಿಸಲಾರಂಭಿಸುತ್ತಿದ್ದಂತೆ ಕೊಡಗು ಬಿಜೆಪಿ ಉಲ್ಟಾ ಹೊಡೆಯಲು ಆರಂಭಿಸಿದೆ. ಪ್ರತಿಭಟನೆ ನಡೆಸಿರುವುದು ಹಿಂದೂಪರ ಸಂಘಟನೆ ಕಾರ್ಯಕರ್ತರು, ಬಿಜೆಪಿಗರಲ್ಲ, ಮೊಟ್ಟೆ ಹೊಡೆದವರು ಕಾಂಗ್ರೆಸಿಗರು ಎಂಬ ಹೇಳಿಕೆಗಳಿಂದ ತೇಪೆ ಹಚ್ಚುವ ಪ್ರಯತ್ನ ನಡೆಯುತ್ತಿದೆ. ಮತ್ತೊಂದೆಡೆ ಗುಡ್ಡೆಹೊಸೂರು ಬಳಿಯೂ ಮೊಟ್ಟೆ ಎಸೆಯಲಾಗಿದ್ದು, ಅಲ್ಲಿ ಮೊಟ್ಟೆ ಎಸೆದಿರುವ ಸಂಪತ್ ಎಂಬಾತನನ್ನು ಕಾಂಗ್ರೆಸ್ ಕಾರ್ಯಕರ್ತ ಎಂದು ಬಿಂಬಿಸುವ ವಿಫಲ ಪ್ರಯತ್ನ ಕೂಡ ಮುಂದುವರಿದಿದೆ.
ಮಡಿಕೇರಿಯಲ್ಲಿ ಮೊಟ್ಟೆ ಎಸೆದ ಪ್ರಕರಣವನ್ನು ಸ್ವತಃ ಸಿದ್ದರಾಮಯ್ಯ ಅವರೇ ಗಂಭೀರವಾಗಿ ಪರಿಗಣಿಸಲಿರಲಿಲ್ಲ. ಆದರೆ, ಗುಡ್ಡೆಹೊಸೂರಿನಲ್ಲಿ ಮೊಟ್ಟೆ ಎಸೆದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿದ್ದರಾಮಯ್ಯ ಪೊಲೀಸರ ವೈಫಲ್ಯವನ್ನು ಖಂಡಿಸಿ ಆ.೨೬ರಂದು ಮಡಿಕೇರಿ ಚಲೋ ಬೃಹತ್ ಪ್ರತಿಭಟನೆಗೆ ಕರೆ ನೀಡಿದರು. ರಾಜ್ಯದ ವಿವಿಧ ಕಾಂಗ್ರೆಸ್ ನಾಯಕರು ಕೊಡಗಿನತ್ತ ಮುಖ ಮಾಡುತ್ತಿರುವುದನ್ನು ಅರಿತ ಬಿಜೆಪಿ, ಪ್ರತಿಭಟನೆಯನ್ನು ತಪ್ಪಿಸಲು ಹಾಗೂ ರಾಜಕೀಯ ನಷ್ಟವನ್ನು ತಪ್ಪಿಸಲು ಅದೇ ದಿನ ಜನಜಾಗೃತಿ ಸಮಾವೇಶ ಮಾಡುವುದಾಗಿ ಘೋಷಿಸಿತು.
ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಸೆ.೧೪೪ ಜಾರಿಗೊಳಿಸಲಾಗಿದೆ. ಎಲ್ಲಾ ರೀತಿಯ ರಾಜಕೀಯ ಸಮಾವೇಶ, ಪ್ರತಿಭಟನೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದು ಸ್ವಾಗತಾರ್ಹವಾಗಿದ್ದರೂ ಇನ್ನಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ.
ಪ್ರಕೃತಿ ವಿಕೋಪ, ಕೊರೊನಾ ಸಂಕಷ್ಟಗಳಿಂದ ಕೊಡಗು ಈಗಷ್ಟೇ ಚೇತರಿಕೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಕೋಮು ಸಂಘರ್ಷ, ಅಹಿತಕರ ಘಟನೆಗಳು ಉಂಟಾದಲ್ಲಿ ಮತ್ತೆ ಜನಸಾಮಾನ್ಯರು ಸಮಸ್ಯೆ ಎದುರಿಸಬೇಕಾಗುತ್ತದೆ. ಆದರೆ, ಜನಪ್ರತಿನಿಧಿಗಳೆನಿಸಿಕೊಂಡವರು ಸಮಸ್ಯೆ ಬಗೆಹರಿಸುವ ಪ್ರಯತ್ನಕ್ಕಿಂತಲೂ ಕೋಮು ಸಂಘರ್ಷ ಸೃಷ್ಟಿಸುವ ಪ್ರಯತ್ನದಲ್ಲೇ ತಲ್ಲೀನರಾಗಿದ್ದಾರೆ. ಸದ್ಯ ಕೊಡಗು ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿಯಲ್ಲಿದೆ. ೨೬ರಂದು ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸೆ.144 ನಡುವೆಯೂ ಅಂದು ಹೋರಾಟಗಳು, ಅಹಿತಕರ ಘಟನೆ ನಡೆಯುವ ಸಾಧ್ಯತೆ ಇರುವುದರಿಂದ ಇನ್ನಷ್ಟು ಮುನ್ನೆಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ. ಜೊತೆಗೆ ರಾಜ್ಯಮಟ್ಟದ ನಾಯಕರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವ ಅನಿವಾರ್ಯತೆ ಇದೆ.
ಸೂಕ್ಷ್ಮ ಜಿಲ್ಲೆಯಾಗಿರುವ ಕೊಡಗು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರಯತ್ನಿಸಬೇಕಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ತಮ್ಮ ಮುಖಂಡರ ಕೋಮು ಸಂಘರ್ಷ ಸೃಷ್ಟಿಸುವ ಮಾತಿಗೆ ಮರುಳಾಗದೆ ಶಾಂತಿಯಿಂದ ವರ್ತಿಸಬೇಕಿದೆ. ಕೊಡಗನ್ನು ರಾಜಕೀಯ ಪಕ್ಷಗಳು ತಮ್ಮ ಮತಲಾಭಕ್ಕಾಗಿ ಬಳಸಿಕೊಳ್ಳುವುದಕ್ಕೆ ಅವಕಾಶ ನೀಡದೇ, ಪ್ರಬುದ್ಧತೆ ಮೆರೆಯಬೇಕಿದೆ.
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ