Light
Dark

ರ್ರಪ್ ರಪ್! ಬಾರುಕೋಲು ಚಳವಳಿ!

ಚಳವಳಿ ಯಾವ ಮಟ್ಟಕ್ಕೆ ಬೆಳೆಯಿತೆಂದರೆ, 1983ರಲ್ಲಿ ರೈತರು ಅನ್ಯಾಯವನ್ನು ಪ್ರತಿಭಟಿಸಿ ಚನ್ನರಾಯಪಟ್ಟಣ ಠಾಣೆಗೆ ಮುತ್ತಿಗೆ ಹಾಕಿದಾಗ, ಬೆದರಿದ ಪೊಲೀಸರು ಆಕಾಶಕ್ಕೆ ಗುಂಡು ಹಾರಿಸಿದ್ದರು!

‘ಗುಂಡು ಹೊಡೆಯೋದು ಗುಂಡೂರಾಯನ ಕಾಲಕ್ಕೇ ಹೋಯ್ತು! ಈಗ ಹೆಗಡೆ ಕಾಲದಲ್ಲಿ ಗುಂಡು ಹೊಡೆಯೋ ಹಂಗೇ ಇಲ್ಲ’ ಎಂದು ರೈತರು ಪೊಲೀಸರ ಬಂದೂಕುಗಳನ್ನೇ ಕಸಿಯುವ ಮಟ್ಟಕ್ಕೆ ಹೋದರು. ಇದೇ ಸಮಯದಲ್ಲೇ ಜೋಡಿಗಟ್ಟೆ ಚನ್ನೇಗೌಡರು ರೈತ ಸೈನ್ಯ ಕಟ್ಟಿದರು. ಅವರು ರೈತ ಸಂಘದಲ್ಲೇ ಇದ್ದರೂ ಇದೊಂದು ಪ್ರತ್ಯೇಕ ಬಾರುಕೋಲು ಚಳವಳಿ ರೂಪಿಸಿಕೊಂಡರು. ಅವರೊಬ್ಬರು ಮಾತ್ರ ವಿವೇಕಾನಂದರಂತೆ ತಲೆಗೆ ದೊಡ್ಡ ಕೆಂಪು ರುಮಾಲು ಕಟ್ಟುತ್ತಿದ್ದರು. ಆರಡಿ ಎತ್ತರದ ಆಜಾನುಬಾಹು ಬಲಿಷ್ಠ ವ್ಯಕ್ತಿ. ವಿವೇಕಾನಂದರ ರೀತಿಯ ದೊಡ್ಡ ರುಮಾಲು ಕಟ್ಟಿದರೆ ಹೇಗೆ ಕಂಡಾರು?

ಅವರ ಜೊತೆ ಹತ್ತಾರು ರೈತ ಸೈನಿಕರು. ಅವರಿಗೆ ಹಸಿರು ಶಾಲು, ಕೆಂಪು ರುಮಾಲು! ಪ್ರತಿ ಶನಿವಾರ ಚನ್ನರಾಯಪಟ್ಟಣದಲ್ಲಿ ಸಂತೆಯ ದಿನ. ಬೆಳಿಗ್ಗೆ ಆರು ಗಂಟೆಗೇ ನಾಲ್ಕಡಿ ಉದ್ದದ ಬಾರುಕೋಲಿನೊಂದಿಗೆ ಹಾಜರು.

ಬಾರುಕೋಲು ಎಂದರೆ ದನ ಕುರಿಗಳಿಗೆ ಹೊಡೆಯುವ ಚಿಕ್ಕ ಚಾವಟಿ ಕೋಲುಗಳಲ್ಲ. ನಾಲ್ಕಡಿ ಉದ್ದದ ಬಿದಿರಿನ ಭಾರಿ ಕೋಲುಗಳೇ! ಸತ್ಯಹರಿಶ್ಚಂದ್ರನ ಉದ್ದದ ಕೋಲು ಕೆಲವರ ಕೈಯಲ್ಲಿ.

ಅಲ್ಲಿಯವರೆಗೂ APMCಗಳಲ್ಲಿ ಸಂತೆ ವ್ಯಾಪಾರಿಗಳು, ದಲ್ಲಾಳಿಗಳದ್ದೇ ದರ್ಬಾರು. ಅವರು ಆಡಿದ್ದೇ ಆಟ. ಹೂಡಿದ್ದೇ ಲಗ್ಗೆ. ಅವರು ಹೇಳಿದ ರೇಟಿಗೆ ರೈತ ತಾನು ಬೆಳೆದದ್ದನ್ನು ಮಡಗಿ ಹೋಗಬೇಕು. ದೂಸರಾ ಮಾತಾಡಿದರೆ ದಲ್ಲಾಳಿಗಳು, ಹಮಾಲಿಗಳು ಮುಗಿಬಿದ್ದು ಹಲ್ಲೆ ಮಾಡುತ್ತಿದ್ದರು. ಅವರು ಬೆಲೆ ನಿಗದಿ ಮಾಡಿದ ಮೇಲೆ ಯಾರೂ ಹೆಚ್ಚು ಬೆಲೆ ಕೊಡುತ್ತಿರಲಿಲ್ಲ. ಅವರು ಹೇಳಿದ್ದೇ ಕೊನೆ ಎಂಬಂತಹ ದಬ್ಬಾಳಿಕೆ.

ಬೆಲೆಯ ವಿಚಾರ ಹೀಗಾದರೆ ಅವರ ಕೊಳ್ಳುವಿಕೆಯಲ್ಲಿ ಬಗೆ ಬಗೆಯ ವಂಚನೆ ಬೇರೆ. ಎಂಟು ರೂಪಾಯಿಯಂತೆ ಸಾವಿರ ತೆಂಗಿನಕಾಯಿಗೆ 8,000 ರೂಪಾಯಿ ಎಂದು ನಿಗದಿಪಡಿಸಿ ವ್ಯಾಪಾರ ಮಾತಾಡಿದ ಮೇಲೆ, ದಲ್ಲಾಳಿ ಕಾಯಿ ಎಣಿಸಲು ನಿಲ್ಲುತ್ತಿದ್ದ.

ಮೊದಲಿಗೆ ರಾಶಿಯಿಂದ ಎರಡು ದಪ್ಪ ಕಾಯಿಗಳನ್ನು ತೆಗೆದು, ಎರಡೂ ಕೈಗಳಿಂದ ಪರಸ್ಪರ ಠಣ್ಣೆಂದು ಹೊಡೆದು ‘ಲಾಭ’ ಎಂದು ಎಣಿಕೆ ಶುರು ಮಾಡುತ್ತಿದ್ದ.

ಲಾಭ! ಲಾಭ ಯಾರಿಗೆ? ರೈತನಿಗಲ್ಲ. ಎಣಿಸುವ ಅವನಿಗೆ!

ಅದಾದ ಮೇಲೆ ಪ್ರತಿ ನೂರು ಕಾಯಿಗಳಿಗೆ ಎಂಟರಿಂದ ಹತ್ತು ಕಾಯಿ ಸೋಡಿ ಎಂದು ಪಕ್ಕಕ್ಕೆ ಎಸೆಯುತ್ತಿದ್ದ. ಕೆಟ್ಟಿರುವ ಕಾಯಿ ಇರುತ್ತವೆ ಎಂಬ ಕಾರಣಕ್ಕೆ ಈ ಐವತ್ತರಿಂದ ಎಂಬತ್ತು ಕಾಯಿ ಸೋಡಿ (ದಲ್ಲಾಳಿಗೆ ಬಿಡುವ ರಿಯಾಯಿತಿ! ಡಿಸ್ಕೌಂಟು!) ಬಿಡಬೇಕು.

ಅಂದರೆ ಕೆಲ ಬಾರಿ ಸಾವಿರ ಕಾಯಿಗಳಿಗೆ ನೂರುಕಾಯಿ ಸೋಡಿ ಬಿಡಬೇಕು. ಚಕ್ರಬಡ್ಡಿ ರೀತಿಯಲ್ಲಿ ಇದು ಚಕ್ರಸೋಡಿ! ‘ನೀನು ತಂದಿರೋವೆಲ್ಲಾ ಕಸಗಟ್ಟೆ ಕಾಯಿ, ಕೆಟ್ಟು ಕೆರ ಹಿಡಿದಿವೆ’ ಎನ್ನುತ್ತಾ ದಲ್ಲಾಳಿ ಎಣಿಸುತ್ತಿದ್ದ. ನಡುವೆ ಯಾವುದಾದರೂ ಕೆಟ್ಟ ಕೊಳೆತ ಕಾಯಿ ಕಂಡರೆ ಮುಲಾಜಿಲ್ಲದೆ ಎಸೆದುಬಿಡುತ್ತಿದ್ದ. ರೈತನಿಗೆ ಅಲ್ಲೂ ಲಾಸು! ಹೀಗಾಗಿ ಒಂದು ವ್ಯಾಪಾರದ ಚೌಕಾಸಿಯಲ್ಲಿ ರೈತ ಸಾವಿರ ಕಾಯಿಗಳನ್ನು ಮಾರಿದರೆ 60-70 ಕಾಯಿಗಳನ್ನು ಉಚಿತವಾಗಿ ಬಿಟ್ಟು ಕೊಡಬೇಕಿತ್ತು. ಉಸಿರೆತ್ತಿದರೆ ಗೂಸಾ ಖಚಿತ. ಈ ದಬ್ಬಾಳಿಕೆಗೆ ಕೊನೆಯೇ ಇರಲಿಲ್ಲ.

ಇದೇ ಬಗೆಯ ಮೋಸ ಆಲೂಗೆಡ್ಡೆಯಲ್ಲೂ ನಡೆಯುತ್ತಿತ್ತು. 50 ಕೆ.ಜಿ.ಯ ಆಲೂಗಡ್ಡೆ ಖಾಲಿ ಚೀಲ 400 ಗ್ರಾಂಗಿಂತ ಹೆಚ್ಚು ತೂಗುವುದಿಲ್ಲ. ಆದರೆ ದಲ್ಲಾಳಿ ಒಂದು ಮೂಟೆಗೆ ಎರಡು ಕೆ.ಜಿ. ಆಲೂಗೆಡ್ಡೆಯನ್ನು ಸೋಡಿ ಕಳೆಯುತ್ತಾನೆ. ಕಂಡಂ ಗೆಂಡೆ (ಟ್ಞbಛಿಞ್ಞ) ಅಂತ ಮೂರು ಕೆ.ಜಿ. ಮುರಿಯುತ್ತಾನೆ.

ಈ ಬಗೆಯ ಹಗಲು ದರೋಡೆ ವರ್ಷಾಂತರಗಳಿಂದ ಎಡೆಬಿಡದೆ ನಡೆದು ಬಂದಿತ್ತು. ರೈತ ಮಾರುವ ಎಲ್ಲ ವ್ಯಾಪಾರಗಳಲ್ಲೂ ಇದೇ ಮೋಸ ಇದೇ ದಗಾ ವಂಚನೆ. ಹೇಳುವವರು ಕೇಳುವವರಿಲ್ಲದ ಅನ್ಯಾಯ, ಶೋಷಣೆ, ದಬ್ಬಾಳಿಕೆ.

ಚನ್ನರಾಯಪಟ್ಟಣದ ಕುರಿ, ಆಡುಗಳ ಮಾಂಸ ರುಚಿಗೆ ಹೆಸರುವಾಸಿ. ಅವುಗಳ ಮಾರಾಟದಲ್ಲೂ ಬೇರೊಂದು ಬಗೆಯ ವ್ಯೂಹದ ಮೋಸ. ಚನ್ನರಾಯಪಟ್ಟಣದ ಗಂಡಸಿ ಸಂತೆಗೆ ಕುರಿ ಮಾರಲು ಒಯ್ದರೆ, ಅರ್ಧ ಫರ್ಲಾಂಗಿಗೊಬ್ಬ ಕಟುಕ ಕೂತಿರುತ್ತಿದ್ದ.

‘ಎಷ್ಟಲಾ ಗೌಡಾ?’ ಎಂದಾಗ ಅವನೊಂದು ರೇಟು ಹೇಳಿದರೆ, ‘ಸರಿ ಬುಡು. ನೀನು ಈ ಜಲ್ಮದಲ್ಲಿ ಮಾರೋದಿಲ್ಲ. ಹೋಗು ಹೋಗು’ ಎನ್ನುತ್ತಿದ್ದ.

ರೇಟನ್ನೇ ಮಾತಾಡುತ್ತಿರಲಿಲ್ಲ.

ಇಂಥವರು ಮೂರ್ನಾಲ್ಕು ಜನ ಹಾದಿಯಲ್ಲಿ ಸಿಕ್ಕುತ್ತಿದ್ದರು. ರೇಟು ಕೇಳುತ್ತಿದ್ದರೇ ಹೊರತು ಕೊಳ್ಳುತ್ತಿರಲಿಲ್ಲ. ಕುರಿಯನ್ನು ಅಡಿಯಿಂದ ಮೂತಿವರೆಗೆ ಅಳೆದು ನೋಡುತ್ತಿದ್ದರು. ಆ ಕುರಿ ಹೆಂಗೋ ನಿಂತಿರುತ್ತಿತ್ತು. ಕಟುಕ ಅದನ್ನು ದಿಢೀರನೆ ಕೈಯಿಂದ ತಳ್ಳುತ್ತಿದ್ದ. ಕುರಿ ಆಯ ತಪ್ಪಿ ಬೀಳುತ್ತಿತ್ತು. ‘ಈ ಕಾಯಿಲೆ ಕುರಿನಾ ನೀನು ಮಾರಿದೆ ಬಿಡು’ ಎಂದು ಹಂಗಿಸಿ ಮುಂದೆ ಕಳಿಸುತ್ತಿದ್ದ. ಮುಂದಿನ ವ್ಯಾಪಾರಿ ಸಿಗುವುದರೊಳಗೆ ಕುರಿಯ ಬೆಲೆ ತಾನಾಗಿ ಅರ್ಧಕ್ಕೆ ಇಳಿದಿರುತ್ತಿತ್ತು.

(ಮುಂದುವರಿಯುವುದು)

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ