Mysore
15
overcast clouds

Social Media

ಬುಧವಾರ, 11 ಫೆಬ್ರವರಿ 2026
Light
Dark

ಓದುಗರ ಪತ್ರ | 2027ರ ವಿಶ್ವಕಪ್‌ನಲ್ಲೂ ಗೆಲುವು ನಮ್ಮದಾಗಲಿ

ಪಾಕಿಸ್ತಾನದ ಆತಿಥ್ಯದಲ್ಲಿ ನಡೆದ ಚಾಂಪಿಯನ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಐಸಿಸಿ ಆಯೋಜಿಸುವ ಟೆಸ್ಟ್ ಚಾಂಪಿಯನ್‌ಶಿಪ್, ಟಿ-೨೦ ವರ್ಲ್ಡ್ ಕಪ್, ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ ಟ್ರೋಫಿ ಪಂದ್ಯಾವಳಿಗಳಲ್ಲಿ ಭಾರತ ಹಲವು ಬಾರಿ ಫೈನಲ್ ತಲುಪಿರುವುದು ಹೆಮ್ಮೆಯ ವಿಚಾರ. ಅದರಲ್ಲಿಯೂ ಟಿ-೨೦ ವಿಶ್ವಕಪ್‌ನಲ್ಲಿ ಗೆಲುವು ಸಾಽಸಿತ್ತು. ಈಗ ಚಾಂಪಿಯನ್ ಟ್ರೋಫಿಯನ್ನೂ ಗೆಲ್ಲುವ ಮೂಲಕ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಗೆದ್ದ ಮೊದಲ ತಂಡ ಅನಿಸಿಕೊಂಡಿದೆ. ‌

ಈ ಪಂದ್ಯಾವಳಿಯಲ್ಲಿ ಭಾರತ ಯಾವುದೇ ಪಂದ್ಯವನ್ನೂ ಸೋಲದೆ, ಫೈನಲ್ ತಲುಪಿ ಗೆಲುವು ಸಾಧಿಸಿರುವುದು ಹೆಮ್ಮೆಯ ವಿಚಾರ. ಫೈನಲ್‌ನಲ್ಲಿ ನಾಯಕ ರೋಹಿತ್ ಶರ್ಮರ ಸ್ಛೋಟಕ ಆರಂಭ, ಕನ್ನಡಿಗ ಕೆ.ಎಲ್.ರಾಹುಲ್‌ರವರ ವಿಕೆಟ್ ಕೀಪಿಂಗ್ ಹಾಗೂ ಸಮಯೋಚಿತ ಬ್ಯಾಟಿಂಗ್‌ನಿಂದ ಭಾರತ ತಂಡ ಗೆಲುವಿನ ದಡ ಸೇರಿತು. ಅಲ್ಲದೆ ಸ್ಪಿನ್ ಬೌಲರ‍್ಸ್‌ಗಳಾದ ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್‌ರವರ ಉತ್ತಮ ಪ್ರದರ್ಶನವೂ ತಂಡದ ಗೆಲುವಿಗೆ ಕಾರಣವಾಯಿತು.

ಪಂದ್ಯಾವಳಿಯಲ್ಲಿ ಇಡೀ ತಂಡದ ಕೊಡುಗೆಯನ್ನು ಮರೆಯುವಂತಿಲ್ಲ. ಈ ಗೆಲುವಿನ ನಾಗಾಲೋಟ ೨೦೨೭ರ ಏಕದಿನ ವಿಶ್ವಕಪ್‌ನಲ್ಲೂ ಮುಂದುವರಿಯಲಿ ಎಂಬುದು ಭಾರತೀಯರ ಕನಸು.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.

Tags:
error: Content is protected !!