Mysore
32
scattered clouds

Social Media

ಶುಕ್ರವಾರ, 24 ಏಪ್ರಿಲ 2026
Light
Dark

ಸೋಮವಾರಪೇಟೆ: ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವ

ಸೋಮವಾರಪೇಟೆ: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿನ ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.

ತೋಳುನಾಡು ವ್ಯಾಪ್ತಿಯ ಒಳಪಡುವ ಗ್ರಾಮಗಳ ಸುಭಿಕ್ಷೆಗೆ ಪ್ರಾರ್ಥಿಸುವ ಮೂಲಕ ಬರ ಪರಿಸ್ಥಿತಿಯನ್ನು ದೂರವಾಗಿಸಿ ಉತ್ತಮ ಮಳೆ ಬೆಳೆಯ ಮೂಲಕ ನಾಡಿನ ನೆಮ್ಮದಿ ತರುವಂತೆ ಗ್ರಾಮಸ್ಥರು ಹಾಗೂ ಭಕ್ತಾದಿಗಳ ಗ್ರಾಮ ದೇವತೆ ಶ್ರೀ ಸಬ್ಬಮ್ಮ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.

ದೊಡ್ಡಮನೆಕೊಪ್ಪ, ಊರೊಳಕೊಪ್ಪ, ಸಿಂಗನಳ್ಳಿ, ನಡ್ಲಕೊಪ್ಪ, ಇನಕನಹಳ್ಳಿ, ಹರಪಳ್ಳಿ, ವಣಗೂರುಕೊಪ್ಪ, ಶುಭಾಷ್‌ನಗರ, ಕರಡಿಕೊಪ್ಪ, ದೊಡ್ಡತೋಳೂರು, ಚಿಕ್ಕತೋಳೂರು, ಗ್ರಾಮಗಳ ವ್ಯಾಪ್ತಿಗೆ ಒಳಪಡುವ ನಿವಾಸಿಗಳು ಸುಗ್ಗಿ ಉತ್ಸವದಲ್ಲಿ ದೇವಿಗೆ ಮಡೆ ಅರ್ಪಿಸುವ ಮೂಲಕ ಗ್ರಾಮದ ಸಮೃದ್ಧಿಗಾಗಿ, ಗ್ರಾಮಸ್ಥರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಸುಗ್ಗಿ ಕುಣಿತ ತಂಡದ ಎಸ್.ಕೆ. ಬಸವರಾಜು, ಮೋಹನ್ ರಾಜ್,ಪ್ರಶಾಂತ್, ಶಶಿವಿಲಾಸ್ ಗೌಡ, ಪ್ರಸಾದ್, ಕೀರ್ತಿ ಕುಮಾರ್ ಹಾಗೂ ವಿಠಲ್ ರಾಜ್ ಅವರಿಂದ ನಡೆದ ಸುಗ್ಗಿ ಕುಣಿತ ಉತ್ಸವದಲ್ಲಿ ಆಕರ್ಷಣೀಯವಾಗಿತ್ತು. ಇನ್ನೊಂದೆಡೆಯಲ್ಲಿ ಮಕ್ಕಳು, ಪುರುಷರು, ಮಹಿಳೆಯರು ಸಂಪ್ರದಾಯದಂತೆ ಸುಗ್ಗಿ ಕುಣಿತದಲ್ಲಿ ಪಾಲ್ಗೊಂಡರು. ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಸುಗ್ಗಿ ಕಟ್ಟೆಯ ಮುಖ್ಯ ರಂಗಕ್ಕೆ ಪ್ರದಕ್ಷಿಣೆ ಹಾಕಲಾಯಿತು. ಹರಕೆ ಮಾಡಿಕೊಂಡ ಭಕ್ತರು ಈಡುಗಾಯಿ ಸೇವೆ ಅರ್ಪಿಸಿದರು.

ಮಹಿಳೆಯರು, ಮಕ್ಕಳು, ಹಿರಿಯರು ಉತ್ಸವದಲ್ಲಿ ಭಾಗವಹಿಸಿ ಗ್ರಾಮದೇವತೆಗೆ ಇಷ್ಟಾರ್ಥಗಳ ನೆರವೇರಿಕೆಗೆ ಪ್ರಾರ್ಥಿಸಿದರು.

ಗ್ರಾಮೀಣ ಭಾಗದಲ್ಲಿ ಸುಗ್ಗಿ ಉತ್ಸವಗಳನ್ನು ಆಚರಿಸಿಕೊಂಡು ಬರುತ್ತಿದ್ದು, ಗ್ರಾಮದ ನಿವಾಸಿಗಳು ತಮ್ಮ ಇಷ್ಟಾರ್ಥಗಳ ನೆರವೇರಿಕೆಗೆ ದೇವರಲ್ಲಿ ಪ್ರಾರ್ಥಿಸಿದರು.

ಕುಟುಂಬ ಸಮೇತ ತವರಿನ ಸುಗ್ಗಿಯಲ್ಲಿ ಭಾಗವಹಿಸುವುದು, ಗ್ರಾಮದ ಹೆಣ್ಣುಮಕ್ಕಳಿಗೆ ವಿಶೇಷ ದಿನ. ಈ ಭಾಗದಿಂದ ಮದುವೆಯಾಗಿ ಹೋದ ಹೆಣ್ಣು ಮಕ್ಕಳು ತವರಿನ ಸುಗ್ಗಿಯಲ್ಲಿ ಸಂಭ್ರಮದಿಂದ ಪಾಲ್ಗೊಂಡರು.

ದೇವತಾ ಕಾರ್ಯದಲ್ಲಿ ಪ್ರದಾನ ಅರ್ಚಕರಾಗಿ ಊರೊಳಗಿನಕೊಪ್ಪದ ಡಿ.ಎನ್.ಶಿವಕುಮಾರ್, ದೊಡ್ಡಮನೆ ಕೊಪ್ಪದ ಡಿ.ಎಂ.ದಿಲೀಪ್, ಶಿವಕುಮಾರ್ ಕಾರ್ಯ ನಿರ್ವಹಿಸಿದರು.

ಸಮಿತಿಯ ಅಧ್ಯಕ್ಷ ಡಿ.ಏನ್. ರಾಜ್ ಗೋಪಾಲ್, ಕಾರ್ಯದರ್ಶಿ ಹೆಚ್. ಜೆ ಎಲ್. ಮಹೇಶ್, ಖಜಾಂಚಿ ಎಂ.ಈ. ಕೃಷ್ಣಪ್ಪ, ಟಿ.ಕೆ. ಮಾಚಯ್ಯ, ಡಿ.ಪಿ. ಕುಶಾಲಪ್ಪ, ಐ. ಏನ್. ವಿಠಲ್ ರಾಜ್ ಸುಗ್ಗಿಯ ಉಸ್ತುವಾರಿ ವಹಿಸಿದ್ದರು.

ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ.ಲೋಕೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಸೇರಿದಂತೆ ಇತರ ಪ್ರಮುಖರು, ಸಾವಿರಾರು ಭಕ್ತಾದಿಗಳು ಸುಗ್ಗಿ ಉತ್ಸವದಲ್ಲಿ ಭಾಗಿಯಾಗಿದ್ದರು.

Tags:
error: Content is protected !!