Mysore
26
few clouds

Social Media

ಶನಿವಾರ, 24 ಜನವರಿ 2026
Light
Dark

ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಶಿವನಸಮುದ್ರ ಸೂಕ್ತ ಸ್ಥಳ 

dgp murder case

ರಾಜ್ಯ ಸರ್ಕಾರ, ಮಂಡ್ಯ ಜಿಲ್ಲೆಯ ವಿಶ್ವ ಪ್ರಸಿದ್ಧ ಕೃಷ್ಣರಾಜಸಾಗರ ಜಲಾಶಯ(ಕೆ.ಆರ್.ಎಸ್.) ದ ಹತ್ತಿರ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಿಸಲು ಮುಂದಾಗಿದೆ. ಆದರೆ, ಮಂಡ್ಯ ರೈತ ಸಂಘ ಸರ್ಕಾರದ ಈ ನಿರ್ಧಾರವನ್ನು ವಿರೋಧ ಮಾಡುತ್ತಿದೆ. ಅಮ್ಯೂಸ್‌ಮೆಂಟ್ ಪಾರ್ಕ್ ನಲ್ಲಿ ಕಾವೇರಿ ಪ್ರತಿಮೆ ಸ್ಥಾಪಿಸುವ ಉದ್ದೇಶವಿದೆ. ಜತೆಗೆ ಜಾಯಿಂಟ್ ವ್ಹೀಲ್ ಅಳವಡಿಸಬೇಕಾದರೆ ಆಳವಾದ ಅಡಿಪಾಯ ಬೇಕಾಗುತ್ತದೆ.

ಅಡಿಪಾಯ ಹಾಕುವಾಗ ಶತಮಾನದ ಅಂಚಿನಲ್ಲಿರುವ ಕನ್ನಂಬಾಡಿ ಅಣೆಕಟ್ಟೆಗೆ ಅಪಾಯ ತಪ್ಪಿದ್ದಲ್ಲ. ಆದ್ದರಿಂದ ಈ ಸ್ಥಳವನ್ನು ಕೈಬಿಡಬೇಕಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ(ಬ್ಲಫ್)ದಲ್ಲಿ ನಿರ್ಮಿಸಿರುವ ಕೆ. ಶೇಷಾದ್ರಿ ಅಯ್ಯರ್ ಜಲವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಪ್ರವಾಸಿಗರು ದಿನಂಪ್ರತಿ ಭೇಟಿ ನೀಡುತ್ತಿದ್ದರು.

ಭಯೋತ್ಪಾದಕರ ದಾಳಿಯ ಭಯದಿಂದಾಗಿ ಜಲವಿದ್ಯುತ್ ಕೇಂದ್ರಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ. ಇದರ ಪರಿಣಾಮ ಪ್ರವಾಸಿಗರು ಅತ್ತ ಮುಖಮಾಡದೇ ಇರುವುದರಿಂದ ಅಲ್ಲಿನ ಉದ್ಯಾನವನಗಳು ನಿರ್ಲಕ್ಷ್ಯಕ್ಕೊಳಗಾಗಿವೆ. ಒಂದು ಕಾಲದಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಶಿವನ ಸಮುದ್ರ ಪ್ರವಾಸಿ ಕೇಂದ್ರ ಇಂದು ಯಾರಿಗೂ ಬೇಡವಾಗಿದೆ.

ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲಾಡಳಿತಗಳು ಪ್ರತಿ ವರ್ಷ ಗಗನಚುಕ್ಕಿ, ಭರಚುಕ್ಕಿ ಜಲಪಾತೋತ್ಸವದ ಹೆಸರಿನಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡಿ ಕೇವಲ ಒಂದೆರಡು ದಿನಗಳು ಮಾತ್ರ ಜಲಪಾತ ಉತ್ಸವ ನಡೆಸುತ್ತಿವೆ. ಅದರ ಬದಲು ಅದೇ ಹಣದಿಂದ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಿಸಿದರೆ, ಪಾರ್ಕ್ ಜೊತೆಗೆ ಅಲ್ಲಿನ ಗಗನಚುಕ್ಕಿ ಹಾಗೂ ಭರಚುಕ್ಕಿ ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸಿ ಉತ್ತಮ ಪ್ರವಾಸೋದ್ಯಮ ಕೇಂದ್ರವಾಗುವುದರಲ್ಲಿ ಸಂಶಯವಿಲ್ಲ. ಇದರಿಂದ ಅಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಯಾಗಿ ಅಲ್ಲಿನ ರೈತರಿಗೆ, ಯುವಕರಿಗೆ ಉದ್ಯೋಗ ದೊರೆಯುತ್ತದೆ.

– ಸಿ. ಸಿದ್ದರಾಜು ಆಲಕೆರೆ, ಮಂಡ್ಯ

Tags:
error: Content is protected !!