ಕರ್ನಾಟಕದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಚುನಾವಣೆಯಲ್ಲಿ ಗೆಲ್ಲಲು ಎಲ್ಲ ರಾಜಕೀಯ ಪಕ್ಷಗಳೂ ಕಾರ್ಯತಂತ್ರ ರೂಪಿಸುತ್ತಿವೆ. ಈ ಮೂರೂ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಗಳು ಗೆದ್ದರೂ ಅದರಿಂದ ಆಡಳಿತಾರೂಢ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಇದು ರಾಜಕಾರಣಿಗಳಿಗೆ ಜಿದ್ದಿನ ಹಣಾಹಣಿಯಾದರೆ, ಉಪ ಚುನಾವಣೆಗಳ ವೆಚ್ಚವನ್ನು ಸಾರ್ವಜನಿಕರ ತೆರಿಗೆ ಹಣದಿಂದಲೇ ಭರಿಸುವುದರಿಂದ ಸಾರ್ವಜನಿಕರಿಗೆ ಮಾತ್ರ ಹೊರೆಯಾಗಿ ಪರಿಣಮಿಸಲಿದೆ. ಅಧಿಕಾರದ ಆಸೆಗಾಗಿ ಒಂದು ಚುನಾವಣೆಯಲ್ಲಿ ಗೆದ್ದಿದ್ದರೂ ಆ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಂದು ಚುನಾವಣೆಯಲ್ಲಿ ಸ್ಪರ್ಧಿ ಸುವುದು ರಾಜಕಾರಣಿಗಳಿಗೆ ಒಂದು ರೀತಿಯ ಮೋಜಿನ ಆಟದಂತಾಗಿ ಹೋಗಿದೆ. ಮೊದಲೆಲ್ಲ ಶಾಸಕರು ಅಥವಾ ಸಂಸದರು ಸಾವನ್ನಪ್ಪಿದಾಗ ನಡೆಯುತ್ತಿದ್ದ ಉಪಚುನಾವಣೆಗಳು ಈಗ ಅಧಿಕಾರ ದಾಸೆಗಾಗಿ ನಡೆಯುತ್ತಿರುವುದು ವಿಪರ್ಯಾಸ. ಇದರಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ. ಆದ್ದರಿಂದ ಚುನಾವಣಾ ಆಯೋಗವು ಒಂದು ಕ್ಷೇತ್ರದಲ್ಲಿ ಗೆದ್ದು ಬಳಿಕ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವಸಲುವಾಗಿ ಗೆದ್ದಕ್ಷೇತ್ರದಸ್ಥಾನಕರಾಜೀನಾಮೆ ನೀಡುವ ವ್ಯಕ್ತಿಯೇ ಉಪಚುನಾವಣೆಯ ವೆಚ್ಚವನ್ನು ಭರಿಸಬೇಕು ಎಂಬ ಕಾನೂನು ರೂಪಿಸಬೇಕಿದೆ. ಇಲ್ಲವೇ ಆಕ್ಷೇತ್ರದಲ್ಲಿ ಎರಡನೇ ಸ್ಥಾನ ಪಡೆದವರನ್ನು ವಿಜಯಿ ಎಂದು ಘೋಷಿಸಬೇಕಿದೆ. ಆಗಿದ್ದಾಗ ಮಾತ್ರ ಉಪ ಚುನಾವಣೆಗಳು ಕಡಿಮೆಯಾಗಿ ಸಾರ್ವಜನಿಕರ ತೆರಿಗೆ ಹಣ ಪೋಲಾಗುವುದು ತಪ್ಪುತ್ತದೆ.
-ಯು.ಟಿ.ಸೋಮಶೇಖರ, ಉದ್ದೂರು, ಮೈಸೂರು ತಾ.