ಮಾ.18ರಿಂದ ಏ.2ರ ವರೆಗೆ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದೆ. ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಲ್ಲಿರುವ ಭಯವನ್ನು ನಿವಾರಿಸಿ ವಿಶೇಷ ಬೋಧನೆ ಮಾಡಿ ಅವರನ್ನು ಪರೀಕ್ಷೆಗೆ ಸಿದ್ಧಗೊಳಿಸಲಾಗಿದೆ. ಮೈಸೂರು ಆಕಾಶವಾಣಿಯಿಂದಲೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ‘ಪರೀಕ್ಷೆಗೆ ಸಿದ್ಧರಾಗೋಣ ಬನ್ನಿ’ ಎಂಬ ಶೀರ್ಷಿಕೆ ಅಡಿಯಲ್ಲಿ ಹಲವಾರು ಕಂತುಗಳಲ್ಲಿ ನುರಿತ ಶಿಕ್ಷಕರನ್ನು ಆಹ್ವಾನಿಸಿ ವಿಷಯ ತಜ್ಞರೊಡನೆ ವಿಷಯಗಳನ್ನು ಚರ್ಚಿಸಿ ತೇರ್ಗಡೆ ಹೊಂದುವುದು ಹಾಗೂ ಅಂಕಗಳನ್ನು ಗಳಿಸುವ ಸುಲಭ ವಿಧಾನದ ಬಗ್ಗೆ ವಿಶೇಷ ಕಾರ್ಯಕ್ರಮವನ್ನು ನಡೆಸಲಾಗಿದೆ.
ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಭಯವನ್ನು ಬಿಟ್ಟು ಹಬ್ಬದಂತೆ ಸಂಭ್ರಮಿಸಿ ಬರೆಯಬೇಕು. ಪರೀಕ್ಷೆಗೆ ಬೇಕಾದಂತ ಪ್ರವೇಶಪತ್ರ (ಹಾಲ್ ಟಿಕೆಟ್), ಪೆನ್ನು, ಪೆನ್ಸಿಲ್‌ಗಳನ್ನು ಸಿದ್ಧವಾಗಿ ಇಟ್ಟುಕೊಳ್ಳಬೇಕು. ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳು ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆ ಪ್ರಾರಂಭವಾಗುವ ಅರ್ಧ ಗಂಟೆ ಮುಂಚೆ ಹಾಜರಾಗಬೇಕು, ನಗರ ಪ್ರದೇಶದ ವಿದ್ಯಾರ್ಥಿಗಳೂ ಆತುರ ಪಡದೆ ಸಕಾಲಕ್ಕೆ ಪರೀಕ್ಷಾ ಕೇಂದ್ರಗಳನ್ನು ತಲುಪಬೇಕು.
ಪೋಷಕರು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದು, ಪರೀಕ್ಷೆ ಮುಗಿದ ನಂತರ ಮಕ್ಕಳನ್ನು ಮನೆಗೆ ಕರೆತರಬೇಕು.
-ಕಣ್ಣೂರು ವಿ.ಗೋವಿಂದಾಚಾರಿ, ಕುವೆಂಪು ನಗರ, ಮೈಸೂರು





