ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಮೆರಿಕಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅವರು ಕೈಗೊಂಡ ಹಲವಾರು ನಿರ್ಧಾರಗಳು ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.
ಅವರ ನಿರ್ಧಾರಗಳ ಪೈಕಿ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರ ಬರುವುದೂ ಒಂದಾಗಿದ್ದು, ಟ್ರಂಪ್‌ರವರ ಈ ನಿರ್ಧಾರ ಸರಿಯಲ್ಲ ಎಂಬುದು ಹಲವರ ವಾದ. ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಯ ಸ್ಥಾಪಕ ಸದಸ್ಯ ದೇಶವಾಗಿದೆ. ಹೀಗಿರುವಾಗ ಟ್ರಂಪ್‌ರವರು ಈ ನಿರ್ಧಾರ ಕೈಗೊಂಡಿರುವುದು ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿದೆ.
ವಿಶ್ವಸಂಸ್ಥೆಯ ಪ್ರಮುಖ ಅಂಗಸಂಸ್ಥೆಯಾಗಿರುವ ವಿಶ್ವ ಆರೋಗ್ಯ ಸಂಸ್ಥೆಯು ಹಲವಾರು ಕಾರ್ಯಕ್ರಮಗಳ ಮೂಲಕ ಇಡೀ ವಿಶ್ವದ ಗಮನ ಸೆಳೆದಿದೆ. ಅದರಲ್ಲಿಯೂ ಕೋವಿಡ್-೧೯ ಸಂಕಷ್ಟದ ಸಂದರ್ಭಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪಾತ್ರ ಗಮನಾರ್ಹ. ಹೀಗಿರುವಾಗ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವ ಬದಲು ಅದರಿಂದ ದೂರಾಗುವ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ಅಮೆರಿಕಾದ ಈ ನಿರ್ಧಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿದ್ದು, ಡೊನಾಲ್ಡ್ ಟ್ರಂಪ್ ಈ ನಿರ್ಧಾರವನ್ನು ಮರುಪರಿಶೀಲಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ.
-ಕೆ. ವಿ. ವಾಸು, ವಿವೇಕಾನಂದ ನಗರ, ಮೈಸೂರು.