ಮಹನೀಯರ ಪುತ್ತಳಿ ಹಾಗೂ ಪ್ರತಿಮೆ ಬಳಿ ಸಿಸಿ ಕ್ಯಾಮೆರಾ ಅಳವಡಿಸಿ ಅಹಿತಕರ ಘಟನೆ ತಡೆಗಟ್ಟುವ ಬಗ್ಗೆ ಕ್ರಮ ವಹಿಸುವುದು ಅತ್ಯಗತ್ಯ. ಸಮಾಜ ಸುಧಾರಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಅನೇಕ ಮಹನೀಯರು ಹೋರಾಟ ನಡೆಸಿದ್ದಾರೆ. ಅವರಲ್ಲಿ ಮುಖ್ಯವಾಗಿ ಭಗವಾನ್ ಬುದ್ಧ, ಬಸವಣ್ಣ, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್, ಕನಕದಾಸರು ಸೇರಿದಂತೆ ಅನೇಕ ಮಹನೀಯರ ಹೋರಾಟದ ಬದುಕಿನ ಸಂದೇಶವನ್ನು ಸಮಾಜಕ್ಕೆ ಸಾರುವ ಸದುದ್ದೇಶದಿಂದ ಅವರ ಗೌರವಾರ್ಥವಾಗಿ ರಾಜ್ಯಾದ್ಯಂತ ಪ್ರತಿಮೆಗಳು ಮತ್ತು ಪುತ್ತಳಿಗಳನ್ನು ನಿರ್ಮಿಸಲಾಗಿದೆ.
ಆದರೆ, ಇತ್ತೀಚಿನ ದಿನಗಳಲ್ಲಿ ಮೈಸೂರು ಜಿಲ್ಲೆ ಒಳಗೊಂಡಂತೆ ಹಲವು ಜಿಲ್ಲೆಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸೇರಿದಂತೆ ಅನೇಕ ಮಹನೀಯರ ಪ್ರತಿಮೆಗಳನ್ನು ವಿರೂಪಗೊಳಿಸಿ ಕಿಡಿಗೇಡಿಗಳು ವಿಕೃತಿ ಮೆರೆಯುತ್ತಿದ್ದಾರೆ. ಇವರ ಪೈಶಾಚಿಕ ಕೃತ್ಯದಿಂದಾಗಿ ಸಾಮಾಜಿಕ ಸಾಮರಸ್ಯಕ್ಕೆ ತೊಡಕು ಉಂಟಾಗುತ್ತಿದೆ. ಎರಡು ಕೋಮುಗಳ ನಡುವೆ ಹಾಗೂ ಜಾತಿ-ಜಾತಿಗಳ ನಡುವೆ ವೈಷಮ್ಯ ಮೂಡಿ ಪರಸ್ಪರ ಗೌರವ ಕಡಿಮೆಯಾಗಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ.
ಈ ಕೃತ್ಯವನ್ನು ತಡೆಗಟ್ಟಲು ಹಾಗೂ ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ಅನೇಕ ಪ್ರತಿಭಟನೆಗಳು ಕೂಡ ನಡೆಯುತ್ತಿವೆ. ಅಲ್ಲದೆ, ಇಂತಹ ಅಹಿತಕರ ಘಟನೆ ನಡೆದ ಪ್ರದೇಶಗಳಲ್ಲಿ ಬೂದಿ ಮುಚ್ಚಿದ ಕೆಂಡದಂತೆ ವಾತಾವರಣ ಸೃಷ್ಟಿಯಾಗುತ್ತಿದ್ದು, ಇಂತಹ ಕುಕೃತ್ಯಗಳಿಗೆ ಕಡಿವಾಣ ಹಾಕುವುದು ಇಂದಿನ ತುರ್ತಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಾಂತ ಸ್ಥಾಪಿಸಿರುವ ಹಲವು ಮಹನೀಯರ ಪುತ್ತಳಿ, ಪ್ರತಿಮೆ ಎದುರು ಸಿಸಿ ಕ್ಯಾಮೆರಾವನ್ನು ಅಳವಡಿಸಿ ಜೀಯೋ ಟ್ಯಾಗಿಂಗ್ ವ್ಯವಸ್ಥೆ ಕಲ್ಪಿಸುವುದು ಅವಶ್ಯವಾಗಿದೆ.
ಅದರ ಉಸ್ತುವಾರಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ವಹಿಸಿ, ಉನ್ನತ ಪೊಲೀಸ್ ಅಧಿಕಾರಿಗಳು ನಿಗಾವಹಿಸುವುದು ಸೂಕ್ತವಾಗಿರುತ್ತದೆ. ಆದ್ದರಿಂದ ಪೊಲೀಸ್ ಇಲಾಖೆಯು ಮುಂಬೈ ಪೊಲೀಸ್ ಮಾದರಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ನಿಗಾವಹಿಸುವ ಮೂಲಕ ಇಂತಹ ಅಹಿತಕರ ಘಟನೆ ಸಂಭವಿಸದಂತೆ ತಡೆಗಟ್ಟಿ ಸಮುದಾಯಗಳ ನಡುವಿನ ಸಾಮರಸ್ಯ ಕಾಪಾಡುವುದರ ಜೊತೆಗೆ ಕಾನೂನು ಸುವ್ಯವಸ್ಥೆ ಹದಗೆಡದಂತೆ ಕ್ರಮ ಕೈಗೊಳ್ಳಬೇಕಿದೆ.
– ಕೆ.ಶಿವಕುಮಾರ್, ಹಿರಿಯ ಪತ್ರಕರ್ತಕರು, ಮೈಸೂರು





