Mysore
22
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಓದುಗರ ಪತ್ರ | ವಿದ್ಯುತ್ ಗ್ರಾಹಕರ ಹೊರೆ ತಪ್ಪಿಸಿ

ಓದುಗರ ಪತ್ರ

ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ಗ್ರಾಹಕರು ಜುಲೈ ೧ರಿಂದ ಪ್ರಸ್ತುತ ಇರುವ ೯೦೦ ರೂ. ಬೆಲೆಯ ಮೀಟರ್‌ನ ಬದಲಾಗಿ ೯೦೦೦ ರೂ. ಬೆಲೆಯ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಬೇಕು ಎಂದು ಕೆಪಿಟಿಸಿಎಲ್, ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದು ಸರಿಯಲ್ಲ.

ಸ್ಮಾರ್ಟ್ ಮೀಟರ್ ಟೆಂಡರ್‌ನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವಿದ್ದು, ಸದ್ಯ ಈ ಪ್ರಕರಣ ಹೈ ಕೋರ್ಟ್ ವಿಚಾರಣೆ ಯಲ್ಲಿದೆ. ಆದರೂ ಅದನ್ನು ಪರಿಗಣಿಸದೆ ಆದೇಶ ಹೊರಡಿಸಲಾಗಿದೆ. ಒಂದು ವೇಳೆ ಸ್ಮಾರ್ಟ್ ಮೀಟರ್ ಅಳವಡಿಸುವುದು ಕಡ್ಡಾಯವೇ ಆದರೆ ಅದರ ವೆಚ್ಚವನ್ನು ಸರ್ಕಾರ ಅಥವಾ ಕೆಪಿಟಿಸಿಎಲ್ ಭರಿಸಲಿ.

ಈಗಾಗಲೇ ವಿದ್ಯುತ್ ದರ ಮುಗಿಲು ಮುಟ್ಟಿದೆ. ಜೊತೆಗೆ ಕಳೆದ ಏಪ್ರಿಲ್‌ನಲ್ಲಿ ವಿದ್ಯುತ್ ದರಗಳ ಜೊತೆಗೆ ನಿಗದಿತ ಶುಲ್ಕಗಳನ್ನು ಪ್ರತಿ ಕಿಲೋವ್ಯಾಟ್‌ಗೆ ಒಂದೇ ಬಾರಿಗೆ ೨೫ ರೂ. ಗಳಷ್ಟು ಏರಿಕೆ ಮಾಡಿ ಕನಿಷ್ಠ ದರವನ್ನು ೧೨೦ ರೂ. ನಿಂದ ೧೪೫ ರೂ. ಗಳಿಗೆ ಏರಿಕೆ ಮಾಡಲಾಗಿದೆ. ಇದರಿಂದ ೩ ಕಿಲೋವ್ಯಾಟ್ ಸಾಮರ್ಥ್ಯದ ಮನೆಗೆ ಕನಿಷ್ಠ ವಿದ್ಯುತ್ ದರವೇ ೪೩೫ ರೂಪಾಯಿಗಳಾಗಿದೆ.

ವಿದ್ಯುತ್ ಬಿಲ್ ೯೦೦ ರೂ. ಗಳಾದರೆ ಅದರಲ್ಲಿ ಅರ್ಧ ಕನಿಷ್ಠ ದರವೇ ಆಗಿರುತ್ತದೆ. ಎಂದರೆ ನಾವು ಒಂದು ಯೂನಿಟ್ ವಿದ್ಯುತ್ ಬಳಸದಿದ್ದರೂ ಕೂಡ ತಿಂಗಳಿಗೆ ಕನಿಷ್ಠ ೪೫೦-೫೦೦ ರೂ. ಕಟ್ಟಲೇಬೇಕು. ಇದು ಯಾವ ಲೆಕ್ಕ? ನಾವು ವಿದ್ಯುತ್ ಬಳಸಿದರೆ ಪ್ರತಿ ಯೂನಿಟ್‌ಗೆ ನಿಗದಿಯಾದ ದರ ವನ್ನು ಕಟ್ಟಲು ಬದ್ಧರಾಗಿದ್ದೇವೆ. ಆದರೆ ಮಿನಿಮಂ ಹೆಸರಿನಲ್ಲಿ ಈ ರೀತಿಯ ಸುಲಿಗೆ ಮಾಡುವುದು ತರವಲ್ಲ. ಕನಿಷ್ಠ ದರವನ್ನು ರದ್ದು ಮಾಡಬೇಕು. ಹೀಗೆ ದರಗಳನ್ನು ಪ್ರತಿ ವರ್ಷ, ವರ್ಷದಲ್ಲಿ ೨ ಬಾರಿ ಏರಿಕೆ ಮಾಡಿದರೆ ಜನರಿಗೆ ವಿದ್ಯುತ್ ದರ ಭರಿಸುವುದು ಕಷ್ಟವಾಗುತ್ತದೆ. ಈಗ ಬಹುತೇಕ ಗ್ರಾಹಕರು ಗ್ಯಾರಂಟಿ ಯೋಜನೆ (ಗೃಹ ಜ್ಯೋತಿ)ಯಡಿ ವಿದ್ಯುತ್ ಬಿಲ್ ಅನ್ನು ಸರ್ಕಾರವೇ ಕಟ್ಟುತ್ತಿದೆ. ಇದರಿಂದಾಗಿ ವಿದ್ಯುತ್ ದರ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟದೇ ಇರುವುದರಿಂದ ಕೆಪಿಟಿಸಿಎಲ್ ಎಷ್ಟಾದರೂ ದರ ಏರಿಕೆ ಮಾಡಿಕೊಳ್ಳಲಿ ಎಂದು ಉದಾಸೀನ ಮನೋಭಾವನೆಯಿಂದ ಇದ್ದಾರೆ.

ಆದರೆ ಉಚಿತ ವಿದ್ಯುತ್ ಯೋಜನೆಯೇನಾದರೂ ರದ್ದಾದರೆ ಇದರ ಹೊರೆ ವಿದ್ಯುತ್ ಗ್ರಾಹಕರ ಮೇಲೆ ಬೀಳುತ್ತದೆ. ಸರ್ಕಾರ ಹಾಗೂ ಕೆಪಿಟಿಸಿಎಲ್ ಈ ರೀತಿ ವಿದ್ಯುತ್ ದರ ಪರಿಷ್ಕರಣೆಗೆ ಅವಕಾಶ ನೀಡದೆ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ ಗ್ರಾಹಕರ ಹೊರೆಯನ್ನು ತಪ್ಪಿಸಬೇಕಾಗಿದೆ.

-ಮುಳ್ಳೂರು ಪ್ರಕಾಶ್, ಕನಕದಾಸ ನಗರ, ಮೈಸೂರು

Tags:
error: Content is protected !!