ಮೈಸೂರಿನ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಆಷಾಢ ಶುಕ್ರವಾರಗಳಂದು ಹೆಚ್ಚು ಜನರು ಆಗಮಿಸಿ ಹರಕೆಗಳನ್ನು ಸಲ್ಲಿಸುತ್ತಾರೆ. ಹರಕೆ ಸಲ್ಲಿಸುವವರು ಚಾಮುಂಡಿ ಬೆಟ್ಟದ ಮೆಟ್ಟಿಲುಗಳಿಗೆ ಅರಿಶಿನ, ಕುಂಕುಮವನ್ನು ಹೆಚ್ಚಾಗಿ ಹಚ್ಚುವುದರಿಂದ ವಾತಾವರಣ ಹಾಳಾಗುತ್ತದೆ. ಕರ್ಪೂರ, ಗಂಧದಕಡ್ಡಿಗಳ ಪ್ಲಾಸ್ಟಿಕ್ ಕವರ್‌ಗಳು ಮತ್ತು ಕುಡಿಯುವ ನೀರಿನ ಬಾಟಲ್‌ಗಳು, ಬಿಸ್ಕತ್ತು, ಲೇಸ್, ಕುರ್ಕುರೆ ಸೇರಿದಂತೆ ಇತ್ಯಾದಿ ತಿಂಡಿ ತಿನಿಸುಗಳನ್ನು ತಿಂದು ಅದರ ಕವರ್‌ಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಹೋಗುತ್ತಾರೆ.
ಇದರಿಂದ ಚಾಮುಂಡಿ ಬೆಟ್ಟದ ಪರಿಸರ ಮಲಿನಗೊಳ್ಳುತ್ತಿದೆ. ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳು ಚಾಮುಂಡಿಬೆಟ್ಟದಲ್ಲಿ ಪ್ಲಾಸ್ಟಿಕ್ ಕವರ್‌ಗಳನ್ನು ಬಳಸದಂತೆ ಭಕ್ತರಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು





