Mysore
22
light rain

Social Media

ಮಂಗಳವಾರ, 04 ಆಗಸ್ಟ್ 2026
Light
Dark

ಓದುಗರ ಪತ್ರ: ಈ ಸಾವು ನ್ಯಾಯವೇ?

ಓದುಗರ ಪತ್ರ

ಹೆತ್ತವರ ಕನಸುಗಳು ಅನಂತ, ಮಕ್ಕಳ ಸಾಧನೆಯನ್ನು ಕಣ್ತುಂಬಿಕೊಳ್ಳಲು ಆಸೆ ಪಡುತ್ತಾರೆ. ಕೊನೆಗೆ ಏನೂ ಮಾಡದಿದ್ದರೂ ಪರವಾಗಿಲ್ಲ ಮಕ್ಕಳು ನಮ್ಮ ಕಣ್ಣ ಮುಂದಿದ್ದರೆ ಸಾಕಪ್ಪಾ ಎಂದುಕೊಳ್ಳುತ್ತಾರೆ. ಆದರೆ ಇಂದಿನ ಯುವ ಪೀಳಿಗೆ ಕ್ರೀಡಾಭಿಮಾನದ ಹೆಸರಿನಲ್ಲಿ ಅತಿರೇಕದ ವರ್ತನೆ ತೋರಿ ದುರಂತವನ್ನು ಮೈಮೇಲೆ ಎಳೆದುಕೊಳ್ಳುತ್ತಿರುವುದು ವಿಪರ್ಯಾಸ.

ಏನಾಗಿದೆ ನಮ್ಮ ಸಮಾಜಕ್ಕೆ, ಯುವ ಜನತೆಗೆ? ಯಾಕೀ ಉನ್ಮಾದ? ಭಾವೋತ್ಕರ್ಷ? ರಾಜಕಾರಾಣಿಗಳ, ಸಿನಿಮಾ ನಟರ, ಕ್ರಿಕೆಟ್ ಆಟಗಾರರ ಹಿಂಬಾಲಕರಾಗಿ ಸಮಯ ವ್ಯರ್ಥ ಮಾಡಿಕೊಂಡು ನಿಮ್ಮ ವ್ಯಕ್ತಿತ್ವವನ್ನು, ಸಮಯವನ್ನು ವ್ಯರ್ಥ ಮಾಡಿಕೊಂಡು ಅವರ ಬದುಕನ್ನು ಉದ್ಧಾರ ಮಾಡುತ್ತಿದ್ದೀರಲ್ಲಾ ಏನನ್ನಬೇಕು ನಿಮಗೆ? ನಿಮ್ಮ ಹೆತ್ತವರ ಶಾಶ್ವತ ನೋವಿಗೆ ಪರಿಹಾರವೇನು? ದೇವರು ಕೂಡ ನಿಮ್ಮನ್ನು ಉಳಿಸುವುದಿಲ್ಲ. ಏನೆಂದು ಅವರ ಅಭಿಮಾನಿಗಳಾಗಿದ್ದೀರಿ ಅವರೇನು ರಾಷ್ಟ್ರನಾಯಕರೆ? ನೆಲ ಜಲ ಭಾಷೆಗಾಗಿ ಜೀವತೆತ್ತವರೆ? ದೇಶ ನಾಡು ನುಡಿ ಇತ್ಯಾದಿ ವಿಚಾರಗಳು ಬಂದಾಗ ಮೈಗೆಲ್ಲಾ ಎಣ್ಣೆ ಸವರಿಕೊಂಡು ನುಣಿಚಿಕೊಳ್ಳುವವರು ಕೊನೆ ಪಕ್ಷ ನಿಮ್ಮ ಕುಟುಂಬಕ್ಕೆ ಸಾಂತ್ವನ ಹೇಳುವ ಔದಾರ್ಯವನ್ನೂ ತೋರದ ಮೂರ್ಖರಿಗೆ ನೀವು ಅಭಿಮಾನಿಗಳು. ನಿಮ್ಮ ನೋವು, ಸಾವುಗಳೆಲ್ಲವೂ ನಿಮ್ಮ ಕುಟುಂಬದ ಶಾಶ್ವತ ದುಃಖಗಳೇ ಹೊರತು ಸಾವಿನ ದಲ್ಲಾಳಿಗಳಲ್ಲ ಎಂಬ ಎಚ್ಚರಿಕೆ ನಿಮ್ಮನ್ನು ಕಾಡದ ಹೊರತು ಈ ಘಟನೆಗಳಿಗೆ ಸಾವಿಲ್ಲ.

– ಬ್ಯಾ.ರಾ. ಪ್ರಸನ್ನಕುಮಾರ್, ಬ್ಯಾಡರಹಳ್ಳಿ, ಕೃಷ್ಣರಾಜನಗರ ತಾ.

Tags:
error: Content is protected !!