Mysore
22
few clouds

Social Media

ಸೋಮವಾರ, 17 ಫೆಬ್ರವರಿ 2025
Light
Dark

ಓದುಗರ ಪತ್ರ |ಕುಂಭಮೇಳದಲಿ ಕಾಲ್ತುಳಿತಕ್ಕೆ ಸಿಲುಕಿದವರ ರಕ್ಷಣೆಯಾಗಲಿ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ಮತ್ತು ನೂಕು ನುಗ್ಗಲಿನಿಂದಾಗಿ ನಾಲ್ವರು ಕನ್ನಡಿಗರೂ ಸೇರಿದಂತೆ ೩೦ ಜನರು ಬಲಿಯಾಗಿರುವುದು ದುರದೃಷ್ಟಕರ.

ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಇಷ್ಟು ಜನ ಸೇರುವುದು ಬಹುಶಃ ವಿಶ್ವದಲ್ಲಿಯೇ ಇದೇ ಮೊದಲು ಅನಿಸುತ್ತದೆ. ಇಷ್ಟೊಂದು ಪ್ರಮಾಣದಲ್ಲಿ ಜನರು ಸೇರಿದಾಗ ನಾವೇ ಮೊದಲು ಮುಂದೆ ಹೋಗಬೇಕು ಎನ್ನುವ ಹುಚ್ಚುತನ ಎಲ್ಲೆ ಮೀರುತ್ತದೆ. ಆ ಸಂದರ್ಭದಲ್ಲಿ ಎಷ್ಟೇ ನಿಯಂತ್ರಣ ಮಾಡಲು ಪ್ರಯತ್ನಿಸಿದರೂ ಇಂತಹ ಘಟನೆಗಳು ನಡೆಯುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಇಂತಹ ಘಟನೆಗಳು ನಡೆದಾಗ ನೇರವಾಗಿ ಸರ್ಕಾರವನ್ನು ದೂರಲು ಸಾಧ್ಯವಿಲ್ಲ. ಇಲ್ಲಿ ಸರ್ಕಾರದ ವೈಫಲ್ಯದ ಜತೆಗೆ ಜನರ ಅಸಹನೆ ಮತ್ತು ಅವೈಜ್ಞಾನಿಕ ನಡವಳಿಕೆಯೂ ಕಾರಣವಾಗುತ್ತದೆ ಎಂಬುದನ್ನು ಮರೆಯಬಾರದು. ದುರದೃಷ್ಟವಶಾತ್ ಇಂತಹ ಘಟನೆಗಳನ್ನೂ ಕೆಲವರು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳು ತ್ತಿದ್ದಾರೆ. ಇಂತಹ ಘಟನೆಗಳು ನಡೆದಾಗ ಸಂತ್ರಸ್ತರಿಗೆ ಸಾಂತ್ವನ ಹೇಳಬೇಕು, ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸಬೇಕೇ ಹೊರತು ಸರ್ಕಾರವನ್ನು ದೂಷಿಸುವುದು ಸರಿಯಲ್ಲ. ಇನ್ನು ಕೆಲ ರಾಜಕಾರಣಿಗಳು ಕುಂಭಮೇಳದ ಬಗ್ಗೆ ವ್ಯಂಗ್ಯವಾಡುತ್ತಿದ್ದು, ಒಂದು ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗುವಂತೆ ಮಾತನಾಡುತ್ತಿದ್ದಾರೆ. ಬಹುಶಃ ಒಂದು ವರ್ಗದ ರಾಜಕಾರಣಿಗಳಿಗೆ ಕುಂಭಮೇಳದ ಸಂಭ್ರಮ ಹಿಡಿಸುತ್ತಿಲ್ಲ ಅನಿಸುತ್ತದೆ. ಕೋಟ್ಯಂತರ ಜನರು ಸೇರಿದರೂ ಈವರೆಗೂ ಕುಂಭಮೇಳ ವ್ಯವಸ್ಥಿತವಾಗಿ ನಡೆದಿರುವುದು ಹೆಮ್ಮೆಯ ವಿಚಾರ. ಇಂತಹ ಒಂದು ಧಾರ್ಮಿಕ ಆಚರಣೆ ಯನ್ನು ಟೀಕಿಸುವ ಬದಲು ಕಾಲ್ತುಳಿತದಲ್ಲಿ ಸಿಲುಕಿದವರಿಗೆ ಸರ್ಕಾರಗಳು ಪಕ್ಷಬೇಧ ಮರೆತು ರಕ್ಷಣೆ ನೀಡಲಿ. -ರಮಾನಂದ ಶರ್ಮಾ, ಜೆ. ಪಿ. ನಗರ, ಬೆಂಗಳೂರು

Tags: