ಭಾರತದ ಜನಗಣತಿ ಕಾಯ್ದೆ ೧೯೪೮ರ ಪ್ರಕಾರ ಈ ಬಾರಿಯ ಜನಗಣತಿ ೨೦೨೭ರ ಕಾರ್ಯವು ಎರಡು ಹಂತಗಳಲ್ಲಿ ನಡೆಯುತ್ತಿದ್ದು, ಈ ಜನಗಣತಿಯು ಭಾರತದ ಮೊದಲ ಡಿಜಿಟಲ್ ಜನಗಣತಿಯಾಗಿರುವುದು ವಿಶೇಷವಾಗಿದೆ. ಗಣತಿದಾರರು ತಮ್ಮ ಸ್ವಂತ ಮೊಬೈಲ್ ಫೋನ್ ಬಳಸಿ ಮೊಬೈಲ್ ಆಪ್‌ನಿಂದ ಕುಟುಂಬಗಳಿಂದ ಡಿಜಿಟಲ್ ರೂಪದಲ್ಲಿ ಮಾಹಿತಿಗಳನ್ನು ಸಂಗ್ರಹಿಸಲು ಪ್ರೋತ್ಸಾಹಿಸಲಾಗುತ್ತಿದೆ. ಏ. ೧ ರಿಂದ ಏ. ೧೫ ರವರೆಗೆ ಸ್ವಯಂಗಣತಿಗೆ ಅವಕಾಶ ಕಲ್ಪಿಸಲಾಗಿದ್ದು, ೧೫ ರಿಂದ ೨೦ ನಿಮಿಷಗಳಲ್ಲಿ ತಮ್ಮ ಮನೆಯ ಸ್ವಂತ ಗಣತಿಯನ್ನು ಮಾಡಿಕೊಂಡು ಸ್ವಯಂ ಗಣತಿಯ ಗುರುತಿನ ಸಂಖ್ಯೆ ಪಡೆದುಕೊಂಡು ಏ. ೧೬ರಿಂದ ಮೇ ೧೫ರವರೆಗೆ ಗಣತಿದಾರರು ಮನೆಗೆ ಭೇಟಿ ನೀಡಿದಾಗ ವಿಶೇಷ ಸಂಖ್ಯೆ ನೀಡಿ ಗಣಿತಿದಾರರ ಗಣತಿ ಕಾರ್ಯವನ್ನು ಸರಳಗೊಳಿಸಿ ಯಶಸ್ವಿಗೊಳಿಸಲು ಎಲ್ಲರೂ ನೆರವಾಗಬೇಕಿದೆ.
ಜನಗಣತಿಯಲ್ಲಿ ಸಂಗ್ರಹಿಸುವ ಮಾಹಿತಿ, ಹೆಸರು, ಗುರುತನ್ನು ಗೌಪ್ಯವಾಗಿ ಇರಿಸಲಾಗುತ್ತದೆ. ಯಾವುದೇ ತೆರಿಗೆ ಅಥವಾ ಪರಿಶೋಧನೆ ಉದ್ದೇಶಕ್ಕೆ ದತ್ತಾಂಶವನ್ನು ಬಳಸಿಕೊಳ್ಳುವುದಿಲ್ಲ . ಇದು ಸುರಕ್ಷಿತವಾಗಿರುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಹೀಗಾಗಿ ಗಣತಿದಾರರು ತಮ್ಮ ಮನೆಗೆ ಬಂದಾಗ ಮಾಹಿತಿದಾರರು ಸಂಶಯ ಪಡದೇ ಗಣತಿದಾರರು ಕೇಳುವ ೩೪ ಸರಳ ಪ್ರಶ್ನೆಗಳಿಗೆ ಪಾರದರ್ಶಕತೆ ಹಾಗೂ ವಾಸ್ತವಾಂಶದೊಂದಿಗೆ ಮಾಹಿತಿ ನೀಡಬೇಕಿದೆ. ಗಣತಿದಾರರು ಕೂಡ ಬೇರೆ ಯಾವುದೇ ಪ್ರಶ್ನೆಗಳನ್ನು ಕೇಳಿ, ಕಿರಿಕಿರಿಗೊಳಿಸದೆ ಸರಿಯಾದ ಮಾಹಿತಿಯನ್ನು ದಾಖಲಿಸಿಕೊಂಡು ಈ ಬಾರಿಯ ಜನಗಣತಿಯನ್ನು ಯಶಸ್ವಿಗೊಳಿಸುವುದು ಅಗತ್ಯವಾಗಿದೆ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ





