ವೃತ್ತಿ ಶಿಕ್ಷಣದ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸಿಇಟಿ ಪರೀಕ್ಷೆಗೆ ಆಗಮಿಸಿದ್ಧ ಜನಿವಾರ ಧರಿಸಿದ ವಿದ್ಯಾರ್ಥಿಗಳ ಜನಿವಾರ ತೆಗೆಸಿ ಮತ್ತೊಂದೆಡೆ ಮೂಗುಬಟ್ಟು ಧರಿಸಿದ ವಿದ್ಯಾರ್ಥಿನಿಗೆ ಬಟ್ಟಿಗೆ ಪ್ಲಾಸ್ಟರ್ ಹಾಕಿಸಿ ಪರೀಕ್ಷೆ ಬರೆಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.
ವಿದ್ಯಾರ್ಥಿಗಳು, ಜನಿವಾರದಲ್ಲಿ ಅಥವಾ ಮೂಗುಬಟ್ಟಿನಲ್ಲಿ ತಂತ್ರಾಂಶ ಇಟ್ಟು, ಪರೀಕ್ಷೆಗಳಲ್ಲಿ ನಕಲು ಮಾಡಲು ಆಗುತ್ತದೆಯೇ? ಒಂದರ್ಥದಲ್ಲಿ ಅಮೆರಿಕ ಮತ್ತು ಇಸ್ರೇಲ್ ಅನ್ನೂ ನಾವು ತಂತ್ರಜ್ಞಾನದಲ್ಲಿ ಮೀರಿಸಿದ್ದೇವೆಯೇ ಎಂಬ ಪ್ರಶ್ನೆ ಕಾಡುತ್ತದೆ. ವಿದ್ಯಾರ್ಥಿಗಳ ತುಂಬು ತೋಳಿನ ಅಂಗಿಗಳನ್ನು ಕತ್ತರಿಸುವುದು, ಜಡೆಗೆ ಹಾಕಿರುವ ಕ್ಲಿಪ್ ತೆಗೆಸುವುದು, ಜನಿವಾರ, ಕಿವಿಯೋಲೆ ಮೂಗುಬಟ್ಟು ತೆಗೆಸುವುದು ಇವ್ಯಾವುದೂ ತರವಲ್ಲ. ಪ್ರವೇಶದ ಮೊದಲು ಕಟ್ಟುನಿಟ್ಟಾದ ದೈಹಿಕ ತಪಾಸಣೆ , ಮೆಟಲ್ ಡಿಟೆಕ್ಟರ್, ಜ್ಯಾಮರ್‌ಗಳು ಮುಂತಾದ ತಂತ್ರಜ್ಞಾನ ಬಳಸಿದರೆ, ಇಂತಹ ಅತಿರೇಕದ ಕ್ರಮಗಳ ಅಗತ್ಯವೇ ಇರುವುದಿಲ್ಲ. ಜನಿವಾರ, ಮೂಗುಬಟ್ಟು, ಕಿವಿಯೋಲೆ ಮುಂತಾದವುಗಳು ಬಹುಮಟ್ಟಿಗೆ ವೈಯಕ್ತಿಕ ನಂಬಿಕೆ, ಸಂಸ್ಕೃತಿ , ಧಾರ್ಮಿಕ ಆಚರಣೆ ಇವುಗಳೊಂದಿಗೆ ಸಂಬಂಧ ಹೊಂದಿರುವವು. ಇವನ್ನು ಪರೀಕ್ಷಾ ಕೇಂದ್ರದಲ್ಲಿ ಬಲವಂತವಾಗಿ ತೆಗೆಸುವುದರಿಂದ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಗೆ ಧಕ್ಕೆಯಾಗಬಹುದು. ಈ ನಿಟ್ಟಿನಲ್ಲಿ ಸರ್ಕಾರ ಮತ್ತೊಮ್ಮೆ ಪರಿಶೀಲಿಸಿ, ಸುರಕ್ಷತೆ -ಗೌರವ ನಡುವೆ ಸಮತೋಲನ ಕಾಪಾಡಿಕೊಂಡು, ಎಲ್ಲ ವಿದ್ಯಾರ್ಥಿಗಳಿಗೂ ಒಂದೇ ರೀತಿಯ ನಿಯಮ ಪರೀಕ್ಷಾ ಸಿಬ್ಬಂದಿಗೆ ಸೂಕ್ತ ಮಾರ್ಗಸೂಚಿ ಮತ್ತು ತರಬೇತಿ ನೀಡಿ, ಕೆಲವು ಅತ್ಯಂತ ಸೂಕ್ತವಾದ ಕ್ರಮಗಳಾದ ಪ್ರವೇಶಕ್ಕೂ ಮುನ್ನ ಸಮಗ್ರ ತಪಾಸಣೆ, ಸ್ಪಷ್ಟ (ವಸ್ತ್ರ ಸಂಹಿತೆ)ಹಾಗೂ ಮುಂಚಿತ ಮಾಹಿತಿ, ಅನುಮಾನಾಸ್ಪದ ಸಂದರ್ಭಗಳಲ್ಲಿ ಮಾತ್ರ ಹೆಚ್ಚುವರಿ ಪರಿಶೀಲನೆ ಜೊತೆಗೆ ಧಾರ್ಮಿಕ/ಸಾಂಸ್ಕೃತಿಕ ಚಿಹ್ನೆಗಳ ಬಗ್ಗೆ ಸಂವೇದನಾಶೀಲ ನಿಲುವು ತಳೆದು ಕೆಲವು ತಿದ್ದುಪಡಿಗಳನ್ನು ತರಬೇಕಾಗಿರುವುದು ಅವಶ್ಯ. ಬಹುಶಃ ಮುಂದಿನ ಬಾರಿಯ ಪರೀಕ್ಷೆಯಲ್ಲಿ ಸರ್ಕಾರ ಮತ್ತು ಪರೀಕ್ಷಾ ಸಂಸ್ಥೆಗಳು ಹೆಚ್ಚು ಮಾನವೀಯ ಮತ್ತು ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವುದು ಅಗತ್ಯ.
-ವಿಜಯ್ ಹೆಮ್ಮಿಗೆ, ಮೈಸೂರು




