ಮೈಸೂರಿನ ಕಾಡಾ ಕಚೇರಿ ಕಟ್ಟಡದಲ್ಲಿ ಅನೇಕ ಸರ್ಕಾರಿ ಕಚೇರಿಗಳಿವೆ. ಜನ ಪ್ರತಿನಿಧಿಗಳ ಕಾರ್ಯಾಲಯಗಳಿವೆ. ಕೇಂದ್ರ ಸರ್ಕಾರದ ಅಂಚೆ ಕಚೇರಿಯೂ ಇಲ್ಲೇ ಇದೆ. ಈ ಕಚೇರಿ ಬೀದಿ ನಾಯಿಗಳ ಆವಾಸಸ್ಥಾನವೂ ಆಗಿರುವುದರಿಂದ ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡಲು ಭಯಪಡುತ್ತಿದ್ದಾರೆ.
ಕಚೇರಿಯ ಆವರಣದಲ್ಲಿ ಸುಮಾರು ೨೫ ನಾಯಿಗಳಿವೆ, ಇಲ್ಲಿರುವ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಕಾಡಾ ಕಚೇರಿ ಆವರಣದಲ್ಲಿ ಹತ್ತು ಹಲವು ವರ್ಷಗಳಿಂದ ಅಕ್ರಮವಾಗಿ ಕಾಫಿ, ಟೀ ಉಪಾಹಾರ ಮಾರುವ ಪೆಟ್ಟಿಗೆ ಅಂಗಡಿಗಳ ಮಾಲೀಕರು ಈ ನಾಯಿಗಳಿಗೆ ಆಹಾರ ಪೂರೈಸುತ್ತಿದ್ದಾರೆ.
ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಕಾಡಾ ಕಚೇರಿಯಲ್ಲಿರುವ ಜನಪ್ರತಿನಿಧಿಗಳ ಕಚೇರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಸಾರ್ವಜನಿಕರ ಮೇಲೆ ನಾಯಿಗಳ ಗುಂಪು ಸಾಮೂಹಿಕವಾಗಿ ದಾಳಿ ಮಾಡುತ್ತದೆ. ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ಕಾಡಾ ಕಚೇರಿ ಆವರಣದಲ್ಲಿನ ನಾಯಿಗಳ ಹಾವಳಿ ನಿಯಂತ್ರಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
-ಎಸ್.ರಾಘವೇಂದ್ರ, ಸಿದ್ದಾರ್ಥನಗರ, ಮೈಸೂರು





