ಚಾಮರಾಜನಗರ ತಾಲ್ಲೂಕಿನ ಆಲೂರು ಹೊಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ ದಲಿತ ಮಹಿಳೆ ಅಡುಗೆ ಮಾಡುತ್ತಾರೆ ಎಂಬ ಕಾರಣದಿಂದ ಪೋಷಕರು ತಮ್ಮ ಮಕ್ಕಳ ವರ್ಗಾವಣೆ ಪತ್ರ ಪಡೆದು ಬೇರೆ ಶಾಲೆಗೆ ದಾಖಲು ಮಾಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಅಸ್ಪೃಶ್ಯತೆ ಆಚರಣೆ ಇನ್ನೂ ಜೀವಂತ ವಾಗಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಂತಿದೆ.
ಮುಗ್ಧ ಮಕ್ಕಳ ಮನಸ್ಸಿನಲ್ಲಿ ಜಾತಿಯ ವಿಷಬೀಜ ಬಿತ್ತುವುದು ಒಳ್ಳೆಯ ಬೆಳವಣಿಗೆಯಲ್ಲ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ಮನಸ್ಸಿನಲ್ಲಿ ಜಾತಿಯ ವಿಷಬೀಜ ಬಿತ್ತುವುದನ್ನು ಬಿಟ್ಟು , ಎಲ್ಲರೂ ಸಮಾನರು ಎಂಬ ಮಾನವತೆಯ ಸಂದೇಶವನ್ನು ಸಾರಬೇಕು. ಇನ್ನಾದರೂ ಜಾತಿಯೆಂಬ ರೋಗಗ್ರಸ್ತ ಮನಸ್ಥಿತಿಯಿಂದ ಹೊರಬರಬೇಕು.
– ಎಂ. ಪಿ. ದರ್ಶನ್ ಚಂದ್ರ , ಮುಕ್ಕಡಹಳ್ಳಿ, ಚಾಮರಾಜನಗರ ತಾ





