ಮುಂಬರುವ ದಸರಾ ವೇಳೆಗೆ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಘೋಷಿಸಿದ್ದಾರೆ. ೧೦ ಸಾವಿರ ಮಂದಿಗೆ ಕಾವೇರಿ ಆರತಿ ವೀಕ್ಷಣೆಗೆ ಸೌಲಭ್ಯ ಕಲ್ಪಿಸಲಾಗುವುದು, ಸರ್ಕಾರ ಇದಕ್ಕಾಗಿ ೧೦೦ ಕೋಟಿ ರೂ. ಮೀಸಲಿಟ್ಟಿದೆ ಎಂದು ಅವರೇ ಹೇಳಿದ್ದಾರೆ. ಅವರು ಕುಂಭ ಮೇಳಕ್ಕೆ ಹೋಗಿದ್ದಾಗ ವಾರಣಾಸಿಯಲ್ಲಿ ನಡೆಯುವ ಗಂಗಾ ಆರತಿಯನ್ನು ನೋಡಿ ಈ ಯೋಜನೆಯನ್ನು ಘೋಷಿಸಿದ್ದಾರೆ. ಕಳೆದ ಮಾರ್ಚ್ ೨೨ ರಂದು ಬೆಂಗಳೂರಿನ ಸ್ಯಾಂಕಿ ಕೆರೆ ಬಳಿ ಕಾವೇರಿ ಆರತಿ (ಇದು ಕೂಡ ಪ್ರಚಾರ ಉದ್ದೇಶದ್ದೇ) ನಡೆಸಿದ್ದಾಗಲೇ ಮುಖ್ಯಮಂತ್ರಿಗಳು ಕೆಆರ್‌ಎಸ್‌ನಲ್ಲಿ ೯೨ ಕೋಟಿ ರೂ. ಗಳ ವೆಚ್ಚದಲ್ಲಿ ಕಾವೇರಿ ಆರತಿ ನಡೆಸುವುದಾಗಿ ಘೋಷಣೆ ಮಾಡಿದ್ದರು.
ಪರಿಸರವಾದಿ ಅ. ನ. ಯಲ್ಲಪ್ಪರೆಡ್ಡಿ ಅವರು ಪತ್ರಿಕೆಯೊಂದಕ್ಕೆ ಬರೆದಿದ್ದ ಪತ್ರದಲ್ಲಿ ಗಂಗೆಯಂತೆ ಪವಿತ್ರ ನದಿಗಳಲ್ಲಿ ಒಂದಾದ ಕಾವೇರಿ ಇಂದು ಕೈಗಾರಿಕೆಗಳ ತ್ಯಾಜ್ಯ ನೀರು, ಹಳ್ಳಿ ಪಟ್ಟಣಗಳ ಕೊಳಚೆ ನೀರು ಸೇರಿ ಮಲಿನ ಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ಆರತಿಗೆ ಬಿಡುಗಡೆ ಮಾಡಲು ಉದ್ದೇಶಿಸಿರುವ ೯೨ ಕೋಟಿ ರೂ. ಅನುದಾನದಿಂದ ೧೦ ಸಾವಿರ ಹೆಕ್ಟೇರ್ ಜೌಗು ಪ್ರದೇಶಾಭಿವೃದ್ಧಿ ಸಾಧ್ಯವಿದೆ. ಗಂಗಾರತಿಯಿಂದ ಎಂದಾದರೂ ಗಂಗೆ ಪವಿತ್ರವಾಗಿದೆಯೇ? ಇಲ್ಲ. . . ಇನ್ನಷ್ಟು ಮಲಿನವಾಗಿದೆ. ಅಂತೆಯೇ ಕಾವೇರಿ ಆರತಿ ಮಾಡಲು ಇಂತಹದೊಂದು ಬೃಹತ್ ಮೊತ್ತವನ್ನು ಖರ್ಚು ಮಾಡುವುದು ವ್ಯರ್ಥ, ಅರ್ಥಹೀನ ವಿಚಾರ ಎಂದಿದ್ದಾರೆ. ಇದು ನಿಜಕ್ಕೂ ಸಾರ್ವಜನಿಕರು ಚಿಂತಿಸಬೇಕಾದ ವಿಚಾರ.
-ಮುಳ್ಳೂರು ಪ್ರಕಾಶ್, ಕನಕದಾಸ ನಗರ, ಮೈಸೂರು





