Light
Dark

ರೈತ ಚಳುವಳಿಗೆ ಬಲಿಯಾದ ಪೊಲೀಸ್ ಹುತಾತ್ಮ! – ಭಾಗ: 01

ಹೊಲದಾಗ ಬೆಳೆ ಭರಪೂರಾ, ದರದಾಗ ಎಲ್ಲ ಏರಪೇರಾ ಘೋಷಣೆ ಕೂಗುತ್ತಾ ರೈತರು ತಹಸೀರ್ಲ್ದಾ ಕಛೇರಿ ಎದುರು ಧರಣಿ ಕುಳಿತಿದ್ದರು. ಅವರನ್ನು ತುಳಿದುಕೊಂಡೇ ತಹಸೀಲ್ದಾರ ಕಛೇರಿಯೊಳಕ್ಕೆ ನುಗ್ಗಿದನೆಂಬ ಗಾಳಿಸುದ್ದಿ ದೂರದಲ್ಲಿದ್ದ ರೈತರಿಗೆ ತಲುಪಿತು. ರೋಷ ಕಷಾಯಿತರಾಗಿ ದಂಡುಗಟ್ಟಿ ಬಂದ ಇನ್ನೊಂದು ಗುಂಪು ತಹಸೀರ್ಲ್ದಾ ಛೇಂಬರಿನೊಳಗೆ ನುಗ್ಗಲು ಯತ್ನಿಸಿತು. ಹೊರಗಡೆ ಆರೇಳು ಪೊಲೀಸರೊಂದಿಗೆ ನಿಂತಿದ್ದ ಸಬ್ ಇನ್ಸ್ ಪೆರ್ಕ್ಟ ಬಾಗಿಲಲ್ಲೇ ತಡೆದ. ನಾಲ್ಕು ಜನ ಮಾತ್ರ ಒಳಹೋಗಿ ಮಾತಾಡಿ. ಎಲ್ಲರೂ ಒಮ್ಮೆಗೇ ಹೋದರೆ ಗೊಂದಲವಾಗುತ್ತೆ ಎಂದು ಹೇಳಿದ.
ಉದ್ರಿಕ್ತ ಗುಂಪು ಕೇಳುತ್ತದೆಯೇ?

೨೧ ಜೂಲೈ ೧೯೮೦ .

ರೈತರು ದುಪ್ಪಟ ಕೊಡವಿ ಚಳುವಳಿಯ ಶಾಲು ಹೊದ್ದು ಹೊರಟಿದ್ದರು. ರಾಜ್ಯಾದ್ಯಂತ ರೈತ ಚಳುವಳಿಯ ಕಾವು ಎಲ್ಲೆಡೆ ಹರಡಿತ್ತು. ಈ ಹಂಡಭಂಡ ರಾಜಕಾರಣಿಗಳನ್ನು ನಂಬಿಕೊಂಡರೆ ಏನೂ ಮಾಡೋದಿಲ್ಲ. ನಾವೇ ಸಂಘಟಿತರಾಗಿ ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡುಕೊಳ್ಳಬೇಕು ಎಂಬ ಕೂಗೆದ್ದಿತು.

ಮಲಪ್ರಭಾ ‘ನವಿಲು ತೀರ್ಥ’ ಜಲಾಶಯ ಆಗಿನ್ನೂ ನಿರ್ಮಾಣವಾಗುತ್ತಿದ್ದ ಸಮಯ. ಅದರ ನೀರನ್ನು ಬಳಸಲು ಎಕರೆಗೆ ೧೫೦೦ ರೂ ನಂತೆ ಬೆಟರ್‌ಮೆಂಟ್ ತೆರಿಗೆ ವಿಧಿಸಲಾಗಿತ್ತು. ಈ ಬೆಟರ್‌ಮೆಂಟ್ ಲೆವಿ ಎಂದರೆ ನೀರಾವರಿ ಅಣೆಕಟ್ಟು ಕಟ್ಟುವುದಕ್ಕೆ ಆಗುವ ಖರ್ಚನ್ನು ರೈತರಿಂದ ಪಡೆದುಕೊಳ್ಳುವ ತೆರಿಗೆ. ಇದು ಎಷ್ಟು ದುಬಾರಿಯಾಗಿತ್ತೆಂದರೆ ಅಲ್ಲಿ ಆಗಿನ ಭೂಮಿಯ ಬೆಲೆ ಎಷ್ಟಿದೆಯೋ ಅಷ್ಟಿತ್ತು (೧೯೮೦). ಅಂದರೆ ರೈತರು ತಮ್ಮ ಸ್ವಂತ ಭೂಮಿಯನ್ನು ಸರ್ಕಾರದಿಂದ ಮತ್ತೆ ಕೊಂಡಂತೆ. ಕಾಮಗಾರಿ ಆರಂಭಕ್ಕೆ ಮುನ್ನವೇ ನೀರಿನ ಕರ ವಿಧಿಸಿದ್ದರಿಂದ ರೈತರು ರೊಚ್ಚಿಗೆದ್ದರು.

ಅಲ್ಲಿಯ ತಹಸೀಲ್ದಾರ್ ಬೆಕ್ಕಿನಾಳ್ಕರ್ ಡಂಗೂರ ಹೊಡೆಸಿ ಹಳ್ಳಿಗಳಲ್ಲಿ ರೈತರ ಮನೆಗಳಿಗೆ ನುಗ್ಗಿ ಅವರ ಚರಾಸ್ತಿಗಳನ್ನು ಹರಾಜು ಹಾಕತೊಡಗಿದರು. ಮೊದಲೇ ಕಷ್ಟದಲ್ಲಿದ್ದ ರೈತರಿಗೆ ಈ ದೌರ್ಜನ್ಯ ಅಪರಿಮಿತ ಸಿಟ್ಟನ್ನು ಉಕ್ಕಿಸಿತು.

ನೀರಾವರಿ ಬೆಟರ್‌ಮೆಂಟ್ ಲೆವಿ ವಿಪರೀತವಾಗಿದೆ. ಅದನ್ನು ಹಿಂತೆಗೆದುಕೊಳ್ಳಿ. ಹತ್ತಿ, ಮುಸುಕಿನ ಜೋಳಕ್ಕೆ ಲಾಭದಾಯಕ ಬೆಲೆ ಕೊಡಿ. ಈ ಬೆಳೆಗಳನ್ನು ಸರ್ಕಾರವೇ ಕೊಳ್ಳಲಿ . ಅಲ್ಲದೆ ನೀರನ್ನೇ ಹರಿಸದೆ ನೀವು ಕರ ಕಟ್ಟಿರಿ ಎನ್ನುವುದು ಅನ್ಯಾಯ ಎಂದು ಪ್ರತಿಭಟಿಸಿ ಸಾವಿರಾರು ರೈತರು ನರಗುಂದ ತಹಸೀಲ್ದಾರ್ ಕಛೇರಿಗೆ ನುಗ್ಗಿಬಂದರು. ಹಳ್ಳಿ ಹಳ್ಳಿಗಳಿಂದ ಬಂದಿದ್ದ ನೂರಾರು ಟ್ರ್ಯಾಕ್ಟರ್‌ಗಳು ರಸ್ತೆಯಲ್ಲಿ ತುಂಬಿಹೋದವು. ನರಗುಂದದಲ್ಲಿ ಓಡಾಡಲು ಸಾಧ್ಯವಿಲ್ಲದಷ್ಟು ರೈತ ಪ್ರವಾಹ ಉಕ್ಕಿ ಹರಿಯಿತು. ‘

ಹೊಲದಾಗ ಬೆಳೆ ಭರಪೂರಾ, ದರದಾಗ ಎಲ್ಲ ಏರಪೇರಾ’ ಘೋಷಣೆ ಕೂಗುತ್ತಾ ರೈತರು ತಹಸೀಲ್ದಾರ್ ಕಛೇರಿ ಎದುರು ಧರಣಿ ಕುಳಿತಿದ್ದರು. ಅವರನ್ನು ತುಳಿದುಕೊಂಡೇ ತಹಸೀಲ್ದಾರ ಕಛೇರಿಯೊಳಕ್ಕೆ ನುಗ್ಗಿದನೆಂಬ ಗಾಳಿಸುದ್ದಿ ದೂರದಲ್ಲಿದ್ದ ರೈತರಿಗೆ ತಲುಪಿತು. ರೋಷ ಕಷಾಯಿತರಾಗಿ ದಂಡುಗಟ್ಟಿ ಬಂದ ಇನ್ನೊಂದು ಗುಂಪು ತಹಸೀಲ್ದಾರ್ ಛೇಂಬರಿನೊಳಗೆ ನುಗ್ಗಲು ಯತ್ನಿಸಿತು. ಹೊರಗಡೆ ಆರೇಳು ಪೊಲೀಸರೊಂದಿಗೆ ನಿಂತಿದ್ದ ಸಬ್ ಇನ್ಸ್ ಪೆಕ್ಟರ್ ಬಾಗಿಲಲ್ಲೇ ತಡೆದ. ನಾಲ್ಕು ಜನ ಮಾತ್ರ ಒಳಹೋಗಿ ಮಾತಾಡಿ. ಎಲ್ಲರೂ ಒಮ್ಮೆಗೇ ಹೋದರೆ ಗೊಂದಲವಾಗುತ್ತೆ ಎಂದು ಹೇಳಿದ.
ಉದ್ರಿಕ್ತ ಗುಂಪು ಕೇಳುತ್ತದೆಯೇ?

ವಾಗ್ವಾದ ನಡೆಯಿತು. ಪಿಎಸ್‌ಐ ಒಳ ಬಿಡದೆ ಪಟ್ಟು ಹಿಡಿದ. ಆತ ಸಿಕಂದರ್. ಬಿ.ಪಟೇಲ್. ಹೊಸದಾಗಿ ನರಗುಂದ ಠಾಣೆಗೆ ಬಂದಿದ್ದ ಯುವಕ. ತರಬೇತಿ ನಂತರ ಚಾರ್ಜ್ ತೆಗೆದುಕೊಂಡಿದ್ದ ಮೊತ್ತ ಮೊದಲ ಠಾಣೆ ಅದು. ‘

ನಾವು ಒಳಗ ಹೋಗಾಂಗಿಲ್ಲಾ.. ತಹಸೀಲ್ದಾರರನ್ನ ಇಲ್ಲೇ ಕರಸ್ರೀ’ ಎಂದು ಜನ ಗಲಾಟೆ ಮಾಡ ತೊಡಗಿದರು.

ತಹಸೀಲ್ದಾರು ಇಲ್ಲಿಗೆ ಬಂದರೆ ಸರಿಯಾಗಿ ಮಾತಾಡೋದಿಕ್ಕೆ ಆಗೋದಿಲ್ಲ. ನಿಮ್ಮನ್ನು ಅವರೇ ಕರೆಯುತ್ತಿದ್ದಾರೆ ಬನ್ನಿ. ನಾಲ್ಕು ಜನ ರೈತ ನಾಯಕರು ಒಳ ಹೋಗಿ ಚರ್ಚೆ ಮಾಡಿ ಎಂದು ಎಸ್ಸೈ ಸಿಕಂದರ್ ಪಟೇಲ್ ಹೇಳುತ್ತಿದ್ದರು.

ಚಳವಳಿಯ ಜೋಷ್ ನಲ್ಲಿದ್ದ ರೈತರು ಈ ಮಾತು ಕೇಳ ಬಲ್ಲರೇ? ಗುಜು ಗುಜು ಗಲಾಟೆ ಶುರುವಾಗೇಬಿಟ್ಟಿತು.
‘ಇಲ್ಲೀ ತಂಕ ತಾಸೀಲ್ದಾರನ ಕಛೇರಿಗೆ ಬಂದಾಗ ನಮಗೆ ಸಿಕ್ಕಿರೋ ಗೌರವ ಸಾಕು. ಅವಂಗೆ ಇಲ್ಲೇ ಬರೇಳ್ರೀ. ನಾವಿಲ್ಲೇ ಮಾತಾಡ್ತೀವಿ’ ರೈತರು ಹಠ ಹಿಡಿದರು.

ಹೊಸ ಸಬ್ ಇನ್ಸ್‌ಪೆಕ್ಟರಿಗೆ ರೇಗಿತು. ಪೊಲೀಸ್ ರೋಫಿನಲ್ಲಿ ,
ತಾಸೀಲ್ದಾರರು ಇಲ್ಲಿಗೆ ಬರೋದಿಲ್ಲ. ನಾನು ಕರೆಯೋದೂ ಇಲ್ಲ. ನೀವಿಲ್ಲೇ ಕೂತಿರಿ ಎಂದು ಅವರ ಕಛೇರಿಯತ್ತ ನಡೆದ.

ರೈತರ ಪಡೆ ಹೆಜ್ಜೇನು ಮೇಲೆದ್ದಂತೆ ಎದ್ದಿತು. ನೂರಾರು ಜನ ತಾಸಿಲ್ದಾರ್ ಕಛೇರಿ ಮುತ್ತಿತು. ಒಬ್ಬ ಎಸ್ಸೈ ಆರೇಳು ಪೊಲೀಸರು ಆ ಜನ ಜ್ವಾಲಾಮುಖಿಗೆ ಎದುರೇ? ತಾಸಿಲ್ದಾರರ ಛೇಂಬರಿನ ಬಾಗಿಲು ಹಾಕಿ ಪೊಲೀಸರು ಹೊರಗಡೆ ನಿಂತರು. ರೈತರ ಪ್ರತಿಭಟನಾ ಕಿರುಚಾಟ ಉಗ್ರವಾಯಿತು. ‘

ಈಗಲೂ ಹೇಳ್ತಿದ್ದೇನೆ ಕೇಳಿ . ನಾಲ್ಕೈದು ಜನ ಲೀಡರುಗಳು ಮಾತ್ರ ಬನ್ನಿ . ಉಳಿದವರು ಹೊರಗಡೆ ಕೂತಿರಿ. ತಾಸೀಲ್ದಾರರು ನಿಮ್ಮತ್ರ ಮಾತಾಡುವುದಕ್ಕೇ ಕಾದು ಕುಳಿತಿದ್ದಾರೆ. ಎಲ್ಲರನ್ನೂ ಬಿಡೋದಿಕ್ಕೆ ಆಗೋದಿಲ್ಲ.’ ಎಸ್ಸೈ ಗದ್ದರಿಸಿದ.

ಕೂಗಾಟ, ನುಗ್ಗುವಿಕೆಯ ಎಳೆದಾಟ ನಡೆಯಿತು.

ಯಾರೋ ಒಬ್ಬ ಉದ್ದ ಕೋಲಿನಿಂದ ಎಸ್ಸೈ ತಲೆಗೆ ಮೊಟಕಿದ. ಪೊಲೀಸ್ ಹ್ಯಾಟು ಕೆಳಗೆ ಬಿತ್ತು. ತಲೆಗೇರಿಸಿಕೊಂಡ ಎಸ್ಸೈ , ‘
ಯಾರೋ ಅವನು? ಬದ್ಮಾಷ್ !’ ಆವಾಜ್ ಹಾಕಿದ.

ಮತ್ತೊಮ್ಮೆ ಅದೇ ಕೋಲು ಎಸ್ಸೈ ತಲೆಗೆ ಬಲವಾಗಿ ಮೊಟಕಿತು. ತಲೆಗೆ ಚುಚ್ಚಿದಂತಾಗಿ ರಕ್ತವೇ ಬಂತು. ನೋಡಿದರೆ ಆ ಉದ್ದ ಕೋಲಿಗೆ ಕಿಡಿಗೇಡಿ ಮೊಳೆ ಹೊಡೆದಿದ್ದಾನೆ! ‘

ಯಾವನಾದ್ರೂ ಕಾಲಿಟ್ರೆ ಹುಷಾರ್! ಷೂಟ್ ಮಾಡ್ತೀನಿ’ ಎಂದು ರಿವಾಲ್ವರ್ ತೋರಿಸಿ ಎಸ್ಸೈ ಅಬ್ಬರಿಸಿದ.

ಜನ ಕೊಂಚ ಹೆದರಿದಂತೆ ಕಂಡಿತು. ಚೇತರಿಸಿಕೊಂಡು ಪುನಃ ನೂಕು ನುಗ್ಗಲು ಶುರುವಾಯಿತು.

ಬೆದರಿಸಲೆಂದು ಎಸ್ಸೈ ಸಿಕಂದರ್ ಬಾಬಾ ಪಟೇಲ್ ರಿವಾಲ್ವರ್ ತೋರಿಸುತ್ತಾ , ಮರ್ಯಾದೆಯಾಗಿ ಹಿಂದಕ್ಕೆ ಹೋದರೆ ಸರಿ. ಇಲ್ಲದಿದ್ದರೆ ನೆಟ್ಟಗಾಗೋದಿಲ್ಲ ಎನ್ನುತ್ತಾ ಆಕಾಶಕ್ಕೆ ಎರಡು ಗುಂಡು ಹಾರಿಸಿದ.

ಹಿಮ್ಮೆಟ್ಟಿದಂತೆ ಕಂಡ ಜನ, ‘ ನಮ್ಮ ಮೇಲೇ ಗುಂಡ್ ಹಾರಸ್ತೀಯೇನೋ ಭಾಂಚೋತ್ !’ ಎಂದು ಮುಗಿ ಬಿದ್ದರು. ರಿವಾಲ್ವಾರನ್ನೇ ಕಸಿದು ಕೊಳ್ಳಲು ಎಳೆದಾಡಿದರು. ಆಗ ಇನ್ನೆರಡು ಗುಂಡುಗಳು ಹಾರಾಡಿದವು.

ಒಬ್ಬ ಕೆಳಗೆ ಕುಸಿದು ಬಿದ್ದ.

ಗಾಬರಿಗೊಂಡ ಪಟೇಲ್ ರಿವಾಲ್ವಾರನ್ನು ಆಕಾಶಕ್ಕೆ ಢಮ ಢಮ ಅನ್ನಿಸುತ್ತಾ ಓಡಿದ.

ಜನರೂ ಕ್ಷಣಕಾಲ ಅವಾಕ್ಕಾಗಿ ನಿಂತರು. ಒಬ್ಬನಂತೂ ರಕ್ತ ಕಾರುತ್ತ ಬಿದ್ದಿದ್ದ. ರೈತರ ಬಾಯಲ್ಲಿ ಐದು ಜನ ಸತ್ತರಂತೆ ಎಂಬ ಸುದ್ದಿ ಕಾಳ್ಗಿಚ್ಚಾಗಿ ಹಬ್ಬಿತು. ಅಲ್ಲಿದ್ದವರ ಕಿವಿಗೂ ಐದಾರು ಗುಂಡುಗಳ ಸಪ್ಪಳ ಸರಿಯಾಗಿ ಕೇಳಿಸಿತ್ತು. ಉದ್ರಿಕ್ತರಾದ ಜನ ಎಸ್ಸೈಯನ್ನು ಬೆನ್ನಟ್ಟಿದರು.

ಅವನೆಲ್ಲಿದ್ದಾನೆ ಎಸ್ಸೈ? ತಾಸೀಲ್ದಾರ್ ಕಛೇರಿ ಮುಂದಿದ್ದ ನೂರಾರು ಟ್ರ್ಯಾಕ್ಟರ್‌ಗಳನ್ನು ಬಳಸಿಕೊಂಡು ಕಾಲಿಗೆ ಬುದ್ದಿ ಹೇಳಿದ್ದ . ಅತ್ತ ಕಡೆಗಿದ್ದ ತಾಲ್ಲೂಕು ಆಸ್ಪತ್ರೆ ಕಾಂಪೌಂಡ್ ಜಿಗಿದು ಓಡಿದನೆಂದು ಯಾರೋ ಅಂದರು. ಆದರೆ ಯಾರೂ ನೋಡಿದವರಿಲ್ಲ. ಎಲ್ಲ ದಿಕ್ಕಿಗೂ ಜನ ಹುಡುಕುತ್ತ ನುಗ್ಗಿದರು. ಐವರು ರೈತರನ್ನು ಕಗ್ಗೊಲೆಗೈದ ಕೊಲೆಗಡುಕನನ್ನು ಸುಮ್ಮನೆ ಬಿಡುವುದುಂಟೇ?

ಆಸ್ಪತ್ರೆಗೆ ನುಗ್ಗಿದ ದಂಡು ವಾರ್ಡು , ರೂಮು ಎಲ್ಲವನ್ನೂ ತಡಕಿತು.

ಎಲ್ಲಿದ್ದಾನೆ ಕೊಲೆಗಾರ ಎಸ್ಸೈ?

ಈ ಕಡೆಗೆ ಯಾರೂ ಬರಲಿಲ್ಲವಲ್ಲಾ? ಎಂದರು ಡ್ಯೂಟಿ ನರ್ಸಮ್ಮ.
ಸರಿ ಬೇರೆಡೆ ಹುಡುಕೋಣವೆಂದು ದಂಡು ಹೊರಟಿತ್ತು. ಅಷ್ಟರಲ್ಲಿ ಒಬ್ಬನಿಗೆ ಮುಖದ ಪೂರ್ತಿ ಬೆಡ್ ಷೀಟು ಹೊದ್ದು ಉದ್ದಕ್ಕೆ ಮಲಗಿದ್ದ ಪೇಷಂಟ್ ಕಾಣಿಸಿದ. ಮಟಮಟ ಮಧ್ಯಾಹ್ನದ ಮೂರು ಗಂಟೆ ಬಿಸಿಲಿನಲ್ಲಿ ಇವನ್ಯಾರಪ್ಪಾ ಮುಖತುಂಬ ಹೊದ್ದು ಮಲಗವ್ನೆ ಅಂತ ಒಬ್ಬನಿಗೆ ಕುತೂಹಲ ಕೆದರಿತು. ಬೆಡ್ ಷೀಟು ತುದಿಗೆ ಚಾಚಿದ್ದ ಕೆಂಪು ಷೂ ಕಾಣಿಸಿತು. ಅರೇ? ಇವನ್ಯಾವನಲೇ ಪೇಷಂಟು? ಷೂ ಹಾಕ್ಕಂಡವನೇ ಎಂದವನೇ ಬೆಡ್ ಷೀಟು ಎಳೆದ.

ಗುಂಡು ಹಾರಿಸಿ ಕೊಂದ ಎಸ್ಸೈ ಮಲಗಿದ್ದಾನೆ! ಅವನ ಯೂನಿಫಾರಂ ಕೆಂಪು ಆಕ್ಸ್‌ಫರ್ಡ್ ಷೂ ಎದ್ದು ಕಾಣುತ್ತಿದೆ. ‘

ಹೆಣ್ಣಿಗನಂತೆ ಇಲ್ಲಿ ಅವಿತಿದ್ದೀಯಾ?’ ಎನ್ನುತ್ತಾ ಅವಾಚ್ಯವಾಗಿ ಬೈಯ್ಯುತ್ತಾ ಕ್ರುದ್ಧ ಜನರು ಎಸ್ಸೈ ಪಟೇಲನನ್ನು ಆಸ್ಪತ್ರೆ ಮುಂಭಾಗಕ್ಕೆ ದರದರ ಎಳೆತಂದರು.

ತಲೆಗೊಂದು ತಟಿಗೊಂದು ಹೊಡೆದು ಬಡಿದು ಒದ್ದರು. ಅವನನ್ನು ಅನಾಮತ್ತಾಗಿ ಎತ್ತಿ ಬಿಸುಡಿದರು. ಸೊಂಟ ಮುರಿಯಿತೋ ಏನೋ? ಒಂದು ಕಾಲು ಮೇಲೆತ್ತಿಕೊಂಡಿತು. ಅದನ್ನೇ ನಾಲ್ಕಾರು ಜನ ಎಳೆದು ತೋನಿದರು. ಮತ್ತೊಂದು ಕಾಲನ್ನು ಇನ್ನಿಬ್ಬರು ಬಲವಾಗಿ ಎಳೆದರು. ಅಕ್ಷರಶಃ ಜರಾಸಂಧನ ವಧೆಯಾದಂತೆ ಎರಡೂ ತೊಡೆಗಳೂ ಸೀಳಿ ಕರುಳು ಹೊರಬಂದಿತು. ಆದರೂ ಉದ್ರಿಕ್ತರ ಉರಿ ಶಮನವಾಗಲೊಲ್ಲದು. ಐವರನ್ನು ಕೊಂದ ಕೊಲೆಗಡುಕ ! ಒದ್ದು ಚೆಂಡಾಡಿ ಹೆಣವನ್ನೇ ಎತ್ತಿ ಮೇಲೊಗೆದರು. ನೆಲಕ್ಕೆ ಬಿದ್ದ ಹೆಣದ ಮೇಲೆ ಸೈಜುಕಲ್ಲು ಹಾಕಿಯೇ ಬಿಟ್ಟರು. ಬೆಂಕಿ ಹಚ್ಚಲಿದ್ದಾಗ ಪೊಲೀಸ್ ಪಡೆ ಬಂತು. (ಮುಂದುವರೆಯಲಿದೆ..)

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ