Light
Dark

ಬಹುತ್ವದ ಚಿಂತಕ ಮುಜಾಫರ್ ಅಸ್ಸಾದಿ

– ರಹಮತ್ ತರೀಕೆರೆ

ಭಾರತದ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಲ್ಲಿ ಹಲವಾರು ಮಾದರಿಯವರಿದ್ದಾರೆ. ಒಂದು: ಸಂಶೋಧನೆ ಮತ್ತು ಪಾಠಪ್ರವಚನಗಳಿಂದ ತಪ್ಪಿಸಿಕೊಂಡು, ವಿಶ್ವವಿದ್ಯಾನಿಲಯ ಇಲ್ಲವೆ ಸರ್ಕಾರದ ಬೇರೆಬೇರೆ ಅಧಿಕಾರ ಸ್ಥಾನಗಳಲ್ಲಿ ಇಡೀ ವೃತ್ತಿಜೀವನ ಮುಗಿಸುವವರು. ಎರಡು: ಒಳ್ಳೆಯ ಅಧ್ಯಾಪಕರಾಗಿರುತ್ತಾರೆ. ಆದರೆ ಸಂಶೋಧನೆ ಅಥವಾ ಬರವಣಿಗೆಯ ಕಲೆ ಇರುವುದಿಲ್ಲ. ಮೂರು: ಅತ್ಯುತ್ತಮ ಬೋಧನೆಯ ಜತೆ ಸಂಶೋಧನೆಯನ್ನೂ ಮಾಡುವವರು. ಇವರಲ್ಲಿ ಕೆಲವರ ಸಂಶೋಧನೆಯು ಸಂಶೋಧಕ ಸಮುದಾಯ ಸ್ತರವನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಸೃಷ್ಟಿಯಾಗುತ್ತದೆ. ಅದಕ್ಕೆ ಸಾಮಾನ್ಯ ಓದುಗರ ಜತೆ ನೇರ ಸಂಬಂಧ ಇರುವುದಿಲ್ಲ. ನಾಲ್ಕು: ಏಕಕಾಲಕ್ಕೆ ಬೋಧನೆ ಸಂಶೋಧನೆ ಮತ್ತು ಸಮಾಜ ಬದಲಾವಣೆಯ ಪ್ರಕ್ರಿಯೆಯಲ್ಲಿ ತೊಡಗಿಕೊಂಡವರು. ಇವರು ತಮ್ಮ ಸಂಶೋಧನೆಯ ಫಲಿತವನ್ನು ಸಾರ್ವಜನಿಕ ಉಪನ್ಯಾಸಗಳ ಅಥವಾ ಜನಪ್ರಿಯ ಬರಹಗಳ ಮೂಲಕ ಸಾಮಾನ್ಯ ಓದುಗರಿಗೆ ಸರಳವಾದ ಭಾಷೆಯಲ್ಲಿ ಹಂಚಿಕೊಳ್ಳುವವರು; ಅದನ್ನು ನಾಡಿನ ಸಾಮಾಜಿಕ ರಾಜಕೀಯ ಚಳವಳಿಗಳಲ್ಲಿಯೂ ತೊಡಗಿಸುವವರು. ಆ ಜ್ಞಾನವು ಸರ್ಕಾರದ ನೀತಿನಿರೂಪಣೆಯಲ್ಲಿ ಉಪಯೋಗವಾಗುವಂತೆ ಮಾಡುವವರು. ವಿದ್ವತ್ತಿನ ಈ ಮಾದರಿಯನ್ನು ಜ್ಞಾನದ ಬಹುಸ್ತರೀಯ ಅಥವಾ ಜನೋಪಯೋಗಿ ಮಾದರಿ ಎನ್ನಬಹುದು.

ಡಿ.ಆರ್.ನಾಗರಾಜ್, ಕಾಂಚ ಐಲಯ್ಯ, ಆನಂದ ತೇಲ್ತುಂಬ್ಡೆ, ಗಣೇಶ್ ಎನ್.ದೇವಿ, ಯೋಗೇಂದ್ರ ಯಾದವ್, ವಸು ಮಳಲಿ, ಎ.ನಾರಾಯಣ, ಮುಜಾಫರ್ ಅಸ್ಸಾದಿ ಮೊದಲಾದವರು ಈ ಮಾದರಿಯವರು. ಪತ್ರಕರ್ತರಲ್ಲಿ ಪಿ.ಸಾಯಿನಾಥ್ ಅವರು ಈ ಮಾದರಿಗೆ ನೆನಪಾಗುತ್ತಾರೆ.

ಅಸ್ಸಾದಿಯವರು ವಿದ್ಯಾರ್ಥಿಸ್ನೇಹಿಯಾದ ಪ್ರಾಧ್ಯಾಪಕರೆಂದು ಕೇಳಿರುವೆ. ಜತೆಗೆ ಅವರು ತಮ್ಮ ಜನೋಪಯೋಗಿ ಸಂಶೋಧನೆ, ಉಪನ್ಯಾಸ ಮತ್ತು ಬರೆಹಗಳಿಂದಾಗಿ ಶೈಕ್ಷಣಿಕ ವಲಯದಲ್ಲಿ ಮಾತ್ರವಲ್ಲ, ಸಾರ್ವಜನಿಕ ಬದುಕಿನಲ್ಲಿಯೂ ದೊಡ್ಡಸಂಖ್ಯೆಯ ಸಂಗಾತಿಗಳು, ಓದುಗರು, ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರ ಈ ವ್ಯಕ್ತಿತ್ವಕ್ಕೆ ಅವರು ಜೆಎನ್‌ಯುನಲ್ಲಿ ಕಲಿತಿದ್ದು ಕೂಡ ಒಂದು ಕಾರಣವಿರಬಹುದು. ಇದರಿಂದ ಕನ್ನಡಿಗನೊಬ್ಬ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಕರ್ನಾಟಕದ ಬಗೆಗಿನ ತಿಳಿವನ್ನು ಹಂಚಿಕೊಳ್ಳುವುದು; ಕರ್ನಾಟಕದ ಹಳ್ಳಿಗಾಡು ಮತ್ತು ಕಾಡುಪ್ರದೇಶಗಳಿಗೆ ಹೋಗಿ ಬುಡಕಟ್ಟು ಜನರೊಂದಿಗೆ ಸಂವಾದ ಮಾಡುವುದು; ಅಲ್ಲಿ ಪಡೆದ ಅನುಭವ ಮತ್ತು ಜ್ಞಾನವನ್ನು ಪ್ರಭುತ್ವದ ನೀತಿನಿರೂಪಣ ಸಭೆಗಳಲ್ಲಿ ಹಂಚಿಕೊಳ್ಳುವುದು ಸಾಧ್ಯವಾಯಿತು.

ಅಸ್ಸಾದಿಯವರು ಮೂಲತಃ ಕರ್ನಾಟಕದ ಕರಾವಳಿ ಸೀಮೆಯವರು. ಭಾರತದಲ್ಲಿ ಕರಾವಳಿಯು ಅತಿಹೆಚ್ಚು ಜನಭಾಷೆಗಳು, ಹಲವಾರು ಆದಿವಾಸಿಗಳು, ವಿಭಿನ್ನ ಧರ್ಮಗಳು, ಆಹಾರ ಪದ್ಧತಿಗಳು ಇರುವ ವಿಶಿಷ್ಟ ಪ್ರದೇಶವಾಗಿದೆ. ಇದು ದುರದೃಷ್ಟವಶಾತ್ ಏಕರೂಪೀ ಸಂಸ್ಕೃತಿ ಹೇರಿಕೆಯ ಮತ್ತು ಮಹಿಳೆಯರ, ಅಲ್ಪಸಂಖ್ಯಾತರ ಮಾನವ ಹಕ್ಕುಗಳನ್ನು ದಮನಿಸುವ ಪ್ರಯೋಗಶಾಲೆಯೂ ಆಗಿಬಿಟ್ಟಿದೆ. ಇಂತಹ ಸಾಮಾಜಿಕ ವಾಸ್ತವ ಮತ್ತು ಸೈದ್ಧಾಂತಿಕ ಪ್ರಯೋಗಶಾಲೆಯ ಹಿನ್ನೆಲೆಯ ಪ್ರದೇಶದಿಂದ ಬಂದ ಅಸ್ಸಾದಿ, ಜಿ.ರಾಜಶೇಖರ, ಪುರುಷೋತ್ತಮ ಬಿಳಿಮಲೆ, ಚಂದ್ರಪೂಜಾರಿ, ದಿನೇಶ್ ಅಮಿನ್‌ಮಟ್ಟು, ಪಟ್ಟಾಭಿರಾಮ ಸೋಮಯಾಜಿ, ಸಂವರ್ತ ಸಾಹಿಲ್ ಮೊದಲಾದ ಚಿಂತಕರ ಮಾತು ಮತ್ತು ಬರೆಹಗಳಲ್ಲಿ ಭಾರತದ ಆತ್ಮದಂತಿರುವ ಬಹುತ್ವ ತತ್ವವು ಪ್ರತಿಪಾದಿತವಾಗಿದೆ. ಈ ತತ್ವಕ್ಕೆ ಮೂಲಭೂತವಾದ ಮತ್ತು ಮತೀಯವಾದ ಎರಡನ್ನೂ ಪ್ರತಿರೋಧಿಸುವ ಶಕ್ತಿಯೂ ಒದಗಿದೆ. ಇದಕ್ಕೆ ಬೇಕಾಗಿ ಅಸ್ಸಾದಿಯವರಿಗೆ ಉರ್ದು, ತುಳು, ಕನ್ನಡ, ಇಂಗ್ಲೀಷ್ ಭಾಷೆಗಳಲ್ಲಿ ಪ್ರಭುತ್ವವಿದೆ. ಈ ಭಾಷಿಕ ಬಹುತ್ವವು ಅವರನ್ನು ಸಾಂಸ್ಕೃತಿಕ ಬಹುತ್ವವನ್ನು ಪ್ರತಿಪಾದಿಸುವಂತೆ ಮಾಡಿದೆ ಕೂಡ.

ಅನೇಕ ಸಲ ಕೋಮುಸೌಹಾರ್ದ ಅಥವಾ ಮತೀಯವಾದ ವಿರೋಧಿಸುವ ಚಿಂತನೆಯು, ಸಮಾಜದಲ್ಲಿ ಆಳವಾಗಿರುವ ವರ್ಗಭೇದ ಮತ್ತು ಸಾಮಾಜಿಕ ತಾರತಮ್ಯದ ಆಯಾಮಗಳನ್ನು ಅರ್ಥ ಮಾಡಿಕೊಳ್ಳದೆ ಇಲ್ಲವೇ ಪರಿಗಣಿಸದೇ ಹೋಗುವ ಸಾಧ್ಯತೆಗಳಿವೆ. ಅಸ್ಸಾದಿಯವರ ಸಂಶೋಧನ ಬರೆಹ ಮತ್ತು ಉಪನ್ಯಾಸಗಳ ವಿಶೇಷತೆಯೆಂದರೆ, ಅವು ನಮ್ಮ ಸಮಾಜದ ಬಡತನ ಮತ್ತು ಸಾಮಾಜಿಕ ಭೇದಗಳನ್ನು, ಅವುಗಳ ನಡುವಿರುವ ಅಂತಃಸಂಬಂಧವನ್ನು ಮರೆಯುವುದಿಲ್ಲ. ಅವನ್ನು ಎಚ್ಚರಿಕೆಯಿಂದ ಗುರುತಿಸುತ್ತವೆ ಮತ್ತು ವಿಶ್ಲೇಷಿಸುತ್ತವೆ. ಸಮಸ್ಯೆಯಿಂದ ಹೊರಬರುವ ಕಾರ್ಯಸಾಧ್ಯವಾದ ಸಲಹೆ ಸೂಚನೆಗಳ ಮೂಲಕ ಮುಗಿಯುತ್ತವೆ.

ಈ ದೃಷ್ಟಿಯಿಂದ ಮುಸ್ಲೀಮರಲ್ಲಿರುವ ಪಂಗಡ ಅಥವಾ ಜಾತಿಪದ್ಧತಿಯನ್ನು ಕುರಿತ ಅಸ್ಸಾದಿಯವರ ‘ಅಲ್ಪಸಂಖ್ಯಾತರು ಮತ್ತು ಜಾತಿವ್ಯವಸ್ಥೆ’ ಪುಸ್ತಕವು ಅತ್ಯುತ್ತಮ ನಿದರ್ಶನವಾಗಿದೆ. ಈ ಪುಸ್ತಕದಲ್ಲಿರುವ 408 ಅಡಿ ಟಿಪ್ಪಣಿಗಳು ಮತ್ತು ಅಲ್ಲಿ ಉಲ್ಲೇಖಗೊಂಡಿರುವ ಕೃತಿಗಳು, ಅಸ್ಸಾದಿಯವರ ವ್ಯಾಪಕವಾದ ಅಧ್ಯಯನದ ಪ್ರತೀಕವಾಗಿವೆ.

ಇದು ಜಗತ್ತಿನ ಮುಸ್ಲಿಮರೆಲ್ಲ ಒಂದೇ, ಮುಸ್ಲಿಮರಲ್ಲಿ ಜಾತಿ ವ್ಯವಸ್ಥೆ ಇಲ್ಲ ಎಂದು ನಂಬಿರುವ ಮತ್ತು ಪ್ರತಿಪಾದಿಸುವ ಮಹನೀಯರಿಗೆ ಅಷ್ಟೇನು ಪ್ರಿಯವಾದ ಪುಸ್ತಕಲ್ಲ. ಆದರೆ ಒಬ್ಬ ವಿದ್ವಾಂಸ ತನ್ನ ಸಮುದಾಯಕ್ಕೆ ತನ್ನ ಬೌದ್ಧಿಕತೆಯಿಂದ ಸೇವೆ ಸಲ್ಲಿಸುವ ವಿಧಾನವೆಂದರೆ, ಅದರೊಳಗಿರುವ ವೈರುಧ್ಯಗಳನ್ನು ಕಹಿಸತ್ಯಗಳನ್ನು ಬಹಿರಂಗಪಡಿಸುವುದು; ತನ್ನ ಸಮುದಾಯದೊಳಗಿನ ದಮನಿತ ಸ್ತರ/ವರ್ಗಗಳಿಗೆ ಸಾಮಾಜಿಕ, ಆರ್ಥಿಕ, ನ್ಯಾಯ ಸಿಗುವ ದಿಸೆಯಲ್ಲಿ ನೆರವಾಗುವುದು; ಅವರ ನಿಜವಾದ ಎದುರಾಳಿಗಳ ಬಗ್ಗೆ ಎಚ್ಚರವನ್ನು ಕೊಡುವುದು. ಅವರನ್ನು ಕುರಿತು ಪ್ರಭುತ್ವವನ್ನು ಸಂವೇದನಶೀಲಗೊಳಿಸುವುದು; ಈ ಹಿನ್ನೆಲೆಯಲ್ಲಿ ಅಸ್ಸಾದಿಯವರು ಲಿಂಗಾಯತ ಧರ್ಮದ ಸಮಿತಿಯಲ್ಲಿ ಕೆಲಸ ಮಾಡಿದ್ದನ್ನು; ಮೈಸೂರು ಸೀಮೆಯ ಕಾಡುಗಳಲ್ಲಿರುವ ‘ಅದಿವಾಸಿಗಳ ಸ್ಥಳಾಂತರ ಮತ್ತು ಪುನರ್‌ವಸತಿ’ ಕುರಿತಂತೆ ಉಚ್ಚನ್ಯಾಯಾಲಯವು ನೇಮಿಸಿದ ಸಮಿತಿಯ ಅಧ್ಯಕ್ಷರಾಗಿ ಅವರು ಕೊಟ್ಟ ವರದಿಯನ್ನು; ರೈತರ ಆತ್ಮಹತ್ಯೆ ಮತ್ತು ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ನಡೆಸಿದ ಅಧ್ಯಯನವನ್ನು; ಚುನಾವಣೆಗಳಲ್ಲಿ ದಮನಿತ ಸಮುದಾಯಗಳು ಮತದಾನ ಮಾಡುವ ಪ್ರವೃತ್ತಿಯನ್ನು ಕುರಿತ ವಿಶ್ಲೇಷಣೆಗಳನ್ನು ಗಮನಿಸಬಹುದು.

ಕೆಲವು ವರ್ಷಗಳ ಹಿಂದೆ ನಾವ, ಕರ್ನಾಟಕದ ಲೇಖಕರು, ವಕೀಲರು, ಪತ್ರಕರ್ತರು, ಚಳವಳಿಗಾರರು ಸೇರಿಕೊಂಡು ‘ಮುಸ್ಲಿಂ ಚಿಂತಕರ ಚಾವಡಿ’ ಎಂಬ ಸಂಘಟನೆ ಕಟ್ಟಿದೆವು. ಮುಜಾಫರ್ ಅಸ್ಸಾದಿಯವರು ಅದರ ಪ್ರಥಮ ಅಧ್ಯಕ್ಷರಾಗಿ ಮಾಡಿದ ಮೊದಲನೇ ಕಾರ್ಯಕ್ರಮವೆಂದರೆ, ಭಾರತದ ಮುಸ್ಲಿಮರ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಅವಸ್ಥೆಯ ಬಗ್ಗೆ ಜಸ್ಟೀಸ್ ಸಾಚಾರ್ ಅವರು ಕೊಟ್ಟಿರುವ ವರದಿಯ ಮೇಲೆ ಚರ್ಚೆ ಏರ್ಪಡಿಸಿದ್ದು. ಭಾರತದ ಮುಸ್ಲಿಮರಿಗೆ ತುರ್ತು ಅಗತ್ಯ ಇರುವುದು ಮಸೀದಿಗಳಲ್ಲ. ಘನತೆಯಿಂದ ಬದುಕುವ ಆರ್ಥಿಕ ಹಾಗೂ ಸಾಮಾಜಿಕ ಬದುಕು. ರಾಜಕೀಯ ಪ್ರಾತಿನಿಧ್ಯ ಎಂಬುದು ಅವರ ನಂಬಿಕೆ. ಅವರಿಗೆ ಸಾಮಾಜಿಕ ಕ್ರಿಯಾಶೀಲತೆಗೆ ಮತ್ತು ಸಾಮುದಾಯಿಕ ಸಂಘಟನೆಗೆ ತಮ್ಮ ಸಂಶೋಧ ನೆಯ ಬಲದಿಂದ ಚಿಂತನೆಯ ಚೌಕಟ್ಟು ಕೊಡುವ ವಿಶಿಷ್ಟ ತರಬೇತಿಯಿದೆ. ಚಾರಿತ್ರಿಕ ಅರಿವಿನಿಂದ ಕೂಡಿರುವ ಈ ಚೌಕಟ್ಟಿಗೆ ವರ್ತಮಾನವನ್ನು ಬದಲಿ ಸುವ ಕಳಕಳಿಯಿದೆ. ಅವರ ಅಧ್ಯಯನಗಳು ಚರಿತ್ರೆ, ಸಮಾಜ ವಿಜ್ಞಾನ, ರಾಜಕೀಯಶಾಸ್ತ್ರ, ಮಾನವಶಾಸ್ತ್ರಗಳ ಬಹುಶಿಸ್ತೀಯ ತಿಳಿವಳಿಕೆಯಿಂದ ರೂಪುಗೊಂಡಿರುವುದೇ ಇದಕ್ಕೆ ಕಾರಣ.

ಅಸ್ಸಾದಿಯವರ ಈ ಬಹುಶಿಸ್ತೀಯ ಮತ್ತು ಜನಪರ ವಿದ್ವತ್ತಿನ ತಾರ್ಕಿಕ ಆಯಾಮವೇ ಅವರು ಪತ್ರಿಕೆಗಳಲ್ಲಿ ಲೇಖನ-ಅಂಕಣ ಬರೆಯುವುದು. ಕನ್ನಡದಲ್ಲಿ ಸಾಹಿತ್ಯದ ಹಿನ್ನೆಲೆಯವರಿಗೆ ಹೋಲಿಸಿದರೆ, ಸಮಾಜ ವಿಜ್ಞಾನದ ಹಿನ್ನೆಲೆಯವರು ಕನ್ನಡದಲ್ಲಿ ತಮ್ಮ ತಿಳಿವಳಿಕೆಯನ್ನು ಪತ್ರಿಕೆಗಳಲ್ಲಿ ಹಂಚಿಕೊಳ್ಳುವುದು ಇಲ್ಲವೇ ಟಿವಿ ಚರ್ಚೆಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ. ಆದರೆ ಅಸ್ಸಾದಿಯವರು ಇದಕ್ಕೆ ಅಪವಾದ. ಅವರ ಪತ್ರಿಕಾ ಲೇಖನಗಳು ಬಹಳ ಜನಪ್ರಿಯವಾಗಿವೆ. ಅವರ ಅಂಕಣ ಬರೆಹಗಳಿಗೆ ಮಾಧ್ಯಮ ಅಕಾಡೆಮಿಯ ಬಹುಮಾನ ಬಂದಿದ್ದು ಸಹಜವಾಗಿವೆ.

ಜೆಎನ್‌ಯು ಮತ್ತು ಶಿಕಾಗೊ ವಿಶ್ವವಿದ್ಯಾನಿಲಯಗಳಲ್ಲಿ ಕಲಿತ, ಮಂಗಳೂರು, ಗೋವಾ ಮತ್ತು ಮೈಸೂರು ವಿಶ್ವವಿದ್ಯಾಲಯಗಳಲ್ಲಿ ನಾಲ್ಕು ದಶಕಗಳ ಕಾಲ ಸಹಸ್ರಾರು ವಿದ್ಯಾರ್ಥಿಗಳಿಗೆ ಕಲಿಸಿದ, ಜಗತ್ತಿನ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಕರ್ನಾಟಕ ಕುರಿತ ತಮ್ಮ ಜ್ಞಾನವನ್ನು ಹಂಚಿಕೊಂಡ, ರಾಜ್ಯಶಾಸ್ತ್ರ ಮತ್ತು ಸಮಾಜ ವಿಜ್ಞಾನಗಳ ತಿಳಿವಳಿಕೆಯನ್ನು ನಾಡಿನ ಓದುಗರಿಗೆ ಅಂಕಣಗಳ ಮೂಲಕ ಉಣಬಡಿಸಿದ ಪ್ರೊ.ಅಸ್ಸಾದಿಯವರು, ಇಂದು (30.8.2023) ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಅವರ ತಿಳಿವಳಿಕೆಯು, ಸಮಾನತೆಯ ಕರ್ನಾಟಕವನ್ನು ಕಟ್ಟಲು ನೆರವಾಗಿದೆ ಮತ್ತು ಮುಂದೆ ಕೂಡ ನೆರವಾಗಲಿದೆ ಎಂದು ನನಗೆ ನಂಬುಗೆಯಿದೆ. ‘ಜ್ಞಾನದ ಬಹುಸ್ತರೀಯ ಅಥವಾ ಜನೋಪಯೋಗಿ ಮಾದರಿ’ ಎಂದೂ ವಿರಮಿಸುವುದಿಲ್ಲ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ