Mysore
24
haze

Social Media

ಶನಿವಾರ, 06 ಡಿಸೆಂಬರ್ 2025
Light
Dark

ಬರಲಿವೆ ಚುಚ್ಚುಮದ್ದು ರಹಿತ ಇನ್ಸುಲಿನ್

needle free insulin

ಡಾ.ಮಾದೇಶ್ ಮಂಜುನಾಥ, ವೈದ್ಯರು

ಅಫ್ರೆಝಾ, ಒಂದು ಅತ್ಯಾಧುನಿಕ, ಶರವೇಗದಲ್ಲಿ ಕಾರ್ಯನಿರ್ವಹಿಸುವ ಚುಚ್ಚುಮದ್ದು ರಹಿತ ಇನ್ಹೇಲ್ ಪೌಡರ್ ಇನ್ಸುಲಿನ್. ಅತಿವೇಗದಲ್ಲಿ ಅಂದರೆ ಸುಮಾರು ಹದಿನೈದು ನಿಮಿಷದಲ್ಲಿ ರಕ್ತದ ಗ್ಲೂಕೋಸ್ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ.

ಇದನ್ನು ಮಧುಮೇಹಿಗಳು ಬಾಯಿಯ ಮುಖೇನ ಎಳೆದು ಉಸಿರಿನ ಮುಖಾಂತರ ಪುಡಿಯ ರೂಪದಲ್ಲಿ ಬಳಸಬಹುದಾಗಿದೆ. ಇದನ್ನು ಟೈಪ್ ೧ ಇನ್ಸುಲಿನ್  ಅವಲಂಬಿತ ಮಧುಮೇಹಿಗಳು ಮತ್ತು ಟೈಪ್ ೨ ಇನ್ಸುಲಿನ್ ಅವಲಂಬಿತವಲ್ಲದ ಮಧುಮೇಹಿಗಳಲ್ಲೂ ಬಳಸಬಹುದಾದ ಸರಳ ವಿಧಾನ.

ಇನ್ಸುಲಿನ್ ಎಂಬುದು ಮೇದೋಜ್ಜೀರಕ ಗ್ರಂಥಿಯಲ್ಲಿ ಉತ್ಪತ್ತಿಯಾಗಿ ಸಂಗ್ರಹವಾಗಿರುವ ಒಂದು ಹಾರ್ಮೋನ್. ಇದು ರಕ್ತದ ಗ್ಲುಕೋಸ್ ಅಂಶವನ್ನು ನಿಯಂತ್ರಣದಲ್ಲಿಡುವ ಮತ್ತು ದೇಹದಲ್ಲಿ ಕಿಣ್ವ ಚಟುವಟಿಕೆ ಮತ್ತು ಅದರಿಂದ ಉಂಟಾಗುವ ಪ್ರತಿಕ್ರಿಯೆಗಳನ್ನು ಹೆಚ್ಚಿಸುವುದು ಅಮೈನೋ ಆಮ್ಲಗಳ ಹೀರಿಕೊಳ್ಳುವಿಕೆ, ಡಿಎನ್‌ಎ ಪ್ರತಿಕೃತಿ ಮತ್ತು ಪ್ರೋಟೀನ್ ಸಂಶ್ಲೇಷಣೆಯಲ್ಲಿ ಸಹಾಯ ಮಾಡುತ್ತದೆ. ಇದು ಲಿಪಿಡ್‌ಗಳನ್ನು ಕೊಬ್ಬಿನ ಕೋಶಗಳಾಗಿ ತೆಗೆದುಕೊಂಡು ಟ್ರೈಗ್ಲಿಸರೈಡ್‌ಗಳಾಗಿ ಪರಿವರ್ತಿಸುವ ಮೂಲಕ ದೇಹದಲ್ಲಿ ಲಿಪಿಡ್ ಸಂಶ್ಲೇಷಣೆಯನ್ನು ನಿರ್ವಹಿಸುತ್ತದೆ.

ಇನ್ಸುಲಿನ್ ದೇಹದಲ್ಲಿ ಉತ್ಪತ್ತಿ ಆಗದೆ ಇರುವ ಸ್ಥಿತಿಗೆ ಟೈಪ್ ೧ ಇನ್ಸುಲಿನ್ ಅವಲಂಬಿತ ಮಧುಮೇಹವೆಂದು, ಇದು ಸಾಮಾನ್ಯವಾಗಿ ಬಾಲ್ಯ ಅಥವಾ ಹದಿಹರೆಯದಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಇದಕ್ಕೆ ಜೀವನ ಪೂರ್ತಿ ಇನ್ಸುಲಿನ್ ಅಗತ್ಯವಿರುತ್ತದೆ.

ಟೈಪ್ ೨ ಇನ್ಸುಲಿನ್ ಅವಲಂಬಿತವಲ್ಲದ ಮಧುಮೇಹವು ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿ ಬಳಸಲು ಸಾಧ್ಯವಾಗದಿದ್ದಾಗ ಅಥವಾ ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾಗದೆ ಇರುವ ಸ್ಥಿತಿಯಾಗಿದೆ. ಟೈಪ್ ೧ ಮಧುಮೇಹಕ್ಕೆ ನಿಖರವಾದ ಕಾರಣವೇನೆಂದು ಇನ್ನೂ ತಿಳಿದು ಬಂದಿರುವುದಿಲ್ಲ. ಅನುವಂಶಿಕತೆ ಮತ್ತು ಪರಿಸರ ಅಂಶಗಳು ಇದರಲ್ಲಿ ಪಾತ್ರ ವಹಿಸಬಹುದು.

ದೇಹದ ರೋಗನಿರೋಧಕ ವ್ಯವಸ್ಥೆಯು ಇನ್ಸುಲಿನ್ ಉತ್ಪಾದಿಸುವ ಮೇದೋಜ್ಜೀರಕ ಗ್ರಂಥಿಯ ಕೋಶಗಳ ಮೇಲೆ ದಾಳಿ ಮಾಡಿ ನಾಶಪಡಿಸುತ್ತದೆ. ಇನ್ಸುಲಿನ್ ಶಕ್ತಿಗಾಗಿ ಗ್ಲೂಕೋಸ್ ಜೀವಕೋಶಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಗ್ಲೂಕೋಸ್ ಜೀವಕೋಶಗಳನ್ನು ಪ್ರವೇಶಿಸಲು ಸಾಧ್ಯವಾಗದಿದ್ದಾಗ, ಅದು ರಕ್ತದಲ್ಲಿ ಸಂಗ್ರಹವಾಗುತ್ತದೆ. ನಂತರ ಜೀವಕೋಶಗಳಿಗೆ ಸಾಕಷ್ಟು ಪೋಷಣೆ ಸಿಗುವುದಿಲ್ಲ. ಇದು ಅಧಿಕ ರಕ್ತದ ಸಕ್ಕರೆಗೆ ಕಾರಣವಾಗುತ್ತದೆ.

ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಬಳಸಲು ಸಾಧ್ಯವಾಗದಿದ್ದಾಗ ಮತ್ತು ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ಟೈಪ್ ೨ ಮಧುಮೇಹ ಬರುತ್ತದೆ. ಇದನ್ನು ಒಂದು ಕಾಲದಲ್ಲಿ ವಯಸ್ಕರ ಮಧುಮೇಹ ಎಂದು ಕರೆಯಲಾಗುತ್ತಿತ್ತು.

ಟೈಪ್ ೨ ಮಧುಮೇಹದಲ್ಲಿ ಅಧಿಕ ರಕ್ತದ ಸಕ್ಕರೆ ಮಟ್ಟವು ಕಣ್ಣುಗಳು, ಮೂತ್ರಪಿಂಡಗಳು, ನರಗಳು ಮತ್ತು ಹೃದಯಕ್ಕೆ ಹಾನಿಯನ್ನುಂಟುಮಾಡಬಹುದು. ಮೇದೋಜ್ಜೀರಕ ಗ್ರಂಥಿಯು ಸಕ್ಕರೆಯನ್ನು ಜೀವಕೋಶಗಳಿಗೆ ಪ್ರವೇಶಿಸಲು ಸಹಾಯ ಮಾಡುವ ಇನ್ಸುಲಿನ್ ಎಂಬ ಹಾರ್ಮೋನ್ ಅನ್ನು ಸಾಕಷ್ಟು ಉತ್ಪಾದಿಸದ ಕಾರಣ ಇದು ಸಂಭವಿಸಬಹುದು. ದೀರ್ಘಕಾಲದ ಅನಿಯಂತ್ರಿತ ಮಧುಮೇಹದಿಂದ ಹೃದಯರಕ್ತನಾಳದ ಕಾಯಿಲೆ, ಅಪಧಮನಿ ಕಾಠಿಣ್ಯ, ಪಾರ್ಶ್ವವಾಯು, ಬಾಹ್ಯ ಅಪಧಮನಿ ಕಾಯಿಲೆ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಂತಹ ತೊಡಕುಗಳನ್ನು ಬೆಳೆಸುವ ಅಪಾಯವನ್ನು ಹೆಚ್ಚಿಸುತ್ತದೆ. ಶಾಶ್ವತ ಅಂಧತ್ವಕೂಡ ಕಾಡಬಹುದು.

ಚಿಕಿತ್ಸಾ ವಿಧಾನ, ಇನ್ಸುಲಿನ್ ಒಂದು ಜೀವ ಉಳಿಸುವ ಔಷಧವಾಗಿದೆ. ಮಾನವ ನಿರ್ಮಿತ ಇನ್ಸುಲಿನ್‌ನ ಪರಿಕಲ್ಪನೆ ನೂರು ವರ್ಷಗಳ ಹಿಂದೆ ಆದರೂ ೧೯೮೨ ರಲ್ಲಿ ವೈದ್ಯಕೀಯ ಉದ್ದೇಶಗಳಿಗೆ ಬಳಸಲು ಅನುಮೋದನೆ ನೀಡಲಾಯಿತು. ಮಾನವ ಇನ್ಸುಲಿನ್ ಪ್ರಯೋಗಾಲಯದಲ್ಲಿ ಬೆಳೆಸಲಾಗುವ ಒಂದು ಸಂಶ್ಲೇಷಿತ ಇನ್ಸುಲಿನ್ ಆಗಿದೆ. ಅಮೆರಿಕಾದ ಆಹಾರ ಮತ್ತು ಔಷದ ಆಡಳಿತವು(ಎಫ್‌ಡಿಎ) ಮೊದಲ ಬಾರಿಗೆ ಟೈಪ್ ೧ ಮಧುಮೇಹಿಗಳಲ್ಲಿ ಇನ್ಸುಲಿನ್ ಬಳಕೆಗೆ ಅನುಮತಿ ನೀಡಿತು.

ಸುಮಾರು ೪೩ ವರ್ಷಗಳಿಂದ ಇನ್ಸುಲಿನ್ ಚಿಕಿತ್ಸಾ ವಿಧಾನವಾಗಿ ಜಗತ್ತಿನಾದ್ಯಂತ ಟೈಪ್ ೧ ಮಧುಮೇಹಿಗಳಿಗೆಜೀವ ಸಂಜೀವಿನಿಯಾಗಿ ಮತ್ತು ಟೈಪ್ ೨ ಮಧುಮೇಹಿಗಳಿಗೂ ಬಳಕೆ ಮಾಡಲಾಗುತ್ತಿದೆ. ಜಾಗತಿಕವಾಗಿ ಇನ್ಸುಲಿನ್‌ಗಳನ್ನು ಮಧುಮೇಹಿಗಳಿಗೆ ಚುಚ್ಚುಮದ್ದಿನ ಮುಖಾಂತರ ನೀಡಲಾಗುತ್ತಿದೆ. ಸುಮಾರು ೪೩ ವರ್ಷಗಳಿಂದ ಸೂಜಿಗಳ ಮುಖಾಂತರ ಇನ್ಸುಲಿನ್ ಗಳನ್ನು ನೀಡಲಾಗುತ್ತಿದೆ. ಇದರಿಂದ ಮಧುಮೇಹಿಗಳು ಕೆಲವು ಅಡ್ಡಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಮುಖ್ಯವಾಗಿ ಚುಚ್ಚಿದ ಜಾಗದಲ್ಲಿ ಎರಿತೆಮಾ, ತುರಿಕೆ, ಬೊಕ್ಕೆ ಮತ್ತು ಊತಗಳಾಗ ಬಹುದು. ಇದಕ್ಕೆಲ್ಲಾ ಅಂತಿಮವಾಗಿ ತೆರೆಬೀಳುವ ಕಾಲ ಈಗ ಕೂಡಿ ಬಂದಿದೆ.

ಇನ್ನು ಮುಂದೆ ಇನ್ಸುಲಿನ್‌ಗಳನ್ನು ಉಸಿರಿನ ಮುಖೇನ ತೆಗೆದುಕೊಳ್ಳುವ ಸುಲಭ ವಿಧಾನ ವಿಜ್ಞಾನಿಗಳ ಅವಿರತ ಪರಿಶ್ರಮದ ಫಲವಾಗಿ ಬಳಕೆಗೆ ಬರಲಾಗುತ್ತಿದೆ. ಇದೇ ‘ಅಫ್ರೆಝಾ‘ ಇನ್ಸುಲಿನ್. ಇದು ಒಂದು ಚುಚ್ಚು ಮದ್ದು ರಹಿತ ಪುಡಿ ರೂಪದಲ್ಲಿ ಬರುವ ಇನ್ಸುಲಿನ್ ಇದನ್ನ ಉಸಿರಿನಮುಖೇನ ಬಳಸಬಹುದಾಗಿದೆ. ಇನ್ಹೇಲರ್ ರೀತಿ ಬಳಸಬಹುದಾಗಿದೆ. ಅಮೆರಿಕ ಮುಂತಾದ ರಾಷ್ಟ್ರಗಳಲ್ಲಿ ಈಗಾಗಲೇ ಇದರ ಬಳಕೆ ಇದ್ದು ಭಾರತದಲ್ಲಿ ಇದರ ಬಳಕೆಗೆ ಅನುಮತಿ ನೀಡಲಾಗಿದೆ.

ಭಾರತದ ಮೊದಲ ಇನ್ಹೇಬಲ್ ಇನ್ಸುಲಿನ್, ಅಫ್ರೆಝಾವನ್ನು ಸಿಪ್ಲಾ ಔಷದ ಸಂಸ್ಥೆಯವರು ಅಭಿವೃದ್ಧಿಪಡಿಸಲಿದ್ದಾರೆ. ೨೦೧೪ರಲ್ಲಿ ಅಮೆರಿಕದಲ್ಲಿ ಮ್ಯಾನ್ ಕೈಂಡ್ ಔಷಧ ಸಂಸ್ಥೆ ಅಭಿವೃದ್ಧಿಪಡಿಸಿ ಇದಕ್ಕೆ ಯುಎಸ್ (ಎಫ್‌ಡಿಅ)ಅನುಮತಿ ನೀಡಲಾಗಿ ಯಶಸ್ವಿಯಾಗಿ ಬಳಕೆಯಾಗುತ್ತಿದೆ. ಅಫ್ರೆಝಾ ಇನ್ಸುಲಿನ್ ಮಧುಮೇಹವನ್ನು ನಿರ್ವಹಿಸಲು ಮತ್ತು ಲಕ್ಷಾಂತರ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲು ಸೂಜಿ-ಮುಕ್ತ, ವೇಗವಾಗಿ ಕಾರ್ಯನಿರ್ವಹಿಸುವ ಪರಿಹಾರವನ್ನು ನೀಡುತ್ತದೆ.

ಅಫ್ರೆಝಾ, ಇನ್ಸುಲಿನ್ ಬಳಕೆಯಲ್ಲಿಯೂ ಮಿತಿಗಳಿವೆ. ಅಸ್ತಮಾ ಮತ್ತು ಶ್ವಾಸಕೋಶ ತೊಂದರೆ ಇರುವ ರೋಗಿಗಳಿಗೆ ಇದರ ಬಳಕೆ ನಿಷಿದ್ಧ. ಕೆಲವು ಶ್ವಾಸಕೋಶದ ಸೋಂಕಿರುವ ರೋಗಿಗಳು, ಧೂಮಪಾನಿಗಳು ಎಚ್ಚರಿಕೆಯಿಂದ ಬಳಸಬೇಕಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸುಧಾರಣೆಗಳನ್ನ ಕಂಡು ಸಾಮಾನ್ಯ, ಬಡರೋಗಿಗಳಿಗೆ ಕೈಗೆಟಕುವ ದರದಲ್ಲಿ ‘ಅಫ್ರೆಝಾ ಇನ್ಸುಲಿನ್’ ದೊರೆಯಲಿ ಎಂದು ಆಶಿಸೋಣ.

ಅಫ್ರೆಝಾ ಇನ್ಸುಲಿನ್ ಹೇಗೆ ಕೆಲಸ ನಿರ್ವಹಿಸುತ್ತದೆ?:  ಅಫ್ರೆಝಾವನ್ನು ತಲುಪಿಸಲು ಟೆಕ್ನೋಸ್ಪಿಯರ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ, ಇದು ಶ್ವಾಸಕೋಶದ ಔಷಧಿಗಳ ವಿತರಣೆಗೆ ಅನುವು ಮಾಡಿಕೊಡುವ ಒಂದು ವೇದಿಕೆಯಾಗಿದೆ. ಅಫ್ರೆಝಾದಲ್ಲಿ ಬಳಸಲಾಗುವ ಸೂಕ್ಷ್ಮಕಣವು ಎರಡು ಪ್ರಮುಖ ಘಟಕಗಳನ್ನು ಒಳಗೊಂಡಿದೆ: ಮಾನವ ಇನ್ಸುಲಿನ್ ಅದರ ಅತ್ಯಂತ ಮೂಲಭೂತ ರೂಪದಲ್ಲಿ, ನಿಷ್ಕ್ರಿಯ ಘಟಕಾಂಶದೊಂದಿಗೆ ಸಂಯೋಜಿಸಲ್ಪಟ್ಟಿದೆ. ಈ ಸೂಕ್ಷ್ಮಕಣಗಳನ್ನು ಶ್ವಾಸಕೋಶಗಳಿಗೆ ಆಳವಾಗಿ ಉಸಿರಾಡಲಾಗುತ್ತದೆ, ಅಲ್ಲಿ ಅವು ತ್ವರಿತವಾಗಿ ದೇಹಕ್ಕೆ ಹೀರಲ್ಪಡುತ್ತವೆ. ವಾಸ್ತವವಾಗಿ, ಅಫ್ರೆಝಾ ಶ್ವಾಸಕೋಶದ ಮೂಲಕ ಹಾದುಹೋಗುವಾಗ, ಇನ್ಸುಲಿನ್ ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ರಕ್ತಪ್ರವಾಹಕ್ಕೆ ಬಿಡುಗಡೆಯಾಗುತ್ತದೆ. ೧೫ ನಿಮಿಷಗಳಲ್ಲೇ ರಕ್ತದ ಗ್ಲೂಕೋಸ್ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ.

Tags:
error: Content is protected !!