ಅನೇಕ ಚಳವಳಿಗಾರರ ತಾತ್ವಿಕ ಸ್ಪಷ್ಟತೆ, ಧೈರ್ಯ, ಮುಂಗಾಣ್ಕೆ, ಬಿಕ್ಕಟ್ಟು ನಿಭಾಯಿಸುವ ಛಾತಿ, ನಿರಾಶೆಯಲ್ಲೂ ಕಂಗೆಡದ ಆತ್ವವಿಶ್ವಾಸ, ಕುಟುಂಬವನ್ನೂ ಸಾರ್ವಜನಿಕ ಬದುಕನ್ನೂ ಸಂಭಾಳಿಸುವ ಚಾಕಚ್ಯಕತೆ, ಚಳವಳಿಗೋಸ್ಕರ ಆಸ್ತಿ, ಆರೋಗ್ಯ, ಉದ್ಯೋಗ ಕಳೆದುಕೊಂಡ ಬಗೆ ನೋಡುವಾಗೆಲ್ಲ, ನನ್ನ ಪಾತ್ರ ನಗಣ್ಯವಾಗಿತ್ತು.
ಒಮ್ಮೆ ಎಸ್.ಎಸ್.ಹಿರೇಮಠ ಅವರನ್ನು ಉಪನ್ಯಾಸ ಕೊಡಲು ವಿಶ್ವವಿದ್ಯಾಲಯಕ್ಕೆ ಕರೆದಿದ್ದೆವು. ಅವರು ವಿಶ್ವವಿದ್ಯಾಲಯಕ್ಕೆ ಬಂದವರು, ವಿಭಾಗಕ್ಕೆ ಬಾರದೆ ಕುಲಪತಿ ಕಚೇರಿಯ ಮುಂದೆ ಮುಷ್ಕರ ಮಾಡುತ್ತಿದ್ದ ನೌಕರರ ಜತೆ ಹೋಗಿ ಕೂತುಬಿಟ್ಟರು- ನಿಮ್ಮ ಸೆಮಿನಾರ್ ನನಗೆ ಬ್ಯಾಡ ಎಂದು. ಇಂತಹುದೇ ಗುಣ ಜಿ.ರಾಜಶೇಖರ್ ಅವರಲ್ಲೂ ಇತ್ತು. ಅವರು ಉಡುಪಿಯ ಸರ್ವೀಸ್ ಬಸ್ಸು ನಿಲ್ದಾಣದಲ್ಲಿ ಒಬ್ಬಿಬ್ಬರು ಸಂಗಾತಿಗಳ ಜತೆ ಪ್ಲೆಕಾರ್ಡು ಹಿಡಿದು ಕೂರುತ್ತಿದ್ದರು. ತಮಾಷೆಗೆಂಬಂತೆ ನಿಂತು ನೋಡುತ್ತಿದ್ದ ಹತ್ತು ಮಂದಿ ಹಾದಿಹೋಕರ ಮುಂದೆ ಗಂಭೀರ ಭಾಷಣ ಮಾಡುತ್ತಿದ್ದರು. ಅಡಚಣೆ ಇದ್ದಕಡೆಯೇ ಪ್ರತಿಭಟನೆ ಮಾಡುವ ಛಲ, ಹಠಮಾರಿತನ ಪಟ್ಟಾಭಿರಾಮ ಸೋಮಯಾಜಿ ಅವರಲ್ಲೂ ಇತ್ತು. ಮಡಿಕೇರಿಯಲ್ಲಿ ಏರ್ಪಡಿಸಿದ್ದ ಕೋಮುವಾದ ವಿರೋಧಿ ಕಾರ್ಯಕ್ರಮ ನೆನಪಾಗುತ್ತಿದೆ. ಜಿ.ರಾಜಶೇಖರ್, ಫಣಿರಾಜ್, ನಾನೂ ಇದ್ದೆವು. ಕಾರ್ಯಕ್ರಮ ಇನ್ನೇನು ಶುರುವಾಗಬೇಕು, ಬಲಪಂಥೀಯ ಸಂಘಟನೆಯವರು ಧಡಧಡ ಬಂದು ಬ್ಯಾನರ್ ಹರಿದು, ವೇದಿಕೆ ಉಧ್ವಸ್ತಗೊಳಿಸಿದರು. ನಾವು ಪೆಟ್ಟು ತಿನ್ನುವುದರಿಂದ ಸ್ವಲ್ಪದರಲ್ಲೇ ಬಚಾವಾದೆವು. ಪಟ್ಟಾಭಿ ಒಂದು ತಿಂಗಳಲ್ಲೇ ಕಾರ್ಯಕ್ರಮವನ್ನು ಅಲ್ಲೇ ಸಂಘಟಿಸಿದರು. ಈಸಲ ಏನಾಗುವುದೋ ಎಂದು ಅಳುಕುತ್ತ ಹೋದೆ. ಸಂಘಟನೆ ಚೆನ್ನಾಗಿತ್ತು. ಕಾರ್ಯಕ್ರಮ ಸರಾಗವಾಗಿ ನಡೆಯಿತು.
ನಾಲ್ಕು ಗೋಡೆಗಳ ಮಧ್ಯೆ ನಿಶ್ಶಬ್ದವಾಗಿ ಮಾತಾಡುವುದು ಗೊತ್ತಿದ್ದ ನನಗೆ ಚಳವಳಿಗಳಲ್ಲಿ ಬೀದಿ ಭಾಷಣ ಮಾಡುವುದು ಕಷ್ಟದ ಸಂಗತಿಯಾಗಿತ್ತು. ಬಾಬಾಬುಡನ್‌ಗಿರಿ ಚಳವಳಿಯಲ್ಲಿ ಚಿಕ್ಕಮಗಳೂರಿನ ಡಿಸಿ ಕಚೇರಿಯ ಸರ್ಕಲ್ಲಿನಲ್ಲಿ ಭಾಷಣ ಮಾಡುತ್ತಿದ್ದೆ. ಪ್ರೇಕ್ಷಕರು ತಮಾಷೆಯೆಂಬಂತೆ ನೋಡುತ್ತ ಚಲಿಸುತ್ತಿದ್ದರು. ಒಂದು ವಾಕ್ಯಕ್ಕೆ ಇರುವ ಪ್ರೇಕ್ಷಕರು ಎರಡನೇ ವಾಕ್ಯಕ್ಕೆ ಇರುತ್ತಿರಲಿಲ್ಲ. ಬೇರೆಯವರೇ ಬಂದಿರುತ್ತಿದ್ದರು. ಕಲಬುರ್ಗಿ ಕೊಲೆ ಖಂಡಿಸಿ ಧಾರವಾಡದಲ್ಲಿ ಮಾತಾಡುವಾಗ ಉದ್ದಕ್ಕೂ ಮಳೆ. ಸಭೆಯ ಒಬ್ಬರೂ ಕದಲದೆ ಕೂತಿದ್ದರು. ತುಂಗಾಭದ್ರಾ ಉಳಿಸಿ ಹೋರಾಟದಲ್ಲಿ ಹಳ್ಳಿಗಳಲ್ಲಿ ಮಾತಾಡುವಾಗ ನನ್ನ ಅಕಾಡೆಮಿಕ್ ಪರಿಭಾಷೆಯನ್ನು ಕೈಬಿಟ್ಟು ಜನರ ಭಾಷೆಯಲ್ಲಿ ಮಾತಾಡಬೇಕಾಯಿತು. ನೇಕಾರರ ಹಕ್ಕುಗಳಿಗಾಗಿ ನಡೆದ ಪಾದಯಾತ್ರೆಯಲ್ಲಿ ಭಾಗವಹಿಸುವಾಗ ಇದಕ್ಕಾಗಿ ಒಂದು ಉಪಾಯ ಮಾಡಿದೆ. ಗಜೇಂದ್ರಗಡದಲ್ಲಿ ಕಾರ್ಯಕ್ರಮಕ್ಕೆ ಮೊದಲು ನೇಕಾರರ ಮನೆಗಳಿಗೆ ಹೋದೆ. ಅವರು ಮಗ್ಗಗಳಲ್ಲಿ ಕೆಲಸ ಮಾಡುವುದನ್ನು ನೋಡಿದೆ. ಅವರ ಜತೆ ಚರ್ಚಿಸಿದೆ. ಬಳಿಕ ಸಭೆಯಲ್ಲಿ ಮಾತಾಡಿದೆ. ಜನರಿಗೆ ತಿಳಿವಳಿಕೆ ಕೊಡುವುದಕ್ಕೋಸ್ಕರ ನಮಗೆ ಗೊತ್ತಿರುವುದನ್ನು ಹೇಳುವುದಕ್ಕೂ, ಜನರಿಂದ ತಿಳಿವಳಿಕೆ ಪಡೆದು ಮಾತಾಡುವುದಕ್ಕೂ ಇರುವ ವ್ಯತ್ಯಾಸ ತಿಳಿಯಿತು.
ಚಳವಳಿಯ ನಾಯಕತ್ವಕ್ಕೆ ಬೇಕಾದುದು ಶೈಕ್ಷಣಿಕ ಅರ್ಹತೆಯಲ್ಲ. ಪ್ರಭುತ್ವದ ವಿರುದ್ಧ ಸೆಟೆದು ನಿಲ್ಲುವ ಧೈರ್ಯ. ಕಂಬಾರರ ಸರ್ವಾಧಿಕಾರದ ವಿರುದ್ಧ ಹೋರಾಡಲು ನಾವು ಕನ್ನಡ ವಿಶ್ವವಿದ್ಯಾಲಯ ನೌಕರರ ಸಂಘ ಕಟ್ಟಿದೆವು. ಅದರ ಅಧ್ಯಕ್ಷರಾಗಿದ್ದವರು ಜೈನುಲ್ಲಾ ಬಳ್ಳಾರಿ ಒಬ್ಬ ಸಹಾಯಕ. ಇದರಲ್ಲಿ ವಿವಿಯ ಬಸ್ ಚಾಲಕ ಶಿವಾನಂದ್ ಕೂಡ ಇದ್ದರು. ನಾವು ನಮ್ಮ ಸೈದ್ಧಾಂತಿಕ ಭಿನ್ನಮತವನ್ನು ತಾತ್ವೀಕರಿಸಿ ಹೇಳುವುದಕ್ಕೆ ಕಷ್ಟಪಡುತ್ತಿದ್ದರೆ, ವೀರಪ್ಪನ್ ಮೀಸೆ ಬಿಟ್ಟಿದ್ದ ಶಿವಾನಂದ, ಕುಲಪತಿಗಳ ಎದುರು ಹಡಗಲಿಯ ಭಾಷೆಯಲ್ಲಿ ಖಡಕ್ಕಾಗಿ ಕಡ್ಡಿಮುರಿದಂತೆ ಮಾತಾಡುತ್ತಿದ್ದರು ಮತ್ತು ಹೆದರಿಸುತ್ತಿದ್ದರು. ನಾವು ಅಧ್ಯಾಪಕರು ಹೋರಾಟದಲ್ಲಿ ಹಿಂಜರಿಕೆ ಲೆಕ್ಕಾಚಾರ ತೋರಿದಾಗೆಲ್ಲ, ಅದನ್ನು ನೇರವಾಗಿ ಗ್ರಹಿಸಿ ನುಗ್ಗಿ ತಮ್ಮ ಮಂತಿಕೆಯಿಂದ ಗೆಲ್ಲಿಸಿದವರು ವಿದ್ಯಾರ್ಥಿಗಳು ಮತ್ತು ಅಧ್ಯಾಪಕೇತರ ನೌಕರರು. ವಿಶ್ವವಿದ್ಯಾನಿಲಯದ ಭೂಮಿ ಹೋರಾಟದಲ್ಲಿ ನಾವು ಯುದ್ಧತಂತ್ರದಲ್ಲಿ ತಪ್ಪಿದಾಗ ಸಭೆಗಳಲ್ಲಿ ಸರಿಯಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ನಾವು ನಮ್ಮ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮಾರ್ಗದರ್ಶಕರಾಗಿದ್ದೆವು. ಅವರು ಹೋರಾಟದಲ್ಲಿ ನಮಗೆ ಮಾರ್ಗ ತೋರಿಸುತ್ತಿದ್ದರು. ಇಂತಹ ಹೊತ್ತಲ್ಲಿ ನನಗೆ ಶಿವಮೊಗ್ಗದ ಚಳವಳಿಗಳಲ್ಲಿ ಭಾಗವಹಿಸುತ್ತಿದ್ದ ಜಾರ್ಜ್ ಸಲ್ಡಾನಾ ನೆನಪಾಗುತ್ತಾರೆ. ಸಣ್ಣ ಪತ್ರಿಕೆಯಲ್ಲಿ ಕೆಲಸಕ್ಕಿದ್ದ ಅವರು ಸೈಕಲ್ ಹೊಡೆದುಕೊಂಡು ಬರುತ್ತಿದ್ದರು. ಅಂತಃಕರಣದಲ್ಲಿ ಗಾರ್ಕಿಯ ಮದರ್ ಕಾದಂಬರಿಯ ತಾಯಿಯಂತಿರುವ ಈಗ, ಅನಾಮಿಕರಾಗಿದ್ದು ಯಾವುದೇ ಹೆಸರು ಲಾಭ ಬಯಸದೆ ಕೆಲಸ ಮಾಡುವವರು. ಅಂತಹವರನ್ನು ನೆನೆವಾಗ, ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದ ನನ್ನಂತಹವರ ಅಹಮಿಕೆ ಗುಳ್ಳೆ ಒಡೆಯುತ್ತಿತ್ತು.
ಪಾದಯಾತ್ರೆ ಮತ್ತು ಚಳವಳಿಗಳಲ್ಲಿ ಸಾಮಾನ್ಯವಾಗಿ ನಾನೂ ಬಾನೂ ಒಟ್ಟಿಗೆ ಭಾಗವಹಿಸುತ್ತಿದ್ದೆವು. ಬಾನು ಚಳವಳಿಗಾರರ ಕೈಖರ್ಚು, ಊಟ, ಪಯಣದ ಬಗ್ಗೆ ನಿಗಾ ವಹಿಸುತ್ತಿದ್ದಳು. ಕಾರ್ಯಕರ್ತರಲ್ಲಿ ಡಯಾಬಿಟಿಕ್ ಇದ್ದರೆ ಅವರಿಗೆ ವಿಶೇಷವಾಗಿ ಬುತ್ತಿ ಕಟ್ಟುತ್ತಿದ್ದಳು. ಕುದುರೆಮುಖದ ಅದಿರು ಅಗೆತ ನಿಲ್ಲಿಸಬೇಕು, ನದಿಯ ಮೂಲವನ್ನು ಉಳಿಸಬೇಕು ಚಳವಳಿಯಲ್ಲಿ ಭಾಗವಹಿಸಲು ನಾವಿಬ್ಬರೂ ಶಿವಮೊಗ್ಗಕ್ಕೆ ಹೋಗಿದ್ದೆವು. ಗೋಪಿ ಸರ್ಕಲ್ಲಿನಲ್ಲಿ ತಾಯ ಪಕ್ಕ ಮಗಳಂತೆ ಪೊನ್ನಮ್ಮಾಳ್ ಜತೆ ಬಾನು ಧರಣಿ ಕೂತಿದ್ದಳು. ಸರ್ಕಾರದ ಇಲ್ಲವೇ ವಿಶ್ವವಿದ್ಯಾನಿಲಯದ ಆಡಳಿತದ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಾಗ, ನಾವು ಕೆಲವರು ಅಮಾನತು ಆಗಬಹುದು ಎಂಬ ಸನ್ನಿವೇಶ ಒದಗಿತ್ತು. ಬಾನು ಹೇಳಿದಳು: ‘ಸಸ್ಪೆಂಡಾದರೆ ಅರ್ಧ ಸಂಬಳ ಸಿಗುತ್ತದಂತಲ್ಲ? ಅದರಲ್ಲೇ ಬದುಕೋಣ’. ಬಾಬಾಬುಡನಗಿರಿಯ ಹೋರಾಟದಲ್ಲಿ ಎಲ್ಲರ ಜತೆ ಆಕೆಯೂ ಜೈಲಲ್ಲಿದ್ದಳು. ಅವಳಿಲ್ಲದೆ ಹೋಗಿದ್ದರೆ ನಾನು ಈ ಚಳವಳಿಗಳಲ್ಲಿ ಇಷ್ಟು ತನ್ಮಯತೆಯಿಂದ ಭಾಗವಹಿಸುತ್ತಿದ್ದೆನೊ ಇಲ್ಲವೊ?
ಕುಡಿದ ನೀರು ಅಲ್ಲಾಡದಂತೆ ಬದುಕಬಯಸುವ ಮಧ್ಯಮ ವರ್ಗದ ನಮ್ಮನ್ನು ಚಳವಳಿ ಕೆಳಕ್ಕೆ ಎಳೆದು, ಕಾಲು ಸದಾ ನೆಲದ ಮೇಲಿರುವಂತೆ ಮಾಡುತ್ತದೆ. ಅನಗತ್ಯ ಕೋಡು ಹುಟ್ಟಿದರೆ ಅವನ್ನು ಸವರುತ್ತದೆ. ನಮ್ಮ ಬದುಕನ್ನು ನಾವೇ ವಿಮರ್ಶಿಸುವಂತೆ ಮಾಡುತ್ತದೆ. ಮನೆ ಕಟ್ಟಿಸುವಾಗ ಬೆಡ್‌ರೂಮುಗಳು ಇನ್ನಷ್ಟು ದೊಡ್ಡದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಬಾನು ಅಭಿಪ್ರಾಯಪಟ್ಟಳು. ನಾನೆಂದೆ: ‘ನೋಡು, ಮನೆಯಿಲ್ಲದೆ, ಇದ್ದ ಮನೆಯನ್ನು ಬಿಟ್ಟು ಬೀದಿಯಲ್ಲಿ ನಿಂತು ಎಷ್ಟೊಂದು ಸಂಗಾತಿಗಳು ಜನರಿಗಾಗಿ ಹೋರಾಡುತ್ತಿದ್ದಾರೆ. ಅಂತಹದರಲ್ಲಿ ನಾವು ಮನೆ ಕಟ್ಟುತ್ತಿರುವುದೇ ಸರಿಯಲ್ಲ. ಇನ್ನು ಅದನ್ನು ಇನ್ನಷ್ಟು ದೊಡ್ಡದಾಗಿಸಿದರೆ ಸಣ್ಣವರಾಗುತ್ತೇವೆ’.
ಎಷ್ಟೊ ಸಲ ಚಳವಳಿಗಳಲ್ಲಿ ಇಟ್ಟುಕೊಂಡ ಗುರಿ ಈಡೇರದೆ ಸೋಲುಂಟಾಗುತ್ತಿತ್ತು. ನಿರಾಶೆ ಹುಟ್ಟುತ್ತಿತ್ತು. ಚಿಂತಕರ-ಪತ್ರಕರ್ತರ ಬರ್ಬರ ಹತ್ಯೆಯನ್ನು ಇಟ್ಟುಕೊಂಡು ಫ್ಯಾಸಿಸಂ ವಿರುದ್ಧ ಮೂಡಿದ ದಕ್ಷಿಣಾಯನ ಚಳವಳಿ, ಕರ್ನಾಟಕದಲ್ಲಿ ಗೋವೆಯಲ್ಲಿ ನಡೆಯಿತು. ಬಾನು ನಾನು ಒಳಗೊಂಡಂತೆ ಈ ಚಳವಳಿಯಲ್ಲಿ ಕರ್ನಾಟಕದ ಬಹಳಷ್ಟು ಜನ ಭಾಗವಹಿಸಿದರು. ಈ ಚಳವಳಿಯ ಭಾಗವಾಗಿದ್ದ ಒಂದು ರಾಜಕೀಯ ಗುಂಪಿನವರು ಶಾಸಕರಾಗಿ ಚುನಾಯಿತರಾದರು. ಆದರೆ ಅವರೆಲ್ಲರೂ ಸರ್ಕಾರ ರಚಿಸುವ ಹೊತ್ತಲ್ಲಿ ಖರೀದಿಗೊಂಡು ಬಲಪಂಥೀಯ ಸರ್ಕಾರದ ಭಾಗವಾದರು. ಇದು ನಮಗೆಲ್ಲ ಬಹಳ ಕೆಟ್ಟದೆನಿಸಿತು. ಚಳವಳಿ ಹಿನ್ನಡೆಯಾದಾಗಲೆಲ್ಲ ನೂರ್ ಶ್ರೀಧರ್ ಹೇಳುತ್ತಿದ್ದುದು ನೆನಪಾಗುತ್ತದೆ: ‘ನಮ್ಮ ಕಾಲದಲ್ಲೇ ನಾವು ಬಯಸುವ ಕ್ರಾಂತಿಯಾಗುತ್ತದೆ, ಆಗಬೇಕೆಂದು ಬಯಸುವುದು ಕಷ್ಟ. ಆದರೆ ನಮ್ಮ ಜೀವಿತದಲ್ಲಿ ಬದಲಾವಣೆಗೆ ಬೇಕಾದ ಸನ್ನಿವೇಶವನ್ನು ನಿರ್ಮಿಸಲು ನಾವು ನಮ್ಮ ಕೈಲಾದ ಮಟ್ಟಿಗೆ ಯತ್ನಿಸಬೇಕು. ಅದನ್ನು ಮುಂದಿನವರು ಮುಂದುವರಿಸುತ್ತಾರೆ. ಇದರ ತಾರ್ಕಿಕ ಫಲ ಯಾವಾಗಲೊ ಸಿಗಬಹುದು’. ಈ ಮಾತು, ಮುಂದೆಂದೊ ಫಲಬಿಡಬಹು ದಾದ ತೆಂಗಿನ ಮರಕ್ಕೆ ಈಗಿನ ನಾವು ಗೊಬ್ಬರ ನೀರು ಹಾಕುವುದೇ ಜೀವಿತದ ಸಾರ್ಥಕತೆ ಎಂದು ಪರಿಭಾವಿಸುವ ನಮ್ಮ ರೈತಾಪಿ ಕಾಣ್ಕೆಯಂತಿದೆ.
ದುಡಿವ ವರ್ಗ, ಕ್ರಾಂತಿ ಸಮಾಜವಾದ, ಡೆಮಾಕ್ರಸಿ ಸಮಾನತೆ ವ್ಯವಸ್ಥೆ, ಪ್ರತಿಕ್ರಾಂತಿ ಮೊದಲಾದವುಗಳನ್ನು ಪುಸ್ತಕಗಳಲ್ಲಿ ಓದಿ ತಿಳಿದಿದ್ದೆ. ಇವುಗಳ ದಿಟವಾದ ಸಂಕೀರ್ಣವಾದ ಅರ್ಥ, ಚಳವಳಿಗಳಲ್ಲಿ ನನ್ನ ಕಿಂಚಿತ್ ಭಾಗವಹಿಸುವಿಕೆಯಿಂದ ಸಿಕ್ಕಿತು. ಬೇರೆಬೇರೆ ವಯಸ್ಸು, ಜಾತಿ, ಧರ್ಮ, ಭಾಷೆ, ಪ್ರದೇಶದಿಂದ ಬಂದವರು ಸಮಾನ ಉದ್ದೇಶಕ್ಕಾಗಿ ಕೂಡುವ, ಕೆಲಸ ಮಾಡುವ, ತಾತ್ವಿಕ ಭಿನ್ನಮತ ವ್ಯಕ್ತಪಡಿಸುವ, ತಪ್ಪಾದರೆ ತಿದ್ದಿಕೊಳ್ಳುವ ಅವಕಾಶವುಳ್ಳ ಚಳವಳಿಗಳು, ನನ್ನ ಪಾಲಿಗೆ ಅಪೂರ್ವ ಪಾಠಶಾಲೆಗಳು.
(ಮುಗಿಯಿತು)