ಆರ್ಥಿಕ ಸಂಕಷ್ಟದ ಸಮಯದಲ್ಲಿ ಜಾಗ್ರತೆಯಿಂದ ಕಾರ್ಯನಿರ್ವಹಣೆ ಅಗತ್ಯ
ಇದು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಘಟನೆ. ಅವತ್ತು ಮುಖ್ಯಮಂತ್ರಿಯಾಗಿದ್ದ ಎಸ್. ಎಂ. ಕೃಷ್ಣ ಗಾಬರಿಯಿಂದ ಕಾರು ಹತ್ತಿ ಕುಳಿತರು. ಹಣೆಯಲ್ಲಿ ಫಳ ಫಳ ಅಂತ ಬೆವರು. ಕೃಷ್ಣ ಹಾಗೆ ಗಾಬರಿಯಿಂದ ಬೆವರಲೂ ಒಂದು ಕಾರಣವಿತ್ತು. ಅವತ್ತು ವಿಧಾನಸೌಧಕ್ಕೆ ಬಂದ ಅವರು ತಮ್ಮ ಕೆಲಸ ಮುಗಿಯುತ್ತಿದ್ದಂತೆಯೇ ಮನೆಗೆ ಹೊರಡಲೆಂದು ಸಚಿವರೊಬ್ಬರ ಜತೆ ಪಶ್ಚಿಮ ದ್ವಾರದ ಬಳಿ ಮೆಟ್ಟಿಲಿಳಿಯುತ್ತಿದ್ದರು.
ಇನ್ನೇನು ಅವರು ಮೆಟ್ಟಿಲಿಳಿದು ಕಾರು ಹತ್ತಿ ಕೂರಬೇಕು. ತಕ್ಷಣವೇ ಅಲ್ಲಿದ್ದ ಧಡೂತಿ ವ್ಯಕ್ತಿಯೊಬ್ಬ ವಿಧಾನಸೌಧದ ಕಡೆ ಬೆರಳು ತೋರಿಸುತ್ತಾ, ‘ಇಲ್ಲಿರುವವರೆಲ್ಲ ಕಳ್ಳರು. ಬಡ-ಬಗ್ಗರು ಕೆಲಸಕ್ಕೆ ಅಂತ ಬಂದರೆ ಮಾನ ಮರ್ಯಾದೆ ಏನೂ ಇಲ್ಲದೆ ಲೂಟಿ ಮಾಡುವವರು. ಇವರನ್ನೆಲ್ಲ ಒಬ್ಬೊಬ್ಬರನ್ನಾಗಿ ನಿಲ್ಲಿಸಿ, ಗುಂಡು ಹಾಕಿ ಕೊಂದು ಬಿಡಬೇಕು’ ಎಂದು ಜೋರಾಗಿ ಅರಚಿಕೊಂಡ.
ಈ ರೀತಿ ತಾವು ಕಾರು ಹತ್ತಲು ಬರುತ್ತಿರುವಾಗಲೇ ಒಬ್ಬ ವ್ಯಕ್ತಿ, ಅದೂ ಅಪರಿಚಿತನೊಬ್ಬ ಹೀಗೆ ಕೂಗು ಹಾಕಿದ್ದರಿಂದ ಸಹಜವಾಗಿಯೇ ಕೃಷ್ಣ ಅವರಿಗೆ ಗಾಬರಿಯಾಗಿದೆ. ಹಾಗಂತಲೇ ಗಬಕ್ಕಂತ ಕಾರು ಹತ್ತಿ ಕುಳಿತಿದ್ದಾರೆ. ಆದರೆ ಅವರ ಜತೆಗಿದ್ದ ಸಚಿವರು ಮಾತ್ರ ಆ ಸಂದರ್ಭದಲ್ಲಿ ನಗುತ್ತಾ ಕಾರು ಹತ್ತಿದರು. ಸರಿ, ಕಾರು ಹೊರಟಿತು. ಹೀಗೆ ಹೊರಡುತ್ತಿದ್ದಂತೆಯೇ ನಗುತ್ತಾ ಕುಳಿತಿದ್ದ ಮಂತ್ರಿಯನ್ನು ನೋಡಿದ ಎಸ್. ಎಂ. ಕೃಷ್ಣ ಅವರು, ಅಲ್ರೀ ವಿಶ್ವನಾಥ್, ಹಾಗೆ ಬಾಯಿಗೆ ಬಂದ ಹಾಗೆ ಕೂಗುತ್ತಿದ್ದಾನಲ್ಲ, ಯಾರವನು? ನಿಮಗೆ ಗೊತ್ತಾ? ಅಂತ ಕೇಳಿದ್ದಾರೆ.
ಅದಕ್ಕೆ ಪ್ರತಿಯಾಗಿ ವಿಶ್ವನಾಥ್, ಗೊತ್ತು ಸಾರ್. ಆತನ ಹೆಸರು ಹೆಚ್. ಸಿ. ಗೌಡ ಅಂತ. ತುಂಬ ದೂರದವನೇನಲ್ಲ. ಅಮ್ಮಾವರ (ಶ್ರೀಮತಿ ಪ್ರೇಮಾ ಕೃಷ್ಣ) ಊರಿನವನು. ಆಗಾಗ ವಿಧಾನಸೌಧಕ್ಕೆ ಬರುತ್ತಿರುತ್ತಾನೆ. ಬಂದಾಗೆಲ್ಲ ಈ ರೀತಿ ಸತ್ಯವನ್ನೂ ಹೇಳುತ್ತಿರುತ್ತಾನೆ ಎಂದರು.
ವಿಶ್ವನಾಥ್ ಹಾಗೆ ಹೇಳಿದ್ದೇ ತಡ, ಎಸ್. ಎಂ. ಕೃಷ್ಣ ತಮ್ಮ ಗಾಬರಿಯನ್ನು ಮರೆತು ಕೈಲಿದ್ದ ಕರವಸ್ತ್ರದಿಂದ ಹಣೆಯನ್ನು ಒರೆಸಿಕೊಂಡರು. ಇವತ್ತು ಈ ಘಟನೆಯನ್ನು ಸ್ಮರಿಸಿಕೊಳ್ಳಲು ಕಾರಣವಿದೆ. ಅದೆಂದರೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಕರ್ನಾಟಕಕ್ಕೆ ಬಂದಾಗ ನೀಡಿದ ಸಂದೇಶ.
ಇತ್ತೀಚೆಗೆ ಅಮೆರಿಕ-ಇರಾನ್ ಮಧ್ಯೆ ನಡೆದ ಯುದ್ಧದ ನಂತರ ಜಗತ್ತು ಎದುರಿಸುತ್ತಿರುವ ಸಂಕಷ್ಟ ಮತ್ತು ಅದರ ಹಿನ್ನೆಲೆಯಲ್ಲಿ ನಾವು ಮಿತವ್ಯಯದಿಂದ ಬದುಕಬೇಕಾದ ಅನಿವಾರ್ಯತೆಯ ಬಗ್ಗೆ ಅವರು ಎಂಟು ಸೂತ್ರಗಳನ್ನು ಹೇಳಿಹೋದರು.
ಮೋದಿಯವರ ಮಾತಿನ ಬಗ್ಗೆ ಏನೇ ಪರ-ವಿರೋಧದ ಚರ್ಚೆಗಳು ನಡೆಯಲಿ. ಆದರೆ ನಾವು ಆರ್ಥಿಕ ಸಂಕಷ್ಟದ ಯುಗಕ್ಕೆ ಕಾಲಿಟ್ಟಿರುವುದು ಮಾತ್ರ ಸ್ಪಷ್ಟ.
ಇಂತಹ ಕಾಲಘಟ್ಟದಲ್ಲಿ ಬಡ-ಮಧ್ಯಮ ವರ್ಗದ ಬದುಕು ದುಸ್ತರವಾಗತೊಡಗುತ್ತದೆ ಮತ್ತು ರಾಜ್ಯ ಸರ್ಕಾರಗಳು ಜನ ಕಲ್ಯಾಣದ ವಿಷಯದಲ್ಲಿ ಮತ್ತಷ್ಟು ಪ್ರಾಮಾಣಿಕತೆಯಿಂದ, ಎಚ್ಚರಿಕೆಯಿಂದ, ಬದ್ಧತೆಯಿಂದ ನಡೆದುಕೊಳ್ಳಬೇಕಾಗುತ್ತದೆ.
ಈ ವಿಷಯದಲ್ಲಿ ಅದು ಹೇಗೆ ನಡೆದುಕೊಳ್ಳುತ್ತದೆ ಎಂಬುದು ರಾಜ್ಯದ ಪ್ರತಿ ನಗರ, ಪಟ್ಟಣ, ಹಳ್ಳಿಗಳಲ್ಲಿ ಗೋಚರವಾಗುತ್ತಿರುತ್ತದೆ.
ಒಂದು ವೇಳೆ ಇಲ್ಲಿ ಎಡವಟ್ಟಾದರೆ ಇಪ್ಪತ್ತೈದು ವರ್ಷಗಳ ಹಿಂದೆ ವಿಧಾನಸೌಧದ ಬಳಿ ನಡೆದ ಘಟನೆ ಏನಿದೆಯೋ ಅದು ತಳಮಟ್ಟದಲ್ಲೂ ಅನುರಣಿಸುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಆಳುವ ಸರ್ಕಾರ ತುಂಬ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ.
ಇನ್ನು ಮತ್ತೊಂದು ಘಟನೆ ಸುಮಾರು ನಲವತ್ತೇಳು ವರ್ಷಗಳ ಹಿಂದೆ ನಡೆದ ಘಟನೆ. ಇವತ್ತು ಹಿರಿಯ ನಾಯಕರಾಗಿರುವ ಎ. ಹೆಚ್. ವಿಶ್ವನಾಥ್ ಅದೇ ಮೊದಲ ಬಾರಿ ಶಾಸಕರಾಗಿದ್ದರು. ಆ ಸಂದರ್ಭದಲ್ಲಿ ಕರ್ನಾಟಕದ ದೊಡ್ಡ ಉದ್ಯಮಿಯೊಬ್ಬರು (ಮುಂದೆ ಅವರು ಸಚಿವರಾದರು) ಅವರನ್ನು ಭೇಟಿ ಮಾಡಿದರು.
ಹೀಗೆ ಭೇಟಿ ಮಾಡಿದವರು ಅದು ಇದು ಮಾತನಾಡುತ್ತಾ, ರೀ ವಿಶ್ವನಾಥ್, ನಿಮ್ಮಿಂದ ನನಗೊಂದು ಸಹಾಯ ಆಗಬೇಕಲ್ರೀ ಎಂದು ಹೇಳಿದರು. ಅದಕ್ಕುತ್ತರವಾಗಿ ಇವರು ಹೇಳಿ ಸಾರ್ ಎಂದರು. ಮತ್ತೇನೂ ಇಲ್ಲ ವಿಶ್ವನಾಥ್. ಸಾಹೇಬರು (ದೇವರಾಜ ಅರಸು) ನನಗೆ ಮೆಡಿಕಲ್ ಕಾಲೇಜು ಓಪನ್ ಮಾಡಲು ಪರ್ಮಿಶನ್ ಕೊಡಿಸಿದ್ದಾರೆ. ಬೇಕಾದಷ್ಟು ಸಹಾಯ ಮಾಡಿದ್ದಾರೆ. ಈಗ ನನಗೆ ದುಡ್ಡಿಗೇನೂ ಬರವಿಲ್ಲ. ಆದರೆ ಒಂದು ಸಲ ಶಾಸಕನಾಗುವ ಆಸೆ ಇದೆ. ಆದರೆ ಚುನಾವಣೆಗೆ ನಿಲ್ಲಲು ಸಾಹೇಬರ ಬಳಿ ಟಿಕೆಟ್ ಕೇಳುವುದು ಹೇಗೆ? ಹೀಗಾಗಿ ನೀವೇ ಹೆಲ್ಪ್ ಮಾಡಬೇಕು. ನಿಮ್ಮನ್ನು ಕಂಡರೆ ಸಾಹೇಬರಿಗೆ ಪ್ರೀತಿ ಜಾಸ್ತಿ ಎಂದು ಹೇಳಿದರು.
ಅಷ್ಟು ದೊಡ್ಡ ಶ್ರೀಮಂತ. ರಾಜ್ಯದ ಗಣ್ಯ ಉದ್ಯಮಿ. ತಮ್ಮ ಬಳಿ ಅಂಗಲಾಚುತ್ತಿರುವುದನ್ನು ಕಂಡ ವಿಶ್ವನಾಥ್ ಅರೇ ಇದಕ್ಯಾಕೆ ಯೋಚಿಸುತ್ತೀರಿ ಸಾರ್. ನಾನು ಸಾಹೇಬರ ಬಳಿ ನಿಮ್ಮ ಪರವಾಗಿ ರಿಕ್ವೆಸ್ಟ್ ಮಾಡುತ್ತೇನೆ ಎಂದರು.
ಸರಿ, ಇದಾದ ಮಾರನೆಯ ದಿನ ವಿಶ್ವನಾಥ್ ಅವರು ದೇವರಾಜ ಅರಸರನ್ನು ಭೇಟಿ ಮಾಡಿದರು, ಹೋದವರೇ ನೇರವಾಗಿ ವಿಷಯ ತಿಳಿಸಿದರು: ಸಾರ್ ಪಾಪ ಅವರು ಚುನಾವಣೆಗೆ ನಿಲ್ಲಬೇಕಂತೆ ಒಂದು ಟಿಕೆಟ್ ಕೊಡಿ ಸಾರ್ ಹೋಗಲಿ ಎಂದರು.
ವಿಶ್ವನಾಥ್ ಆಡಿದ ಮಾತು ಕೇಳಿದ್ದೇ ತಡ ದೇವರಾಜ ಅರಸರ ಮುಖ ಸಿಟ್ಟಿನಿಂದ ಕೆಂಪಾಯಿತು. ಹಾಗಂತಲೇ, ಏನು? ನಿನ್ನ ಬಳಿ ಹೇಳಿ ಕಳಿಸಿದನಾ ಅವನು? ವಿಶ್ವನಾಥ್ ನಿನಗೊಂದು ವಿಷಯ ಗೊತ್ತಿರಲಿ, ನೀನು ಪೈಸೆ ಪೈಸೆಗೂ ಲೆಕ್ಕ ಹಾಕಿ ಚುನಾವಣೆಯಲ್ಲಿ ಗೆದ್ದು ಬಂದಿದ್ದೀಯ. ನಿನಗೆ ರಾಜಕೀಯ ಎಂದರೆ ಉದ್ಯಮವಲ್ಲ, ವ್ಯವಸ್ಥೆಯನ್ನು ಸುಧಾರಿಸಲು ಸಿಕ್ಕ ವೇದಿಕೆ. ಹೀಗಾಗಿ ನಿನಗೆ ಜನರ ಕೆಲಸ ಮಾಡಲು ಬೇಕಾದಷ್ಟು ಟೈಮು ಇದೆ. ಆದರೆ ಆತ ಬಿಸಿನೆಸ್ ಮನ್. ಒಂದು ವೇಳೆ ಆತ ಶಾಸಕನಾದರೆ ಏನು ಮಾಡುತ್ತಾನೆ ಹೇಳು? ತನ್ನ ಉದ್ಯಮವನ್ನು ಬೆಳೆಸಿಕೊಳ್ಳಲು ಈ ಅಧಿಕಾರವನ್ನು ಏಣಿ ಮಾಡಿಕೊಳ್ಳುತ್ತಾನೆ. ನೀನು ಬಡಜನರನ್ನು ಮೇಲೆತ್ತಲು ಏಣಿಯಾಗಬೇಕಾದವನು. ಆದರೆ ಆತ ಅದೇ ಜನರನ್ನು ಏಣಿಗಳನ್ನಾಗಿ ಮಾಡಿಕೊಂಡು ಮೇಲೇರಲು ಬಯಸುವವನು, ಅಂಥವರು ಶಾಸಕರಾದರೆ ಪ್ರಜಾಪ್ರಭುತ್ವಕ್ಕೆ ಅಪಾಯ. ಹೋಗು ನೀನಿನ್ನೂ ಸಣ್ಣವನು, ಅವನ ಲೆಕ್ಕಾಚಾರ ಏನು ಅನ್ನುವುದು ನಿನಗಿಂತ ಚೆನ್ನಾಗಿ ನನಗೆ ಅರ್ಥವಾಗುತ್ತದೆ ಎಂದರು.
ವಿಶ್ವನಾಥ್ ದುಸರಾ ಮಾತನಾಡಲಿಲ್ಲ. ಆದರೆ ಮುಂದೆ ಅದೇ ಉದ್ಯಮಿ ತಮ್ಮ ದುಡ್ಡಿನ ಬಲದಿಂದ ಶಾಸಕರಾದರು, ಮಂತ್ರಿಯಾದರು. ಅಷ್ಟೇ ಏಕೆ ತಮ್ಮ ಮಗನೂ ಶಾಸಕನಾಗಿ ಮಂತ್ರಿಯಾಗುವಂತೆ ನೋಡಿ ಕೊಂಡರು.
ಈಗ ಆ ಮಗನ ಮಗ ಕೂಡ ಶಾಸಕನಾಗಿ ಆಯ್ಕೆಯಾಗಿದ್ದಾರೆ. ಅಂದ ಹಾಗೆ ಉದ್ಯಮಿಗಳು ಶಾಸಕರಾದರೆ ಅವರಿಂದ ಜನರ ಕೆಲಸವಾಗು ವುದಿಲ್ಲ ಎಂಬ ಅರಸರ ಧೋರಣೆ ಮಾಯವಾಗಿ, ಆ ಧೋರಣೆಯ ವಿರೋಧಿ ಮನಃಸ್ಥಿತಿಯೇ ಆದರ್ಶವಾಗಿದೆ. ಈ ಘಟನೆಯನ್ನು ಏಕೆ ನೆನಪಿಸಿಕೊಳ್ಳಬೇಕೆಂದರೆ ಆರ್ಥಿಕ ಸಂಕಷ್ಟದ ಯುಗಕ್ಕೆ ಕಾಲಿಡುತ್ತಿರುವ ನಾವು ಈ ಸಂಕಷ್ಟದಿಂದ ಪಾರು ಮಾಡಲು ಹಾತೊರೆಯುವವರನ್ನು ಸೃಷ್ಟಿಸುತ್ತಿಲ್ಲ. ಬದಲಿಗೆ ಇಂತಹ ಸಂಕಷ್ಟಕ್ಕೆ ಕಾಣಿಕೆ ನೀಡುವವರನ್ನು ತಯಾರು ಮಾಡುತ್ತಿದ್ದೇವೆ. ಇದು ಬೇವು ಬಿತ್ತಿ ಮಾವು ಬಯಸುವುದಲ್ಲದೆ ಬೇರೇನೂ ಅಲ್ಲ.
ಕೊನೆಯ ಮಾತು
ಅಂದ ಹಾಗೆ ದೇಶದಲ್ಲೀಗ ಕಾಕ್ರೋಚ್ ಜನತಾ ಪಾರ್ಟಿಯದೇ ದೊಡ್ಡ ಸುದ್ದಿ. ಇವತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗಿರುವ ಈ ಪಾರ್ಟಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದೆ. ಇಂತಹ ಧ್ವನಿ ಮೇಲೇಳಲು ಯಾವುದೋ ಒಂದು ಘಟನೆ ಕಾರಣವಲ್ಲ. ಬದಲಿಗೆ ಹಿಂದಿನಿಂದಲೂ ಭ್ರಷ್ಟಾಚಾರವನ್ನು ಪೋಷಿಸಿಕೊಂಡು ಬಂದ ವ್ಯವಸ್ಥೆಯೇ ಕಾರಣ.





