ದೇಶ-ವಿದೇಶಗಳ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ನೋಡುವುದೇ ಆನಂದ. ಅದನ್ನು ಹೊರಲಿರುವ ಗಜಪಡೆ ಜೊತೆಗೆ ಆಗಮಿಸುವ ಮಾವುತರು, ಕಾವಾಡಿಗಳು ಅಷ್ಟೇ ಪ್ರಾಮುಖ್ಯತೆ ಪಡೆಯುತ್ತಾರೆ. ದಸರಾ ಸಂದರ್ಭದಲ್ಲಿ ನಾಡಿನಲ್ಲಿದ್ದಾಗ ಮಾವುತರು, ಕಾವಾಡಿಗಳನ್ನು ಗಣ್ಯಾತಿಗಣ್ಯರಂತೆ ಕಾಣುವ ಅರಣ್ಯ ಇಲಾಖೆ ಅಧಿಕಾರಿಗಳು, ಕಾಡಿಗೆ ಮರಳುತ್ತಿದ್ದಂತೆ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾರೆ. ಮತ್ತೆ ಅವರು ನೆನಪಾಗುವುದು ಮತ್ತೊಮ್ಮೆ ದಸರೆ ಬಂದಾಗ ಮಾತ್ರ!
ಹಾಗಾಗಿಯೇ, ಸಾಕಾನೆಗಳನ್ನು ಜತನದಿಂದ ನೋಡಿಕೊಳ್ಳುವ ಮಾವುತರು, ಕಾವಾಡಿಗಳು ವೇತನ ತಾರತಮ್ಯ ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿ ದಸರಾಗೂ ಮುನ್ನ ಒತ್ತಾಯಿಸಿ, ಸರ್ಕಾರದ ಮೇಲೆ ಒತ್ತಡ ಹೇರಲು ಆರಂಭಿಸುತ್ತಾರೆ. ದಸರಾಗೂ ಮುನ್ನ ಸಿಗುವ ಭರವಸೆ, ದಸರಾ ಮುಗಿದ ಬಳಿಕ ಅಷ್ಟೇ ಶೀಘ್ರವಾಗಿ ವಿಸ್ಮತಿಪಟಲಕ್ಕೆ ಸೇರಿಬಿಡುತ್ತದೆ. ಅರಣ್ಯ ಇಲಾಖೆಯವರು ಕಾನೂನಾತ್ಮಕವಾಗಿ ಅರಣ್ಯ ಇಲಾಖೆ ಸಿಬ್ಬಂದಿ ಅಂತ ಮಾವುತರು, ಕಾವಾಡಿಗಳನ್ನು ಪರಿಗಣಿಸಿ ವೇತನ ತಾರತಮ್ಯ ಸರಿಪಡಿಸುವುದಕ್ಕೆ ಇದು ಸಕಾಲವಾಗಿದೆ. ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬ ನೌಕರರನ್ನೂ ಸಮಾನವಾಗಿ ನೋಡಬೇಕಾದ ಅರಣ್ಯ ಇಲಾಖೆ ತಾರತಮ್ಯ ಮಾಡುತ್ತಿರುವ ವಿಚಾರ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆಗಸ್ಟ್ ೭ರಂದು ಗಜಪಯಣ ಆರಂಭಕ್ಕೆ ದಿನಾಂಕವನ್ನು ಜಿಲ್ಲಾಡಳಿತ ನಿಗದಿಪಡಿಸಿದೆ. ಇದರ ಬೆನ್ನಲ್ಲೇ ಮಾವುತರು ಮತ್ತು ಕಾವಾಡಿಗಳು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಹೋರಾಟ ಆರಂಭಿಸಿದ್ದಾರೆ. ದಸರಾ ಇತಿಹಾಸದಲ್ಲಿ ೨೦೦೯ರಲ್ಲಿ ಇದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರೂ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಶೋಭಾ ಕರಂದ್ಲಾಜೆ ಅವರು ಮಾವುತರು, ಕಾವಾಡಿಗಳ ಮನವಿಗೆ ಆಲಿಸಿ ಒಂದಿಷ್ಟು ಸಹಾಯ ಮಾಡಿದ್ದರು. ಅರಮನೆ ಆವರಣದಲ್ಲಿ ಮಾವುತರ ಕುಟುಂಬಸ್ಥರಿಗೆ ಔತಣಕೂಟ ಏರ್ಪಡಿಸುವ ಸಂಪ್ರದಾಯವನ್ನೂ ಮುನ್ನೆಲೆಗೆ ತಂದರು.
ಅದಾದ ಬಳಿಕವೂ ೨೦೧೦, ೨೦೧೧, ೨೦೧೫, ೨೦೧೮, ೨೦೧೯ ಹಾಗೂ ೨೦೨೧ರ ದಸರಾ ವೇಳೆಯಲ್ಲೂ ಮಾವುತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆನೆ ಪರಿಪಾಲಕರಿಗೆ ಇವಿಷ್ಟೇ ಕ್ಷಣಿಕ ಗೌರವಗಳಷ್ಟೇ ಸಾಲದು. ಬದುಕು ದೊಡ್ಡದಿರುವುದರಿಂದ ಅವರೆಲ್ಲರಿಗೂ ಶಾಶ್ವತ ಪರಿಹಾರ ಕಲ್ಪಿಸಿಕೊಡುವ ಕಡೆಗೆ ಸರ್ಕಾರ ಗಮನ ಹರಿಸಬೇಕು. ಶಾಸಕರು, ಸಂಸದರ ವೇತನವನ್ನು ಯಾವುದೇ ಚರ್ಚೆಗಳಿಲ್ಲದೆ ತಾವೇ ಒಪ್ಪಿಗೆ ನೀಡಿ ಹೆಚ್ಚಿಸಿಕೊಳ್ಳುವ ದುರಿತ ದಿನಗಳಲ್ಲಿ ಧ್ವನಿಯೇ ಇಲ್ಲದ ಮಾವುತರ ವರ್ಗಕ್ಕೆ ಸರ್ಕಾರವೇ ದನಿಯಾಗಬೇಕು. ಅವರನ್ನು ದಸರೆಗೆ ಮಾತ್ರ ಬಳಸಿ, ಬಿಸಾಡುವ ಪರಿಪಾಠ ನಿಲ್ಲಬೇಕು. ಈ ಬಗ್ಗೆ ಕರ್ನಾಟಕ ರಾಜ್ಯ ಆನೆ ಮಾವುತ ಹಾಗೂ ಕಾವಾಡಿಗರ ಸಂಘ ಶಿವಮೊಗ್ಗ ಘಟಕ ಮತ್ತು ಸಾಕಾನೆ ಶಿಬಿರದ ಸಿಬ್ಬಂದಿ ವರ್ಗದವರು ತಮ್ಮ ಬೇಡಿಕೆಗಳನ್ನು ಮುಂದಿಡುತ್ತಲೇ ಬಂದಿದ್ದಾರೆ. ೨೦೨೨ರೊಳಗೆ ತಮ್ಮ ವೇತನ ತಾರತಮ್ಯವನ್ನು ಸರಿಪಡಿಸುವಂತೆ ಮತ್ತೊಮ್ಮೆ ಕೋರಿದೆ. ಅಲ್ಲದೆ, ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ಒಟ್ಟುಗೂಡಿಸಿ ಒಮ್ಮತದ ತೀರ್ಮಾನ ಕೈಗೊಂಡು, ಮೈಸೂರು ದಸರಾದಲ್ಲಿ ಭಾಗವಹಿಸದಿರಲು ತೀರ್ಮಾನಿಸಿವೆ. ಅವರ ಬೇಡಿಕೆಗಳೂ ಈಡೇರಿಸಲು ಅರ್ಹವಾಗಿವೆ.
ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗೆ ನೀಡುವ ವೇತನವನ್ನು ತಮಗೂ ನೀಡುವಂತೆ ಇಟ್ಟ ಪ್ರಸ್ತಾವಿತ ಫೈಲ್(ಎಫ್‌ಇಇ೧೮೪ ಎಫ್‌ಎನ್‌ಐ-೨೦೨೨, ಕಂಪ್ಯೂಟರ್ ನಂ. ೭೮೩೪೧) ಹಣಕಾಸು ಇಲಾಖೆಯಲ್ಲಿದೆ. ಅದಕ್ಕೆ ಯಾವುದೇ ರೀತಿಯ ಸ್ಪಂದನೆ ದೊರೆಯದೇ ಇರುವುದರಿಂದ ಮಾವುತರು ಮತ್ತು ಕಾವಾಡಿಗಳು ಆನೆ ಮತ್ತು ಹುಲಿ ಕಾರ್ಯಾಚರಣೆ ಹಾಗೂ ನಾಡಹಬ್ಬ ದಸರಾ ಉತ್ಸವದಲ್ಲಿ ಭಾಗವಹಿಸದಿರಲು ತೀರ್ಮಾನಿಸಿದ್ದಾರೆ.
ಕರ್ನಾಟಕದಲ್ಲಿ ಸದ್ಯ ೯೦ ಮಂದಿ ಮಾವುತರು, ೫೬ ಮಂದಿ ಕಾವಾಡಿಗಳು ಹಾಗೂ ಆನೆ ಜಮೆದಾರರು ೮ ಮಂದಿ ಇದ್ದಾರೆ. ಇವರನ್ನೇ ನಂಬಿಕೊಂಡು ಕುಟುಂಬಗಳಿವೆ. ಕಾಡಾನೆಗಳನ್ನು ಖೆಡ್ಡಾಗೆ ಬೀಳಿಸಿ, ಅವುಗಳನ್ನು ಆನೆ ಶಿಬಿರಗಳಿಗೆ ತಂದು ಪಳಗಿಸಿ ಮೈಸೂರು ದಸರಾ, ಹುಲಿ ಮತ್ತು ಕಾಡಾನೆಗಳ ಕಾರ್ಯಾಚರಣೆ, ಆನೆ ಕೂಂಬಿಂಗ್‌ಗೆ ಬಳಸಲು ಮಾವುತರು ಮತ್ತು ಕಾವಾಡಿಗಳ ಅವಶ್ಯಕತೆ ಹೆಚ್ಚಾಗಿರುತ್ತದೆ. ಈ ಕೆಲಸವನ್ನು ಅರಣ್ಯ ಇಲಾಖೆ ಸಿಬ್ಬಂದಿ ನಿರ್ವಹಿಸಲು ಸಾಧ್ಯವಿಲ್ಲ. ಅದರಲ್ಲೂ ಪಶ್ಚಿಮ ಘಟ್ಟಗಳ ಭಾಗವಾಗಿರುವ ಬಂಡೀಪುರ, ನಾಗರಹೊಳೆ, ಪುಷ್ಪಗಿರಿ ಮತ್ತಿತತರು ಕಾಡು ಪ್ರದೇಶಗಳಲ್ಲಿ ಆಗಾಗ ಸಂಭವಿಸುವ ಹುಲಿ, ಕಾಡಾನೆ ಕಾರ್ಯಾಚರಣೆ ನಿರ್ವಹಿಸುವ ಈ ವರ್ಗದ ಬೇಡಿಕೆಗಳನ್ನು ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಿ, ನ್ಯಾಯ ಒದಗಿಸಬೇಕಾಗಿದೆ. ಈ ಸಲದ ದಸರಾ ಮಹೋತ್ಸವದೊಳಗೆ ಮಾವುತರು, ಕಾವಾಡಿಗಳ ಬೇಡಿಕೆಗಳನ್ನು ಈಡೇರಿಸಿದಲ್ಲಿ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಹೆಸರು ಇತಿಹಾಸದಲ್ಲಿ ಉಳಿಯಲಿದೆ.