Mysore
27
broken clouds
Light
Dark

ಕರ್ನಾಟಕದಲ್ಲಿ ಜಾತಿ ಆಧಾರಿತ ಮಠಗಳ ರಾಜಕೀಯ ಪ್ರಭಾವವನ್ನು ಕಡಿಮೆ ಮಾಡಲು ಇದು ಸಕಾಲ!

ಜಾತಿ- ಕಾವಿ ಮತ್ತು ಪ್ರಜಾಸತ್ತೆಯ ಆಶಯಗಳು

ಸುಗತ ಶ್ರೀನಿವಾಸರಾಜು

ಯಾವುದೇ ಬಿಕ್ಕಟ್ಟಿನ ಪರಿಸ್ಥಿತಿಯನ್ನು ವ್ಯರ್ಥವಾಗಲು ಬಿಡಕೂಡದು ಎನ್ನು ವುದು ರೂಢಿಗತವಾದ ವಿವೇಚನೆ. ಬಿಕ್ಕಟ್ಟುಗಳನ್ನು ಸುಧಾರಣೆಯ ಅವಕಾಶ ಗಳು ಎಂದೂ ನೋಡಬೇಕಾಗುತ್ತದೆ. ಕರ್ನಾಟಕದ ಮಠಾ ಧೀಶರೊಬ್ಬರು ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳ ಗಾದ ನಂತರ ರಾಜ್ಯದಲ್ಲಿ ಜಾತಿ ಆಧಾರಿತ ಮಠಗಳ ಅಪಾರದರ್ಶಕತೆ ಮತ್ತು ಈ ಮಠಗಳ ಅಗಾಧ ಪ್ರಭಾವಗಳು ಹೆಚ್ಚು ಗಮನ ಸೆಳೆಯುತ್ತಿವೆ. ಬಹುಶಃ ಸಮತೋಲನ ಸಾಧಿಸಲು ಇದು ಸಕಾಲ ಎನಿಸುತ್ತದೆ.
ಲೈಂಗಿಕ ಕಿರುಕುಳಕ್ಕೊಳಗಾದ ಸಂತ್ರಸ್ತ ಬಾಲಕಿಯರು ದೂರು ಸಲ್ಲಿಸಿದ ನಂತರ ಸಾರ್ವಜನಿಕ ಆಕ್ರೋಶವೂ ಹೆಚ್ಚಾದ ಕೂಡಲೇ ಪ್ರಮುಖ ರಾಜಕೀಯ ನಾಯಕರು, ತಮ್ಮ ಸಾಮಾಜಿಕ ಮಾಧ್ಯಮಗಳ ಕಸರತ್ತುಗಳನ್ನೂ ಮರೆತು, ಟ್ವೀಟು ಗಳನ್ನೂ ಬದಿಗಿಟ್ಟು, ದಿವ್ಯ ಮೌನಕ್ಕೆ ಜಾರಿಬಿಟ್ಟಿದ್ದಾರೆ. ಸಾಮಾನ್ಯವಾಗಿ ರಾಜಕಾರಣಿ ಗಳಲ್ಲಿ ನೈತಿಕ ಅನುತಾಪವನ್ನು ನಿರೀಕ್ಷಿಸಲಾಗುವುದಿಲ್ಲವಾದರೂ, ಈ ಪ್ರಕರಣದಲ್ಲಿ ರಾಜ್ಯ ರಾಜಕೀಯ ವಲಯವನ್ನು ಮೌನ ಸಂಹಿತೆಯೊಂದು ಆವರಿಸಿರುವಂತೆ ತೋರುತ್ತಿದೆ. ಅಳೆದು ಸುರಿದು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸುವುದಷ್ಟೇ ಅಲ್ಲದೆ ತಮ್ಮ ಮತಬ್ಯಾಂಕುಗಳನ್ನೂ ಗಮನಿಸುತ್ತಿರುವಂತೆ ಕಾಣುತ್ತಿದೆ. ಜಾತಿ ಆಧಾರಿತ ಮಠಗಳು ರಾಜಕೀಯ ಪಕ್ಷಗಳಿಗೆ ಅಥವಾ ಅಭ್ಯರ್ಥಿಗಳಿಗೆ ಅವರದೇ ಆದ ಪ್ರಭಾವಿ ವಲಯದಲ್ಲಿ ಅನುಕೂಲಕರವಾದ, ಕೆಲವೊಮ್ಮೆ ಪ್ರತಿಕೂಲವಾದ, ವಾತಾವರಣವನ್ನು ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಮುಂದಿನ ಚುನಾವಣೆಗಳು ಇನ್ನು ಕೆಲವೇ ತಿಂಗಳುಗಳ ನಂತರ ನಡೆಯಲಿವೆ.
ಪ್ರಮುಖ ರಾಜಕೀಯ ನಾಯಕರ ಪೈಕಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಂದು ಅಪವಾದ ಎಂದು ಹೇಳಬಹುದು. ಆರೋಪಿತ ಮಠಾಧೀಶರ ವ್ಯಕ್ತಿತ್ವ ಮತ್ತು ಈ ಪ್ರಕರಣದಲ್ಲಿ ಅವರ ನಿಷ್ಕಳಂಕತೆಯನ್ನು ಸಮ ರ್ಥಿಸುವ ಹೇಳಿಕೆಯನ್ನು ನೀಡುವ ಮೂಲಕ ಬಿಎಸ್‌ವೈ  ಶರಣರ ರಕ್ಷಣೆಗೆ ಧಾವಿಸಿದ್ದಾರೆ. ಬಿಜೆಪಿಯ ಸಂಸದೀಯ ಮಂಡಲಿಯ ಸದಸ್ಯರಾಗಿರುವ ಯಡಿಯೂರಪ್ಪ, ಯಾವುದೇ ರೀತಿಯ ಮುಜುಗರವೂ ಇಲ್ಲದೆ, ತಮ್ಮ ಸಮು ದಾಯಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಮಠಾಧೀಶರನ್ನು ಸಮರ್ಥಿಸುವು ದನ್ನೇ ತಮ್ಮ ಆದ್ಯ ಕರ್ತವ್ಯ ಎಂದು ಭಾವಿಸಿದ್ದಾರೆ. ಸಾಂವಿಧಾನಿಕ ಪ್ರಜ್ಞೆಯಾಗಲೀ, ಕಾನೂನುಬದ್ಧತೆಯಾಗಲೀ ಅವರನ್ನು ಕಾಡಿಯೇ ಇಲ್ಲ.
ಕರ್ನಾಟಕದ ರಾಜಕಾರಣದಲ್ಲಿ ಜಾತಿ ಅಸ್ಮಿತೆಯು ಪ್ರಧಾನವಾಗಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಲುಗಾಡಿಸಿದಂತಿದೆ.  ಭಾರತದ ಇತರ ರಾಜ್ಯಗಳಲ್ಲಿ ಮಂಡಲ್ ವಿವಾದವು ಅಧಿಕಾರ ರಾಜಕಾರಣದಲ್ಲಿ ಸಾಕಷ್ಟು ಪಲ್ಲಟಗಳನ್ನು ಉಂಟು ಮಾಡುವುದಕ್ಕೂ ಮುನ್ನವೇ ೧೯೭೦ರ ದಶಕದಲ್ಲೇ ದೇವರಾಜ ಅರಸು ತಮ್ಮ ಆಡಳಿತಾವಧಿಯಲ್ಲಿ ಕರ್ನಾಟಕದ ರಾಜಕಾರಣದಲ್ಲಿ ಪ್ರಬಲವಾಗಿದ್ದ ಲಿಂಗಾ ಯತ, ಒಕ್ಕಲಿಗ ಸಮುದಾಯಗಳ ಪ್ರಾಬಲ್ಯವನ್ನು ಭೇದಿಸಲು ಹಿಂದುಳಿದ ಜಾತಿಗ ಳನ್ನು ಕ್ರೋಢೀಕರಿಸುವ ಪ್ರಯತ್ನ ಮಾಡಿದ್ದರು.  ಅದರೆ ದೇವರಾಜ ಅರಸು ಅವರ ಪ್ರಯತ್ನ ಕೇವಲ ರಾಜಕೀಯ ಪ್ರಕ್ರಿಯೆಗೆ ಸೀಮಿತವಾಗಿತ್ತು. ಆದರೆ ೨೦೦೦ದ ನಂತರ ಬಿ.ಎಸ್.ಯಡಿಯೂರಪ್ಪ ಜಾತಿ ವ್ಯವಹಾರಗಳಿಗೆ ಒಂದು ಹೊಸ ಆಯಾಮ ವನ್ನೇ ನೀಡಿದ್ದರು. ಹಿಂದುಳಿದ ಸಮುದಾಯಗಳ ಮತಗಳನ್ನು ಕ್ರೋಢೀಕರಿಸಲು ಯಡಿಯೂರಪ್ಪ ಜಾತಿ ಸೂಚಿತ ಕೇಸರಿಯನ್ನು ವ್ಯವಸ್ಥಿತವಾಗಿ ಬಳಸಲಾರಂಭಿಸಿ ದ್ದರು. ಈ ನಿಟ್ಟಿನಲ್ಲಿ ಯಡಿಯೂರಪ್ಪ ಜಾತಿ ಮಠಗಳನ್ನು ಸಬಲೀಕರಣಗೊಳಿಸುವ ಮೂಲಕ, ಈ ಮಠಮಾನ್ಯಗಳೇ ರಾಜಕಾರಣಿಗಳ ಮತ್ತು ರಾಜಕೀಯ ಪಕ್ಷಗಳ ಪರ- ವಿರುದ್ಧ ನಿಲ್ಲುವಂತಹ ಸನ್ನಿವೇಶವನ್ನು ಸೃಷ್ಟಿಸಿದ್ದರು.
ಆ ವೇಳೆಗಾಗಲೇ ಲಿಂಗಾಯತ ಸಮುದಾಯ ಸಂಘಟಿತವಾಗಿತ್ತು. ಶತಮಾನ ಗಳ ಇತಿಹಾಸವಿದ್ದ ಅನೇಕ ಲಿಂಗಾಯತ ಮಠಗಳು ಸ್ವಾಯತ್ತತೆಯನ್ನೂ ಹೊಂದಿದ್ದು, ಮೇಲ್ಜಾತಿ ಹಿಂದೂ ಮತ್ತು ವೈದಿಕ ಸಂಪ್ರದಾಯಗಳಿಂದ ವಿಭಿನ್ನ ನೆಲೆಯಲ್ಲಿದ್ದವು. ೨೦ನೆಯ ಶತಮಾನದ ಕೊನೆಯ ವೇಳೆಗೆ ಒಕ್ಕಲಿಗ ಮಠಗಳೂ ಲಿಂಗಾಯತ ಮಠಗಳನ್ನೇ ಅನುಕರಿಸಲಾರಂಭಿಸಿದವು. ಆದರೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ರಾಜಕೀಯ ತಳಪಾಯವನ್ನು ವಿಸ್ತರಿಸಿಕೊಳ್ಳಲು ಮತ್ತು ಪಕ್ಷವನ್ನು ವಿಸ್ತರಿಸಲು ಹಿಂದುಳಿದ ವರ್ಗಗಳನ್ನೂ, ಶೋಷಿತ ಸಮುದಾಯಗಳನ್ನೂ ಉತ್ತೇಜಿಸಿ, ಆಯಾ ಜಾತಿಗಳ ಮಠಗಳ ಮೂಲಕ ಸಂಘಟಿಸಲು ಪ್ರೋತ್ಸಾಹಿಸಿದ್ದರು.
ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಈ ಮಠಮಾನ್ಯಗಳಿಗೆ ಅಪಾರ ಪ್ರಮಾಣದ ಅನುದಾನಗಳನ್ನು, ನಿಧಿಯನ್ನು ಒದಗಿಸಲಾರಂಭಿಸಿದ್ದರು. ಅಧಿ ಕಾರದ ಶಕ್ತಿ ಕೇಂದ್ರಗಳನ್ನು ಸಂಪರ್ಕಿಸುವುದು ಮಠಗಳಿಗೆ ಸುಲಭವಾಗತೊಡಗಿತ್ತು. ಇದರ ಪರಿಣಾಮ ಪ್ರಜಾಸತ್ತಾತ್ಮಕ ಅಡಿಪಾಯ ಶಿಥಿಲವಾಗಿದ್ದೇ ಅಲ್ಲದೆ, ಕರ್ನಾಟಕದ ರಾಜಕೀಯ ಪರಂಪರೆಯೂ ಶಿಥಿಲವಾಗತೊಡಗಿತು. ಧಾರ್ಮಿಕ ಕೇಸರಿಯ ಸ್ಥಾನದಲ್ಲಿ ಯಡಿಯೂರಪ್ಪ ಜಾತಿ ಕೇಸರಿಯನ್ನು ಪ್ರೋತ್ಸಾಹಿಸಿದ್ದರು. ಇದು ಅವರ ಪಕ್ಷದ ಅಧಿಕೃತ ಕಾರ್ಯಸೂಚಿಯೂ ಆಗಿತ್ತು. ಹೀಗೆ ಮಾಡುವ ಮೂಲಕ ಯಡಿ ಯೂರಪ್ಪ ದೇವರಾಜ ಅರಸು ಅವರ ಪ್ರಯೋಗವನ್ನು ಪಲ್ಲಟಗೊಳಿಸಿ ಸ್ವತಃ ತಾವೇ ಹಿಂದುತ್ವ ಹೊದಿಕೆಯ ಮಂಡಲ್ ರಾಜಕಾರಣಿಯಾಗಿ ರೂಪುಗೊಂಡರು.
ಕೆಲವೇ ವರ್ಷಗಳಲ್ಲಿ ಜಾತಿ ಕೇಂದ್ರಿತ ಮಠಗಳು ಪರ್ಯಾಯ ಶಕ್ತಿ ಕೇಂದ್ರಗಳಾಗಿ ಪರಿಣಮಿಸಿದ್ದವು. ಈ ಮಠಗಳ ಆಧ್ಯಾತ್ಮಿಕ ಹೊಳಹು ಕ್ರಮೇಣ ಕ್ಷೀಣಿಸತೊಡಗಿತ್ತು. ಚುನಾವಣೆಗಳಲ್ಲಿ ಸ್ಪರ್ಧಿಸಲು ನಿರ್ದಿಷ್ಟ ವ್ಯಕ್ತಿಗಳಿಗೆ ಟಿಕೆಟ್ ನೀಡುವಂತೆ ದುಂಬಾಲು ಬೀಳುವುದರಿಂದ ಹಿಡಿದು ತಮ್ಮ ಸಮುದಾಯದ ನಾಯಕ ನಿಗೇ ಮುಖ್ಯಮಂತ್ರಿ ಹುದ್ದೆಯನ್ನೂ ನೀಡಬೇಕು ಎಂದು ಆಗ್ರಹಿಸುವವರೆಗೆ ಮಠ ಗಳು ಒಂದು ರಾಜಕೀಯ ಪರಿಭಾಷೆಯನ್ನು ರೂಢಿಸಿಕೊಂಡಿದ್ದು ಎಚ್ಚರಿಕೆಯ ಸೂಚನೆಯೂ ಆಗಿತ್ತು. ಕರ್ನಾಟಕದಲ್ಲಿ ಜಾತಿ ಮಠಗಳು ಮತ್ತು ರಾಜಕೀಯ ಪಕ್ಷಗಳ ನಡುವಿನ ಶಕ್ತಿ ಸಂಚಯ ಅಡೆತಡೆಗಳಿಲ್ಲದೆ ನಡೆದಿರು ವುದಕ್ಕೆ ಸಾಕ್ಷಿಯಾಗಿ, ಇದೇ ವರ್ಷದ ಮೇ ತಿಂಗಳಲ್ಲಿ ಬಿಜೆಪಿಯ ಮಾಜಿ ಸಚಿವರೊಬ್ಬರು ಒಂದು ಜಾತಿ ಸಮುದಾಯದ ಮಠಕ್ಕೆ ಮಠಾಧೀಶರಾದ ಪ್ರಸಂಗವನ್ನು ಗುರುತಿಸಬಹುದು. ಓರ್ವ ರಾಜಕಾರಣಿಯಾಗಿ ತಮ್ಮ ಸಮುದಾಯಕ್ಕಾಗಿ ಮಠ ಸ್ಥಾಪಿಸಲು ಪ್ರೋತ್ಸಾಹಿಸಿದ್ದ ಈ ವ್ಯಕ್ತಿ ಅದಕ್ಕೆ ಸಂಪನ್ಮೂಲಗಳನ್ನೂ ಒದಗಿಸಿದ್ದರು. ಈ ಮಠಾಧೀಶರ ಪೀಠಾ ರೋಹಣ ಸಂದರ್ಭದಲ್ಲಿ ಸಹಜವಾಗಿಯೇ ಯಡಿಯೂರಪ್ಪ ಉಪಸ್ಥಿತರಿದ್ದರು.
ಇತ್ತೀಚಿನ ವರ್ಷಗಳಲ್ಲಿ ರಾಜ್ಯಕ್ಕೆ ಭೇಟಿ ನೀಡುವ ಯಾವುದೇ ರಾಜಕೀಯ ನಾಯಕರನ್ನು ಸ್ಥಳೀಯ ನಾಯಕರು ಈ ಜಾತಿ ಮಠಗಳಿಗೆ ಕರೆದೊಯ್ದು, ಮಠಾಧೀಶರನ್ನು ಭೇಟಿ ಮಾಡಿಸಿ, ಸ್ವಾಮೀಜಿಗಳ ಪಾದಕ್ಕೆ ನಮಸ್ಕರಿಸುವ ಫೋಟೋ ಕ್ಲಿಕ್ಕಿಸಿಕೊಳ್ಳುವುದು ಸಾಮಾನ್ಯವಾಗಿಹೋಗಿದೆ.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಧರ್ಮ ಮತ್ತು ಪ್ರಭುತ್ವದ ನಡುವೆ ಇದ್ದ ಅಂತರವನ್ನು ತೊಡೆದುಹಾಕಲಾಗಿದ್ದು, ಕರ್ನಾಟಕದಲ್ಲಿ ಇದು ಮತ್ತೊಂದು ರೀತಿಯಲ್ಲಿ ವ್ಯಕ್ತವಾಗುತ್ತಿದೆ. ಈ ಪ್ರಯೋಗದಲ್ಲಿ ಈಗ ಕೆಲವು ಗಂಭೀರ ಆರೋಪಗಳನ್ನು ಎದುರಿಸಿ ಬಂಧನಕ್ಕೊಳಗಾಗಿರುವ ಮುರುಘಾ ಮಠದ ಶರಣರು, ಯಡಿಯೂರಪ್ಪ ಅವರ ಮಿತ್ರರಂತೆಯೇ ಇದ್ದವರು.
ಕರ್ನಾಟಕದಲ್ಲಿ ಮಠ ಪರಂಪರೆ ಮೂಲತಃ ಬ್ರಾಹ್ಮಣರು ಮತ್ತು ಲಿಂಗಾ ಯತರಲ್ಲಿ ಪ್ರಚಲಿತವಾಗಿದೆ. ಭೌಗೋಳಿಕ ಪ್ರದೇಶಗಳ ಸನ್ನಿವೇಶಗಳಿಗೆ ಅನು ಗುಣವಾಗಿ ಮತ್ತು ಚಾರಿತ್ರಿಕ ಪ್ರಭಾವದ ಹಿನ್ನೆಲೆಯಲ್ಲಿ, ಇತರ ಸಮುದಾಯ ಗಳೂ ಸಹ, ಹಿಂದುಳಿದ ಜಾತಿಗಳನ್ನೂ ಸೇರಿದಂತೆ, ಆಧ್ಯಾತ್ಮಿಕ ಮಾರ್ಗದರ್ಶನ ಕ್ಕಾಗಿ ಇವೆರಡರಲ್ಲಿ ಒಂದನ್ನು ಅನುಸರಿಸಿದ್ದಾರೆ. ಶೋಷಿತರು ಈ ಚೌಕಟ್ಟಿನಿಂದ ಹೊರಗೇ ಇದ್ದರು. ಆದರೆ ೨೦೦೦ದ ಆರಂಭದಲ್ಲಿ ಕರ್ನಾಟಕ ಒಂದು ವಿನೂತನ ಸಾಮಾಜಿಕ ವಿದ್ಯಮಾನಕ್ಕೆ ಸಾಕ್ಷಿಯಾಗಿತ್ತು. ಮುರುಘ ರಾಜೇಂದ್ರ ಮಠದ ಶಿವಮೂರ್ತಿ ಶರಣರು ಹಿಂದುಳಿದ ಜಾತಿಗಳಿಗೂ, ಶೋಷಿತರಿಗೂ ಸ್ವಾಯತ್ತ ಮಠಗಳನ್ನು ಸ್ಥಾಪಿಸಲು ಅನುವು ಮಾಡಿಕೊಟ್ಟಿದ್ದರು. ಈ ಸಮುದಾಯಗಳಿಂದ (ಕ್ಷೌರಿಕರು, ಮಡಿವಾಳರು, ಜಿಪ್ಸಿಗಳು, ಚಮ್ಮಾರರು ಇತ್ಯಾದಿ) ಕೆಲವು ಆಯ್ದ ವ್ಯಕ್ತಿ ಗಳಿಗೆ ಸಂತ ಪದವಿಯನ್ನು ನೀಡಿದರು. ಇವರಿಗೆ ಲಿಂಗಾಯತ ಸಂಪ್ರದಾಯದ ಅನುಸಾರ ಆಧ್ಯಾತ್ಮಿಕ ನೆಲೆಯಲ್ಲಿ ದೀಕ್ಷೆ ನೀಡಿದ್ದೇ ಅಲ್ಲದೆ, ಬಂಡವಾಳಿಗ ಉದ್ಯ ಮಿಯ ರೀತಿಯಲ್ಲಿ ಅವರಿಗೆ, ತಮ್ಮ ಮಠದ ಒಡೆತನದಲ್ಲಿದ್ದ ಅಪಾರ ಭೂ ಸಂಪತ್ತಿ ನಿಂದಲೇ,  ಕೆಲವು ಎಕರೆಗಳ ಭೂಮಿಯನ್ನೂ ಒದಗಿಸಿದ್ದರು. ಈ ಹೊಸ ಮಠಗಳು ಮತ್ತು ಸ್ವಾಮೀಜಿಗಳು ತಮ್ಮ ಬೆನ್ನೆಲುಬಾಗಿ ಇರುತ್ತಾರೆ, ಇವರನ್ನು ರಾಜಕೀಯ ವಲಯದಲ್ಲಿ ಬಳಸಿಕೊಳ್ಳಬಹುದು ಎಂಬ ಆಲೋಚನೆಯೂ ಇವರಲ್ಲಿತ್ತು.
ಈ ಪ್ರಯೋಗವನ್ನು ಆರಂಭದಲ್ಲಿ ಹಿಂದುಳಿದ ಜಾತಿಗಳ ಮತ್ತು ಶೋಷಿತರ ಸಬಲೀಕರಣ ಎಂದೇ ಕೆಲವರು ಭಾವಿಸತೊಡಗಿದ್ದರು. ಮಂದ ದೃಷ್ಟಿಯ ಕೆಲವು ಪ್ರಗತಿಪರರು ಇದನ್ನು, ಜಾತಿ ಶ್ರೇಣಿಯಲ್ಲಿ ತಳಮಟ್ಟದಲ್ಲಿರುವ ಜನತೆಯನ್ನು ವೈದಿಕ ಸಂಪ್ರದಾಯದಲ್ಲಿ ಒಳಗೊಳ್ಳುವ ಸಂಘಪರಿವಾರದ ರಾಜಕಾರಣಕ್ಕೆ ಪ್ರತಿ ಯಾದ ಒಂದು ವೇದಿಕೆ ಎಂದೂ ಭಾವಿಸಿದ್ದರು. ಈ ಪರ್ಯಾಯ ಬೆಳವಣಿಗೆ ಯಲ್ಲಿ ಕೆಲವು ಹಿಂದುಳಿದ ಸಮುದಾಯಗಳು, ವಿಶ್ವಕರ್ಮರು, ನೇಕಾರರು ಮತ್ತು ಕೆಲವು ಅರಣ್ಯವಾಸಿಗಳು ವೈದಿಕ ಸಂಪ್ರದಾಯಕ್ಕೆ ಒಳಪಡುವ ಪ್ರಕ್ರಿಯೆ ಯನ್ನೂ ಗುರುತಿಸಬಹುದು. ಸಂವಿಧಾನವು ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿ ಯುವಿಕೆಯನ್ನು ಸರಿಪಡಿಸಲು ಆಗ್ರಹಿಸುತ್ತದೆ. ಆದರೆ ಕರ್ನಾಟಕದಲ್ಲಿ ಆಧ್ಯಾತ್ಮಿಕ ಹಿಂದುಳಿಯುವಿಕೆಯೂ ಒಂದು ಮಾನ ದಂಡವಾಗಿ ಪರಿಣಮಿಸಿತ್ತು. ಇದು ಜಾತಿ ವಿಭಜನೆಯನ್ನು ತೀಕ್ಷ್ಣಗೊಳಿಸಿದ್ದೇ ಅಲ್ಲದೆ ಜಾತಿಯ ಸಾಂಸ್ಥೀಕರಣಕ್ಕೆ ಎಡೆಮಾಡಿ ಕೊಟ್ಟಿತ್ತು. ತತ್ಪರಿಣಾಮ ಪ್ರಜಾಪ್ರಭುತ್ವವು ಕಾರ್ಯ ನಿರ್ವಹಿಸದಂತಾಯಿತು.
ಈಗ ಕರ್ನಾಟಕದ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಈ ಅಸಮತೋಲನವನ್ನು ಸರಿಪಡಿಸುವ ಸಮಯ ಎದುರಾಗಿದ್ದು, ಜಾತಿ ಮಠಗಳನ್ನು ಅವುಗಳ ಆಧ್ಯಾತ್ಮಿಕ ಗುರಿ ಸಾಧನೆ ಮತ್ತು ಸಮಾಜ ಸೇವೆಗೆ ಮಾತ್ರವೇ ಸೀಮಿತ ಗೊಳಿಸಲು ಮುಂದಾಗಬೇಕಿದೆ. ಮತದಾರರ ಮನಸ್ಸಿನಲ್ಲಿ ಅನುಮಾನಗಳು ಮತ್ತು ಆಕ್ರೋಶ ಮಡುಗಟ್ಟಿದಾಗ, ಈ ಗುರಿ ಸಾಧಿಸುವುದು ಸುಲಭವೂ ಆಗುತ್ತದೆ. ಮುರುಘಾ ಮಠದ ಶರಣರ ಬಂಧನ ಮತ್ತು ಆರೋಪಿತ ಅಪರಾಧಗಳು ಬಯಲಾಗುತ್ತಿರುವ ಸಂದರ್ಭದಲ್ಲೇ ಹಿಂದುಳಿದ ಜಾತಿಯ ಮಠಾಧೀಶರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮಠಾಧೀಶರನ್ನು ಕುರಿತು ಇಬ್ಬರು ಮಹಿಳೆ ಯರು ನಡೆಸಿದ ಸಂಭಾಷಣೆ ಬಹಿರಂಗವಾದ ನಂತರ ಈ ಘಟನೆ ನಡೆದಿದೆ. ಇತ್ತೀಚಿನ ವರ್ಷಗಳಲ್ಲಿ ಮತ್ತೋರ್ವ ಕಾವಿಧಾರಿಯ ವಿರುದ್ಧದ ಅತ್ಯಾಚಾರ ಪ್ರಕರಣದ ಮೊಕದ್ದಮೆಯಲ್ಲಿ ರಾಜ್ಯ ಹೈಕೋರ್ಟ್‌ನ  ಹಲವು ನ್ಯಾಯಾಧೀಶರು ಹಿಂದೆ ಸರಿದಿದ್ದಾರೆ. ಇವರ ಹಿತಾಸಕ್ತಿ ಸಂಘರ್ಷ ಏನಿರಬಹುದು?  ಜಾತಿ ಮತ್ತು ಧರ್ಮವನ್ನು ಬೆಸೆಯುವ ರಾಜಕೀಯ ಯೋಜನೆ ಚಾಲನೆ ಪಡೆಯುವ ಮುನ್ನವೇ ಪ್ರಜಾಪ್ರಭುತ್ವವನ್ನು ಸಂರಕ್ಷಿಸುವ ಪ್ರಯತ್ನಗಳು ತುರ್ತಾಗಿ ಆಗಬೇಕಿದೆ.
(ಮೂಲ- ದಿ ಇಂಡಿಯನ್ ಎಕ್ಸ್‌ಪ್ರೆಸ್)
ಅನುವಾದ : ನಾ ದಿವಾಕರ

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ