Light
Dark

ನೋಟ-ಪ್ರತಿನೋಟ : ಮೊಸರು ಮಜ್ಜಿಗೆಗೂ ತೆರಿಗೆ ಹೇರುವುದು ಅನ್ಯಾಯವಲ್ಲವೇ?

ನೋಟ

ತೆರಿಗೆ ಹೇರಿಕೆ ಅಮಾನವೀಯತೆಯ ಪರಾಕಾಷ್ಠೆ

ರುದ್ರು ಪುನೀತ್ ಆರ್.ಸಿ.

ಭಾರತದಲ್ಲಿ ಕೋಟ್ಯಾಂತರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿರುವ ಲಕ್ಷಾಂತರ ಕುಟುಂಬಗಳು ಈಗಲೂ ಅಕ್ಷರಶಃ ಬೀದಿಯಲ್ಲಿವೆ. ಅವರಿಗೆ ಊರಿಲ್ಲ, ಕೇರಿಯಿಲ್ಲ, ತಲೆ ಮೇಲೆ ಸೂರು ಕೂಡ ಇಲ್ಲ. ಭಾರತದ ಜಿಡಿಪಿ ನೆಲಕಚ್ಚಿದೆ, ಹಸಿವಿನಿಂದ ಬಳಲುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತ ಸೆಂಚುರಿ ಗಡಿ ದಾಟಿದೆ. ನಿರುದ್ಯೋಗ ಹೆಚ್ಚಾಗಿದೆ, ಪೆಟ್ರೋಲ್ ಡೀಸೆಲ್ ಗ್ಯಾಸ್ ಬೆಲೆ ಗಗನಕ್ಕೇರಿದೆ. ಇಂತಹ ಸಂದಿಗ್ದ ಸ್ಥಿತಿಯಲ್ಲಿ ಹಾಲು ಉತ್ಪನ್ನಗಳಾದ ಮೊಸರು, ಮಜ್ಜಿಗೆ ಮೇಲೂ ಜಿಎಸ್‌ಟಿ ಹಾಕಿರುವುದು ನಿಜಕ್ಕೂ ಗಾಯದ ಮೇಲೆ ಬರೆ ಎಳೆದಂತೆ

ಹಾಲು ಮೊಸರಿಗೆ ಜಿಎಸ್ ಟಿ ಹಾಕಿರುವುದರಿಂದ ಗೋ ಪಾಲಕರಿಗೆ ಲಾಭವಾಗುತ್ತೆ ಎಂದು ಭಾವಿಸಬೇಡಿ. ರೈತರು ಡೈರಿಗೆ ಹಾಕುವ ಹಾಲಿಗೆ ಯಾವುದೇ ದರ ಏರಿಕೆಯಾಗಿಲ್ಲ ಆದರೆ ಅದೇ ಹಾಲು ಮತ್ತು ಮೊಸರನ್ನು ಅದೇ ರೈತ ಅಂಗಡಿಗೆ ಹೋಗಿ ಖರೀದಿಸುವಾಗ ಅದಕ್ಕೆ ಜಿಎಸ್‌ಟಿ ಕಟ್ಟಬೇಕಾಗುತ್ತದೆ. ಈ ದೇಶದಲ್ಲಿ ಅಕ್ಷರಶಃ ಬೀದಿಯಲ್ಲಿ ವಾಸಿಸುತ್ತಿರುವ ಅದೆಷ್ಟೋ ಬಡ ಮಕ್ಕಳು ತಾಯಿಯ ಎದೆಹಾಲಿಲ್ಲದೆ ಪಾಕೆಟ್ ಹಾಲಿನ ಮೇಲೆ ಅವಲಂಬಿತರಾಗಿದ್ದಾರೆ. ಸರ್ಕಾರ ಬಡತನ ನಿರ್ಮೂಲನೆ, ಆರ್ಥಿಕ ಸಬಲೀಕರಣ, ಅಪೌಷ್ಟಿಕತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನೀತಿಗಳನ್ನು ತರುವ ಬದಲಾಗಿ ಜನರ ಮೇಲೆಯೇ ಆರ್ಥಿಕ ಹೊರೆಯನ್ನು ಹೊರಿಸುವುದು ಬಹಳ ನೋವಿನ ಸಂಗತಿ.

ಈ ದೇಶದಲ್ಲಿರುವ ಶ್ರೀಮಂತರು, ಉದ್ಯಮಿಗಳು, ದೊಡ್ಡ ಮಟ್ಟದ ವ್ಯಾಪಾರಸ್ಥರು, ಭೂಮಾಲಿಕರು, ರಾಜಕಾರಣಿಗಳು ಇವರ ಆದಾಯದ ಮೇಲೆ ಹೆಚ್ಚು ತೆರಿಗೆಯನ್ನು ವಿಧಿಸಿ ಬಡವರು ಬಳಸುವ ದಿನಬಳಕೆ ವಸ್ತುಗಳ ಮೇಲೆ ಹೇರಲಾಗಿರುವ ತೆರಿಗೆಯನ್ನು ಕಡಿತಗೊಳಿಸಬೇಕಾಗಿದೆ. ಆದರೆ ಈಗಿನ ಕೇಂದ್ರ ಸರ್ಕಾರ ದೇಶದ ಅರ್ಥಿಕತೆಯನ್ನ ನಿಭಾಯಿಸುವುದರಲ್ಲಿ ವಿಫಲರಾಗಿ ಮುಂಬರುವ ಆರ್ಥಿಕ ಸಂಕಷ್ಟದಿಂದ ಪಾರಾಗಲು ಜನರ ಮೇಲೆಯೇ ಆರ್ಥಿಕ ಹೊರೆಯನ್ನು ಹೊರೆಸುತ್ತಿರುವುದು ಜನವಿರೋಧಿ ನೀತಿಯಾಗಿದೆ.

೨೨-೨೩ನೇ ಸಾಲಿನ ಬಜೆಟ್ಟಿನಲ್ಲಿ ಸರ್ಕಾರಿ ವೆಚ್ಚ ೮.೨%ಹೆಚ್ಚಳ ಆಗುತ್ತದೆ ಮತ್ತು ಸರ್ಕಾರಿ ಆದಾಯ ಸಂಗ್ರಹದಲ್ಲಿ ೪.೮%ಹೆಚ್ಚಳ ಆಗಲಿದೆ ಎಂದು ತೋರಿಸಿದ್ದಾರೆ. ಮೂಲದಲ್ಲೇ ೯% ಆದಾಯ ಕೊರತೆ ಮತ್ತು ೪.೪% ಹಣಕಾಸು ಕೊರತೆ ಇರುವ ಬಜೆಟ್ ಇದು. ಕೋವಿಡ್ ಪರ್ವಕಾಲದಲ್ಲಿ ದೇಶದ ಒಟ್ಟು ಆರ್ಥಿಕತೆಯ ಒಟ್ಟು ಗಾತ್ರವೇ ೭.೭% ಕುಸಿದಿತ್ತು. ಅಲ್ಲಿಂದ ಏಳತೊಡಗಿರುವುದನ್ನೇ ಅದೋ ನೋಡಿ ಆರ್ಥಿಕತೆ ಎದ್ದೇಳುತ್ತಿದೆ ಎಂದು ದ್ರುವನಕ್ಷತ್ರ ತೋರಿಸುತ್ತಿರುವ ದೊರೆಗಳು, ತಮ್ಮ ಹಿಂಬಾಲಕರನ್ನು ಆರ್ಥಿಕತೆ ಯಾವ ಕಾರ್ಗುಂಡಿಯಿಂದ ಏಳುತ್ತಿದೆ ಎಂಬುದನ್ನು ಹೇಳಿಲ್ಲ. ಹಿಂಬಾಲಕರು ಏಳುತ್ತಿದೆ ಎಂಬುದಷ್ಟನ್ನೇ ಕೇಳಿ ಧನ್ಯರಾಗಿದ್ದಾರೆ.

ಕೇವಲ ಜಿಎಸ್‌ಟಿ ಕಥೆ ತೆಗೆದುಕೊಳ್ಳಿ. ೨೦೨೧-೨೨ರಲ್ಲಿ ೬,೭೫,೦೦೦ ಕೋಟಿ ಸಂಗ್ರಹಿಸುವ (ಸುಧಾರಿತ) ಗುರಿ ಇತ್ತು. ವಾಸ್ತವವಾಗಿ ಸಂಗ್ರಹ ಆದದ್ದು ೫,೪೮,೭೭೮ ಕೋಟಿಗಳು. ಹಾಗಿದ್ದೂ ೨೦೨೨-೨೩ನೇ ಸಾಲಿಗೆ ೭,೮೦,೦೦೦ ರೂ.ಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ. ಇದು ಕಳೆದ ಬಾರಿಯ ಗುರಿಗಿಂತ ೧೫.೬% ಹೆಚ್ಚಳ. ಆದರೆ ಅವರು ಕನಸಿಕೊಂಡಂತೆ, ದೇಶದ ಆರ್ಥಿಕತೆ ಸುಧಾರಣೆ ಆಗಿಲ್ಲ. ವ್ಯವಹಾರಗಳು ಇನ್ನೂ ಮಂಪರಿನಲ್ಲೇ ಇವೆ. ಸರ್ಕಾರ ಇಂತಹ ಗುರಿ(ಗುಂಡಿ) ತೋಡಿಕೊಂಡಿರುವಾಗ ಅದನ್ನು ಭರ್ತಿ ಮಾಡಲು ನಿಮ್ಮ ಕುತ್ತಿಗೆ ಹಿಡಿದು ಜಿಎಸ್ ಟಿ ಕಕ್ಕಿಸದೇ ಬೇರೇನು ಮಾಡಲು ಸಾಧ್ಯ?!

ರೈತರ ಅಭಿವೃದ್ಧಿಗಾಗಿ ಹೈನು ಉತ್ಪನ್ನಗಳ ಮೇಲೆ ತೆರಿಗೆ

-ಜೋಗಿ ಮಂಜು, ಅಧ್ಯಕ್ಷ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ

ದೇಶದ ಅಭಿವೃದ್ಧಿ ದೃಷ್ಠಿಯಿಂದ ಕೆಲವು ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಲಾಗಿದೆ. ರೈತರ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಿ ತೆರಿಗೆ ಸಂಗ್ರಹಿಸಿದರೂ ಅದರಿಂದ ಬರುವ ಆದಾಯವನ್ನು ರೈತರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆ ಮಾಡಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಅಗತ್ಯ ವಸ್ತುಗಳ ಪದಾರ್ಥಗಳ ಬೆಲೆ ಏರಿಕೆ ಆಗದಂತೆ ನಿಯಂತ್ರಿಸುತ್ತಲೇ ಬಂದಿದ್ದಾರೆ. ಬ್ರ್ಯಾಂಡೆಡ್ ಪದಾರ್ಥಗಳ ಮೇಲೆ ವಿಧಿಸುತ್ತಿರುವ ತೆರಿಗೆಯಿಂದ ತಪ್ಪಿಸಿಕೊಳ್ಳುವುದನ್ನು ಕೆಲವರು ವಾಮಮಾರ್ಗದ ದಾರಿ ಹಿಡಿದಿದ್ದರು. ಆದರೆ, ಇದೀಗ ಪ್ರತ್ಯೇಕವಾಗಿ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿರುವುದರಿಂದ ಅನನುಕೂಲಕ್ಕಿಂತ ಹೆಚ್ಚು ಪ್ರಯೋಜನವಾಗಲಿದೆ.

ಕೇಂದ್ರ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ಅವರು ರೈತರು ಉತ್ಪಾದಿಸುವ ಹೈನು ಉತ್ಪನ್ನ ವಾದ ಮೊಸರು, ಹಾಲು, ಲಸ್ಸಿಯ ಮೇಲೆ ಶೇ.೫ರಷ್ಟು ಜಿಎಸ್‌ಟಿ ಯನ್ನು ವಿಧಿಸಲು ಆದೇಶ ನೀಡಿದ್ದಾರೆ. ಅವರ ಉದ್ದೇಶ ರೈತ ಉತ್ಪಾದನೆಗಳಿಂದ ತಯಾರಾಗುವ ಹಾಲು, ಮೊಸರು, ಲಸ್ಸಿಯಿಂದ ಬರುವ ಹಣವನ್ನು ರೈತರಿಗೆ ಸಹಾಯ ಧನ ರೂಪದಲ್ಲಿ ನೀಡುವ ದೂರದೃಷ್ಟಿ. ಆದರೆ, ಜನರ ಅಭಿಪ್ರಾಯ ವಿರೋಧವಾಗಿ ಬಂದಿದ್ದರಿಂದ ಹಿಂಪಡೆಯುವ ಮೂಲಕ ಬೆಲೆ ಏರಿಕೆಯಾಗಿದ್ದ ಜಿಎಸ್ಟಿ ಬೆಲೆ ಏರಿಕೆಯನ್ನು ಸಾಮಾನ್ಯ ದರವಾಗಿ ಆದೇಶ ಮಾಡಿದರು. ಬೆಲೆ ಏರಿಕೆ ಸಾಮಾನ್ಯ ಜನರಿಗೆ ಹೊರೆ ಆಗಬಾರದು ಎಂಬ ಉದ್ದೇಶದಿಂದ ಕರ್ನಾಟಕ ಸರ್ಕಾರ, ಹಾಲು ಉತ್ಪಾದಕರ ಮಹಾ ಮಂಡಳ ತೀರ್ಮಾನಿಸಿರುವುದರಿಂದ ರೈತರ ಅಭಿವೃದ್ಧಿ ಹಾಗೂ ರೈತರ ಪರವಾಗಿ ಇರುವುದು ಸಾಕ್ಷಿಯಾಗಿದೆ.

ಆಹಾರ ಉತ್ಪನ್ನಗಳ ಮೇಲೆ ತೆರಿಗೆ ಹೇರುತ್ತಿರುವುದು ಇದೇನು ಮೊದಲ ಬಾರಿಯೇ? ಜಿಎಸ್‌ಟಿ ಜಾರಿಗೆ ಮುನ್ನವೂ ರಾಜ್ಯಗಳು ಆಹಾರ ಉತ್ಪನ್ನಗಳ ಮೇಲೆ ಸಾಕಷ್ಟು ತೆರಿಗೆ ಸಂಗ್ರಹಿಸುತ್ತಿದ್ದವು. ಪಂಜಾಬ್ ಒಂದೇ ರಾಜ್ಯವು ಖರೀದಿ ತೆರಿಗೆ ಮೂಲಕ ೨,೦೦೦ ಕೋಟಿ ರೂ.ಗೂ ಅಧಿಕ ಆದಾಯ ಸಂಗ್ರಹಿಸಿದೆ. ಉತ್ತರ ಪ್ರದೇಶ ಸರಕಾರಕ್ಕೆ ೭೦೦ ಕೋಟಿ ರೂ. ಹರಿದುಬಂದಿದೆ. ೨೦೧೭ಕ್ಕೆ ಮುನ್ನ ಪಂಜಾಬ್, ತೆಲಂಗಾಣ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಕೇರಳ ಹಾಗೂ ಬಿಹಾರದಲ್ಲಿ ಅಕ್ಕಿಯ ಮೇಲೆ ವ್ಯಾಟ್ ವಿಧಿಸಲಾಗುತ್ತಿತ್ತು.

೨೦೧೭ರ ಜುಲೈನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪದ್ಧತಿ ಅನುಷ್ಠಾನಗೊಳಿಸಿದಾಗ ಎಲ್ಲಾ ರಾಜ್ಯಗಳ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಒಟ್ಟು ೧೭ ತೆರಿಗೆಗಳನ್ನು ಅದರಲ್ಲಿ ವಿಲೀನಗೊಳಿಸಲಾಯಿತು. ಹೊಸ ತೆರಿಗೆ ಪದ್ಧತಿಯಲ್ಲೂ ಬ್ರಾಂಡೆಡ್ ಬೇಳೆ ಕಾಳುಗಳು, ಧಾನ್ಯಗಳು ಹಾಗೂ ಹಿಟ್ಟುಗಳ ಮೇಲೆ ಶೇ. ೫ರಷ್ಟು ತೆರಿಗೆ ಅನ್ವಯವಾಗುತ್ತಿತ್ತು. ಈ ನಿಯಮವನ್ನು ಪರಿಷ್ಕರಿಸಿ, ನೋಂದಾಯಿತ ಬ್ರಾಂಡ್‌ಗಳ ಪ್ಯಾಕೇಜ್ಡ್ ಉತ್ಪನ್ನಗಳ ಮೇಲೆ ಮಾತ್ರ ಶೇ. ೫ರಷ್ಟು ತೆರಿಗೆ ಅನ್ವಯವಾಗುವಂತೆ ಮಾಡಲಾಯಿತು. ಆದರೆ, ಇದರ ಬೆನ್ನಲ್ಲೇ ಈ ನಿಯಮದ ದುರ್ಬಳಕೆ ಆರಂಭವಾಯಿತು. ಅದರಲ್ಲೂ ದೊಡ್ಡ ಮಟ್ಟದ ತಯಾರಕ ಸಂಸ್ಥೆಗಳು ಮತ್ತು ಬ್ರಾಂಡ್‌ಗಳ ಮಾಲೀಕರೇ ತೆರಿಗೆ ತಪ್ಪಿಸಲು ಈ ನಿಯಮದ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಅದನ್ನು ತಡೆಗಟ್ಟಲು ಈಗ ನೇರವಾಗಿ ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದರ ಉದ್ದೇಶ ತೆರಿಗೆಗಳ್ಳರನ್ನು ತೆರಿಗೆ ವ್ಯಾಪ್ತಿಗೆ ತರುವುದಾಗಿಯೇ ಹೊರತು ಜನರಿಗೆ ತೆರಿಗೆ ಭಾರ ಹೇರುವ ಉದ್ದೇಶ ಇಲ್ಲ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ