ಅಸಲಿಗೆ ಇದೆಲ್ಲ ನಮ್ಮ ಆಡಳಿತದ ದೂರದೃಷ್ಟಿಯಿಲ್ಲದ ಪರಿಣಾಮಗಳು.
ಕಾವೇರಿ, ಕಬಿನಿ, ಶಿಂಷಾ ನದಿಗಳ ಪಾತ್ರದಲ್ಲಿ ನಡೆದಷ್ಟು ಮರಳು ಗಣಿಗಾರಿಕೆ ಬೇರೆಲ್ಲೂ ನಡೆದಿಲ್ಲ. ಇದಕ್ಕೆ ಸರ್ಕಾರ ಕಡಿವಾಣ ಹಾಕಿ ಬಹಳ ದಿನಗಳೇ ಆಗಿವೆ. ಈ ನದಿ, ಹೊಳೆ, ತೊರೆ ಪಾತ್ರಗಳ ಮರಳಿಗೆ ಪರ್ಯಾಯವಾಗಿ ಜಲ್ಲಿ ಕ್ರಷರ್‌ನ ಎಂ.ಸ್ಯಾಂಡ್ ಬಳಕೆಗೆ ಬಂತು. ಟನ್‌ಗೆ ೭೫೦ ರೂ.ಗಳಿದ್ದ ಬೆಲೆ ಈಗ ೧೪೦೦ ರೂ.ಗಳಿಗೆ ಏರಿಕೆಯಾಗಿದೆ. ೬೦೦ ರೂ.ಗೆ ದೊರೆಯುತ್ತಿದ್ದ ಜಲ್ಲಿ ಇವತ್ತು ೯೦೦ರೂ. ಗಡಿ ದಾಟಿದೆ. ಸೈಜುಗಲ್ಲು ೧೬ ರೂ. ಗಳಿಂದ ೨೫ ರೂ.ಗಳಿಗೇರಿದೆ. ಇದನ್ನು ಹೊರತುಪಡಿಸಿ ಸಿಮೆಂಟ್ ಹಾಗೂ ಕಬ್ಬಿಣದ ಬೆಲೆಗಳು ಆಗಾಗ್ಗೆ ಕಣ್ಣಾಮುಚ್ಚಾಲೆಯಾಡುತ್ತಿವೆ. ಇದರೊಂದಿಗೆ ಕೆಲಸಗಾರರ ಸಮಸ್ಯೆ.
ಅಸಲಿಗೆ ಏಕಿಷ್ಟು ಬೆಲೆ ಏರಿಕೆ ಎಂದರೆ, ಜಿಲ್ಲೆಯಲ್ಲಿ ನಡೆದಿರುವ ಗಣಿಗಾರಿಕೆ ಹಾಗೂ ರಾಜಕೀಯ ಚದುರಂಗದಾಟದಲ್ಲಿ ನಿಜಕ್ಕೂ ಹೈರಾಣಾಗುತ್ತಿರುವವರೆಂದರೆ ಸಾಮಾನ್ಯ ಗುತ್ತಿಗೆದಾರರು ಹಾಗೂ ಕನಸಿನ ಮನೆಕಟ್ಟಿಕೊಳ್ಳಲು ಮುಂದಾಗಿರುವ ಶ್ರೀಸಾಮಾನ್ಯ. ಕೃಷ್ಣರಾಜ ಸಾಗರ ಜಲಾಶಯಕ್ಕೆ ಗಣಿಗಾರಿಕೆಯಿಂದ ಕಂಟಕ ಇದೆ ಎಂದು ಕೆಲ ರಾಜಕಾರಣಿಗಳು ಹಾಗೂ ರೈತ ಸಂಘದ ನಾಯಕರು ಆರೋಪಿಸಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟದಲ್ಲಿ ಕಾನೂನಾತ್ಮಕವಾಗಿ ನಡೆಯುತ್ತಿದ್ದ ಹಾಗೂ ಶ್ರೀರಂಗಪಟ್ಟಣದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಕ್ವಾರಿಗಳನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿರುವುದರಿಂದ ಸೈಜುಗಲ್ಲು, ಜಲ್ಲಿ, ಡಸ್ಟ್, ಎಂ-ಸ್ಯಾಂಡ್ ಸೇರಿದಂತೆ ಇನ್ನಿತರೆ ಕಚ್ಚಾ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ.
ಕಚ್ಚಾ ಸಾಮಗ್ರಿಗಳು ಜಿಲ್ಲೆಯಲ್ಲಿ ಸಿಗದ ಕಾರಣ ಮನೆ ಕಟ್ಟುವವರು, ರಸ್ತೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಹೊರ ಜಿಲ್ಲೆಯಿಂದ ದುಬಾರಿ ಬೆಲೆ ತೆತ್ತು ಕೊಳ್ಳುವಂತಾಗಿದೆ. ಇದರಿಂದ ಮನೆ ಕಟ್ಟುವವರಂತೂ ಎರಡರಷ್ಟು ಹಣ ನೀಡಿ ಹೈರಾಣಾಗಿದ್ದು, ಮನೆ ಕಟ್ಟುವುದೇ ಬೇಡ ಎನ್ನುವ ಪರಿಸ್ಥಿತಿಗೆ ಬಂದಿದ್ದಾರೆ.
ಅಕ್ರಮ ಗಣಿಗಾರಿಕೆ, ಕ್ರಷರ್ ನಡೆಸಲಾಗುತ್ತಿದೆ ಎನ್ನುವ ಆರೋಪದ ನಡುವೆ ಜಿಲ್ಲೆಯಲ್ಲಿ ಯಾವುದೇ ಗಣಿ ಚಟುವಟಿಕೆಗಳು ಅಕ್ರಮವಾಗಿ ನಡೆ ಯುತ್ತಿಲ್ಲವೆಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಆದರೆ, ಮನೆ ನಿರ್ಮಿಸುತ್ತಿರುವ ಜನರ ಗೋಳು ಮಾತ್ರ ಯಾರಿಗೂ ಕಾಣದಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಕ್ವಾರಿಗಳು, ಕ್ರಷರ್‌ಗಳು ನಿಯಮ ಪಾಲನೆ ಮಾಡದ ಹಿನ್ನೆಲೆಯಲ್ಲಿ ಲೈಸೆನ್ಸ್ ರದ್ಧತಿಯಿಂದ ಸ್ಥಗಿತ ಗೊಂಡಿವೆ. ಇದರ ನಡುವೆ ಜಿಲ್ಲೆಯಲ್ಲಿ ಯಾವುದೇ ಕ್ರಷರ್‌ಗಳು ಬೆಳಿಗ್ಗೆ ೬ ರಿಂದ ಸಂಜೆ ೬ರವರೆಗೆ ಮಾತ್ರ ಕಾರ್ಯ ನಡೆಸಬೇಕು. ರಾತ್ರಿ ವೇಳೆ ಕ್ರಷರ್ ನಡೆಸುವಂತಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನಾಧಿಕಾರಿ ಎಂ.ವಿ.ಪದ್ಮಜಾ ಮೌಖಿಕ ಆದೇಶ ಹೊರಡಿಸಿರುವುದು ಮತ್ತೊಂದು ಬೆಳವಣಿಗೆ.
ಪರವಾನಗಿ ಪಡೆದಿರುವ ಕ್ರಷರ್‌ಗಳನ್ನು ನಿರ್ದಿಷ್ಟ ಅವಧಿ ಅಥವಾ ಹಗಲಿನಲ್ಲಿ ಮಾತ್ರ ನಡೆಸಬೇಕೆಂಬ ನಿಯಮವಿಲ್ಲ. ಹಗಲಿನಲ್ಲಿ ಮಾತ್ರ ನಡೆಸಬೇಕೆಂದು ನಿರ್ಬಂಧ ವಿಧಿಸಿರುವುದು ಸರಿಯಲ್ಲ ಎಂಬುದು ಕ್ರಷರ್ ಮಾಲೀಕರ ವಾದ. ಆದರೆ, ರಾಜಕಾರಣಿಗಳು, ಕ್ರಷರ್ ಮಾಲೀಕರು, ಗಣಿ ಇಲಾಖೆ ಅಧಿಕಾರಿಗಳು ಮತ್ತು ದೂರುದಾರರ ನಡುವಿನ ಸಂಘರ್ಷದಿಂದ ಜಿಲ್ಲೆಯಲ್ಲಿ ನಿರ್ಮಾಣ ಕಾಮಗಾರಿಗಳು ಕುಂಠಿತವಾಗಿರುವುದಂತೂ ಸತ್ಯ. ಕಟ್ಟಡ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುಗಳು ಸಕಾಲದಲ್ಲಿ ಸಿಗದೆ ಮನೆ, ಕಟ್ಟಡ ನಿರ್ಮಾಣ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದ್ದು, ಸರ್ಕಾರಿ ಕಾಮಗಾರಿಗಳ ಅನುಷ್ಠಾನದಲ್ಲೂ ವಿಳಂಬವಾಗುತ್ತಿದೆ. ಇದರಿಂದ ಜನರು ದುಪ್ಪಟ್ಟು ದರ ಕೊಟ್ಟು ನೆರೆಯ ರಾಮನಗರ, ಬಿಡದಿ, ತುಮಕೂರು, ಹುಲಿಯೂರು ದುರ್ಗದಿಂದ ಜಲ್ಲಿ, ಡಸ್ಟ್, ಎಂ-ಸ್ಯಾಂಡ್ ತರುವಂತಾಗಿದೆ.
ದೂರದ ಸ್ಥಳಗಳಿಂದ ಪೂರೈಕೆಯಾಗುವ ಕಚ್ಚಾ ವಸ್ತುಗಳಿಗೆ ಸಾಗಾಣಿಕೆ ವೆಚ್ಚ ಅಧಿಕವಾಗುವುದರಿಂದ ಅವುಗಳ ಬೆಲೆಯೂ ಏರಿಕೆಯಾಗಿದೆ.ಶ್ರೀರಂಗಪಟ್ಟಣ, ಪಾಂಡವಪುರದ ಕ್ರಷರ್, ಕ್ವಾರಿಗಳಲ್ಲಿನ ಕಚ್ಚಾ ವಸ್ತುಗಳು ಮೈಸೂರಿಗೆ ಹಾಗೂ ನಾಗಮಂಗಲದಿಂದ ಪ್ರಮುಖವಾಗಿ ಸೈಜುಗಲ್ಲು ಮೈಸೂರು, ಹಾಸನ ಜಿಲ್ಲೆಗಳಿಗೆ ಪೂರೈಕೆಯಾಗುತ್ತಿವೆ. ಆದರೆ, ಸ್ಥಳೀಯ ಜನರಿಗೆ ಮನೆ ನಿರ್ಮಾಣ ಸಾಮಗ್ರಿಗಳು ಲಭ್ಯವಾಗುತ್ತಿಲ್ಲ.
ಸೈಜುಗಲ್ಲು ಪಡೆಯಲು ಜನರು ವಾರಗಟ್ಟಲೆ ಕಾಯಬೇಕಿದೆ. ಇಷ್ಟೆಲ್ಲಾ ಸಮಸ್ಯೆ ಎದುರಿಸುತ್ತಿದ್ದರೂ ಜಿಲ್ಲಾಡಳಿತ, ಜನಪ್ರತಿನಿಧಿಗಳು ಮಾತ್ರ ಜನರ ಬಗ್ಗೆ ಕಾಳಜಿ ತೋರುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿದೆ. ಇದುವರೆಗೂ ಜಿಲ್ಲಾಡಳಿ ಸ್ಪಂದಿಸದಿರುವುದು ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುವಂತಾಗಿದೆ. ಜಿಲ್ಲಾಡಳಿತ ಗಣಿಗಾರಿಕೆ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಕಟ್ಟಡ ಸಾಮಗ್ರಿಗಳ ಕೊರತೆ ನಿವಾರಿಸಲು ತುರ್ತು ಕ್ರಮ ಕೈಗೊಳ್ಳಬೇಕು.