Light
Dark

ಸಂಪಾದಕೀಯ: ಕಾಮನ್‌ವೆಲ್ತ್ ಪಾಠ 

ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಪ್ರತಿಷ್ಠಿತ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ತೆರೆ ಬಿದ್ದಿದೆ. ಭಾರತದ ಕ್ರೀಡಾ ಸಾಧನೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಶುರುವಾಗಿದೆ. ಪ್ರತಿ ಬಾರಿ ಜಾಗತಿಕ ಮಟ್ಟದ ಕ್ರೀಡಾಕೂಟ ನಡೆದಾಗಲೆಲ್ಲ ನಮ್ಮ ಸಾಧನೆಯ ಬಗ್ಗೆ ಒಂದಷ್ಟು ಚರ್ಚೆ ನಡೆಯುತ್ತದೆ. ಹೇಳಿಕೆ, ಪ್ರತಿ ಹೇಳಿಕೆ ನೀಡಿ ಮತ್ತೆ ಮುಂದಿನ ಕ್ರೀಡಾ ಕೂಟ ನಡೆಯುವವರೆಗೆ ಎಲ್ಲವನ್ನು ಮರೆಯುತ್ತೇವೆ.

ಪದಕಗಳ ಪಟ್ಟಿ ಹಿಡಿದು ನೋಡಿದರೆ ೨೦೨೨ರ ಸಾಲಿನ ನಮ್ಮ ಸಾಧನೆ ಸಮಾಧಾನಕರ ಎನ್ನಬಹುದು. ಇದಕ್ಕೆ ಕಾರಣವೂ ಇದೆ. ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶೂಟಿಂಗ್ ಇಲ್ಲದಿರುವುದು ನಮಗೆ ಹಿನ್ನಡೆಯಾಗಿದೆ.ಕಳೆದ ಬಾರಿ ಭಾರತ ಶೂಟಿಂಗ್ ವಿಭಾಗವೊಂದರಲ್ಲೇ ೭ ಚಿನ್ನದ ಪದಕಗಳ ಸಹಿತ ೧೬ ಪದಕಗಳನ್ನು ಗೆದ್ದಿತ್ತು. ಶೂಟಿಂಗ್ ಸ್ಪರ್ಧೆ ಇರುತ್ತಿದ್ದರೆ ನಾವು ಕಳೆದ ಕ್ರೀಡಾಕೂಟದಂತೆ ಮೂರನೇ ಸ್ಥಾನಕ್ಕೇರುವ ಅವಕಾಶಗಳಿರುತ್ತಿತ್ತು. ಆದರೆ ಅಥ್ಲೆಟಿಕ್ಸ್ ಸೇರಿದಂತೆ ಇದುವರೆಗೆ ಪದಕವನ್ನೇ ಗೆಲ್ಲದ ಕೆಲವೊಂದು ವಿಭಾಗಗಳಲ್ಲಿ ನಮ್ಮ ಕ್ರೀಡಾಪಟುಗಳು ಪಾರಮ್ಯ ಮೆರೆದಿರುವುದು ಗಮನಾರ್ಹ ಅಂಶ.

೨೦೧೮ರ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ೨೬ ಚಿನ್ನದ ಪದಕ, ೨೦ ಬೆಳ್ಳಿ ಪದಕ ಮತ್ತು ೨೦ ಕಂಚಿನ ಪದಕಗಳು ಸೇರಿದಂತೆ ಒಟ್ಟು ೬೬ ಪದಕಗಳನ್ನು ಗೆದ್ದಿದ್ದ ಭಾರತ ಮೂರನೇ ಸ್ಥಾನ ಪಡೆದಿತ್ತು. ದಿಲ್ಲಿಯಲ್ಲಿ ೨೦೧೪ರಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ೩೮ ಚಿನ್ನದ ಪದಕಗಳ ಸಹಿತ ೧೦೧ ಪದಕಗಳನ್ನು ಗೆದ್ದು ಎರಡನೇ ಸ್ಥಾನ ಪಡೆದುಕೊಂಡಿತ್ತು. ಅದು ಕಾಮನ್ವೆಲ್ತ್ ಕ್ರೀಡಾ ಇತಿಹಾಸದಲ್ಲಿ ಭಾರತದ ಶ್ರೇಷ್ಠ ಪ್ರದರ್ಶನವೂ ಆಗಿತ್ತು. ೧೯೩೪ರಲ್ಲಿ ಎರಡನೇ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಪ್ರವೇಶ ಪಡೆದ ಭಾರತ ಬಳಿಕ ನಾಲ್ಕು ಬಾರಿ ಬಿಟ್ಟು ಉಳಿದ ಎಲ್ಲ ಕೂಟಗಳಲ್ಲಿ ಭಾಗವಹಿಸಿದೆ. ಅಂದಿನ ಅವಿಭಜಿತ ಭಾರತ (ಇಂದಿನ ಪಾಕಿಸ್ತಾನ, ಬಾಂಗ್ಲಾ ಸೇರಿ) ಮೊದಲ ಬಾರಿಗೆ ಸ್ಪರ್ಧಿಸಿದಾಗ ೧೨ನೇ ಸ್ಥಾನ ಪಡೆದುಕೊಂಡಿತ್ತು. ಬಳಿಕ ಸ್ಛರ್ಧಿಸಿದ ಎಲ್ಲ ಕ್ರೀಡಾಕೂಟಗಳಲ್ಲಿ ೧೦ರೊಳಗಿನ ಸ್ಥಾನ ಪಡೆಯಲು ಶಕ್ತರಾಗಿದ್ದೇವೆ.

ಆದರೆ ಸ್ಕಾಟ್ಲೆಂಡ್, ವೇಲ್ಸ್ ನಂತಹ ಪುಟ್ಟ ದೇಶಗಳ ಸಾಧನೆಯ ಜತೆ ಹೋಲಿಸಿದರೆ ೧೪೦ ಕೋಟಿ ಜನಸಂಖ್ಯೆಯ ದೇಶದ ಕ್ರೀಡಾ ಸಾಧನೆ ಏನೇನೂ ಅಲ್ಲ ಎನ್ನುವುದು ಸ್ಪಷ್ಟ. ಅದರಲ್ಲೂ ಕಳೆದ ಒಂದೂವರೆ ದಶಕದಲ್ಲಿ ಚೀನಾದ ತೋರಿದ ಕ್ರೀಡಾ ಸಾಧನೆಯ ಜತೆ ನಾವು ತುಲನೆ ಮಾಡಲು ಸಾಧ್ಯವೇ ಇಲ್ಲ. ನಮ್ಮಲ್ಲಿ ಪ್ರತಿಭೆಗಳಿಗೆ ಬರವಿಲ್ಲ. ಆದರೆ ಅವಕಾಶಗಳ ಕೊರತೆ ಒಂದೆಡೆಯಾದರೆ, ಕ್ರೀಡೆಗೆ ಮಹತ್ವ ನೀಡದ ನಮ್ಮ ಶೈಕ್ಷಣಿಕ ವ್ಯವಸ್ಥೆಯೂ ಸಾಧನೆಗೆ ಅಡ್ಡಿಯಾಗಿದೆ ಎನ್ನುವುದು ಸ್ಪಷ್ಟ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಇತ್ತೀಚೆಗೆ ಕ್ರೀಡಾ ಸಾಧನೆ ಮಾಡುವವರಿಗೆ ಪ್ರೋತ್ಸಾಹಧನ ಸೇರಿದಂತೆ ಹಲವು ಉತ್ತೇಜನಗಳನ್ನು ನೀಡುತ್ತಿವೆ. ಆದರೆ ಎಳವೆಯಲ್ಲಿೆುೀಂ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪೋಷಿಸಿ ಬೆಳೆಸುವಲ್ಲಿ ನಾವು ಸೋತಿದ್ದೇವೆ. ಶಾಲಾ ಕಾಲೇಜುಗಳಲ್ಲಿ ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಿಗೆ ನೀಡುವ ಮಹತ್ವ ಅಷ್ಟಕಷ್ಟೇ. ಈಗಲೂ ಬಹುತೇಕ ಶಾಲೆಗಳಲ್ಲಿ ಆಟದ ಮೈದಾನವೂ ಇಲ್ಲ. ದೈಹಿಕ ಶಿಕ್ಷಣದ ಅಧ್ಯಾಪಕರೂ ಇಲ್ಲ. ಪರೀಕ್ಷೆಗೂ, ಉದ್ಯೋಗಕ್ಕೂ ಅಂಕ ಗಳಿಕೆಯನ್ನೇ ಮಾನದಂಡವನ್ನಾಗಿ ಇಟ್ಟುಕೊಂಡ ನಾವು ಐದನೇ ತರಗತಿಯಿಂದಲೇ ನಮ್ಮ ಮಕ್ಕಳನ್ನು ಎಂಜಿನಿಯರ್, ವೈದ್ಯರನ್ನಾಗಿ ಮಾಡುವುದು ಹೇಗೆ ಎಂದು ೋಂಚಿಸುತ್ತೇವೆ ಹೊರತು ಮಕ್ಕಳ ದೈಹಿಕ ಬೆಳವಣಿಗೆ, ಆಟೋಟಗಳ ಆಸಕ್ತಿ ಬಗ್ಗೆ ಗಮನ ಹರಿಸುವುದಿಲ್ಲ.

ಪಾಠ-ಪ್ರವಚನಗಳಲ್ಲಿ ಹಿಂದುಳಿದವರು ಮಾತ್ರ ಕ್ರೀಡಾ ಚಟುಚಟಿಕೆಗಳಲ್ಲಿ ಭಾಗವಹಿಸುತ್ತಾರೆ ಎಂಬ ಭಾವನೆ ನಮ್ಮ ಪೋಷಕರಲ್ಲಿ ಗಟ್ಟಿಯಾಗಿ ಬೇರೂರಿದೆ. ಮಗ ಅಥವಾ ಮಗಳನ್ನು ಕ್ರೀಡಾಳುವಾಗಿ ರೂಪಿಸಿದರೆ ಮುಂದಿನ ಭವಿಷ್ಯ ಏನು ಎಂಬ ಚಿಂತೆ ಎಲ್ಲ ಪೋಷಕರಿಗೆ ಇರುವುದು ಸಹಜ. ಸಾಕಷ್ಟು ವರ್ಷ ಬೆವರು ಸುರಿಸಿ, ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ಗೆದ್ದವರಿಗಷ್ಟೇ ರೈಲ್ವೆ, ಬ್ಯಾಂಕ್, ಪೊಲೀಸ್ ದಳ, ಸೇನಾ ಪಡೆಗಳಲ್ಲಿ ಉದ್ಯೋಗದ ಬಾಗಿಲು ತೆರೆದುಕೊಳ್ಳಬಹುದು. ಆದರೆ ನಿರೀಕ್ಷಿತ ಯಶಸ್ಸು ಸಾಧಿಸದೇ ಹೋದರೆ ಮುಂದೇನು ಎಂಬ ಪೋಷಕರ ಪ್ರಶ್ನೆಗೆ ಇದುವರೆಗೂ ಉತ್ತರವಿಲ್ಲ.

ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ಗೆದ್ದವರೂ ಸೂಕ್ತ ಉದ್ಯೋಗವಿಲ್ಲದೆ ಕೂಲಿ ನಾಲಿ ಮಾಡಿ ಬದುಕಬೇಕಾದ ಪರಿಸ್ಥಿತಿಯನ್ನು ನಾವು ಕಂಡಿದ್ದೇವೆ. ಹೀಗಿರುವಾಗ ದೇಶ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ನಾವು ನಿರೀಕ್ಷಿಸುವಂತೆೆುೀಂ ಇಲ್ಲ. ಆಟೋಟದ ಚಟುವಟಿಕೆಗಳು ಮತ್ತು ಕ್ರೀಡೆ ನಮ್ಮ ಪಠ್ಯದ ಭಾಗವಾಗಿ ಎಳವೆಯಲ್ಲಿೆುೀಂ ವ್ಯವಸ್ಥಿತವಾಗಿ ಮಕ್ಕಳನ್ನು ತರಬೇತುಗೊಳಿಸುವ, ಅವರಿಗೆ ಸೂಕ್ತ ಪ್ರೋತ್ಸಾಹ ನೀಡುವ, ಭವಿಷ್ಯದ ಭದ್ರತೆಗೆ ಖಾತರಿ ನೀಡುವ ವ್ಯವಸ್ಥೆ ಬರುವ ತನಕ ನಮ್ಮ ಕ್ರೀಡಾ ಸಾಧನೆ ಆರಕ್ಕೇರದೆ, ಮೂರಕ್ಕಿಳಿಯದೇ ಹೀಗೆೆುೀಂ ಮುಂದುವರಿಯುವುದು ಖಚಿತ.

ಇದೇ ರೀತಿ ನಮ್ಮ ಕ್ರೀಡಾ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಬಗ್ಗೆಯೂ ಸ್ಪಷ್ಟ ನೀತಿ ರೂಪಿಸಬೇಕಾಗಿದೆ. ಅತ್ಯಾಧುನಿಕ ಟ್ರ್ಯಾಕ್ ಸೌಲಭ್ಯ ಹೊಂದಿದ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣವನ್ನು ಆಗಾಗ ಕ್ರೀಡೇತರ ಚಟುವಟಿಕೆಗಳಿಗೆ ಬಳಸುವುದನ್ನು ನಾವು ನೋಡಿದ್ದೇವೆ. ನಮ್ಮ ಎಲ್ಲ ಜಿಲ್ಲಾ ಕ್ರೀಡಾಂಗಣಗಳ ಪರಿಸ್ಥಿತಿಯೂ ಇದೇ ಆಗಿದೆ.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ