Light
Dark

ಈ ಅಜ್ಜಿಯರ ಸಾಧನೆಗೆ ಮೊಮ್ಮಕ್ಕಳೂ ನಾಚಬೇಕು!

ಕೆಲವರು ಅರವತ್ತು ಸಮೀಪಿಸಿದಂತೆ ತಮ್ಮ ಬದುಕು ಮುಗಿಯಿತು ಎಂದು ಕೈಚೆಲ್ಲುತ್ತಾರೆ. ಇನ್ನು ಕೆಲವರಿಗೆ ವಯಸ್ಸು ಕೇವಲ ಅಂಕೆ ಸಂಖ್ಯೆ ಮಾತ್ರ. ಇಂತಹವರು ವಯಸ್ಸಾದುದು ತಮಗಲ್ಲ, ಇನ್ನಾರಿಗೋ ಎಂಬಂತೆ ಬದುಕುವ ಪರಿ ಯವ್ವನಿಗರನ್ನೂ ನಾಚಿಸುವಂತಿರುತ್ತದೆ!

ಜೂನ್ ೨೯ರಿಂದ ಜುಲೈ ೧೦ರ ತನಕ ಫಿನ್‌ಲ್ಯಾಂಡಿನ ಟೆಂಪೆರಾ ಎಂಬಲ್ಲಿ ನಡೆದ ಈ ಬಾರಿಯ ‘ವರ್ಲ್ಡ್ ಮಾಸ್ಟರ್ಸ್ ಆಥ್ಲೆಟಿಕ್ಸ್’ನಲ್ಲಿ ಭಾರತದ ಭಗವಾನಿ ದೇವಿ ಡಾಗರ್ ಒಂದು ಚಿನ್ನ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದು ಭಾರತಕ್ಕೆ ಹಿಂತಿರುಗಿದಾಗ ಪತ್ರಕರ್ತರು ಅವರನ್ನು ಸಂದರ್ಶಿಸಿಸುತ್ತಾರೆ. ಅವರು ಅದೂ ಇದು ಕೇಳುತ್ತ, ಫೋಟೋ ತೆಗೆಯುವಾಗ ನೀವ್ಯಾಕೆ ನಗಲಿಲ್ಲ ಎಂದು ಅವರನ್ನು ಪ್ರಶ್ನಿಸುತ್ತಾರೆ. ಅದಕ್ಕವರು ಯಾಕಂದರೆ, ನನ್ನ ಬಾಯಲ್ಲಿ ಹಲ್ಲಿಲ್ಲ! ಎಂದು ಉತ್ತರಿಸಿದಾಗ ಪತ್ರಕರ್ತರಿಗೆ ಹೇಗೆ ಪ್ರತಿಕ್ರಿಯಿಸಬೇಕು ಅಂತಲೇ ಗೊತ್ತಾಗಲಿಲ್ಲ!

ಭಗವಾನಿ ದೇವಿ ಡಾಗರ್ ೯೪ ವರ್ಷ ಪ್ರಾಯದ ಅಜ್ಜಿ!

ಹಾಗಂತ, ಭಗವಾನಿ ದೇವಿ ಡಾಗರ್ ವೃತ್ತಿಪರ ಕ್ರೀಡಾಪಟುವಾಗಿದ್ದು, ಈಗ ಅವರಿಗೆ ಪ್ರಾಯವಾಗಿದೆ ಅಂತ ತಿಳಿಯಬೇಡಿ. ಅವರು ವೃತ್ತಿಪರ ಕ್ರೀಡಾಪಟುವೂ ಅಲ್ಲ, ಹವ್ಯಾಸಿ ಕ್ರೀಡಾಪಟುವೂ ಅಲ್ಲ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಷ್ಟೇ ಅವರು ತಮ್ಮನ್ನು ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಫಿನ್‌ಲ್ಯಾಂಡಿನ ಕ್ರೀಡಾಕುಟದಲ್ಲಿ ಭಾಗವಹಿಸಲು ಅವರು ತರಬೇತಿ ಶುರು ಮಾಡಿದ್ದು ಕೇವಲ ಆರು ತಿಂಗಳ ಹಿಂದಷ್ಟೇ. ಅವರಿಗೆ ತರಬೇತಿ ಕೊಟ್ಟ ಕೋಚ್ ೩೮ ವರ್ಷ ಪ್ರಾಯದ ಅವರ ಮೊಮ್ಮಗ, ವಿಕಾಸ್. ಪ್ಯಾರಾ ಅಥ್ಲೀಟ್ ಆಗಿರುವ ವಿಕಾಸ್ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ವಿಜೇತ. ಆತನೇ ಭಗವಾನಿ ದೇವಿಯವರಿಗೆ ರೋಲ್ ಮಾಡಲ್!

ಭಗವಾನಿ ದೇವಿ ತಮ್ಮ ಮನೆಯ ಗೋಡೆಯ ತುಂಬೆಲ್ಲ ನೇತಾಡುವ ವಿಕಾಸನ ಫೋಟೋ ಮತ್ತು ಅವನಿಗೆ ಸಿಕ್ಕ ಸರ್ಟಿಫಿಕೆಟುಗಳನ್ನು ನೋಡಿ ಸ್ಫೂತಿಗೊಂಡು, ತಾನೂ ಅವನಂತೆ ಮೆಡಲುಗಳನ್ನು ಗೆಲ್ಲಬೇಕು ಎಂದು ನಿರ್ಧರಿಸಿ, ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಅವನ ಕೈಕೆಳಗೇ ತರಬೇತಿ ಪಡೆಯಲು ಶುರು ಮಾಡಿದರು. ಹಾಗೆ ತರಬೇತಿ ಪಡೆದು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಮಾಸ್ಟರ್ಸ್ ಚಾಂಪಿಯನ್‌ಶಿಪ್‌ಗಳಲ್ಲಿ ಸ್ಪರ್ಧಿಸಿ ಆರು ಚಿನ್ನದ ಪದಕಗಳನ್ನು ಗೆದ್ದರು! ಕೆಲವು ವರ್ಷಗಳ ಹಿಂದೆ ವಿಕಾಸ್ ದುಬೈಯಲ್ಲಿ ನಡೆದ ಕ್ರೀಡಾ ಸ್ಪರ್ಧೆಯಲ್ಲಿ ಪದಕ ಗೆದ್ದಾಗ ಕೊರಳಲ್ಲಿ ಪದಕ ಧರಿಸಿ, ಮೈಮೇಲೆ ತ್ರಿವರ್ಣ ಧ್ವಜ ಹೊದ್ದು ಸಂಭ್ರಮಿಸಿದ್ದರು. ಭಗವಾನಿ ದೇವಿ ಫಿನ್‌ಲ್ಯಾಂಡಿನ ವರ್ಲ್ಡ್ ಮಾಸ್ಟರ್ಸ್ ಆಥ್ಲೆಟಿಕ್ಸ್ ನಲ್ಲಿ ೧೦೦ ಮೀಟರ್ ಓಟವನ್ನು ೨೪.೭೪ ಸೆಕೆಂಡುಗಳಲ್ಲಿ ಓಡಿ ಚಿನ್ನ ಗೆದ್ದಾಗ ತಾನೂ ಮೊಮ್ಮಗನಂತೆ ಪದಕ ಧರಿಸಿ, ತ್ರಿವರ್ಣ ಧ್ವಜ ಹೊದ್ದು ಸಂಭ್ರಮಿಸಿದರು.

ಇಷ್ಟೆಲ್ಲ ಸಾದನೆ ಮಾಡಿದ ಭಗವಾನಿ ದೇವಿಯ ಬದುಕು ಸುಖದ ಸುಪ್ಪತ್ತಿಗೆ ಆಗಿತ್ತು ಎಂದು ಯಾರಿಗಾದರೂ ಅನ್ನಿಸಬಹುದು. ಆದರೆ, ಹಾಗಿಲ್ಲ. ಭಗವಾನಿ ದೇವಿ ಓದಿದ್ದು ಕೇವಲ ಐದನೇ ತರಗತಿಯ ವರೆಗೆ. ಅವರು ೨೯ ವರ್ಷ ಪ್ರಾಯದವರಾಗಿದ್ದಾಗ ಪತಿಯನ್ನು ಕಳೆದುಕೊಂಡರು. ಪತಿ ತೀರಿಕೊಂಡಾಗ ಅವರು ಗರ್ಭಿಣಿ. ಅದರ ನಂತರ, ಹನ್ನೊಂದು ವರ್ಷ ಪ್ರಾಯದ ತನ್ನೊಬ್ಬ ಮಗಳನ್ನೂ ಕಳೆದುಕೊಳ್ಳುತ್ತಾರೆ. ೨೦೦೭ರಲ್ಲಿ ಹೃದಯ ಸಂಬಂಧಿ ಕಾಯಿಲೆಗೆ ಬೈಪಾಸ್ ಸರ್ಜರಿಗೆ ಒಳಗಾಗಿದ್ದರು.

ಭಗವಾನಿ ದೇವಿ ಬೇರೆಲ್ಲ ಕ್ರೀಡಾಪಟುಗಳಂತೆ ದಿನವಿಡೀ ತರಬೇತಿ ಪಡೆಯುವುದಿಲ್ಲ. ಅವರು ವಾರದ ಎರಡು ಮೂರು ದಿನ ಒಂದೆರಡು ಗಂಟೆಗಳಷ್ಟೇ ತರಬೇತಿಗೆ ಒಳಗಾಗುತ್ತಾರೆ. ಬೆಳಗ್ಗಿನ ಆರು ಗಂಟೆಗೆ ಅವರ ದಿನಚರಿ ಶುರುವಾಗುತ್ತದೆ. ಬೆಳಗ್ಗೆ ಮತ್ತು ಸಂಜೆ ಎರಡು ಕಿ.ಮಿ. ಯಷ್ಟು ನಡೆಯುತ್ತಾರೆ. ಪ್ರತಿದಿನ ತಮ್ಮ ಮನೆಯ ಮೂರು ಮಾಳಿಗೆ ಮೆಟ್ಟಿಲು ಹತ್ತಿ ಟೆರೇಸ್‌ನಲ್ಲಿರುವ ಗಿಡಗಳಿಗೆ ನೀರುಣಿಸುತ್ತಾರೆ. ಅವರ ಆಹಾರವೂ ಹಾಲು, ಬೇಳೆಕಾಳು, ಚಪಾತಿ, ತರಕಾರಿಯ ಸರಳ ಆಹಾರ. ವಾಸ್ತವದಲ್ಲಿ, ಅವರು ಹುರಿಗೊಳಿಸುವುದು ತಮ್ಮ ದೇಹಕ್ಕಿಂತ ಹೆಚ್ಚಾಗಿ ತಮ್ಮ ಮನಸ್ಸನ್ನು. ಅವರ ಮುಂದಿನ ಗುರಿ ಮುಂದಿನ ವರ್ಷ ಪೋಲಾಂಡಿನಲ್ಲಿ ನಡೆಯಲಿರುವ ಮಾಸ್ಟರ್ಸ್ ಅಥ್ಲೆಟಿಕ್ಸ್ ಇಂಡೋರ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವುದು!

ಮುಂಬೈಯ ಮಾಹಿಮ್ನ ನಿವಾಸಿ ಝುಬೇದಾ ಯಾಕೂಬ್ ಖಾಂದ್ವಾನಿ(ಒಳಚಿತ್ರ)ಯವರಿಗೆ ಈಗ ೭೫ ವರ್ಷ ಪ್ರಾಯ. ಅವರ ಪ್ರಾಯದವರು ಬಹುಶಃ ತಮ್ಮ ಜೀವನದ ಎಲ್ಲಾ ಅಧ್ಯಾಯಗಳು ಮುಗಿದವು ಎಂದು ಬದುಕಿಗೆ ವಿಮುಖವಾಗಿ ಪರಲೋಕದ ಧ್ಯಾನದಲ್ಲಿರುತ್ತಿದ್ದರೋ ಏನೋ. ಆದರೆ, ಝುಬೇದಾ ಖಾಂದ್ವಾನಿಯವರು ಸೂಫಿ ತತ್ವದಲ್ಲಿ ಡಾಕ್ಟರೇಟ್ ಪಡೆಯಲು ತಯಾರಿ ನಡೆಸುವ ಮೂಲಕ ತಮ್ಮ ಬದುಕಿನ ಪುಸ್ತಕಕ್ಕೆ ಹೊಸ ಅಧ್ಯಾಯವನ್ನು ಸೇರಿಸಿದ್ದಾರೆ.

ಝುಬೇದಾ ಯಾಕೂಬ್ ೧೭ ವರ್ಷದವರಿದ್ದಾಗ ಅವರ ತಾಯಿ ತೀರಿಕೊಳ್ಳುತ್ತಾರೆ. ಅದೇ ವರ್ಷ ಅವರನ್ನು ಶಾಲೆಯಿಂದ ಬಿಡಿಸಿ ಮದುವೆ ಮಾಡಿಕೊಡಲಾಗುತ್ತದೆ. ನಂತರ ಅವರು ಕರೆಸ್ಪೊಂಡೆಂಟ್ ಕೋರ್ಸ್ ಮೂಲಕ ಆರ್ಟ್ಸ್ ಗ್ರ್ಯಾಜುಎಷನ್ ಮುಗಿಸಿ, ಎಲ್‌ಎಲ್ಬಿ ಪದವಿಯನ್ನೂ ಪಡೆಯುತ್ತಾರೆ. ಮತ್ತು, ಮುಂದೆ ಎಮ್‌ಎ ಪದವಿಯನ್ನೂ ಗಳಿಸುತ್ತಾರೆ. ಕೆಲವು ವರ್ಷಗಳ ಹಿಂದೆ ಅವರು, ಅವರ ಹಿರಿ ಮಗಳು, ಮತ್ತು ಕಿರಿ ಮಗಳು ಮೂವರೂ ಒಟ್ಟೊಟ್ಟಿಗೇ ಬಾಂದ್ರಾದ ಒಂದು ಕಾಲೇಜಿನಲ್ಲಿ ಕಲಿಯುತ್ತಿದ್ದರು!

ಝುಬೇದಾ ಖಾಂದ್ವಾನಿಯವರು ತಮ್ಮ ಸೂಫಿ ಡಾಕ್ಟರೇಟನ್ನು ಒಂದು ದಶಕದ ಹಿಂದೆಯೇ ಮುಗಿಸುವವರಿದ್ದರು. ಆದರೆ, ಅವರ ಗೈಡ್ ಆಗಿದ್ದ ಉರ್ದು, ಪರ್ಷಿಯನ್ ಮತ್ತು ಇಸ್ಲಾಮಿಕ್ ಅಧ್ಯಯನದ ಖ್ಯಾತ ವಿದ್ವಾಂಸರಾದ ಪ್ರೊಫೆರ್ಸ ನಿಝಾಮುದ್ದಿನ್ ಗೋರೇಕರ್ ತೀರಿಕೊಂಡ ಕಾರಣ ಅವರ ಅಧ್ಯಯನಕ್ಕೆ ತಡೆಬಿತ್ತು. ಅದರ ನಂತರ, ಅವರ ಪತಿ ಉದ್ಯಮಿ ಯಾಕೂಬ್ ಖಾಂದ್ವಾನಿಯವರು ತೀರಿಕೊಳ್ಳುತ್ತಾರೆ. ಇದೆಲ್ಲದರಿಂದ ಚೇತರಿಸಿಕೊಂಡರು ಅನ್ನುವಾಗ ಅವರು ಬಿದ್ದು ಕೈ ಮುರಿದುಕೊಳ್ಳುತ್ತಾರೆ. ಈಗ ಇವೆಲ್ಲಾ ಅಡೆತಡೆಗಳನ್ನು ಹಿಂದಿಕ್ಕಿ ಸೂಫಿ ಡಾಕ್ಟರೇಟ್ ಪಡೆಯುವ ತಮ್ಮ ಗುರಿ ಸಾಧನೆಗಾಗಿ ಅಧ್ಯಯನವನ್ನು ಮುಂದುವರಿಸಿದ್ದಾರೆ.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ