ಸಂವಿಧಾನವು 1950ರ ಜನವರಿ 26ರಂದು ಭಾರತ ಗಣರಾಜ್ಯವು ತನಗೆ ತಾನೇ ನೀಡಿಕೊಂಡ ನ್ಯಾಯಸಂಹಿತೆ. ಬಾಬಾಸಾಹೇಬರು ರೂಪಿಸಿದ ಸಮಪಾಲು ಸಮಬಾಳುವೆಯ ಸಂಹಿತೆ. ಪ್ರಜೆಗಳು- ಪ್ರಭುತ್ವದ ನಡುವಣ ವ್ಯಾಪ್ತಿ ನಿರ್ಣಯದ ಕರಾರು. ಈ ಕರಾರನ್ನು ಶಿಥಿಲಗೊಳಿಸುವ ಅಧಿಕಾರ ಯಾರಿಗೂ ಇಲ್ಲ. ಆದರೆ ತನ್ನನ್ನು ತಾನು ಮೇಲಿಟ್ಟುಕೊಂಡು ಪ್ರಜೆಗಳನ್ನು ಕೆಳತಳ್ಳುವ ಕಾರಣವಿಲ್ಲದೆ ದಮನ ಮಾಡುವುದು ಪ್ರಭುತ್ವದ ಮೂಲ ಪ್ರವೃತ್ತಿ. ಹಕ್ಕುಗಳನ್ನು ನಿರಾಕರಿಸಿ ಪ್ರಜೆಗಳನ್ನು ಮುಷ್ಟಿಯೊಳಗೆ ಇಟ್ಟುಕೊಳ್ಳುವ ಪ್ರಭುತ್ವದ ಸರ್ವಾಧಿಕಾರಿ ಧೋರಣೆ ಕಳೆದ ಎಂಟು ವರ್ಷಗಳಲ್ಲಿ ಹದ್ದು ಮೀರಿದೆ. ಪ್ರಜೆಗಳು ತಮ್ಮ ಕರ್ತವ್ಯಗಳನ್ನು ಪರಿಪಾಲಿಸುವಂತೆ ಅಪ್ಪಣೆ ನೀಡುವ ಪ್ರಭುತ್ವ ತನ್ನ ಅಧಿಕಾರವನ್ನು ನಿರಂಕುಶವಾಗಿ ಚಲಾಯಿಸುತ್ತಿದೆ. ಅಧಿಕಾರ ದಂಡವನ್ನು ಬೀಸುವ ಅದರ ರಭಸ, ನಿಷ್ಕರುಣೆ, ನಿರ್ಮಮತೆ ಎಳ್ಳುಕಾಳಿನಷ್ಟೂ ತಗ್ಗಿಲ್ಲ. ಬದಲಿಗೆ ಚುನಾವಣೆಯಿಂದ ಚುನಾವಣೆಗೆ ಹೆಚ್ಚು ವೇಗ ಪಡೆಯತೊಡಗಿದೆ. ಪ್ರಜೆಗಳು ಕರ್ತವ್ಯಶೀಲರಾಗಿ ಚಾರಿತ್ರ್ಯವಂತರಾಗಬೇಕೆಂದು ಪ್ರಭುತ್ವ ಬಯಸುವುದು ತಪ್ಪೇನೂ ಅಲ್ಲ. ಆದರೆ ಪ್ರಭುತ್ವ ತಾನು ಮೇಲ್ಪಂಕ್ತಿ ಹಾಕಿಕೊಡಬೇಕು. ಪ್ರಭುತ್ವದ ನಡೆನುಡಿಗಳು ಮಾದರಿಯಾಗಿರಬೇಕು. ನರೇಂದ್ರ ಮೋದಿ ಅವರ ನೇತೃತ್ವದ ಪ್ರಭುತ್ವ ಈ ಮೌಲ್ಯಗಳನ್ನು ಮೈಗೂಡಿಸಿಕೊಂಡಿದೆಯೇ? ಅನೈತಿಕ ದಾರಿಗಳನ್ನು ತುಳಿದು ಪ್ರತಿಪಕ್ಷಗಳ ಸರ್ಕಾರಗಳನ್ನು ಕೆಡವುತ್ತಿಲ್ಲವೇ? ಜನಮತವನ್ನು ತಿರುಚುತ್ತಿಲ್ಲವೇ? ಪ್ರತಿಪಕ್ಷಗಳ ರಾಜ್ಯ ಸರ್ಕಾರಗಳನ್ನು ಹಗಲಿರುಳೂ ಕಚ್ಚಿ ಕಾಡುವಂತೆ ತನ್ನ ರಾಜ್ಯಪಾಲರುಗಳ ಬೆನ್ನು ಚಪ್ಪರಿಸಿ ಹುರಿದುಂಬಿಸುತ್ತಿಲ್ಲವೇ? ತನ್ನನ್ನು ಪ್ರಶ್ನಿಸಬಹುದಾದ ಏಕೈಕ ಸಾಂವಿಧಾನಿಕ ಸಂಸ್ಥೆಯಾದ ಸುಪ್ರಿಂ ಕೋರ್ಟನ್ನು ಹಣಿದು ಅಂಕೆಯಲ್ಲಿ ಇರಿಸಿಕೊಳ್ಳಲು ದಾಳಿ ನಡೆಸುತ್ತಿಲ್ಲವೇ? ಸ್ವಾರ್ಥ ಸಾಧನೆಗೆ ಭಾವನಾತ್ಮಕ ವಿಷಯಗಳ ಭುಗಿಲೆಬ್ಬಿಸಿ ಸಾಮಾಜಿಕ ಹಂದರವನ್ನು ಛಿದ್ರಗೊಳಿಸುತ್ತಿಲ್ಲವೇ? ಸಾಂವಿಧಾನಿಕ ಸಂಸ್ಥೆಗಳಿಗೆ ಒಳಗೊಳಗಿನಿಂದಲೇ ಗೆದ್ದಲು ಹಿಡಿಸಿ ತಾನೇ ಚಂಡಪ್ರಚಂಡನಾಗಿ ಪ್ರಶ್ನಾತೀತನಾಗಿ ಅಧಿಕಾರದ ಗದ್ದುಗೆಯನ್ನು ಅನವರತ ಆಕ್ರಮಿಸುವ ಹುನ್ನಾರಗಳ ಹೊಸೆಯುತ್ತಿಲ್ಲವೇ? ಬಹುಸಂಖ್ಯಾತ ಸಮುದಾಯಗಳನ್ನು ಕೆರಳಿಸಿ ಅಲ್ಪಸಂಖ್ಯಾತ ಸಮುದಾಯಗಳ ಬೇಟೆಗೆ ಹೂಡುತ್ತಿಲ್ಲವೇ? ಶೂದ್ರವರ್ಣವನ್ನು ಉಳಿದ ಮೂರುವರ್ಣಗಳ ಊಳಿಗಕ್ಕೆ ನೂಕುವ ಹೊಸ ಕುತಂತ್ರಗಳನ್ನು ಹೆಣೆಯುತ್ತಿಲ್ಲವೇ?
ಭಾರತೀಯರು ತಮ್ಮ ಮೂಲಭೂತ ಕರ್ತವ್ಯಗಳನ್ನು ಮರೆತು ಕೇವಲ ಹಕ್ಕುಗಳಿಗಾಗಿ ಹೋರಾಡುತ್ತ ಬಂದ ಕಾರಣ ಸಮಯ ಪೋಲಾಯಿತಲ್ಲದೆ ದೇಶ ದುರ್ಬಲವಾಯಿತು ಎಂಬುದು ಪ್ರಧಾನಿ ಉವಾಚ. ಮೂಲಭೂತ ಹಕ್ಕುಗಳಿಂದ ದೇಶ ದುರ್ಬಲವಾಗಿಲ್ಲ. ಮೇಲು ಕೀಳುಗಳ, ಏಣಿಶ್ರೇಣಿಯ, ಕರ್ಮಸಿದ್ಧಾಂತದ, ಜಾತಿ ವ್ಯವಸ್ಥೆಯ ಯಥಾಸ್ಥಿತಿವಾದಿ ಅಸ್ತ್ರಗಳ ಅಡಿಪಾಯ ಕಂಪಿಸತೊಡಗಿದೆ. ಅಕ್ಷರ ಅರಿವು ಅನ್ನ ಜಮೀನುಗಳ ಮೇಲಿನ ಏಕಸ್ವಾಮ್ಯವು ಸಮಾನತೆ- ಸಹಬಾಳ್ವೆಯ ಅಪಾಯ ಎದುರಿಸಿದೆ. ಹಕ್ಕುಗಳು ನಮ್ಮವು- ಕರ್ತವ್ಯಗಳು ನಿಮ್ಮವು ಎಂದು ನಡೆಸಲಾಗಿದ್ದ ದಮನ ದಬ್ಬಾಳಿಕೆಗೆ ಸಂವಿಧಾನದ ಸಮಾನತೆಯ ಹೊಳಪಿನ ಹರಿತ ಖಡ್ಗ ಎದುರಾಗಿದೆ. ಈ ಖಡ್ಗವನ್ನು ಮೊಂಡು ಮಾಡುವ ಷಡ್ಯಂತ್ರ ಜರುಗಿದೆ.
ಸಾಂವಿಧಾನಿಕ ತತ್ವಗಳನ್ನು ಬೀಳುಗಳೆಯುವ ಇಲ್ಲವೇ ಸತ್ವಹೀನಗೊಳಿಸುವ ನಡೆಗಳು ಇತ್ತೀಚಿನ ವರ್ಷಗಳಲ್ಲಿ ಮಾಮೂಲಾಗಿ ಹೋಗಿದೆ. ಸರ್ವರನ್ನೂ ಒಳಗೊಳ್ಳುವ ಮತ್ತು ಬಹುಮುಖಿ ದರ್ಶನವನ್ನು ನಮ್ಮ ಸಂವಿಧಾನ ಪ್ರತಿಪಾದಿಸುತ್ತದೆ. ಈ ಪರಮೋಚ್ಚ ಮೌಲ್ಯಗಳಿಗೂ ಆಪತ್ತು ಕವಿದಿದೆ. ಪ್ರಜೆಗಳು ಮತ್ತು ಪ್ರಭುತ್ವದ ನಡುವಣ ಸಮತೂಕ ತಪ್ಪಿದೆ. ಪ್ರಭುತ್ವದೆಡೆಗೇ ವಾಲಿ ಒಗ್ಗಾಲಿಯಾಗಿದೆ. ಗಣರಾಜ್ಯದಲ್ಲಿನ ಗಣವನ್ನು ಬದಿಗೆ ತಳ್ಳತೊಡಗಿದೆ ರಾಜ್ಯ. ಪ್ರಜೆಗಳ ಹಕ್ಕುಗಳನ್ನು ಕುಗ್ಗಿಸುವ ನಿರಂಕುಶ ಧೋರಣೆಗೆ ಕಡಿವಾಣ ತೊಡಿಸಬೇಕಿದೆ.
ತಲೆ ತಲಾಂತರಗಳಿಂದ ಕೇವಲ ಹಕ್ಕುಗಳನ್ನು ಮಾತ್ರವೇ ಚಲಾಯಿಸಿಕೊಂಡು ಬಂದಿರುವ ಕುಲೀನ ವರ್ಗಗಳು ಸಮಾನತೆಯನ್ನು ನಿತ್ತರಿಸುತ್ತಿಲ್ಲ. ಕೇವಲ ಎಪ್ಪತ್ತು ವರ್ಷಗಳಿಗೇ ಅಸಹನೆಯಿಂದ ಕುದಿಯತೊಡಗಿರುವುದನ್ನು ಕಾಣುತ್ತಿದ್ದೇವೆ. ಸಮಾನತೆ ಸಾರುವ ಸಂವಿಧಾನವನ್ನು ಬದಲಾಯಿಸುವ ಮಾತನ್ನು ಎಪ್ಪತ್ತು ವರ್ಷಗಳಿಂದ ಇಂದಿನ ತನಕ ಆಡುತ್ತಲೇ ಬಂದಿದ್ದಾರೆ. ಪ್ರಧಾನಿ ಮೋದಿಯವರು ಈ ಕುಲೀನ ವರ್ಗಗಳ ಮನದಾಳದ ಅಸಹನೆಗೆ ಮಾತು ನೀಡತೊಡಗಿದ್ದಾರೆ. ತಲೆ ತಲಾಂತರಗಳಿಂದ ಹಕ್ಕುಗಳನ್ನು ಅನುಭವಿಸಿಕೊಂಡು ಬಂದಿರುವ ಅನುಕೂಲಸ್ಥರ ಭಾಷೆಯನ್ನೇ ಆಡುತ್ತಿದ್ದಾರೆ.
ಸಮಾನತೆಯ ತಳಹದಿಯ ಸಮಾಜದಲ್ಲಿ ಮಾತ್ರವೇ ಹಕ್ಕುಗಳು ಮತ್ತು ಕರ್ತವ್ಯಗಳು ಕೈ ಕೈ ಹಿಡಿದುಕೊಂಡು ಮುಂದೆ ಸಾಗಬಲ್ಲವು. ಅಸಮಾನತೆಯ ಕೂಪವಾಗಿದ್ದ ವರ್ಣಾಶ್ರಮ ಧರ್ಮವನ್ನು, ಮನುಸ್ಮೃತಿಯನ್ನು ಪುನಃ ನೆಲೆ ನಿಲ್ಲಿಸುವ ಕಾರ್ಯಸೂಚಿಯನ್ನು ಜಾರಿ ಮಾಡುವವರಿಗೆ ಕರ್ತವ್ಯಗಳನ್ನು ಬೋಧಿಸುವ ಅಧಿಕಾರ ಇಲ್ಲ. ಇಷ್ಟಕ್ಕೂ ಸಂವಿಧಾನದಲ್ಲಿನ ಮೂಲಭೂತ ಕರ್ತವ್ಯಗಳು ಏನನ್ನು ಹೇಳುತ್ತವೆ?
ಸಂವಿಧಾನವನ್ನು ಮತ್ತು ಅದರ ಆದರ್ಶಗಳನ್ನು, ಸಾಂವಿಧಾನಿಕ ಸಂಸ್ಥೆಗಳನ್ನು, ರಾಷ್ಟ್ರಧ್ವಜವನ್ನು, ರಾಷ್ಟ್ರಗೀತೆಯನ್ನು ಗೌರವಿಸಬೇಕು ಹಾಗೂ ಸಂವಿಧಾನದ ಪ್ರಕಾರ ನಡೆದುಕೊಳ್ಳಬೇಕು. ನಮ್ಮ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ ಮೌಲ್ಯಗಳನ್ನು ಪಾಲಿಸಬೇಕು. ದೇಶದ ಸಮಗ್ರತೆ, ಏಕತೆ ಹಾಗೂ ಸಾರ್ವಭೌಮತೆಯನ್ನು ಕಾಪಾಡಬೇಕು. ಕರೆ ನೀಡಿದಾಗ ಮುಂದೆ ಬಂದು ದೇಶಸೇವೆ ಮಾಡಬೇಕು. ಧರ್ಮ, ಭಾಷೆ, ಪ್ರದೇಶ ಮತ್ತಿತರೆ ಗಡಿಗಳ ದಾಟಿ ಸೋದರ ಮತ್ತು ಸಮರಸ ಭಾವವನ್ನು ಬೆಳೆಸಬೇಕು. ಮಹಿಳೆಯ ಘನತೆಗೆ ಭಂಗ ತರುವ ಆಚರಣೆಗಳನ್ನು ಕೈಬಿಡಬೇಕು. ನಮ್ಮ ಬಹುಮುಖೀ ಸಮಾಜದ ಸಿರಿವಂತ ಪರಂಪರೆಯನ್ನು ಸಂರಕ್ಷಿಸಿ ಗೌರವಿಸಬೇಕು. ಅರಣ್ಯ ಸರೋವರ, ನದಿಗಳನ್ನು ಸಂರಕ್ಷಿಸಬೇಕು. ವೈಜ್ಞಾನಿಕ ಮನೋಭಾವ, ಮಾನವೀಯತೆ ಹಾಗೂ ಪ್ರಶ್ನಿಸುವ ಮನೋಭಾವವನ್ನು ಬೆಳೆಸಬೇಕು. ಸಾರ್ವಜನಿಕ ಆಸ್ತಿಪಾಸ್ತಿಯನ್ನು ರಕ್ಷಿಸಬೇಕು, ಹಿಂಸಾಚಾರ ತೊರೆಯಬೇಕು. ವ್ಯಕ್ತಿಗತವಾಗಿ ಮತ್ತು ಸಾಮೂಹಿಕವಾಗಿ ಎಲ್ಲ ಕ್ಷೇತ್ರಗಳಲ್ಲಿ ಉತ್ಕೃಷ್ಟತೆ ಸಾಽಸಲು ಶ್ರಮಿಸಬೇಕು. ಪೋಷಕರು ತಮ್ಮ ಮಗುವಿಗೆ ಶಿಕ್ಷಣದ ಅವಕಾಶಗಳನ್ನು ಕಲ್ಪಿಸಬೇಕು.
ಮೂಲ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳು ಇಲ್ಲ. ಅವುಗಳನ್ನು 1976ರ ತುರ್ತುಪರಿಸ್ಥಿತಿಯ ದಿನಗಳಲ್ಲಿ ತಿದ್ದುಪಡಿಗಳ ಮೂಲಕ ಸೇರಿಸಿದವರು ಇಂದಿರಾ ಗಾಂಧಿ. ಅವರು ಸೇರಿಸಿದ್ದ ಮೂಲಭೂತ ಕರ್ತವ್ಯಗಳು ಹತ್ತು. ಹನ್ನೊಂದನೆಯದನ್ನು ಅಳವಡಿಸಿದ್ದು ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರ.
ಇತರರ ಹಕ್ಕುಗಳನ್ನು ಹತ್ತಿಕ್ಕಿ ಸಂಪ್ರದಾಯಗಳ ಮೂಲಕ ಯಜಮಾನಿಕೆ ಸಾಧಿಸುವುದೇ ಕರ್ತವ್ಯಗಳನ್ನು ಹಕ್ಕುಗಳಿಗೆ ತಳುಕು ಹಾಕುವವರ ಅಸಲಿ ಉದ್ದೇಶ ಎಂಬುದಾಗಿ ತಜ್ಞರು ವ್ಯಾಖ್ಯಾನಿಸುತ್ತಾರೆ.
ಮನುಧರ್ಮ ಸಂಹಿತೆಯು ಈ ನೆಲದ ಬಹುಜನರ ಭುಜಗಳ ಮೇಲೆ ಇರಿಸಿದ್ದು ಕೇವಲ ಕರ್ಮ ಕರ್ತವ್ಯಗಳ ನೊಗವನ್ನೇ ವಿನಾ ಸಮಾನತೆಯ ಘನತೆಯನ್ನು ಅಲ್ಲವೇ ಅಲ್ಲ. ಬಹುಜನ ಸಮುದಾಯಗಳು ಸಮಾನತೆಯ ಮೂಲದಿಂದ ಹುಟ್ಟುವ ನೂರಾರು ಮುಲಭೂತ ಹಕ್ಕುಗಳಿಂದ ಸಾವಿರಾರು ವರ್ಷಗಳಿಂದ ವಂಚಿತರಾಗಿದ್ದಾರೆ. ಸ್ವತಂತ್ರ ಭಾರತದಲ್ಲೂ ಮೂಲಭೂತ ಹಕ್ಕುಗಳು ಅವರಲ್ಲಿನ ಬಹುಪಾಲು ಜನರನ್ನು ಮುಟ್ಟಿಲ್ಲ. ಈ ಕರ್ತವ್ಯಗಳನ್ನು ತಾನು ಖುದ್ದು ಎಷ್ಟರಮಟ್ಟಿಗೆ ನೆರವೇರಿಸಿದೆ ಮೋದಿ ಪ್ರಭುತ್ವ? ಮೊನ್ನೆಯಷ್ಟೇ ಮತ್ತೊಂದು ಗಣರಾಜ್ಯ ದಿನವನ್ನು ಮಹಾ ಉತ್ಸವವಾಗಿ ಆಚರಿಸಿ ಬೀಗಿದವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.