2000 ನೇ ಇಸವಿಯಲ್ಲಿ ಕೇಂದ್ರ ಸರ್ಕಾರದ ಆ ವರ್ಷದ ಸ್ತ್ರೀ ಶಕ್ತಿ ಪುರಸ್ಕಾರ್ ಪ್ರಶಸ್ತಿ ಪುರಸ್ಕೃತ ಐದು ಜನ ಮಹಿಳೆಯರಲ್ಲಿ ತಮಿಳುನಾಡಿನ 73 ವರ್ಷ ಪ್ರಾಯದ ಪಿ. ಚಿನ್ನ ಪಿಳ್ಳೈ ಎಂಬವವರೂ ಒಬ್ಬರು. ತಮಿಳಿನಲ್ಲಿ ‘ಚಿನ್ನ ಪಿಳ್ಳೈ’ ಅಂದರೆ ಚಿಕ್ಕ ಮಗು ಎಂದರ್ಥ. ಆ ಅರ್ಥಕ್ಕೆ ತಕ್ಕಂತೆ ಅವರದ್ದು ನಾಲ್ಕು ಅಡಿಗೆ ತುಸು ಹೆಚ್ಚಿನ ಎತ್ತರ, ಅಷ್ಟೇ. ಒಂದು ಸಾಧಾರಣ ಸೀರೆವುಟ್ಟು, ಸವೆದು ಹೋದ ಹವಾಯ್ ಚಪ್ಪಲಿ ಮೆಟ್ಟಿ ಪ್ರಶಸ್ತಿ ಸ್ವಿಕರಿಸಲು ಅವರು ಹೊಸದಿಲ್ಲಿಯ ವಿಜ್ಞಾನ ಭವನಕ್ಕೆ ಬಂದಾಗ ಅಲ್ಲಿ ಪ್ರಖರವಾಗಿ ಜಗಮಗಿಸುತ್ತಿದ್ದ ಬೆಳಕಿನಲ್ಲಿ ಆಸೀನರಾಗಿದ್ದ ಜನರ ಜಂಗುಳಿಯನ್ನು ನೋಡಿ ಹೌಹಾರಿದ್ದರು! ಆದರೆ, ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಪ್ರಶಸ್ತಿ ನೀಡಿ, ಅವರ ಕಾಲು ಮುಟ್ಟಿ ನಮಸ್ಕರಿಸಿದಾಗ ಇಡೀ ದೇಶವೇ ಚಿನ್ನ ಪಿಳ್ಳೈಯವರನ್ನು ಕಣ್ಣಗಲಿಸಿ ನೋಡಿತು! ಮುಂದೆ, 2019ರಲ್ಲಿ ಚಿನ್ನ ಪಿಳ್ಳೈ ಪದ್ಮಶ್ರೀ ಪ್ರಶಸ್ತಿಯನ್ನೂ ಪಡೆದರು. ಯಾರು ಈ ಚಿನ್ನ ಪಿಳ್ಳೈ?
ಚಿನ್ನ ಪಿಳ್ಳೈ ತಮಿಳುನಾಡಿನ ಮಧುರೈಯ ಒಬ್ಬ ಅನಕ್ಷರಸ್ಥ ದಲಿತ ಕೃಷಿ ಕೂಲಿಯಾಳು. ಅವರಿಗೆ ಸ್ತ್ರೀ ಶಕ್ತಿ ಪುರಸ್ಕಾರ್ ಪ್ರಶಸ್ತಿ ಘೋಷಣೆಯಾದಾಗ ಅವರು ಮಧುರೈಯ ಪಿಲ್ಲುಶೆರಿ ಎಂಬ ಹಳ್ಳಿಯಲ್ಲಿ ಮೈ ಕೈ ಕೆಸರು ಮಾಡಿಕೊಂಡು ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಆಗ ಅವರಿಗೆ ಸಿಗುತ್ತಿದ್ದುದು ದಿನಕ್ಕೆ 30 ರೂ. ಕೂಲಿ. ಆದರೆ, ಭೂಮಾಲೀಕರಿಂದ ಶೋಷಣೆಗೆ ಒಳಗಾಗುತ್ತಿದ್ದ ತನ್ನಂತಹ ಸಾವಿರಾರು ಅನಕ್ಷರಸ್ಥ ಬಡ ಕೃಷಿ ಕೂಲಿಕಾರ್ಮಿಕರನ್ನು ಸಂಘಟಿಸುತ್ತಿರುವ ಒಬ್ಬ ಅಸಾಮಾನ್ಯ ಮಹಿಳೆ! ಆ ವೈಭವೋಪೇತ ಸಂಭ್ರಮದಲ್ಲಿ ಪ್ರಧಾನಿಯ ಕೈಯಿಂದ ಪ್ರಶಸ್ತಿ ಸ್ವೀಕರಿಸುತ್ತಿದ್ದಾಗಲೂ ಅವರ ಮನಸ್ಸೆಲ್ಲ ತನ್ನೊಂದಿಗೆ ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತ, ದಿನಕ್ಕೆ 30-50 ರೂ. ಸಂಪಾದಿಸುವ ಆ ಬಡವಿಯರ ದೈನೇಷಿ ಬಾಳಿನ ಬಗ್ಗೆಯೇ ಆಲೋಚಿಸುತ್ತಿತ್ತು.
ಭಾರತದ ಇತರ ಹಳ್ಳಿಗಳಂತೆ ಪಿಲ್ಲುಶೆರಿಯಲ್ಲೂ ಕೆಳವರ್ಗದ ಕೂಲಿಕಾರರು ತಂಡಗಳಾಗಿ ಜಮೀನುದಾರರು, ಗುತ್ತಿಗೆದಾರರು, ದೊಡ್ಡ ದೊಡ್ಡ ರೈತರು ಮೊದಲಾದವರ ಕೈಕೆಳಗೆ ದುಡಿಯುವುದು ವಾಡಿಕೆ. ಇತರ ಹಳ್ಳಿಗಳಂತೆ ಪಿಲ್ಲುಶೆರಿಯಲ್ಲೂ ಕೂಲಿಕಾರರು ತಮ್ಮ ಶ್ರಮಕ್ಕೆ ಸರಿಯಾದ ಮಜೂರಿ ಸಿಕ್ಕದೆ ಶೋಷಣೆಗೆ ಒಳಗಾಗುತ್ತಿದ್ದರು. ಇಂತಹ ಸಂದರ್ಭಗಳಲ್ಲಿ, ಅನಕ್ಷರಸ್ಥಳಾದರೂ ಚೌಕಾಶಿ ಮಾಡುವುದರಲ್ಲಿ ಗಟ್ಟಿಗಳಾದ ಚಿನ್ನ ಪಿಳ್ಳೈ ಈ ಬಡ ಜನರ ಪರವಾಗಿ ಗುತ್ತಿಗೆದಾರರು, ಜಮೀನುದಾರರೊಂದಿಗೆ ಚೌಕಾಶಿ ಮಾಡಿ ಅವರಿಗೆ ಸಾಧ್ಯವಾದಷ್ಟು ಯೋಗ್ಯ ಕೂಲಿದರ ಸಿಗುವಂತೆ ಮಾಡುತ್ತಿದ್ದರು. ಚಿನ್ನ ಪಿಳ್ಳೈಯ ಈ ವಿಶೇಷ ಸಾಮರ್ಥ್ಯವನ್ನು ಗಮನಿಸಿದ ‘ಧನ್ ಫೌಂಡೇಷನ್’ ಎಂಬ ಸರ್ಕಾರೇತರ ಸಂಸ್ಥೆಯು ‘ಕಲಾಂಜಿಯಮ್’ (ತಮಿಳಿನಲ್ಲಿ ಇದರರ್ಥ ಏಳಿಗೆ) ಎಂಬ ಹೆಸರಿನಲ್ಲಿ ಮಹಿಳಾ ಕೂಲಿಕಾರರಿಗಾಗಿ ನಡೆಸುತ್ತಿದ್ದ ತನ್ನ ಚಳವಳಿಗೆ ಸೇರಲು ಆಹ್ವಾನಿಸಿತು. ೧೯೮೯ರಲ್ಲಿ ಒಬ್ಬಳು ಸಾಮಾನ್ಯ ಸದಸ್ಯೆಯಾಗಿ ಕಲಾಂಜಿಯಮ್ ಸೇರಿದ ಚಿನ್ನ ಪಿಳ್ಳೈ ತನ್ನ ಕಠಿಣ ಶ್ರಮ, ಸಾಧನೆಯಿಂದ ಅದರ ಹದಿಮೂರು ಜನರ ಕಾರ್ಯಕಾರಿ ಸಮಿತಿಯ ಸದಸ್ಯೆಯಾದರು.
‘ಕಲಾಂಜಿಯಮ್’ ನಲ್ಲಿ ಲಕ್ಷಕ್ಕೂ ಹೆಚ್ಚು ಜನ ಸದಸ್ಯೆಯರಿದ್ದಾರೆ. ಎಲ್ಲರೂ ಹಿಂದುಳಿದ ವರ್ಗದ ಜಾತಿಗಳಿಗೆ ಸೇರಿದವರು. ಇವರೆಲ್ಲರೂ ೫೦೦೦ಕ್ಕೂ ಹೆಚ್ಚು ಗುಂಪುಗಳಾಗಿ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಪಾಂಡಿಚೇರಿ ಸೇರಿ ದೇಶದ ಹನ್ನೆರಡಕ್ಕೂ ಹೆಚ್ಚು ರಾಜ್ಯಗಳಲ್ಲಿ ಚಳವಳಿ ನಿರತರಾಗಿದ್ದಾರೆ. ಹಿಂದೆ, ‘ಕಲಾಂಜಿಯಮ್’ ನ ಸದಸ್ಯೆಯರು ಪ್ರತಿದಿನ ಒಂದಷ್ಟು ಅಕ್ಕಿಯನ್ನು ತೆಗೆದಿರಿಸುವುದು, ಹೀಗೆ ಶೇಖರವಾದ ಅಕ್ಕಿ ಕಷ್ಟದಲ್ಲಿರುವ ಸದಸ್ಯೆರ ನಡುವೆ ಹಂಚಿಕೆ ಮಾಡಿ, ಒಬ್ಬರಿಗೊಬ್ಬರು ನೆರವಾಗುತ್ತಿದ್ದರು. ಈಗ ಅಕ್ಕಿಯ ಬದಲು ತಾವು ಉಳಿತಾಯ ಮಾಡಿದ ಪುಡಿಗಾಸನ್ನು ಸಂಗ್ರಹಿಸಿಟ್ಟು, ಆರ್ಥಿಕ ಅಡಚಣೆ ಎದುರಾದಾಗ ಅದು ಸದಸ್ಯೆಯರ ನಡುವೆ ಸಾಲದ ರೂಪದಲ್ಲಿ ಚಲಾವಣೆಗೊಂಡು, ಅವರು ಹೊರಗಿನ ಸಾಲಗಾರರ ಕಪಿಮುಷ್ಠಿಗೆ ಸಿಲುಕುವುದು ತಪ್ಪುವಂತೆ ನೋಡಿಕೊಳ್ಳುತ್ತಿದ್ದಾರೆ. ಕಲಾಂಜಿಯಮ್‌ನ ಇಂತಹ ನೆರವಿನಿಂದಾಗಿ ಎಷ್ಟೋ ಬಡ ಕೂಲಿಕಾರರ ಮಕ್ಕಳು ಡಾಕ್ಟರ್, ಎಂಜಿನಿಯರ್‌ಗಳಾಗಿದ್ದಾರೆ. ಎಷ್ಟೋ ಜನ ವಿದೇಶಗಳಲ್ಲೂ ಉದ್ಯೋಗ ಮಾಡುತ್ತಿದ್ದಾರೆ.
‘ಕಲಾಂಜಿಯಮ್’ ತನ್ನ ಸದಸ್ಯೆಯರ ಆರ್ಥಿಕ ಸುಧಾರಣೆಗೆ ನೆರವಾಗುವುದಲ್ಲದೆ, ಕೆಳಜಾತಿಗಳಿಗೆ ಸೇರಿದ ಆ ಸ್ತ್ರೀಯರ ಸಾಮಾಜಿಕ ಸಮಾನತೆಗಾಗಿಯೂ ಹೋರಾಡುತ್ತದೆ. ಉದಾಹರಣೆಗೆ, ಪಿಲ್ಲುಶೆರಿ ಗ್ರಾಮದ ಕೆರೆಯಲ್ಲಿ ಮೀನುಗಾರಿಕೆ ನಡೆಸುವ ಗುತ್ತಿಗೆಯನ್ನು ತಲತಲಾಂತರದಿಂದಲೂ ಹಣವಂತ ಜಮೀನ್ದಾರರು ನಡೆಸಿಕೊಂಡು ಬರುತ್ತಿದ್ದರು. ಚಿನ್ನ ಪಿಳ್ಳೈ ತನ್ನ ಗುಂಪನ್ನು ಕರೆದುಕೊಂಡು ಕಲೆಕ್ಟರ್ ಕಚೇರಿಗೆ ಜಾಥಾ ಹೋಗಿ, ಅವರೊಂದಿಗೆ ವಾದ ಮಾಡಿ, ಆ ಗುತ್ತಿಗೆಯು ‘ಕಲಾಂಜಿಯಮ್’ ನ ಮಹಿಳೆಯರಿಗೆ ಸಿಗುವಂತೆ ಮಾಡಿದರು. ಪ್ರತಿವರ್ಷ ಅಲನರ್ ಕೂಯಿಲ್‌ನಿಂದ ಮಧುರೈಗೆ ಬರುವ ವಿಷ್ಣು ದೇವರ ಜಾತ್ರೆಯನ್ನು ಯಾವಾಗಲೂ ಮೇಲುವರ್ಗಕ್ಕೆ ಸೇರಿದ ಶ್ರೀಮಂತ ಜಮೀನ್ದಾರರಷ್ಟೇ ಸ್ವಾಗತಿಸುವುದು ಮಾಡಿಕೆಯಾಗಿತ್ತು. ಈಗ ‘ಕಲಾಂಜಿಯಮ್’ ನ ಸದಸ್ಯೆಯರೂ ಆ ಜಾತ್ರೆಯನ್ನು ಸ್ವಾಗತಿಸಲು ಇತರರೊಂದಿಗೆ ನಿಲ್ಲುತ್ತಾರೆ.
ಚಿನ್ನ ಪಿಳ್ಳೈಗೆ ೧೨ ವರ್ಷ ಪ್ರಾಯದಲ್ಲೇ ಮದುವೆಯಾಗಿತ್ತು. ಓದು ಬರಹ ಕಲಿಯುವ ಅವಕಾಶವೇ ಇರಲಿಲ್ಲ. ಆದರೆ, ಓದು ಬರಹವಿಲ್ಲದಿದ್ದರೂ ಇವರು ತನ್ನಂತಹ ಸಾವಿರಾರು ಜನ ಕೂಲಿಕಾರ ಹೆಂಗಸರಿಗೆ ನ್ಯಾಯ ದೊರಕಿಸಲು ಭ್ರಷ್ಟ ರಾಜಕಾರಣಿ, ಸರ್ಕಾರಿ ಅಧಿಕಾರಿ, ಜಮೀನ್ದಾರರು, ಗಿರವಿದಾರರು ಮೊದಲಾದವರನ್ನು ಎದುರಿಸುವಾಗ ತೋರುವ ಆತ್ಮವಿಶ್ವಾಸ, ಚಾಣಾಕ್ಷತನ ವಿದ್ಯಾವಂತರನ್ನೂ ನಾಚಿಸುವಂತಹದು. ಒಬ್ಬ ಹೆಂಗಸು, ಅದರಲ್ಲೂ ಒಬ್ಬ ದಲಿತ ಹೆಂಗಸು ಆರ್ಥಿಕವಾಗಿ ಸ್ವತಂತ್ರಳಾಗುವುದು, ಮತ್ತು ಇತರ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವುದನ್ನು ಪುರುಷ ಪ್ರಧಾನ ಸಮಾಜಕ್ಕೆ ಅರಗಿಸಿಕೊಳ್ಳುವುದು ಕಷ್ಟ. ಈ ಕಾರಣಕ್ಕಾಗಿ ಚಿನ್ನ ಪಿಳ್ಳೈ ಹೆಜ್ಜೆ ಹೆಜ್ಜೆಗೂ ಜಾತಿ ದೌರ್ಜನ್ಯವನ್ನು ಎದುರಿಸಬೇಕಾಯಿತು. ತನ್ನ ಸಾಮಾಜಿಕ ಕೆಲಸಗಳಿಂದ ಕೆರಳುತ್ತಿದ್ದ ಗಂಡನಿಂದ ಎಷ್ಟೋ ಬಾರಿ ಮನೆಯಿಂದ ಹೊರ ಹಾಕಿಸಿಕೊಂಡು, ಹಸಿದ ಹೊಟ್ಟೆಯಲ್ಲಿ ಆನೇಕ ರಾತ್ರಿಗಳನ್ನು ಬಯಲಲ್ಲಿ ಕಳೆದದ್ದೂ ಇದೆ. ಆದರೆ, ಚಿನ್ನ ಪಿಳ್ಳೈ ತನ್ನ ಇಚ್ಚಾಶಕ್ತಿ, ಗಟ್ಟಿತನ ಮತ್ತು ತ್ಯಾಗ ಮನೋಭಾವದಿಂದ ಅದನ್ನೆಲ್ಲ ಮೆಟ್ಟಿ ನಿಂತಿರುವುದಲ್ಲದೆ, ಇಳಿವಯಸ್ಸು, ಅನಾರೊಗ್ಯದಲ್ಲೂ ಊರೂರು ತಿರುಗಿ, ಮಹಿಳೆಯರನ್ನು ಸಂಘಟಿಸುತ್ತ ಅಸಂಖ್ಯ ಹೆಂಗಸರಿಗೆ ಸ್ಛೂರ್ತಿಯ ಸೆಲೆಯಾಗಿದ್ದಾರೆ.