Light
Dark

ವಿದೇಶ ವಿಹಾರ | ಬೋರಿಸ್ ಜಾನ್ಸನ್ ರಾಜೀನಾಮೆ; ಇನ್ಫೋಸಿಸ್ ಮೂರ್ತಿ ಅಳಿಯ ರಿಶಿ ಯುಕೆ ಪ್ರಧಾನಿಯಾಗುವರೇ?

ಡಿ.ವಿ.ರಾಜಶೇಖರ್‌, ಹಿರಿಯ ಪತ್ರಕರ್ತ

ಭಾರತೀಯ ಮೂಲದವರಾದ ರಿಶಿ ಸುನಕ್, ಬ್ರೇವರ್ಮನ್ ಮತ್ತು ಪ್ರೀತಿ ಪಟೇಲ್ ಪ್ರಧಾನಿ ಸ್ಥಾನಕ್ಕೆ ತಮ್ಮ ಸ್ಪರ್ಧೆಯನ್ನು ಘೋಷಿಸುತ್ತಿದ್ದಂತೆಯೇ ಅವರ ವಿರುದ್ಧ ವರ್ಣದ್ವೇಷದ ವಾಸನೆಯುಳ್ಳ ಅಪಪ್ರಚಾರ ಟ್ವಿಟರ್ ಸೇರಿದಂತೆ ಇತರ ಸಾಮೂಹಿಕ ಮಾಧ್ಯಮಗಳಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಆರಂಭವಾಗಿದೆ. ಲೇರ್ಬರ್‌ಪಕ್ಷದ ಎಂಪಿಗಳು, ಎಡಪಂಥೀಯ ವಕೀಲರು ಮತ್ತು ಬಲಪಂಥೀಯ ವಿಶ್ಲೇಷಕರ ಟ್ಟಿಟರ್ ಖಾತೆಗಳಲ್ಲಿಯೂ ಅಪಪ್ರಚಾರ ನಡೆಯುತ್ತಿದೆ. ಮುಖ್ಯವಾಗಿ ಈ ಭಾರತೀಯ ಮೂಲದವರ ವಿರುದ್ಧ ಇರುವ ಹಗರಣಗಳು, ಅವರ ಆಸ್ತಿ, ಶ್ರೀಮಂತಿಕೆ, ವ್ಯವಹಾರ ಕುರಿತಂತೆ ವ್ಯಂಗ್ಯಭರಿತ ಮಾತುಗಳು ಟ್ವಿಟರ್‌ನಲ್ಲಿ ತುಂಬಿವೆ. ಇಂಥವರನ್ನು ಪ್ರಧಾನಿ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದೂ ಪ್ರಶ್ನಿಸಲಾಗಿದೆ.

 

ಯುಕೆಯ ಪ್ರಧಾನಿ ಬೋರಿಸ್ ಜಾನ್ಸನ್ ಕೊನೆಗೂ ಆಡಳಿತ ಪಕ್ಷದ ನಾಯಕತ್ವಕ್ಕೆ ಹಾಗೂ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಡಳಿತ ಕನ್ಸರ್ವೇಟಿವ್ ಪಕ್ಷ ಪರ್ಯಾಯ ನಾಯಕನನ್ನು ಸೂಚಿಸುವವರೆಗೆ ಉಸ್ತುವಾರಿ ಪ್ರಧಾನಿಯಾಗಿ ಅವರು ಮುಂದುವರಿಯಲಿದ್ದಾರೆ.
ಸದಾ ಜೋರ್ಕ ನಂತೆ ವರ್ತಿಸುತ್ತ ಬಂದ ಜಾನ್ಸನ್ ಸುಮಾರು ಎಡುವರೆ ವರ್ಷ ಆಡಳಿತ ನಡೆಸಿದ್ದೇ ದೊಡ್ಡ ಸಾಧನೆ. ಅವರು ಪ್ರಧಾನಿಯಾದಾಗ ದೇಶ ಬ್ರೆಕ್ಸಿಟ್ ವಿವಾದದಲ್ಲಿ ಸಿಲುಕಿತ್ತು. ಕೋವಿಡ್ ಪಿಡುಗು ದೇಶವನ್ನು ಆವರಿಸಿ ಸಾವಿರಾರು ಜನರನ್ನು ಬಲಿತೆಗೆದುಕೊಂಡಿತು. ಈ ಪಿಡುಗು ದೇಶದ ಆರ್ಥಿಕ ಸ್ಥಿತಿ ಹದಗೆಡಲು ಕಾರಣವಾಯಿತು. ಈ ಅವದಿಯನ್ನು ದಾಟಿಬಂದ ಜಾನ್ಸನ್ ಇದೀಗ ಕೆಲವು ಹಗರಣಗಳಿಂದಾಗಿ ರಾಜೀನಾಮೆ ಕೊಡಬೇಕಾಗಿ ಬಂತು. ಮುಖ್ಯವಾಗಿ ಕೋವಿಡ್ ಪಿಡುಗನ್ನು ನಿಯಂತ್ರಣಕ್ಕೆ ತರಲು ಸರ್ಕಾರ ಹಲವು ನಿರ್ಬಂಧಗಳನ್ನು ಹೇರಿತ್ತು. ಜನ ಸೇರಿಸಿಕೊಂಡು ಯಾವುದೇ ಪಾರ್ಟಿ, ಸಮಾರಂಭಗಳನ್ನು ನಡೆಸಲು ಅವಕಾಶ ಇರಲಿಲ್ಲ. ಇಂಥ ಸಂದರ್ಭದಲ್ಲಿ ಬೋರಿಸ್ ಜಾನ್ಸನ್ ತಮ್ಮಹುಟ್ಟು ಹಬ್ಬದ ಸಂದರ್ಭಕ್ಕೆ ಸಂಘಟಿಸಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅದೇ ರೀತಿ ಹಲವು ಸಚಿವರು, ಉನ್ನತ ಅಧಿಕಾರಿಗಳು ೧೦ ಡೌನಿಂಗ್ ಸ್ಟ್ರೀಟ್‌ನಲ್ಲಿರುವು ಸರ್ಕಾರಿ ನಿವಾಸಗಳಲ್ಲಿ ನಡೆದಿದ್ದ ಪಾರ್ಟಿಗಳಲ್ಲಿ ಭಾಗವಹಿಸಿದ್ದುದು ಬೆಳಕಿಗೆ ಬಂತು. ಪ್ರಧಾನಿ ಜಾನ್ಸನ್ ಅಷ್ಟೇ ಅಲ್ಲ ಹಣಕಾಸು ಸಚಿವ ರಿಶಿ ಸುನಕ್ ಸೇರಿದಂತೆ ಹಲವರು ಇಂಥ ಪಾರ್ಟಿಗಳಲ್ಲಿ ಭಾಗವಹಿಸಿದ್ದುದು ಬಹಿರಂಗವಾಯಿತು.

ಈ ಪ್ರಕರಣಗಳು ಸಂಸತ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದವು. ಈ ಪ್ರಕರಣಗಳ ಸತ್ಯಾಸತ್ಯತೆ ತಿಳಿಯಲು ಪೊಲೀಸು ತನಿಖೆಯನ್ನು ಘೋಷಿಸಲಾಯಿತು. ಪ್ರಧಾನಿ ಜಾನ್ಸನ್ ಹಾಗೂ ಸುನಕ್ ಪಾರ್ಟಿಗಳಲ್ಲಿ ಭಾಗವಹಿಸಿದ್ದುದು ತನಿಖೆಯಿಂದ ಬಯಲಾಯಿತು. ಪೊಲೀಸರು ಪ್ರಧಾನಿ ಮತ್ತು ಹಣಕಾಸು ಸಚಿವರಿಗೆ ದಂಡ ಹಾಕಿದರು. ಅವರು ದಂಡ ಕಟ್ಟಿದರು ಕೂಡಾ. ಈ ಬೆಳವಣಿಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು.
ಈ ಹಗರಣ ಜನರ ಮನಸ್ಸಿನಿಂದ ಮರೆಯಾಗುವ ಮೊದಲೇ ಮತ್ತೊಂದು ತಪ್ಪನ್ನು ಜಾನ್ಸನ್ ಮಾಡಿದರು. ಪಕ್ಷದ ಎಂಪಿ ಕ್ರಿಸ್ಟೋಫರ್ ಜಾನ್ ಪಿಂಚರ್ ಅವರನ್ನು ಡೆಪ್ಯೂಟಿ ಛೀಪ್ ವಿಪ್ ಹುದ್ದೆಗೆ ನೇಮಕ ಮಾಡಿದ್ದು ಜಾನ್ಸನ್ ಪಾಲಿಗೆ ಕಂಟಕವಾಯಿತು. ಅವರನ್ನು ಕುಡುಕ ಮತ್ತು ಕುಡಿದಾಗ ಅಸಭ್ಯವಾಗಿ ವರ್ತಿಸುತ್ತಾರೆಂಬ ಆರೋಪ ಅವರ ಮೇಲೇ ಆಗ್ಗಾಗಲೇ ಇತ್ತು. ಆದರೆ ಜಾನ್ಸನ್ ಆ ಆರೋಪಗಳ ಬಗ್ಗೆ ತಲೆಕೆಡಿಡಕೊಳ್ಳದೆ ಅವರಿಗೆ ಪಕ್ಷದ ಸದಸ್ಯರ ನಡವಳಿಕೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊರಿಸಿ ಎಂಪಿಗಳ ಆಕ್ರೋಶಕ್ಕೆ ಗುರಿಯಾದರು.

ಈ ಟೀಕೆಗಳು ಬಹಿರಂಗವಾಗುತ್ತಿರುವಂತೆಯೇ ಅವರ ಇತ್ತೀಚಿನ ಪ್ರಕರಣವೊಂದು ಬಯಲಾಯಿತು. ಖಾಸಗಿ ಕ್ಲಬ್ ಒಂದರಲ್ಲಿ ಕಂಠಪೂರ್ತಿ ಕುಡಿದು ಅಲ್ಲಿದ್ದವರಿಬ್ಬರ ಜೊತೆ ಲೈಂಗಿಕ ದುರ್ವರ್ತನೆ ಮಾಡಿದ ಪ್ರಕರಣ ಬಯಲಾಯಿತು. ಈ ಪ್ರಕರಣ ಆಡಳಿತ ಪಕ್ಷಕ್ಕೆ ಕೆಟ್ಟಹೆಸರು ತಂದಿದೆ ಎಂದು ಪಕ್ಷದ ಹಿರಿಯರು ಆಕ್ರೋಶ ವ್ಯಕ್ತಮಾಡಿದರು. ಪಿಂಚರ್ ಅವರು ಇಂಥವರು ಎಂದು ತಮಗೆ ತಿಳಿದಿರಲಿಲ್ಲ ಎಂದು ಜಾನ್ಸನ್ ಸಮರ್ಥನೆ ನೀಡಲು ಆರಂಭಿಸಿದರು. ಪಿಂಚರ್ ನಡವಳಿಕೆ ಬಗ್ಗೆ ತಾವೇ ಖುದ್ದಾಗಿ ಪ್ರಧಾನಿಗೆ ವಿವರಿಸಿದ್ದಾಗಿ ಪಕ್ಷದ ಕೆಲವು ಸದಸ್ಯರು ಹೇಳಿದರು. ಜಾನ್ಸನ್ ಕ್ಷಮೆ ಕೇಳಿದರಾದರೂ ಈ ಪ್ರಕರಣ ಪ್ರಧಾನಿ ಪ್ರಾಮಾಣಿಕತೆ ದಕ್ಷತೆಯ ಪ್ರಶ್ನೆಯನ್ನು ಚರ್ಚೆಗೆ ಒಳಗುಮಾಡಿತು. ಆಗ್ಗಾಗಲೇ ಪಕ್ಷ ಎರಡು ಉಪಚುನಾವಣೆಗಳಲ್ಲಿ ಸೋಲು ಕಂಡಿತ್ತು. ಜಾನ್ಸ್ನ್ ಅವರನ್ನು ಪ್ರಧಾನಿಯಾಗಿ ಉಳಿಸಿಕೊಂಡರೆ ಮುಂಬರುವ ಚುನಾವಣೆಗಲ್ಲಿ ಪಕ್ಷ ಹಿನ್ನಡೆ ಅನುಭವಿಸಬಹುದಾದ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟ ನಾಯಕರು ಅವರ ರಾಜೀನಾಮೆಗೆ ಸೂಚಿಸಿದರು. ವರ್ಷದ ಹಿಂದೆಯಷ್ಟೇ ವಿಶ್ವಾಸ ಮತ ಎದುರಿಸಿ ಗೆದ್ದಿದ್ದ ಜಾನ್ಸನ್ ಅಧಿಕಾರದಲ್ಲಿ ಉಳಿಯಲು ಏನೇನೋ ಸರ್ಕಸ್ ಮಾಡಿದರು. ಆದರೆ ಪಕ್ಷದ ನಾಯಕರು ನಿಲುವಿಗೆ ಬದ್ಧರಾದರು. ಜಾನ್ಸನ್ ಮೇಲೆ ವಿಶ್ವಾಸ ಕಳೆದುಕೊಂಡಿರುವುದಾಗಿ ಕೆಲವು ಹಿರಿಯ ಸಚಿವರು ರಾಜೀನಾಮೆ ನೀಡಿದರು. ಒಂದೆರಡು ದಿನಗಳಲ್ಲಿ ಆ ಸಂಖ್ಯೆ ೫೦ಕ್ಕೆ ಏರಿತು. ಹೀಗಾಗಿ ಪ್ರಧಾನಿ ಜಾನ್ಸನ್ ರಾಜೀನಾಮೆ ನೀಡುವುದು ಅನಿವಾರ್ಯವಾಯಿತು.

ಜಾನ್ಸನ್ ರಾಜೀನಾಮೆ ನಂತರ ಸಹಜವಾಗಿಯೇ ಆಡಳಿತ ಕನ್ಸರ್ವೇಟಿವ್ ಪಕ್ಷದಲ್ಲಿ ಹೊಸ ನಾಯಕನ ಹುಡುಕಾಟ ಆರಂಭವಾಗಿದೆ. ಪಕ್ಷದ ನಾಯಕತ್ವಕ್ಕೆ ಸ್ಪರ್ಧಿಸಲು ಹಲವರು ಮುಂದೆ ಬಂದಿದ್ದಾರೆ. ವಿರೋಧಿ ಲೇಬರ್ ಪಕ್ಷ ಹೊಸದಾಗಿ ಚುನಾವಣೆ ನಡೆಸಬೇಕೆಂದು ಒತ್ತಾಯಿಸುತ್ತಿದೆ. ಹೊಸ ಚುನಾವಣೆ ನಡೆಯಬೇಕಿರುವುದು ೨೦೨೫ರ ಜನವರಿಯಲ್ಲಿ. ಇನ್ನೂ ಎರಡೂವರೆ ವರ್ಷ ಇರುವಾಗ ಹೊಸದಾಗಿ ಚುನಾವಣೆ ನಡೆಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಆಡಳಿತ ಕನ್ಸರ್ವೇಟಿವ್ ಪಕ್ಷದ ನಾಯರು ಹೇಳುತ್ತಿದ್ದಾರೆ. ಹೀಗಾಗಿಯೇ ಕನ್ಸರ್ವೇಟಿವ್ ಪಕ್ಷದಲ್ಲಿ ನಾಯಕನ ಆಯ್ಕೆ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ನಡೆದಿದೆ. ಹೊಸ ನಾಯಕನ ಆಯ್ಕೆ ಪ್ರಕ್ರಿಯೆ ಮುಂದಿನ ವಾರ ಆರಂಭವಾಗುವ ಸಾಧ್ಯತೆ ಇದೆ.

ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸುವ ಆಸಕ್ತಿಯನ್ನು ಹಲವರು ಈಗಾಗಲೇ ಬಹಿರಂಗವಾಗಿ ಘೋಷಿಸಿದ್ದಾರೆ. ಮಾಜಿ ಹಣಕಾಸು ಸಚಿವ ರಿಶಿ ಸುನಕ್, ಮಾಜಿ ಆರೋಗ್ಯ ಸಚಿವ ಸಜಿದ್ ಜಾವಿದ್, ಮಾಜಿ ಅಟಾರ್ನಿ ಜನರಲ್ ಸುವೇಲಾ ಬ್ರೇವರ್ಮನ್, ಮಾಜಿ ಸೇನಾಧಿಕಾರಿ ಟಾಮ್ ಟುಗೇಂದಟ್, ಕೋವಿಡ್ ನಿಯಂತ್ರಣ ನಿರ್ವಹಣೆ ಹೊಣೆ ಹೊತ್ತಿದ್ದ ಜಹಾವಿ, ಮಾಜಿ ವಿದೇಶಾಂಗ ಸಚಿವೆ ಲಿಜ್ ಟ್ರಸ್ ಪ್ರಮುಖರು.

ಸ್ಪರ್ಧೆಗೆ ಇಳಿಯಲಿರುವ ಮುಖ್ಯ ವ್ಯಕ್ತಿ ರಿಶಿ ಸುನಕ್. ಆರು ತಿಂಗಳ ಹಿಂದೆ ರಿಶಿ ಸುನಕ್ ಯುಕೆಯ ಮುಂದಿನ ಪ್ರಧಾನಿಯಾಗುವರೇ ಎಂದು ಯಾರಾದರೂ ಪ್ರಶ್ನೆ ಕೇಳಿದ್ದರೆ ಬಹುಶಃ ಹೌದು ಎನ್ನುವ ಉತ್ತರ ಸಿಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಆಡಳಿತ ಕನ್ಸರ್ವೇಟಿವ್ ಪಕ್ಷದಲ್ಲೂ ಅವರ ಬಗೆಗಿದ್ದ ಅಭಿಪ್ರಾಯ ಬದಲಾಗಿದೆ. ಆದರೂ ಕನ್ಸರ್ವೇಟಿವ್ ಪಕ್ಷದ ಸಂಸತ್ ಸದಸ್ಯರು ಅವರನ್ನೇ ನಾಯಕರನ್ನಾಗಿ ಆಯ್ಕೆ ಮಾಡಬಹುದೆಂದು ಅಂದಾಜು ಮಾಡಲಾಗಿದೆ. ಇದಕ್ಕೆ ಕಾರಣ ಹಣಕಾಸು ಸಚಿವರಾಗಿ ಕೋವಿಡ್‌ನಿಂದ ಉದ್ಭವಿಸಿದ ಆರ್ಥಿಕ ಸಮಸ್ಯೆಯನ್ನು ಅವರು ನಿಭಾಯಿಸಿದ ಬಗ್ಗೆ ಎಲ್ಲರ ಮೆಚ್ಚುಗೆ ಇದೆ. ಕೋವಿಡ್‌ನಿಂದ ವ್ಯಾಪಾರ ವಹಿವಾಟಿನಲ್ಲಿ ಉಂಟಾದ ನಷ್ಟ ಸರಿದೂಗಿಸಲು ಅವರು ನಿಧಿಯೊಂದನ್ನು ಮೀಸಲಿಟ್ಟಿದ್ದರು. ಅದೇ ರೀತಿ ಕೋವಿಡ್ನಿಂದಾಗಿ ಉದ್ಯೋಗಗಳು ನಷ್ಟವಾಗದಂತೆ ಉದ್ಯಮಗಳಿಗೆ ರಕ್ಷಣೆ ಒದಗಿಸಿದರು. ಆದರೆ ಬೆಲೆಏರಿಕೆಯಿಂದ ಸಾಮಾನ್ಯ ಜನರಿಗೆ ಒದಿಗಿದ ಸಮಸ್ಯೆನ್ನು ನಿರ್ವಹಿಸಲು ಅಗತ್ಯ ಹಣಕಾಸು ವ್ಯವಸ್ಥೆ ಮಾಡಲಿಲ್ಲ ಎಂಬ ಆರೋಪ ಅವರ ಮೇಲೆ ಇದೆ. ಇದನ್ನ ಬಿಟ್ಟರೆ ಅವರು ಪ್ರಧಾನಿಯಾಗಲು ಮೊದಲ ಸುತ್ತಿನ ಓಟದಲ್ಲಿಯೇ ಇದ್ದಾರೆ. ಆದರೆ ವಲಸೆ ಬಂದವರನ್ನು ಅಥವಾ ಅವರ ಮಕ್ಕಳನ್ನು ಪ್ರಧಾನಿ ಸ್ಥಾನದಲ್ಲಿ ನೋಡಬಹುದಾದ ಮುಕ್ತ ಮನಸ್ಸು ಯುಕೆ ಜನರಲ್ಲಿ ಮೂಡಿದೆಯೇ ಎಂಬುದು ದೊಡ್ಡ ಪ್ರಶ್ನೆ. ಸ್ಪರ್ಧೆಯಲ್ಲಿರುವ ರಿಶಿ ಸುನಕ್ ತಂದೆ ಯಶವೀರ್, ಪಂಜಾಬ್‌ನಿಂದ ಕೀನ್ಯಕ್ಕೆ ವಲಸೆಹೋಗಿ ನಂತರ ಯುಕೆಗೆ ಬಂದವರು, ತಾಯಿ ಉಷಾ ಪಂಜಾಬ್‌ನಿಂದ ತಾಂಜಾನಿಯಾಕ್ಕೆ ವಲಸೆಹೋಗಿ ನಂತರ ಬ್ರಿಟನ್ನಲ್ಲಿ ನೆಲೆಸಿದವರು.
ರಿಶಿ ಸುನಕ್ ಪಕ್ಷದಲ್ಲಿ ಹೆಸರು ಮಾಡಿದವರಾದರೂ ಇತ್ತೀಚಿನ ವರ್ಷಗಳಲ್ಲಿ ಹೊರಗೆ ಅವರ ಹೆಸರು ಕೆಟ್ಟಿದೆ. ಕೋವಿಡ್ ನಿರ್ಬಂಧಗಳು ಜಾರಿಯಿದ್ದಾಗ ಪಾರ್ಟಿಗಳಿಗೆ ಹೋದವರಲ್ಲಿ ಅವರೂ ಒಬ್ಬರು. ತಪ್ಪನ್ನು ಒಪ್ಪಿಕೊಂಡದ್ದರಿಂದಾಗಿ ಅವರಿಗೆ ಬ್ರಿಟನ್ ಪೊಲೀಸರು ದಂಡ ಹಾಕಿದ್ದಾರೆ. ಅವರ ಪತ್ನಿ ಅಕ್ಷತಾ ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಾದ ಎನ್.ಆರ್.ನಾರಾಯಣ ಮೂರ್ತಿ ಅವರ ಮಗಳು. ಅವರಿಗೆ ಯುಕೆಯಲ್ಲಿ ಸ್ವಂತ ವ್ಯವಹಾರ ವಹಿವಾಟು ಇದೆ. ಬ್ರಿಟನ್ನ ಶ್ರೀಮಂತ ಮಹಿಳೆಯರಲ್ಲಿ ಅಕ್ಷತಾ ಅವರೂ ಒಬ್ಬರಾಗಿದ್ದು ಸರ್ಕಾರಕ್ಕೆ ತೆರಿಗೆ ಕಟ್ಟುವ ವಿಚಾರದಲ್ಲಿ ವಿವಾದಕ್ಕೆ ಒಳಗಾಗಿದ್ದರು. ಬ್ರಿಟನ್ನಲ್ಲಿ ನೆಲೆಸಿರುವವರು ಅಲ್ಲಿ ಸಂಪಾದನೆ ಮಾಡಿದ ಆದಾಯಕ್ಕೆ ತೆರಿಗೆ ಕಟ್ಟಿದರೆ ಸಾಕು. ಹೊರದೇಶದಲ್ಲಿ ಮಾಡಿದ ಸಂಪಾದನೆಗೆ ತೆರಿಗೆ ಕಟ್ಟಬೇಕಿಲ್ಲ. ಅಕ್ಷತಾ ಅವರು ಭಾರತದಿಂದ ಪಡೆದ ಆದಾಯಕ್ಕೆ ತೆರಿಗೆ ಕಟ್ಟಿರಲಿಲ್ಲ. ಸರಿ, ಆದರೆ ಅವರು ಇನ್ನೂ ಭಾರತೀಯ ನಾಗರಿಕತ್ವ ಉಳಿಸಿಕೊಂಡಿರುವುದರಿಂದ ಅಲ್ಲಿಂದ ಬರುವ ಆದಾಯವನ್ನು ತೆರಿಗೆ ಘೋಷಣಾ ಪತ್ರದಲ್ಲಿ ತಿಳಿಸಬೇಕಾಗುತ್ತದೆ. ಆದರೆ ಆ ರೀತಿಯ ಘೋಷಣೆಯನ್ನು ಅಕ್ಷತಾ ಮಾಡಿಲ್ಲ ಎಂದು ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಆದಾಯವನ್ನು ಮುಚ್ಚಿಟ್ಟ ಬಗ್ಗೆ ತೆರಿಗೆ ಅಧಿಕಾರಿಗಳು ಇನ್ನೂ ಪರಿಶೀಲನೆ ನಡೆಸುತ್ತಿದ್ದಾರೆ.

ರಿಶಿ ಅವರೂ ಕೂಡಾ ಅಮೆರಿಕದ ಪೌರತ್ವವನ್ನು ಬಿಟ್ಟುಕೊಟ್ಟಿರಲಿಲ್ಲ. ಈ ಎಲ್ಲ ಪ್ರಕರಣಗಳು ಪಕ್ಷದ ಎಂಪಿಗಳ ಬೆಂಬಲ ಪಡೆಯುವಲ್ಲಿ ರಿಶಿ ಸುನಕ್‌ಗೆ ಅಡ್ಡಿ ಉಂಟುಮಾಡಬಹುದು. ಅವರು ಈ ಸಮಸ್ಯೆಯನ್ನು ಹೇಗೆ ಬಿಡಿಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ರಿಶಿ ಸುನಕ್ ಅವರ ಭವಿಷ್ಯ ಅಡಗಿದೆ.
ಸ್ಪರ್ಧೆಯಲ್ಲಿರುವ ಮತ್ತೊಬ್ಬ ಭಾರತೀಯ ಮೂಲದ ವ್ಯಕ್ತಿ ಸುವೇಲಾ ಬ್ರೇವರ್ಮನ್. ಭಾರತದಿಂದ ಕೀನ್ಯ ಮತ್ತು ಮೊರಿಷಿಯಸ್ಗೆ ವಲಸೆ ಹೋಗಿ ನಂತರ ಯುಕೆಯಲ್ಲಿ ನೆಲೆಸಿದವರಿಗೆ ಅವರು ಜನಿಸಿದ್ದಾರೆ. ಗೃಹ ಸಚಿವರಾಗಿದ್ದ ಪ್ರೀತಿ ಪಟೇಲ್ ಉಗಾಂಡಾದಿಂದ ಯುಕೆ ಬಂದು ನೆಲೆಸಿದ್ದ ಗುಜರಾತ್ ಮೂಲದವರಿಗೆ ಜನಿಸಿದವರು. ಅವರು ಕೂಡಾ ಪ್ರಧಾನಿ ಸ್ಥಾನದ ಆಕಾಂಕ್ಷಿ. ಪಾಕಿಸ್ತಾನ ಮತ್ತು ಇರಾಕ್ ಮೂಲದವರೊಬ್ಬರೂ ಕಣದಲ್ಲಿ ಇದ್ದಾರೆ. ಆಡಳಿತ ಕನ್ಸರ್ವೇಟಿವ್ ಪಕ್ಷದ ಸಂಸತ್ ಸದಸ್ಯರು ಯಾರನ್ನು ಆಯ್ಕೆ ಮಾಡುತ್ತಾರೆ ಎನ್ನವುದು ಕುತೂಹಲಕಾರಿಯಾಗಿದೆ. ದೇಶ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು ಅದನ್ನು ನಿಭಾಯಿಸುವಂಥ ಮತ್ತು ಜನರ ವಿಶ್ವಾಸವನ್ನು ಗಳಿಸುವಂಥ ವ್ಯಕ್ತಿಯನ್ನು ಕನ್ಸರ್ವೇಟಿವ್ ಪಕ್ಷ ಆಯ್ಕೆ ಮಾಡಲಿದೆ. ೨೦೨೫ರಲ್ಲಿ ನಡೆಯಲಿರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಆಯ್ಕೆ ನಡೆಯಲಿದೆ.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ