ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಗಿರಿಧಾಮವಾಗಿರುವ ಬಿಳಿಗಿರಿರಂಗನಬೆಟ್ಟದ ತಪ್ಪಲಿನಲ್ಲಿ ವಡಗೆರೆ ಗ್ರಾಮದ ಗುಡ್ಡದ ಬಳಿ ಇರುವ ಬಿದ್ದಾಂಜನೇಯ ಸ್ವಾಮಿ ದೇಗುಲದ ಹನುಮ ಅನಾದಿ ಕಾಲದಿಂದಲೂ ಪ್ರಸಿದ್ಧಿಯಾಗಿದೆ.
ಮೈಸೂರು ಅರಸರ ಕಾಲದ ದೇಗುಲ ಮುತ್ತುಗದ ಮರದ ಕೆಳಗೆ ಇದ್ದ ಈ ಪ್ರತಿಮೆಗೆ ೧೮೪೨ರಲ್ಲಿ ಮೈಸೂರು ಅರಸರ ಕಾಲದಲ್ಲಿ ದೇಗುಲ ನಿರ್ಮಾಣವಾಗಿರುವ ಬಗ್ಗೆ ಐತಿಹ್ಯವಿದೆ. ಇಲ್ಲಿನ ಮೂರ್ತಿ ಕೆತ್ತನೆ ಮಾಡಿದ್ದಲ್ಲ. ಇದು ತನ್ನ ಉಬ್ಬುತಗ್ಗುಗಳಿಂದಲೇ ಆಂಜನೇಯನ ದೇವತಾಮೂರ್ತಿಯ ಮುಖ ಹಾಗೂ ದೇಹವನ್ನು ಹೋಲುತ್ತದೆ. ಈ ಮೂರ್ತಿಯು ಮಲಗಿರುವ ಆಂಜನೇಯನ ಕಾಯ ಹೊಂದಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರು ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುವ ವಾಡಿಕೆ ಇದೆ.
ಪುರಾಣ ಐತಿಹ್ಯ: ದೇಗುಲದ ಅನತಿ ದೂರದಲ್ಲೇ ಒಂದು ಗುಡ್ಡವಿದೆ. ಅದರಲ್ಲಿರುವ ಗುಹೆಯಲ್ಲಿ ಕಿವಿಮೂಲ ಎಂಬ ರಾಕ್ಷಸನಿದ್ದ ಮತ್ತೊಂದು ಗುಹೆಯಲ್ಲಿ ವಾಸವಾಗಿದ್ದ ವಸಿಷ್ಠ ಮುನಿಗಳು ತಪಸ್ಸು ಮಾಡುತ್ತಿದ್ದರು. ಈ ರಾಕ್ಷಸ ಅವರಿಗೆ ಸದಾ ಕಿರುಕುಳ ನೀಡುತ್ತಿದ್ದ. ಅವನಿಂದ ತಪ್ಪಿಸಿಕೊಳ್ಳಲು ವಸಿಷ್ಠರು ಹೆಣಗಾಡುತ್ತಿದ್ದರು. ಈ ಸಂದರ್ಭದಲ್ಲಿ ತಿರುಪತಿಯಿಂದ ಗಿಡಮೂಲಿಕೆಗಳನ್ನು ಹುಡುಕಿಕೊಂಡು ವೆಂಕಟೇಶ್ವರಸ್ವಾಮಿ ತನ್ನ ವಾಹನವಾದ ಗರುಡ ಪಕ್ಷಿಯನ್ನು ಬಿಟ್ಟು ಹನುಮಂತನ ಹೆಗಲೇರಿ ಬರುತ್ತಿರುತ್ತಾನೆ. ಈ ವೇಳೆ ವಸಿಷ್ಠರು ಇವರನ್ನು ತಡೆದು ತಮಗೆ ಕಿವಿಮೂಲನಿಂದ ಆಗುತ್ತಿರುವ ಕಿರುಕುಳದ ಬಗ್ಗೆ ಮನವರಿಕೆ ಮಾಡಿಕೊಡುತ್ತಾರೆ. ಆಗ ವೆಂಕಟೇಶ್ವರಸ್ವಾಮಿ, ತಾನು ತುರ್ತು ಕೆಲಸಕ್ಕಾಗಿ ಹೋಗಲೇಬೇಕಿದೆ ಎಂದು ಹೇಳಿದರು.
ಆದರೆ, ಆಂಜನೇಯನನ್ನು ರಾಕ್ಷಸ ಸಂಹಾರಕ್ಕೆ ತೆರಳುವಂತೆ ಹೇಳಿ, ತಾವು ವಾಪಸ್ ಬರುವವ ರೆಗೂ ಅಲ್ಲೇ ಇರಬೇಕೆಂದು ಆದೇಶ ನೀಡುತ್ತಾರೆ. ನಂತರ ಮೂರೇ ಹೆಜ್ಜೆಗೆ ಬಿಳಿಗಿರಿರಂಗನ ಬೆಟ್ಟಕ್ಕೆ ತೆರಳುತ್ತಾರೆ. ಇಲ್ಲೇ ಇದ್ದು ರಾಕ್ಷಸನನ್ನು ಸಂಹಾರ ಮಾಡುವ ಹನುಮಂತ ವಸಿಷ್ಠರ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ಹನುಮ ವೆಂಕಟೇಶ್ವರಸ್ವಾಮಿಗೆ ಕಾದು ಸಾಕಾಗಿ ಗುಡ್ಡದ ಕೆಳಗಿರುವ ಸ್ಥಳಕ್ಕೆ ಬಂದು ಮಲಗುತ್ತಾನೆ. ಆ ಸ್ಥಳವೇ ಆಂಜನೇಯ ಬಿದ್ದ ಸ್ಥಳವಾಯಿತು ಎಂದು ಪುರಾಣ ಕತೆ ಇದೆ ಎಂದು ಇಲ್ಲಿನ ಅರ್ಚಕರಾದ ಗಿರೀಶ ಮಾಹಿತಿ ನೀಡಿದರು.
ಸೋಲಿಗರ ಕತೆಯೇ ಬೇರೆ: ಬಿಳಿಗಿರಿ ರಂಗನಬೆಟ್ಟದ ಮೂಲನಿವಾಸಿಗಳಾದ ಸೋಲಿಗರ ಪ್ರಕಾರ ಬಿಳಿಗಿರಿರಂಗನಾಥಸ್ವಾಮಿ ವಿಹಾರಕ್ಕೆ ಬಂದಾಗ ಆತನೊಂದಿಗೆ ಬರುವ ಹನುಮಂತನು ಸದಾ ಚೇಷ್ಟೆ ಮಾಡುತ್ತಿರುತ್ತಾನೆ. ಒಮ್ಮೆ ಈತನ ಚೇಷ್ಟೆಯಿಂದ ಕೋಪಗೊಂಡ ಬಿಳಿಗಿರಿರಂಗನಾಥ ಸ್ವಾಮಿಯು, ಹನುಮಂತನ ಕೆನ್ನೆಗೆ ಜೋರಾಗಿ ಹೊಡೆಯುತ್ತಾನೆ. ಆ ಹೊಡೆತದಿಂದ ಹನುಮಂತ ಈ ಸ್ಥಳದಲ್ಲಿ ಬಿದ್ದನು ಎಂಬ ಮತ್ತೊಂದು ಕತೆ ಇದೆ. ಇವೆರಡೂ ಕತೆಗಳಿಗೆ ಪೂರಕವೆಂಬಂತೆ ಬಿಳಿಗಿರಿರಂಗನಾಥಸ್ವಾಮಿಯ ದೊಡ್ಡ ರಥೋತ್ಸವ ಆದ ಮೂರನೇ ದಿನ ಇಲ್ಲೂ ಕೂಡ ತೇರು ನಡೆಯುವ ವಾಡಿಕೆ ಇತ್ತು. ಆದರೆ ಕೆಲವು ವರ್ಷಗಳಿಂದ ಇಲ್ಲಿ ರಥೋತ್ಸವ ನಡೆಯುತ್ತಿಲ್ಲ. ಪ್ರತಿ ಶನಿವಾರದಂದು ಈ ದೇಗುಲದಲ್ಲಿ ಪೂಜೆ ನಡೆಯುತ್ತದೆ. ಇಲ್ಲಿಗೆ ರಾಜ್ಯದ ವಿವಿಧ ಮೂಲೆಗಳೂ ಸೇರಿದಂತೆ ಪಕ್ಕದ ತಮಿಳು ನಾಡು, ಕೇರಳ, ಆಂಧ್ರದಿಂದಲೂ ಅನೇಕ ಭಕ್ತರು ಬಂದು ಇಲ್ಲಿ ಪೂಜೆ ಸಲ್ಲಿಸುತ್ತಾರೆ.
ದೇಗುಲ ಅಭಿವೃದ್ಧಿ ಕಂಡಿಲ್ಲ: ಈ ದೇವಸ್ಥಾನಕ್ಕೆ ಸಾವಿರಾರು ಭಕ್ತರಿದ್ದರೂ ಇದು ಅಭಿವೃದ್ಧಿ ಕಂಡಿಲ್ಲ. ಇದು ಶಕ್ತಿ ದೇಗುಲವಾಗಿದೆ. ಇಲ್ಲಿನ ಮೂರ್ತಿಯ ದರ್ಶನ ಮಾಡಿದರೆ, ಕಷ್ಟಗಳು ದೂರವಾಗುತ್ತವೆ. ರೋಗಗಳು ವಾಸಿಯಾಗುತ್ತವೆ ಎಂಬುದು ಭಕ್ತರ ನಂಬಿಕೆ.
“ಒಂದು ಮುಕ್ಕಾಲು ಶತಮಾನ ಕಂಡಿರುವ ಹಳೆಯ ಕಟ್ಟಡದಲ್ಲೇ ದೇವಸ್ಥಾನವಿದೆ. ಈಗ ಇದರ ಮುಂಭಾಗದಲ್ಲಿ ಒಂದು ಸಣ್ಣ ಕೊಠಡಿಯನ್ನು ನಿರ್ಮಾಣ ಮಾಡಲಾಗಿದೆ. ಆದರೂ ಸಣ್ಣ ದೇಗುಲದಲ್ಲೇ ಇನ್ನೂ ಪೂಜೆ ನಡೆದುಕೊಂಡು ಬರುತ್ತಿದೆ. ಎಡಭಾಗದಲ್ಲಿ ಸಮುದಾಯ ಭವನ ನಿರ್ಮಾಣಗೊಂಡಿದ್ದರೂ ಇದರ ನಿರ್ವಹಣೆ ಆಗಿಲ್ಲ. ಕುಡಿಯುವ ನೀರಿನ ತೊಂಬೆಯ ಸುತ್ತಲೂ ಅನೈರ್ಮಲ್ಯ ತಾಂಡವವಾಡುತ್ತಿದೆ. ದೇಗುಲದ ಮುಂದಿರುವ ಬೃಹತ್ ಆಲದ ಮರ ದೇವಸ್ಥಾನಕ್ಕೆ ಮೆರುಗು ತಂದು ಕೊಟ್ಟರೆ ಅದರ ಪಕ್ಕದಲ್ಲಿರುವ ರಥದ ಶೆಡ್ ಕೂಡ ಶಿಥಿಲವಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ದೇಗುಲವನ್ನು ಅಭಿವೃದ್ಧಿಪಡಿಸಲು ಕ್ರಮವಹಿಸಬೇಕು ಎಂಬುದು ಭಕ್ತರ ಆಗ್ರಹವಾಗಿದೆ.”
– ಗೂಳೀಪುರ ನಂದೀಶ್ ಎಂ.





