Mysore
26
broken clouds

Social Media

ಬುಧವಾರ, 30 ಏಪ್ರಿಲ 2025
Light
Dark

ಭಾರತದಲ್ಲಿ ದೇವತಾರಾಧನೆಯ ಆರಂಭದ ಕಾಲಘಟ್ಟ

ದೇವದತ್ ಪಟ್ಟನಾಯಕ್ 

ಭಾರತದ ದೇವತೆಗಳು ಎಷ್ಟು ಪ್ರಾಚೀನವಾದವು ? ಈ ಪ್ರಶ್ನೆಗೆ ಉತ್ತರಿಸುವುದು ಬಹಳ ಕಷ್ಟವೇ ಸರಿ. ಬಹುಶಃ ಇದು ಶಿಲಾಯುಗದಲ್ಲಿ ಆರಂಭವಾಗಿರಬಹುದು. ಈ ಯುಗದಲ್ಲೇ ಮಾನವನು ಭೂಮಿಯನ್ನು ದೇವತೆಗೆ, ಹೆಣ್ಣಿನ ಗರ್ಭಕ್ಕೆ ಹೋಲಿಸಿದ್ದ ಮತ್ತು ನದಿಗಳಲ್ಲಿ, ವೃಕ್ಷಗಳಲ್ಲಿ ದೇವತೆಗಳನ್ನು ಗುರುತಿಸಲಾರಂಭಿಸಿದ್ದ. ಮಧ್ಯಪ್ರದೇಶದ ಸೋನ್ ಕಣಿವೆಯಲ್ಲಿರುವ ಬರ್ಘೋ ಕಲ್ಲಿನ ಮೇಲಿರುವ ತ್ರಿಕೋನಾಕಾರದ ಚಿಹ್ನೆಯನ್ನು, ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಾಚೀನ ಪಂಥದ ಕುರುಹು ಎಂದೇ ಪರಿಗಣಿಸಲಾಗಿದೆ. ಇದು ಬಹುಶಃ ೧೦ ಸಾವಿರ ವರ್ಷಗಳಷ್ಟು ಹಳೆಯದು. ಈ ತ್ರಿಕೋನಾಕಾರದ ಚಿಹ್ನೆಯು ಲಿಂಗಾಧಾರಿತ ದೈವತ್ವದ ಆರಾಧನೆಯನ್ನು ಸೂಚಿಸುತ್ತದೆ. ಆದರೆ ಈ ಊಹೆಯು ಮೂಲತಃ ೯೦೦೦ ವರ್ಷಗಳ ನಂತರ ರೂಪುಗೊಂಡ ತಂತ್ರಶಾಸ್ತ್ರದ ರೇಖಾಗಣಿತವನ್ನು ಆಧರಿಸಿದೆ.

ದೇವತೆಗಳನ್ನು ಆರಾಧಿಸಲಾರಂಭಿಸಿದ ಆದಿಮ ಜನರಿಗೆ ಓದು ಬರಹ ತಿಳಿದಿರಲಿಲ್ಲ ಅಥವಾ ನಾವು ಇಂದು ಅರ್ಥಮಾಡಿಕೊಳ್ಳುವ ಹಾಗೆ ಶಿಲ್ಪ ಮತ್ತು ರೇಖಾಚಿತ್ರಗಳ ಅರಿವು ಇರಲಿಲ್ಲ. ಆದ್ದರಿಂದ ಅತ್ಯಂತ ಪ್ರಾಚೀನ ದೇವತೆಗಳ ಬಗ್ಗೆ ನಮಗೆ ಭೌತಿಕ ಅಥವಾ ಗ್ರಾಂಥಿಕ ದಾಖಲೆಗಳು ಲಭ್ಯವಾಗುವುದಿಲ್ಲ. ಈ ದೇವತೆಗಳನ್ನು ಬಿಂಬಿಸಲು ಬಹುಶಃ ಆ ಜನರು ಜೈವಿಕ ವಸ್ತುಗಳನ್ನು ಬಳಸಿದ್ದಿರಬಹುದು. ಉದಾಹರಣೆಗೆ ಬಂಡೆಗಳು, ಜೇಡಿ ಮಣ್ಣಿನ ಗುಡ್ಡೆಗಳು, ಸಸ್ಯಗಳು ಬಳಕೆಯಾಗಿರಬಹುದು. ಇಂದಿಗೂ ಸಹ ಭಾರತದಲ್ಲಿ ಮತಾಚಾರ ಅಚರಣೆಗಳಲ್ಲಿ ಇದನ್ನು ಕಾಣಬಹುದು. ತತ್ಪರಿಣಾಮ ಈ ಪ್ರಾಚೀನ ದೇವತೆಗಳ ಭೌತಿಕ ದಾಖಲೆಗಳು ಲಭ್ಯವಾಗುವುದಿಲ್ಲ. ನಾವು ಈ ದೇವತೆಗಳನ್ನು ಕುಲದೇವಿಗಳು, ಗ್ರಾಮದೇವಿಗಳು, ಕುಲ ಮತ್ತು ನೆಲಸು ನಾಡು ದೇವತೆಗಳಾಗಿ ಗುರುತಿಸುತ್ತಿದ್ದೇವೆ. ಇಂದಿಗೂ ಸಹ ಭಾರತದಾದ್ಯಂತ ಹಲವು ಸಂಪ್ರದಾಯಗಳಲ್ಲಿ ಇದು ಜಾರಿಯಲ್ಲಿದೆ.

ಪುರಾತನ ದೇವಾಲಯಗಳಿಗೆ ಭೇಟಿ ನೀಡಿದರೆ ಅಲ್ಲಿ ನಮಗೆ ಸಾಮಾನ್ಯವಾಗಿ ಅರಿಶಿನ, ಕುಂಕುಮ ಅಥವಾ ಕೇಸರಿ ಬಣ್ಣದಿಂದ ಲೇಪಿತ ಕಲ್ಲುಗಳನ್ನು ದೇವತೆಗಳಂತೆ ಬಿಂಬಿಸಿರುವುದನ್ನು ಕಾಣಬಹುದು. ಕಲ್ಲಿನ ಮೇಲ್ಭಾಗದಲ್ಲಿ ಬೆಳ್ಳಿಯ ಕಣ್ಣುಗಳೂ ಇರುತ್ತವೆ. ಈವು ಭಾರತದ ಅತ್ಯಂತ ಪ್ರಾಚೀನ ದೇವತೆಗಳು. ಇವುಗಳ ಆರಾಧನೆ ಯಾವ ದಿನಾಂಕದಿಂದ ಆರಂಭವಾಯಿತು ಎಂದು ಹೇಳುವುದು ಅಸಾಧ್ಯವೇ ಸರಿ. ಗ್ರಾಂಥಿಕ ದೃಷ್ಟಿಕೋನದಿಂದ ನೋಡಿದಾಗ, ಅತ್ಯಂತ ಪ್ರಾಚೀನ ದೇವತೆಗಳ ಉಲ್ಲೇಖವನ್ನು ೩೦೦೦ ವರ್ಷಗಳ ಹಿಂದಿನ ಋಗ್ವೇದದಲ್ಲಿ ಕಾಣಬಹುದು. ಇಲ್ಲಿ ನಾವು ಪ್ರಾತಃಕಾಲದ ದೇವತೆಯಾಗಿ ಉಷಾ, ಅರಣ್ಯ ದೇವತೆಯಾಗಿ ಅರಣ್ಯನಿ ಮುಂತಾದುವನ್ನು ಗುರುತಿಸಬಹುದು. ಹಾಗೆಯೇ ವಾಕ್ ದೇವತೆಯನ್ನೂ ಗುರುತಿಸಬಹುದು. ಅನಂತರ ನಮಗೆ ಶಕ್ತಿ ದೇವತೆಯಾಗಿ ದುರ್ಗಾ, ಸಮೃದ್ಧಿಯ ದೇವತೆಯಾಗಿ ಶ್ರೀ ಕಂಡುಬರುತ್ತದೆ. ಆದರೆ ಈ ದೇವತೆಗಳನ್ನು ವಿವರಿಸುವ ಯಾವುದೇ ರೂಪ ಇರುವುದಿಲ್ಲ. ಬಹುಪಾಲು ಕಾಲ್ಪನಿಕವಾಗಿರುತ್ತವೆ.

ಭೌತಿಕ ದೃಷ್ಟಿಕೋನದಿಂದ ನೋಡಿದಾಗ, ನಾವು ಗುರುತಿಸಬಹುದಾದ ಅತ್ಯಂತ ಪ್ರಾಚೀನ ದೇವತೆಯು ಹರಪ್ಪ ಯುಗದಲ್ಲಿ, ಋಗ್ವೇದಕ್ಕೂ ೧೦೦೦ ವರ್ಷದ ಹಿಂದಿನ ಅವಧಿಯಲ್ಲಿ, ಕಂಡುಬರುತ್ತದೆ. ಒಂದು ಮುದ್ರೆಯಲ್ಲಿ ನಮಗೆ ಸ್ತ್ರೀಯೊಬ್ಬಳು ವೃಕ್ಷದಿಂದ ಹೊರಬರುತ್ತಿರುವ ಚಿತ್ರ ಕಾಣುತ್ತದೆ. ಮತ್ತೊಂದರಲ್ಲಿ ಭಾಗಶಃ ವ್ಯಾಘ್ರವನ್ನು ಕಾಣಬಹುದು. ಇದು ಜನಪದ ಸೃಷ್ಟಿ ಇರಬಹುದು ಅಥವಾ ಯಕ್ಷಿಯೋ, ಉಗ್ರ ಶಕ್ತಿಯೋ ಇರಬಹುದು ಎಂದೂ ವಾದಿಸಲು ಸಾಧ್ಯ. ಇವೆಲ್ಲವೂ ಊಹೆಗಳಷ್ಟೇ ಏಕೆಂದರೆ ಈ ಮುದ್ರೆಗಳು ಏನನ್ನು ಬಿಂಬಿಸುತ್ತವೆ ಎನ್ನುವುದು ನಮಗೆ ತಿಳಿದಿಲ್ಲ.

ನಾಣ್ಯಗಳು ಮತ್ತು ಸ್ತೂಪಗಳು

ಹರಪ್ಪ ನಾಗರಿಕತೆಯ ೨೦೦೦ ವರ್ಷಗಳ ಅನಂತರ, ಋಗ್ವೇದದ ೧೦೦೦ ವರ್ಷಗಳ ಅನಂತರ ಭಾರತದಲ್ಲಿ ದೇವತೆಗಳ ಚಿತ್ರಗಳು ಇಂಡೋ-ಗ್ರೀಕ್, ಕುಶಾನ ಮತ್ತು ಗುಪ್ತರ ನಾಣ್ಯಗಳ ಮೇಲೆ ಕಾಣಿಸಿಕೊಳ್ಳಲಾರಂಭಿಸಿದವು. ಈ ನಾಣ್ಯಗಳ ಮೇಲೆ ನಾವು ದೇವತೆಗಳು ಕೈಯ್ಯಲ್ಲಿ, ಚಿನ್ನದಿಂದ ತುಂಬಿ ತುಳುಕುತ್ತಿರುವ ಕಲ್ಪಶೃಂಗ ಅಥವಾ ಕೊಂಬುದಾನಿ ಹಿಡಿದಿರುವುದನ್ನು ಕಾಣಬಹುದು. ನಾಣ್ಯಗಳ ಮೇಲೆ ಕಾಣುವ ಈ ಚಿತ್ರವೇ ಕ್ರಮೇಣ ಲಕ್ಷ್ಮಿ ದೇವತೆಯಾಗುತ್ತಾಳೆ. ಇದನ್ನು ಸಾಂಚಿ ಮತ್ತು ಬರ್ಹೂತ್‌ನಲ್ಲಿನ  ಸ್ತೂಪಗಳಲ್ಲಿ ಕಾಣಬಹುದು. ಸರಸ್ವತಿಯ ಅತ್ಯಂತ ಪುರಾತನ ಚಿತ್ರವನ್ನು ಮಥುರಾದಲ್ಲಿ ಕಾಣಬಹುದು. ಇದನ್ನು ಜೈನ ಸಂಪ್ರದಾಯದೊಡನೆ ಗುರುತಿಸಲಾಗುತ್ತದೆ. ಇವುಗಳು ಎರಡು ಕೈಗಳನ್ನು ಹೊಂದಿರುವ ದೇವತೆಗಳು. ತದನಂತರ ಅನೇಕ ವರ್ಷಗಳು ಕಳೆದು ಕುಶಾನರ ಕಲೆಯಲ್ಲಿ ನಾಲ್ಕು ಕೈಗಳನ್ನು ಹೊಂದಿರುವ, ಎಮ್ಮೆಯನ್ನು ವಧೆ ಮಾಡುತ್ತಿರುವ ದೇವತೆಯ ಚಿತ್ರವನ್ನು ಕಾಣಬಹುದು. ಈ ದೇವತೆಯೇ ಮುಂದೆ ಇಂದು ನಾವು ಕಾಣುತ್ತಿರುವ ದುರ್ಗೆಯ ರೂಪದಲ್ಲಿ ಗುರುತಿಸಲ್ಪಡುತ್ತದೆ. ಈ ಚಿತ್ರವನ್ನು ಪಲ್ಲವ ಮತ್ತು ಚಾಲುಕ್ಯರ ಕಲೆಯಲ್ಲಿ, ಕ್ರಿಶ ೭ನೆಯ ಶತಮಾನದಲ್ಲಿ ಜನಪ್ರಿಯಗೊಳಿಸಲಾಯಿತು.

ಗುಪ್ತರ ಯುಗದ ವೇಳೆಗೆ. ೧೫೦೦ ವರ್ಷಗಳ ಹಿಂದೆ, ದೇವತೆಗಳು ತಮ್ಮದೇ ರೂಪದಲ್ಲಿ ಉಗಮಿಸುತ್ತಿದ್ದರು. ಬೌದ್ಧ ಪರಂಪರೆಯಲ್ಲಿ ಈ ದೇವತೆಗಳು ಬುದ್ಧನ ಸಂಗಾತಿಗಳಾಗಿ ತಾರಾ ಮತ್ತು ಮಹಾಮಯೂರಿಗಳ ರೂಪದಲ್ಲಿ ಕಾಣುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ವಿಷ್ಣು ಮತ್ತು ಶಿವನ ಪತ್ನಿಯಾಗಿ ಕಾಣಿಸಿಕೊಳ್ಳುತ್ತಾರೆ. ಕ್ರಿಶ ೭ನೆಯ ಶತಮಾನದಲ್ಲಿ ಒಡಿಷಾದಲ್ಲಿ ನಿರ್ಮಿಸಲಾದ ಪರಶುರಾಮೇಶ್ವರ ದೇವಾಲಯದಲ್ಲಿ ಶಿವನ ಬದಿಯಲ್ಲಿ ಅವನ ಪತ್ನಿಯಾಗಿ ಕುಳಿತಿರುವ ದೇವತೆಯನ್ನು ಕಾಣುತ್ತೇವೆ. ಆಕೆ ಶಿವನಿಗೆ ಆಹಾರ ಉಣಿಸುತ್ತಿರುವಂತೆ ರೂಪಿಸಲಾಗಿದೆ. ಇದೇ ರೀತಿಯ ಚಿತ್ರಗಳನ್ನು ಮುಂಬೈ ಸಮೀಪ ಇರುವ ಎಲಿಫೆಂಟಾ ಗುಹೆಗಳಲ್ಲೂ ಕಾಣಬಹುದು. ಇದೇ ರೀತಿಯ ಹಲವು ದೇವತೆಗಳು, ವಿಶೇಷವಾಗಿ ಲಕ್ಷ್ಮಿ, ಪಾರ್ವತಿ ಮತ್ತು ದುರ್ಗಾ, ಉಗಮಿಸಿದ ಕಾಲಘಟ್ಟ ಇದು. ಈ ದೇವತೆಗಳು ಪತ್ನಿಯರಾಗಿ ಕಾಣಿಸಿಕೊಳ್ಳುತ್ತಾರೆ. ಎರಡು ಕೈಗಳನ್ನು ಹೊಂದಿದ್ದು ಬದಿಯಲ್ಲೇ ಇರುವ ಶಿವ, ವಿಷ್ಣು ಮತ್ತು ಬ್ರಹ್ಮರ ಬೃಹತ್ ಪ್ರತಿಮೆಗಳಿಗೆ ಅಡ್ಡಿಯಾಗಿ ಕಾಣಿಸಿಕೊಳ್ಳುತ್ತಾರೆ.

ಕ್ರಮೇಣವಾಗಿ ಬಹು ಬಾಹುಗಳನ್ನು ಹೊಂದಿರುವ ದೇವತೆಗಳ ಉಗಮವನ್ನು ನಾವು ಕಾಣಬಹುದು. ಈ ದೇವತೆಗಳು ಜೈನ ಮಂದಿರಗಳಲ್ಲಿ ವಿಶೇಷವಾಗಿ ಜನಪ್ರಿಯವಾಗಿವೆ. ಇಲ್ಲಿ ಬಹು ಬಾಹುಗಳ ದೇವತೆಗಳಾಗಿ ಅಂಬಿಕಾ, ಪದ್ಮಾವತಿ, ಚಕ್ರೇಶ್ವರಿ ಮುಂತಾದ ದೇವತೆಗಳು ತೀರ್ಥಂಕರರನ್ನು ರಕ್ಷಿಸುವಂತೆ ಕಾಣುತ್ತದೆ. ಇದೇ ರೂಪಗಳನ್ನು ತಂತ್ರಶಾಸ್ತ್ರದ ದೇವಾಲಯಗಳಲ್ಲಿ ಯೋಗಿನಿಯರಾಗಿ, ಡಾಕಿಣಿಯರಾಗಿ ಕಾಣಬಹುದು. ಹಿಂದೂಗಳು ಮತ್ತು ಬೌದ್ಧರಿಂದ ಆರಾಧಿಸಲ್ಪಡುತ್ತವೆ. ನೇಪಾಲದಲ್ಲಿ, ನವ ದುರ್ಗ ಕಲ್ಪನೆಯ ಸುತ್ತ ನಿರ್ಮಿಸಲಾಗಿರುವ ನಗರಗಳನ್ನು ನಾವು ಕಾಣಬಹುದು. ಮೂಲ ದೇವತೆಯಾಗಿ ತಲೇಜು ನಗರದ ಕೇಂದ್ರ ಭಾಗದಲ್ಲಿದ್ದು ಸುತ್ತಲೂ ಎಂಟೂ ದಿಕ್ಕುಗಳಲ್ಲಿ ಎಂಟು ದೇವತೆಗಳು ಕಾಣಸಿಗುತ್ತವೆ. ಕಾಲಕ್ರಮೇಣ ಕೇಂದ್ರದಲ್ಲಿರುವ ದೇವತೆ ಪುರುಷ ದೇವನ ಸಂಗಾತಿಯಾಗಿ, ಭೈರವ ಅಥವಾ ವಿಷ್ಣುವಿನೊಡನೆ ಕಾಣಿಸಿಕೊಳ್ಳಲಾರಂಭಿಸಿತು. ಈ ಸಂಸರ್ಗದ ಶಿಶುವಾಗಿ ರಾಜನನ್ನು ಕಾಣಲಾಗುತ್ತದೆ.

ಕೋಟೆಯ ಸಂರಕ್ಷಕರಾಗಿ

ದೇವತೆಗಳು ರಾಜತ್ವಕ್ಕೆ ಸಮೀಕರಿಸಲ್ಪಟ್ಟ ನಂತರ ಅವುಗಳ ಶಕ್ತಿಯೂ ವೃದ್ಧಿಯಾಗತೊಡಗಿತು. ದುರ್ಗಾ ರಾಜರ ದೇವತೆಯಾಗಿ, ಅವನ ಕೋಟೆಯನ್ನು ಸಂರಕ್ಷಿಸುವ ದೇವತೆಯಾಗಿ, ರಾಜ ಸಿಂಹಾಸನದ ಮೂರ್ತರೂಪವಾಗಿ ಕಾಣಿಸಿಕೊಳ್ಳಲಾರಂಭಿಸಿದಳು. ದೇವತೆಗಳು ಕನಸಿನಲ್ಲಿ ಕಾಣಿಸಿಕೊಳ್ಳುವುದು, ಭವಿಷ್ಯದ ರಾಜನಿಗೆ ಖಡ್ಗವೊಂದನ್ನು ನೀಡುವುದು, ಅಥವಾ ಅವನನ್ನು ಸಂಪತ್ತು ಸಮೃದ್ಧಿಯೆಡೆಗೆ ಕರೆದೊಯ್ಯುವುದು ಮುಂತಾದ ಕತೆಗಳು ಹುಟ್ಟಿಕೊಂಡವು. ರಾಜನು ತನ್ನನ್ನು ಆರಾಧಿಸಿ, ತನಗೆ ಸೇವೆ ಸಲ್ಲಿಸಿ, ಅವನ ಶತ್ರುಗಳ ನೆತ್ತರನ್ನು ತನಗೆ ಅರ್ಪಿಸಿದರೆ ಇನ್ನೂ ಹೆಚ್ಚಿನ ಶಕ್ತಿ ನೀಡುವ ದೇವತೆಗಳ ಕತೆಗಳು ಹುಟ್ಟಿಕೊಂಡವು. ಕ್ರಿಶ ೯ನೆಯ ಶತಮಾನದ ಬಂಗಾಲದ ಪಾಲ ಕಲೆಯಲ್ಲಿ ರಾಜನನ್ನು ಇಬ್ಬರು ಪತ್ನಿಯರನ್ನು, ಸಂಪತ್ತು ತರುವ ಲಕ್ಷ್ಮಿ ಮತ್ತು ಕಲೆಯನ್ನು ವೃದ್ಧಿಸುವ ಸರಸ್ವತಿ, ಹೊಂದಿರುವ ವಿಷ್ಣುವಿನಂತೆ ಭಾವಿಸಲಾಗಿತ್ತು. ದೇವತೆ ಇಲ್ಲದೆಯೇ ಯಾವ ವ್ಯಕ್ತಿಯೂ ರಾಜನಾಗುವುದು ಸಾಧ್ಯವಿರಲಿಲ್ಲ. ಆಕೆ ರಾಜರಾಜೇಶ್ವರಿಯಾಗಿ, ರಾಜಕುಟುಂಬದ ದೇವತೆಯಾಗಿ ರೂಪುಗೊಂಡಳು. ಇಲ್ಲಿ ಲಿಂಗತ್ವದ ಪಾತ್ರಗಳು ಬದಲಾಗತೊಡಗಿದವು. ಪುರುಷ ದೇವರು ರಾಜನ ದೇವತೆಯೊಂದಿಗೆ ಸಿಂಹಾಸನವನ್ನು ಅಲಂಕರಿಸುವ ಪರಂಪರೆ ಆರಂಭವಾಯಿತು. ಈ ರಾಜರು ಆಕ್ರಮಿಸಲ್ಪಟ್ಟವರಾಗಿರುತ್ತಿದ್ದರು. ದೇವತೆಯು ಆಕ್ರಮಣಕಾರರ ತಾಯಿಯಾಗುತ್ತಿದ್ದಳು. ಈ ಆಲೋಚನೆಗಳಿಂದಲೇ ದೇವತೆಗಳ ಜನಪ್ರಿಯತೆ ಮತ್ತು ಶಕ್ತಿ ವೃದ್ಧಿಯಾಗತೊಡಗಿತ್ತು.

ಶಿವ, ವಿಷ್ಣು ಮತ್ತು ದೇವಿಯನ್ನು ಆರಾಧಿಸುವವರ ನಡುವೆ ತ್ರಿಪಕ್ಷೀಯ ಸಂಘರ್ಷ ಏರ್ಪಟ್ಟು, ಕೊನೆಗೆ ದೇವತೆಯನ್ನು ಇಬ್ಬರು ಪುರುಷ ದೇವರ ನಡುವೆ ಇರುವಂತೆ ಮಾಡಿ ಶಾಂತಿ ಸ್ಥಾಪಿಸಲಾಯಿತು. ಆದರೆ ದೇವನೊಬ್ಬನು ಇಬ್ಬರು ಸ್ತ್ರೀ ಸಂಗಾತಿಗಳನ್ನು ಹೊಂದಿರುವಂತೆ ಕಲ್ಪಿಸಿಕೊಂಡರೂ, ದೇವತೆಯೊಬ್ಬಳು ಇಬ್ಬರು ಪುರುಷ ಸಂಗಾತಿಗಳನ್ನು ಹೊಂದಿರುವ ಕಲ್ಪನೆ ಮೂಡಲಿಲ್ಲ. ಆಕೆಗೆ ಒಬ್ಬನೇ ದೇವನಿರುತ್ತಾನೆ, ಸಾಮಾನ್ಯವಾಗಿ ಶಿವ ಸಂಗಾತಿಯಾಗಿರುತ್ತಾನೆ, ವಿಷ್ಣು ಆಕೆಯ ಸೋದರನಾಗಿರುತ್ತಾನೆ. ಅಥವಾ ಆಕೆಯ ಇಬ್ಬದಿಯಲ್ಲಿರುವ ಪುರುಷ ದೇವರುಗಳು ಆಕೆಯ ಮಕ್ಕಳೋ, ರಕ್ಷಕರೋ ಆಗಿರುತ್ತಾರೆ. ತನ್ನ ಪುರುಷ ಸಂಗಾತಿಯಂತೆಯೇ ಸ್ವತಂತ್ರಳಾಗಿರುವ ದೇವತೆಯು ಉಗ್ರ ಸ್ವರೂಪಿಯಾಗಿರುತ್ತಾಳೆ. ಸಂಬಂಧಗಳು ಆಕ್ರಮಣಶೀಲತೆಯನ್ನು ಕಡಿಮೆ ಮಾಡಿ, ಆಕೆಯನ್ನು ಹೆಚ್ಚು ಕೌಟುಂಬಿಕ ಮತ್ತು ಸುಗಮ್ಯವನ್ನಾಗಿ ಮಾಡುತ್ತವೆ.

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ದೇವತೆಯನ್ನು ಯುಗಧರ್ಮಕ್ಕೆ ಅನುಗುಣವಾಗಿ ಕಲ್ಪಿಸಿಕೊಳ್ಳಲಾಯಿತು. ಅನೇಕ ಬರಹಗಾರರು ಭಾರತವನ್ನು ಒಂದು ರೂಪಕವಾಗಿ, ದೇವತೆಯನ್ನಾಗಿ ಕಲ್ಪಿಸಿಕೊಂಡರು. ಈ ದೇವತೆಯ ಸಕಲ ಸಂಪತ್ತನ್ನೂ ದೋಚಿ, ಆಕೆಯ ಶಕ್ತಿಯನ್ನು ಕುಂದಿಸಿ, ವಿದೇಶಿ ಆಕ್ರಮಣಕಾರರು ಆಕೆಯನ್ನು ವಿವಸ್ತ್ರಗೊಳಿಸಿದ ಚಾಮುಂಡನಂತೆ ಮಾಡಿದ್ದಾರೆ ಎಂದು ಕಲ್ಪಿಸಿಕೊಳ್ಳಲಾಯಿತು. ತನ್ನ ಮೂಲ ರೂಪದಲ್ಲಿ ಕ್ರಿಶ ೧೦ನೆಯ ಶತಮಾನದ ಚಾಮುಂಡ ಕದನ ಭೂಮಿಯ, ಶವಗಳ, ಭೂತಗಳ ದೇವತೆಯಾಗಿದ್ದಳು. ಸ್ವಾತಂತ್ರ್ಯ ಹೋರಾಟಗಾರರು ತಮ್ಮನ್ನು ಭಾರತ ಮಾತೆಯ ಪುತ್ರರು ಎಂದು ಭಾವಿಸತೊಡಗಿ, ಆಕೆಯ ಘನತೆ ಮತ್ತು ಭವ್ಯತೆಯನ್ನು ಮರಳಿ ಪಡೆಯವುದಾಗಿ ಪಣತೊಟ್ಟಿದ್ದರು. ಹಾಗಾಗಿ ಕುಲದ ದೇವತೆ ಮತ್ತು ನೆಲಸುನಾಡ ದೇವತೆಯಯನ್ನು ರಾಷ್ಟ್ರದ ದೇವತೆಯನ್ನಾಗಿ ಮರುಕಲ್ಪಿಸಿಕೊಳ್ಳಲಾಯಿತು. ದೇವತೆಯನ್ನು ಕೈಗಳಲ್ಲಿ ಪುಸ್ತಕವನ್ನು ಹಿಡಿದ ಸ್ವರಸ್ವತಿಯಾಗಿ, ಆಹಾರ ಧಾನ್ಯ ಹಿಡಿದ ಲಕ್ಷ್ಮಿಯಾಗಿ, ತ್ರಿಶೂಲ ಹಿಡಿದ ದುರ್ಗೆಯಾಗಿ ಬಿಂಬಿಸುವ ಬಗ್ಗೆ ಕಲಾವಿದರೂ ಎಂದಿಗೂ ಸಮ್ಮತಿಸಲು ಸಾಧ್ಯವಿಲ್ಲ.

(ಮೂಲ- ದಿ ಹಿಂದೂ)  ಅನುವಾದ : ನಾ ದಿವಾಕರ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ