ಆರ್.ಟಿ. ವಿಠ್ಠಲ ಮೂರ್ತಿ
ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಮಾಜಿ ಉಪಮುಖ್ಯ ಮಂತ್ರಿ ಆರ್.ಅಶೋಕ್ ಆಯ್ಕೆಯಾಗಿದ್ದಾರೆ. ಆ ಮೂಲಕ ರಾಜ್ಯ ಬಿಜೆಪಿ ಸಾರಾಸಗಟಾಗಿ ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹಿಡಿತಕ್ಕೆ ಸಿಲುಕಿದೆ.
ಅಂದ ಹಾಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅನುಭವಿಸಿದ ಸೋಲು ಬಿಜೆಪಿಯ ಕೇಂದ್ರ ನಾಯಕರಿಗೆ ಕಲಿಸಿದ ಮಹತ್ವದ ಪಾಠವೆಂದರೆ, ಕರ್ನಾಟಕದಲ್ಲಿ ಜಾತಿ ಕೇಂದ್ರಿತ ರಾಜಕಾರಣಕ್ಕೆ ಬೆಲೆಯೇ ಹೊರತು, ಧರ್ಮ ಕೇಂದ್ರಿತ ರಾಜಕಾರಣಕ್ಕಲ್ಲ ಎಂಬುದು. ಆದರೆ ಕರ್ನಾಟಕದಲ್ಲಿ ಯಡಿಯೂರಪ್ಪ ವಿರೋಧಿ ಬಣ ಅಂತೇನಿದೆ ಅದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇದಕ್ಕೆ ತದ್ವಿರುದ್ಧವಾದ ಚಿತ್ರ ನೀಡಿ ಪಕ್ಷ ಮತ್ತು ಸರ್ಕಾರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು.
ಎಷ್ಟೇ ಆದರೂ ಅಮಿತ್ ಶಾ ಅವರು ಧರ್ಮ ಕೇಂದ್ರಿತ ರಾಜಕಾರಣದ ಸ್ಪೆಷಲಿಸ್ಟ್ ಎಂದು ಹೆಸರು ಪಡೆದವರು. ಇದನ್ನೇ ಮುಂದಿಟ್ಟುಕೊಂಡು ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಬಿಜೆಪಿ ದೊಡ್ಡ ಮಟ್ಟದ ಜಯ ಗಳಿಸಿದ್ದೂ ನಿಜ.
ಹೀಗಾಗಿ ಕರ್ನಾಟಕದಲ್ಲೂ ಧರ್ಮಕೇಂದ್ರಿತ ರಾಜಕಾರಣವನ್ನು ಎನ್ ಕ್ಯಾಶ್ ಮಾಡಿಕೊಂಡರೆ ಬಿಜೆಪಿ ನಿರಾಯಾಸವಾಗಿ ಚುನಾವಣೆಯಲ್ಲಿ ಜಯಗಳಿಸುತ್ತದೆ, ಮರಳಿ ಕರ್ನಾಟಕದ ಅಧಿಕಾರ ಸೂತ್ರ ಹಿಡಿಯುತ್ತದೆ ಎಂದು ಯಡಿಯೂರಪ್ಪ ವಿರೋಧಿ ಬಣ ಅಮಿತ್ ಶಾ ಅವರನ್ನು ನಂಬಿಸಿತ್ತು. ಈ ಮಾತನ್ನು ನಂಬಿ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿಯವರ ಜತೆಗೂಡಿ ಕರ್ನಾಟಕಕ್ಕೆ ದಂಡೆತ್ತಿ ಬಂದರು. ಇಪ್ಪತ್ತೈದಕ್ಕೂ ಹೆಚ್ಚು ಕಡೆ ರ್ಯಾಲಿ ಮಾಡಿ ಹವಾ ಎಬ್ಬಿಸಲು ಯತ್ನಿಸಿದರು. ಆದರೆ ಅವರು ನಡೆಸಿದ ಪ್ರಯತ್ನ ಮೇಲ್ನೋಟಕ್ಕೆ ಯಶಸ್ವಿಯಾಗುವಂತೆ ಕಂಡರೂ ಆಳದಲ್ಲಿ ಅದು ನಿರೀಕ್ಷಿತ ಪರಿಣಾಮ ಬೀರಲಿಲ್ಲ. ಪರಿಣಾಮ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೋಡಿಯ ನೇತೃತ್ವ ಹೊಂದಿದ್ದ ಕಾಂಗ್ರೆಸ್ ಪಕ್ಷ ನೂರಾ ಮೂವತ್ತಾರು ಸೀಟುಗಳನ್ನು ಗಳಿಸಿ ಅಧಿಕಾರ ಹಿಡಿಯಿತು. ಈ ಬೆಳವಣಿಗೆ ಕಮಲ ಪಾಳೆಯದ ಕೇಂದ್ರ ನಾಯಕರನ್ನು ತಬ್ಬಿಬ್ಬು ಮಾಡಿದ್ದು ನಿಜ. ಹೀಗಾಗಿ ತಮ್ಮ ಮುಂದಿರುವ ಎರಡು ವಿಷಯಗಳಲ್ಲಿ ಯಾವುದನ್ನು ನಂಬಿ ಹೆಜ್ಜೆ ಇಡಬೇಕು ಎಂಬ ಗೊಂದಲಕ್ಕೆ ಸಿಲುಕಿದ ಅವರು ಕರ್ನಾಟಕದಲ್ಲಿ ಪಕ್ಷದ ಅಧ್ಯಕ್ಷ ಸ್ಥಾನ ಮತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕ ಸ್ಥಾನವನ್ನು ಯಾರಿಗೆ ಕೊಡಬೇಕು? ಎಂಬ ಪ್ರಶ್ನೆಯನ್ನು ಬಗೆಹರಿಸಲಾಗದೆ ತೊಳಲಾಡಿದರು.
ಈ ಎರಡೂ ವಿಷಯಗಳ ಪೈಕಿ ಮೊದಲನೆಯದು, ಯಡಿಯೂರಪ್ಪ ಅವರ ಪರವಾದದ್ದು. ಅದೆಂದರೆ, ಕರ್ನಾಟಕದಲ್ಲಿ ಪ್ರಬಲ ಲಿಂಗಾಯತ ಸಮುದಾಯದ ಬೆಂಬಲ ಯಡಿಯೂರಪ್ಪ ಅವರ ಜತೆಗಿದೆ. ಅವರನ್ನು ನಿರ್ಲಕ್ಷಿಸಿದರೆ ಅದು ಬಿಜೆಪಿ ವಿರುದ್ಧ ತಿರುಗಿ ಬೀಳುತ್ತದೆ ಎಂಬುದು. ಎರಡನೆಯದು, ಯಡಿಯೂರಪ್ಪ ಅವರ ಹಿಡಿತಕ್ಕೆ ಪುನಃ ಪಕ್ಷವನ್ನು ನೀಡಿದರೆ ರಾಜ್ಯ ಬಿಜೆಪಿ ವಂಶಪಾರಂಪರ್ಯ ರಾಜಕಾರಣದ ಹಿಡಿತಕ್ಕೆ ಸಿಲುಕುತ್ತದೆ. ಇವತ್ತು ಯಡಿಯೂರಪ್ಪ ಅವರ ಹಿಡಿತದಿಂದ ಬಿಡಿಸಿಕೊಳ್ಳಲು ಮೂರು ದಶಕಗಳಿಗೂ ಹೆಚ್ಚು ಕಾಲ ಬೇಕಾಯಿತು. ಹೀಗಾಗಿ ಅವರ ಪುತ್ರನ ಕೈಗೆ ಅಧಿಕಾರ ನೀಡಿದರೆ ಇನ್ನಷ್ಟು ಸುದೀರ್ಘ ಕಾಲ ವಂಶಪಾರಂಪರ್ಯ ರಾಜಕಾರಣದ ಝಲಕ್ ಮುಂದುವರಿಯುತ್ತದೆ ಎಂಬುದು.
ಹೀಗಾಗಿ ಈ ಪೈಕಿ ಮೊದಲನೆಯ ವಿಷಯವನ್ನು ನೆಚ್ಚಿಕೊಂಡರೆ ಎರಡನೆಯ ವಿಷಯ ಬಗೆಹರಿಯದೆ ಉಳಿಯುತ್ತದೆ. ಎರಡನೇ ವಿಷಯವನ್ನು ಬಗೆಹರಿಸಲು ಹೋದರೆ ಕರ್ನಾಟಕದಲ್ಲಿ ಪುನಃ ಬಿಜೆಪಿ ಮೇಲೇಳುವಮಾರ್ಗ ಕಾಣುತ್ತಿಲ್ಲ ಎಂಬುದು ಕೇಂದ್ರ ನಾಯಕರ ಗೊಂದಲ.
ಈ ಗೊಂದಲದ ಕಾರಣದಿಂದಾಗಿಯೇ ಆರು ತಿಂಗಳಷ್ಟು ಸುದೀರ್ಘ ಕಾಲ ಅದು ಯಾವುದೇ ತೀರ್ಮಾನ ಕೈಗೊಳ್ಳಲು ಹಿಂಜರಿಯಿತು. ಆದರೆ ಅಂತಿಮವಾಗಿ ಗೊತ್ತಾದ ಸತ್ಯವೆಂದರೆ, ಪಕ್ಷ ಕರ್ನಾಟಕದಲ್ಲಿ ಪುನಃ ಮೇಲೇಳಬೇಕೆಂದರೆ ಜಾತಿ ಕೇಂದ್ರಿತ ರಾಜಕಾರಣವನ್ನು ಬೆಂಬಲಿಸುವುದು ಅನಿವಾರ್ಯ ಎಂಬ ನಿಲುವಿಗೆ ಮೋದಿ ಬರಬೇಕಾಯಿತು. ಇವತ್ತು ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಕುಳಿತಿದ್ದಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ, ಆ ಮೂಲಕ ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಆರ್.ಅಶೋಕ್ ಬಂದು ಕುಳಿತಿದ್ದು ಹೀಗೆ.
ಅಂದ ಹಾಗೆ ಆರ್.ಅಶೋಕ್ ಅವರು ಹೇಳಿ ಕೇಳಿ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡವರು. ರಾಜ್ಯ ಬಿಜೆಪಿಯ ಮೇಲೆ ಯಡಿಯೂರಪ್ಪ ಅವರಿಗಿದ್ದ ನಿಯಂತ್ರಣವನ್ನು ವರಿಷ್ಠರು ಕಡಿಮೆ ಮಾಡಿದ ಸಂದರ್ಭದಲ್ಲಿ ಈ ಬೆಳವಣಿಗೆ ಪಕ್ಷಕ್ಕೆ ಮಾರಕವಾಗುತ್ತದೆ ಎಂದು ಆಪ್ತ ವಲಯದಲ್ಲಿ ಹೇಳಿಕೊಂಡವರು. ಸಹಜವಾಗಿಯೇ ಇವತ್ತು ತಮ್ಮ ಪುತ್ರ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕ ಮೇಲೆ ವಿಧಾನಸಭೆಯ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಅಶೋಕ್ ಬಂದು ಕೂರುವಂತೆ ಯಡಿಯೂರಪ್ಪನೋಡಿಕೊಂಡಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ, ಈ ಹಿಂದೆ ಪಕ್ಷದ ಅಧಿಕಾರವನ್ನು ಹಂಚುವ ಸಂದರ್ಭದಲ್ಲಿ ಯಡಿಯೂರಪ್ಪ ಬಣಕ್ಕೆ, ಯಡಿಯೂರಪ್ಪ ವಿರೋಧಿ ಬಣಕ್ಕೆ ಸಮನಾದ ಪ್ರಾತಿನಿಧ್ಯ ನೀಡಲು ಬಿಜೆಪಿ ವರಿಷ್ಠರು ಬಯಸುತ್ತಿದ್ದರು. ಕಾರಣ ಈ ವಿಷಯದಲ್ಲಿ ಉಭಯ ಬಣಗಳೂ ಸಮಾಧಾನದಿಂದಿರಲಿ ಎಂಬ ಲೆಕ್ಕಾಚಾರ. ಆದರೆ ಇಂತಹ ಲೆಕ್ಕಾಚಾರ ಎಷ್ಟು ಮಾರಕ ಎಂಬುದು ಕಳೆದ ಚುನಾವಣೆಯಲ್ಲಿ ಸ್ಪಷ್ಟವಾದ ನಂತರ ಬಿಜೆಪಿ ವರಿಷ್ಠರು ಅಂತಹ ಗೊಂದಲಕ್ಕೆ ಕೈ ಹಾಕಲು ಬಯಸುತ್ತಿಲ್ಲ.
ಒಂದು ವೇಳೆ ಅವರು ಹಳೆಯ ನಿಲುವಿನಲ್ಲೇ ಇದ್ದಿದ್ದರೆ ವಿಜಯೇಂದ್ರ ಅಧ್ಯಕ್ಷರಾದ ಮೇಲೆ ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಅವರನ್ನೋ, ಮಾಜಿ ಇಂಧನ ಸಚಿವ ವಿ.ಸುನಿಲ್ ಕುಮಾರ್ ಅವರನ್ನೋ ಅದು ತಂದು ಕೂರಿಸುತ್ತಿತ್ತು. ಒಂದು ವೇಳೆ ಹಾಗೇನಾದರೂ ಮಾಡಿದ್ದರೆ ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು ಎಂಬಂತೆ ಪಕ್ಷದ ಅಧ್ಯಕ್ಷರು ಮತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕರು ಸೇರಿ ಜಗ್ಗಾಟಕ್ಕಿಳಿದು ಬಿಡುತ್ತಿದ್ದರು. ಆದರೆ ಇದನ್ನು ಊಹಿಸಿದ ಬಿಜೆಪಿ ವರಿಷ್ಠರು, ಲೋಕಸಭಾ ಚುನಾವಣೆಯಲ್ಲಿ ನಾವು ಯಶಸ್ಸು ಬಯಸಬೇಕೆಂದರೆ ಜನ ನಾಯಕರಾಗಿ ಬೆಳೆದು ನಿಂತಿರುವ ಯಡಿಯೂರಪ್ಪ ಅವರಿಗೆ ಪೂರ್ಣ ಜವಾಬ್ದಾರಿ ನೀಡಬೇಕು ಎಂಬ ತೀರ್ಮಾನಕ್ಕೆ ಬಂದರು.
ಇದರ ಪರಿಣಾಮವಾಗಿಯೇ ಸೋಮಣ್ಣ ಅಥವಾ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ದಕ್ಕಬೇಕಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಪಾಲಾಯಿತು. ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನ ಯಡಿಯೂರಪ್ಪ ಬಣದ ಆರ್.ಅಶೋಕ್ ಅವರ ಪಾಲಾಯಿತು. ಅಲ್ಲಿಗೆ ರಾಜ್ಯ ಬಿಜೆಪಿ ಕಳೆದ ಆರು ತಿಂಗಳುಗಳಿಂದ ಅನುಭವಿಸುತ್ತಿದ್ದ ತಬ್ಬಲಿತನ ಸದ್ಯಕ್ಕೆ ದೂರವಾಗಿದೆ. ಆದರೆ ಹೊಸತಾಗಿ ನೇಮಕಗೊಂಡ ವಿಜಯೇಂದ್ರ ಮತ್ತು ಆರ್. ಅಶೋಕ್ ಎಂಬ ಜೋಡೆತ್ತುಗಳು ಎಷ್ಟರ ಮಟ್ಟಿಗೆ ಬಿಜೆಪಿ ರಥವನ್ನು ಎಳೆಯುತ್ತವೆ ಎಂಬುದನ್ನು ಕಾದು ನೋಡಬೇಕು.