Mysore
30
broken clouds

Social Media

ಸೋಮವಾರ, 01 ಜೂನ್ 2026
Light
Dark

ಆರ್.ಟಿ.ವಿಠ್ಠಲಮೂರ್ತಿ ಅವರು ವಾರದ ಅಂಕಣ | ಬದಲಾಗಿದೆ ರಾಜ್ಯ ರಾಜಕಾರಣದ ಸೂತ್ರ

ರಾಜ್ಯ ರಾಜಕಾರಣ ಮಗ್ಗಲು ಬದಲಿಸಿದೆ. ಸಿಎಂ ಹುದ್ದೆಯಿಂದ ಸಿದ್ದರಾಮಯ್ಯ ಅವರು ಕೆಳಗಿಳಿದು ಡಿ.ಕೆ.ಶಿವಕುಮಾರ್ ಬಂದು ಕೂರುವ ಬೆಳವಣಿಗೆಯೊಂದಿಗೆ ರಾಜ್ಯ ರಾಜಕಾರಣದ ಸೂತ್ರವೂ ಬದಲಾಗಿದೆ. ಈ ಸೂತ್ರವನ್ನು ತುಂಬ ಎಚ್ಚರಿಕೆಯಿಂದ ಗಮನಿಸಬೇಕಿರುವುದು ಬಿಜೆಪಿ-ಜಾ. ದಳ ಮೈತ್ರಿಕೂಟ ಮತ್ತು ಅದರಲ್ಲೂ ವಿಶೇಷವಾಗಿ ಜಾ. ದಳ. ಕಾರಣ ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ಘೋಷವಾಕ್ಯ ೨೦೨೩ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪರವಾದ ಅಲೆಯನ್ನು ಎಬ್ಬಿಸಿತ್ತು.

ಇಂತಹ ಅಲೆಯ ಪ್ರಭಾವ ಹಳೆ ಮೈಸೂರು ಭಾಗದ ಜಿಗಳಲ್ಲಿ ಜಾ. ದಳ. ಪಕ್ಷಕ್ಕೆ ಹೊಡೆತ ಕೊಟ್ಟಿತ್ತು.

ಅಂದ ಹಾಗೆ ಹಳೆ ಮೈಸೂರು ಭಾಗದ ಒಕ್ಕಲಿಗ ಮತ ಬ್ಯಾಂಕ್‌ನ ಮೇಲೆ ದೇವೇಗೌಡ-ಕುಮಾರಸ್ವಾಮಿ ಅವರಿಗೆ ಹೆಚ್ಚಿನ ಹಿಡಿತವಿತ್ತಾದರೂ ಚುನಾವಣೆಯ ಸಂದರ್ಭದಲ್ಲಿ ಮತ ಬ್ಯಾಂಕುಗಳು ವಿಭಿನ್ನವಾಗಿ ಯೋಚಿಸುತ್ತವೆ. ಅರ್ಥಾತ್, ಈ ಚುನಾವಣೆಯ ನಂತರ ತನ್ನ ಹಿತ ಕಾಪಾಡುವ ಶಕ್ತಿ ಯಾರಲ್ಲಿ ಹೆಚ್ಚು? ಎಂದು ಗಮನಿಸುತ್ತದೆ. ಆ ದೃಷ್ಟಿಯಿಂದ ೨೦೨೩ ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಒಕ್ಕಲಿಗ ಮತ ಬ್ಯಾಂಕಿಗೆ ಕುಮಾರಸ್ವಾಮಿ ಅವರಿಗಿಂತ ಡಿ. ಕೆ. ಶಿವಕುಮಾರ್ ಹೆಚ್ಚು ಅಪ್ಯಾಯಮಾನವಾಗಿ ಕಂಡರು.

ಪರಿಣಾಮ ಮಂಡ್ಯ,ಮೈಸೂರು ಸೇರಿದಂತೆ ಹಳೆ ಮೈಸೂರು ಭಾಗದ ಜಿಗಳಲ್ಲಿ ಕಾಂಗ್ರೆಸ್ ಪಕ್ಷ ವಾಡಿಕೆಗಿಂತ ಐದು ಪರ್ಸೆಂಟಿನಷ್ಟು ಹೆಚ್ಚುವರಿ ಮತಗಳನ್ನು ಗಳಿಸಿತು. ಹೀಗೆ ವಾಡಿಕೆಗಿಂತ ಶೇಕಡಾ ಐದರಷ್ಟು ಹೆಚ್ಚುವರಿ ಮತಗಳನ್ನು ಪಡೆದ ಕಾಂಗ್ರೆಸ್ಸಿಗೆ ಅವತ್ತು ಎದುರಾಳಿ ಸೈನ್ಯದ ಒಡಕು ಕೂಡಾ ಪ್ಲಸ್ ಆಯಿತು. ಅಂದ ಹಾಗೆ ಇವತ್ತು ಮಿತ್ರಪಕ್ಷಗಳಾಗಿರುವ ಬಿಜೆಪಿ ಮತ್ತು ಜಾ. ದಳ ೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ಶತ್ರು ಪಕ್ಷಗಳಾಗಿದ್ದವು. ಈ ಶತ್ರುತ್ವ ಯಾವ ಮಟ್ಟದಲ್ಲಿತ್ತೆಂದರೆ ಜಾ. ದಳ. ಪಕ್ಷವನ್ನು ಹಣಿಯದೆ ನಾವು ಸ್ವತಂತ್ರವಾಗಿ ಅಧಿಕಾರ ಹಿಡಿಯುವುದಿಲ್ಲ ಎಂದು ಬಿಜೆಪಿಯ ನಾಯಕರು ನಂಬಿದ್ದರು.

ಅವತ್ತು ಚುನಾವಣೆಗೂ ಮುನ್ನ ರಣತಂತ್ರ ಹೆಣೆಯಲು ದಿಲ್ಲಿಯಿಂದ ಬಂದಿದ್ದ ಅಮಿತ್ ಶಾ ಬೆಂಗಳೂರಿನ ಪಂಚತಾರಾ ಹೋಟೆಲ್ ಒಂದರಲ್ಲಿ ರಾಜ್ಯ ಬಿಜೆಪಿ ನಾಯಕರ ಸಭೆ ಕರೆದಾಗ ಇದೇ ಅಭಿಪ್ರಾಯ ವ್ಯಕ್ತವಾಗಿತ್ತು. ಇಂತಹ ಅಭಿಪ್ರಾಯ ವ್ಯಕ್ತವಾಗಲು ೨೦೧೮ರ ವಿಧಾನಸಭಾ ಚುನಾವಣೆಯ ಅನುಭವವೇ ಕಾರಣ. ಅದರ ಪ್ರಕಾರ,೨೦೧೮ ರಲ್ಲಿ ನಾವು ಅಧಿಕಾರ ಹಿಡಿಯಬೇಕು ಎಂದರೆ ಜಾ. ದಳ ಜತೆ ಪರೋಕ್ಷ ಹೊಂದಾಣಿಕೆ ಮಾಡಿಕೊಳ್ಳಬೇಕು. ಅರ್ಥಾತ್,ಹಳೆ ಮೈಸೂರು ಭಾಗದ ಕ್ಷೇತ್ರಗಳ ಪೈಕಿ ಎಲ್ಲಿ ಕಾಂಗ್ರೆಸ್-ಜಾ. ದಳ ನಡುವೆ ನೇರ ಹಣಾಹಣಿ ಇದೆಯೋ ಅಲ್ಲ ಬಿಜೆಪಿ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಜಾ. ದಳ ಅಭ್ಯರ್ಥಿಗಳು ಗೆಲ್ಲಲು ದಾರಿ ಮಾಡಿಕೊಡಬೇಕು. ಚುನಾವಣೆಯ ನಂತರ ಬಿಜೆಪಿ- ಜಾ. ದಳ ಪರಸ್ಪರ ಕೈಗೂಡಿಸಿ ಸರ್ಕಾರ ರಚಿಸಬೇಕು ಎಂಬುದು.

ಅಮಿತ್ ಶಾ ಅವರ ಲೆಕ್ಕಾಚಾರಕ್ಕೆ ಇದ್ದ ಪ್ರಮುಖ ಕಾರಣ ಸಿದ್ದರಾಮಯ್ಯ ೨೦೧೩ ರಿಂದ ೨೦೧೮ರವರೆಗೆ ಅಧಿಕಾರದ ಗದ್ದುಗೆ ಹಿಡಿದಿದ್ದ ಸಿದ್ದರಾಮಯ್ಯ ಅಹಿಂದ ವರ್ಗಗಳ ಸೈನ್ಯವನ್ನು ಪ್ರಬಲವಾಗಿ ನಿಲ್ಲಿಸಿದ್ದರು. ಇದರ ವಿರುದ್ದ ಸೆಣಸಾಡಿ ಯಶಸ್ವಿಯಾಗಬೇಕು ಎಂದರೆ ಬಿಜೆಪಿ-ಜಾ. ದಳ ಆಳದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದು. ಅವರ ಈ ಲೆಕ್ಕಾಚಾರ ಸುಳ್ಳೇನಾಗಿರಲಿಲ್ಲ ಮತ್ತು ಅದರಂತೆ ಅವರು ರೂಪಿಸಿದ ರಣತಂತ್ರ ಯಶಸ್ವಿಯೂ ಆಯಿತು.

ಆದರೆ ಈ ರಣತಂತ್ರ ಯಶಸ್ವಿಯಾದರೂ ಸನ್ನಿವೇಶದ ಲಾಭ ಪಡೆದ ಜಾ. ದಳ ಪಕ್ಷ ಕಾಂಗ್ರೆಸ್ ಜತೆ ಕೈಗೂಡಿಸಿ ಮುಖ್ಯಮಂತ್ರಿ ಹುದ್ದೆಯನ್ನು ದಕ್ಕಿಸಿಕೊಂಡಿತು. ಯಾವಾಗ ಈ ಬೆಳವಣಿಗೆ ನಡೆಯಿತೋ ಅಗ ಕುದ್ದು ಹೋದ ಬಿಜೆಪಿ ನಾಯಕರು, ನಮ್ಮಿಂದ ಲಾಭ ಪಡೆದು ಕಾಂಗ್ರೆಸ್ ಜತೆ ಹೋದ ಜಾ. ದಳ ಪಕ್ಷವನ್ನು ಹಣಿಯಲೇಬೇಕು. ಇಲ್ಲದಿದ್ದರೆ ನಾವು ೨೦೨೩ ರಲ್ಲಿ ಮರಳಿ ಅಽಕಾರ ಹಿಡಿಯಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದರು.

ಆದರೆ ಅವರ ಈ ಲೆಕ್ಕಾಚಾರ ಒಂದು ಮಟ್ಟದಲ್ಲಿ ಕೆಲಸ ಮಾಡಿತಾದರೂ ಮತ್ತೊಂದು ಮಟ್ಟದಲ್ಲಿ ಕೆಲಸ ಮಾಡಲಿಲ್ಲ. ಕಾರಣ ಕಾಂಗ್ರೆಸ್ ಪಕ್ಷ ಡಿ. ಕೆ. ಶಿವಕುಮಾರ್ ಅವರ ಹೆಸರನ್ನು ಮುಂದಿಟ್ಟುಕೊಂಡು ಹೋರಾಡಿದ್ದು. ಹೀಗಾಗಿ ಒಂದು ಕಡೆಯಿಂದ ಬಿಜೆಪಿಯ ದಾಳಿ ಜಾ. ದಳ ಪಕ್ಷವನ್ನು ಅತ್ಯಂತ ದುರ್ಬಲಗೊಳಿಸಿದರೆ ಇದರ ಸುಳಿವು ಪಡೆದ ಜಾ. ದಳ ಪಕ್ಷದ ಬಹುತೇಕ ಮತದಾರರು ಡಿ. ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸೈನ್ಯದ ಜತೆ ನಿಂತರು.

ಪರಿಣಾಮ? ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಬಿಜೆಪಿಯ ಮತ ಗಳಿಕೆಯ ಪ್ರಮಾಣ ಹಿಗ್ಗಿದರೂ ಜಾ. ದಳ ಪಕ್ಷಕ್ಕೆ ಕೊರತೆಯಾದ ಮತಗಳು ಕಾಂಗ್ರೆಸ್ ಸೈನ್ಯದಲ್ಲಿ ವಿಲೀನವಾಗಿ ಕಾಂಗ್ರೆಸ್ಸಿಗೆ ದೊಡ್ಡ ಮಟ್ಟದ ಜಯವನ್ನು ತಂದುಕೊಟ್ಟಿತು.

ಯಾವಾಗ ಈ ಬೆಳವಣಿಗೆ ನಡೆಯಿತೋ ಆಗ ಇದನ್ನು ಆಮೂಲಾಗ್ರವಾಗಿ ಗ್ರಹಿಸಿದವರು ಬಿಜೆಪಿ ನಾಯಕ,ಗೋವಾ ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು, ಈ ಸೂಕ್ಷ್ಮವನ್ನು ಬರೀ ಗ್ರಹಿಸಿದ್ದಷ್ಟೇ ಅಲ್ಲ,ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಆಳವಾಗಿ ವಿವರಿಸಿದರು ಮತ್ತು ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜಾ. ದಳ ನಡುವೆ ಮೈತ್ರಿ ಸಾಧಿತವಾಗುವಂತೆ ನೋಡಿ ಕೊಂಡರು.

ರಾಜಕೀಯ ವಲಯಗಳ ಲೆಕ್ಕಾಚಾರದ ಪ್ರಕಾರ,ಇಂತಹ ಮೈತ್ರಿ ಸಾಧಿತವಾಗದೆ ಇದ್ದಿದ್ದರೆ ಆಡಳಿತಾರೂಢ ಕಾಂಗ್ರೆಸ್ ನಿರಾಯಾಸವಾಗಿ ಹದಿನೈದು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಗಳಿಸಿತು. ಆದರೆ ಸಕಾಲಕ್ಕೆ ಮೈತ್ರಿ ಸಾಧಿತವಾದ ಪರಿಣಾಮವಾಗಿ ಬಿಜೆಪಿ-ಜಾ. ದಳ ಮಿತ್ರಕೂಟ ಹತ್ತೊಂಬತ್ತು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಗಳಿಸಿ, ಕಾಂಗ್ರೆಸ್ ಪಕ್ಷ ಕೇವಲ ಒಂಬತ್ತು ಕ್ಷೇತ್ರಗಳ ಗೆಲುವಿಗೆ ಸೀಮಿತವಾಗಬೇಕಾಯಿತು. ಆ ದೃಷ್ಟಿಯಿಂದ ೨೦೨೮ರ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ-ಜಾ. ದಳ ಮಿತ್ರಕೂಟ ಒಗ್ಗಟ್ಟಿನಿಂದಿದ್ದರೆ ಮಾತ್ರ ಕಾಂಗ್ರೆಸ್ ಸೈನ್ಯದ ವಿರುದ್ಧ ಹೋರಾಡಲು ಸಾಧ್ಯ.

ಏಕೆಂದರೆ ೨೦೨೮ ರ ಚುನಾವಣೆಯಲ್ಲಿ ರಣಾಂಗಣಕ್ಕಿಳಿಯುವ ಡಿ. ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸೈನ್ಯ ಹಿಂದೆಂದಿಗಿಂತ ಡೆಡ್ಲಿಯಾಗಿರಲಿದೆ. ಇಂತಹ ಡೆಡ್ಲಿ ಸೈನ್ಯವನ್ನು ಎದುರಿಸಲು ಬಿಜೆಪಿ-ಜಾ. ದಳ ಸೈನ್ಯ ಎಚ್ಚರಿಕೆಯಿಂದ ರಣತಂತ್ರ ರೂಪಿಸುವುದು ಅನಿವಾರ್ಯ. ಇಂತಹ ಅನಿವಾರ್ಯತೆಯ ಸ್ವರೂಪ ಹೇಗಿರಲಿದೆ ಎಂದರೆ ಡಿ. ಕೆ. ಶಿವಕುಮಾರ್ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದು ಸ್ಪಷ್ಟವೀಗ ಹೆಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ-ಜಾ. ದಳ ಮಿತ್ರಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪ್ರತಿಬಿಂಬಿತರಾಗಬೇಕು. ಇದು ಸಾಧ್ಯವಾಗದಿದ್ದರೆ ಹಳೆ ಮೈಸೂರು ಭಾಗದಲ್ಲಿ ಪ್ರಬಲವಾಗಿರುವ ಮತ ಬ್ಯಾಂಕು ಕಾಂಗ್ರೆಸ್ ಕಡೆ ದೊಡ್ಡ ಮಟ್ಟದಲ್ಲಿ ವಾಲುವಂತೆ ಮಾಡಬಹುದು. ಆ ದೃಷ್ಟಿಯಿಂದ ಡಿ. ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಿರುವ ಬೆಳವಣಿಗೆ ಬಿಜೆಪಿ-ಜಾ. ದಳ ಸೈನ್ಯದ ಪಾಲಿಗೆ ಹೊಸ ಸವಾಲನ್ನು ಒಡ್ಡಿದೆ.

ಅಂದ ಹಾಗೆ ಡಿ. ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಿರುವ ಹೊತ್ತಿನಲ್ಲಿ ಸಿದ್ದರಾಮಯ್ಯ ಅವರು ಕೆಳಗೆ ಇಳಿದಿರುವುದರಿಂದ ಅಹಿಂದ ವರ್ಗಗಳ ಮತ ಮತ ಬ್ಯಾಂಕು ಅಸ್ಥಿರವಾಗುತ್ತದೆ, ಚೆಲ್ಲಾಪಿಲ್ಲಿಯಾಗುತ್ತದೆ ಮತ್ತು ಇದು ತಮಗೆ ಗೆಲುವಿನ ದಾರಿಯನ್ನು ಸುಗಮವಾಗಿಸುತ್ತದೆ ಎಂಬ ನಂಬಿಕೆ ಬಿಜೆಪಿ-ಜಾ. ದಳ ಮಿತ್ರಕೂಟದಲ್ಲಿದೆ. ಆದರೆ ಈ ನಂಬಿಕೆ ನೂರಕ್ಕೆ ನೂರು ನಿಜವಾಗುತ್ತದೆ ಎಂದು ಹೇಳಲು ಈಗಲೇ ಸಾಧ್ಯವಿಲ್ಲ. ಏಕೆಂದರೆ ಈಗಿರುವ ಮಾಹಿತಿಯ ಪ್ರಕಾರ,ಸಿದ್ದರಾಮಯ್ಯ ಅವರನ್ನು ಸಂಪೂರ್ಣವಾಗಿ ವಿಶ್ವಾಸದಲ್ಲಿಟ್ಟುಕೊಳ್ಳಲು ಮತ್ತು ಕಾಂಗ್ರೆಸ್ ಸೈನ್ಯದ ಮೇಜರ್ ಜನರಲ್ ಆಗಿ ನಿಲ್ಲಿಸಿಕೊಳ್ಳಲು ಕಾಂಗ್ರೆಸ್ ವರಿಷ್ಠರು ಕಸರತ್ತು ನಡೆಸುತ್ತಿದ್ದಾರೆ. ಈ ಕಸರತ್ತು ಸಫಲವಾದರೆ ಬಿಜೆಪಿ-ಜಾ. ದಳ ಮಿತ್ರ ಸೈನ್ಯ ಗೆಲುವಿಗಾಗಿ ಬೆವರು ಹರಿಸಬೇಕಾಗುತ್ತದೆ. ಒಂದು ವೇಳೆ ಕಾಂಗ್ರೆಸ್ ವರಿಷ್ಠರ ಕಸರತ್ತು ಸಫಲವಾಗದಿದ್ದರೆ ಮಿತ್ರಕೂಟದ ದಾರಿ ಸುಗಮವಾಗುತ್ತದೆ.

Tags:
error: Content is protected !!