Mysore
25
overcast clouds
Light
Dark

ನಾಲ್ಕು ರಾಜ್ಯಗಳ ಚುನಾವಣೆ; ‘ಲೋಕ’ ಕೈಕೈಗನ್ನಡಿಯಾಗದು?

  • ಆರ್. ಟಿ ವಿಠ್ಠಲಮೂರ್ತಿ

ಈ ಪೈಕಿ ದೊಡ್ಡ ರಾಜ್ಯವಾದ ಮಧ್ಯಪ್ರದೇಶದಲ್ಲಿ ಅದು ಅಧಿಕಾರ ಉಳಿಸಿಕೊಂಡಿದ್ದರೆ ಕಾಂಗ್ರೆಸ್ ಪಕ್ಷದ ಕೈಯಲ್ಲಿದ್ದ ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳನ್ನು ‘ವಶಪಡಿಸಿಕೊಳ್ಳುವ ಮೂಲಕ ಪಾರಮ್ಯ ಸಾಧಿಸಿದೆ. ಬಿಜೆಪಿಯ ಈ ಗೆಲುವು ಕಾಂಗ್ರೆಸ್ ಪಕ್ಷವನ್ನು ದಿಗ್ರಮೆಗೊಳಿಸಿದರೂ ದಕ್ಷಿಣ ಭಾರತ ಅದಕ್ಕೆ ಆಶಾದಾಯಕವಾಗಿಯೇ ಇದೆ. ಏಕೆಂದರೆ ತೆಲಂಗಾಣದಲ್ಲಿ ಅಧಿಕಾರ ನಡೆಸುತ್ತಿದ್ದ ಬಿ.ಆರ್.ಎಸ್. ಪಕ್ಷವನ್ನು ಸೋಲಿಸಿ ಅದು ಅಧಿಕಾರ ಹಿಡಿದಿದೆ. ಅರ್ಥಾತ್, ಕರ್ನಾಟಕದಲ್ಲಿ ಗೆದ್ದ ನಂತರ ಅದಕ್ಕೆ ತೆಲಂಗಾಣದ ಗೆಲುವು ಒಂದು ಮಟ್ಟದ ಟಾನಿಕ್ ನೀಡಿದೆ. ಗಮನಿಸಬೇಕಾದ ಸಂಗತಿ ಎಂದರೆ, ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇಷ್ಟೊಂದು ದೊಡ್ಡ ಗೆಲುವು ಸಾಧಿಸಿದರೂ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ರಾಜ್ಯಗಳಿಂದ ಬಿಜೆಪಿ ಹೆಚ್ಚುವರಿ ಸೀಟುಗಳನ್ನು ಗೆಲ್ಲುವ ಲಕ್ಷಣ ಕಡಿಮೆ.

ಈಗ ಚುನಾವಣೆ ನಡೆದ ಐದು ರಾಜ್ಯಗಳಲ್ಲಿರುವ 83 ಪಾರ್ಲಿಮೆಂಟ್ ಸ್ಥಾನಗಳ ಪೈಕಿ 65 ಸೀಟುಗಳು ಬಿಜೆಪಿ ಕೈಯಲ್ಲಿದ್ದರೆ, ಕಾಂಗ್ರೆಸ್ ಪಕ್ಷದ ಆರು ಮತ್ತು ಬಿ.ಆರ್.ಎಸ್. ಪಕ್ಷದ ಒಂಬತ್ತು ಮಂದಿ ಸಂಸದರಾಗಿದ್ದಾರೆ. ಇನ್ನು ರಾಜಸ್ತಾನದಲ್ಲಿ ಆ‌ರ್.ಎಲ್.ಪಿ. ಪಕ್ಷ ಗೆದ್ದ ಒಂದು ಸ್ಥಾನ ಮತ್ತು ತೆಲಂಗಾಣದಲ್ಲಿ ಒವೈಸಿಯವರ ಪಕ್ಷ ಗೆದ್ದ ಒಂದು ಸ್ಥಾನ ಬಿಜೆಪಿಯ ಬೆನ್ನಿಗಿದ್ದವು. ಉಳಿದಂತೆ ಮಿಜೋರಾಂನಲ್ಲಿರುವ ಒಂದು ಕ್ಷೇತ್ರ ಎಂ.ಎನ್.ಎಫ್. ಕೈಯಲ್ಲಿದೆ.

ಅರ್ಥಾತ್, ಈ ಐದು ರಾಜ್ಯಗಳ ಎಂಬತ್ತೂರು ಸ್ಥಾನಗಳ ಪೈಕಿ ಅರವತ್ತೇಳು ಸ್ಥಾನಗಳು ಬಿಜೆಪಿ ಜತೆಗಿದ್ದವು. ಆದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈ ಸಾಧನೆಯನ್ನು ಪುನರಾವರ್ತಿಸುವುದು ಕಷ್ಟ. ಏಕೆಂದರೆ ತೆಲಂಗಾಣದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್ ಪಕ್ಷ ಈ ವಿಧಾನಸಭಾ ಚುನಾವಣೆಯಲ್ಲಿ ಪಡೆದ ಮತಗಳ ಪ್ರಮಾಣವನ್ನು ಗಮನಿಸಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅದು ಹತ್ತು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಜಾಸ್ತಿ. ಉಳಿದಂತೆ ಮಧ್ಯಪ್ರದೇಶ ಮತ್ತು ರಾಜಸ್ತಾನ ರಾಜ್ಯಗಳಲ್ಲಿರುವ ಐವತ್ನಾಲ್ಕು ಸೀಟುಗಳ ಪೈಕಿ ಐವತ್ತೆರಡು ಸ್ಥಾನಗಳನ್ನು ಬಿಜೆಪಿ ಪಡೆದಿದ್ದರೆ, ಒಂದು ಸ್ಥಾನವನ್ನು ಬಿಜೆಪಿಯ ಮಿತ್ರ ಪಕ್ಷ ಆರ್.ಎಲ್.ಪಿ. ಗೆದ್ದಿತ್ತು. ಉಳಿದ ಒಂದು ಸ್ಥಾನವನ್ನು ಕಾಂಗ್ರೆಸ್ ಗೆದ್ದಿತ್ತು.

ಆದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇದೇ ಸಾಧನೆ ಮಾಡುವುದು ಕಷ್ಟ. ಇನ್ನು ಛತ್ತೀಸ್‌ಗಢದ ಕತೆಯೂ ಇದಕ್ಕಿಂತ ಭಿನ್ನವಲ್ಲ. ಇದನ್ನು ಗಮನಿಸಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಕಳೆದ ಬಾರಿಗಿಂತ ಉತ್ತಮವಾಗುವ ಸಾಧ್ಯತೆ ಜಾಸ್ತಿ.

ಹಾಗೆಂದ ಮಾತ್ರಕ್ಕೆ ಅದು ಇಂಡಿಯಾ ಮೈತ್ರಿಕೂಟದ ಜತೆ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದುಬಿಡುತ್ತದೆ ಅಂತಲ್ಲ. ಏಕೆಂದರೆ ವಿವಿಧ ರಾಜ್ಯಗಳಲ್ಲಿ ಅದು ಅನುಭವಿಸಿರುವ ಸೋಲು ಇಂಡಿಯಾ ಒಕ್ಕೂಟದ ಶಕ್ತಿಯನ್ನು ಕುಗ್ಗಿಸಿದೆ. ಕಾಂಗ್ರೆಸ್‌ಗೆ ದಿಲ್ಲಿಯ ದಾರಿ ದೂರವಿದೆ ಎಂಬುದು ಇದರರ್ಥ.

ಪರಮೇಶ್ವ‌ರ್ ಬಿಟ್ಟ ಬಾಣ: ಮೊನ್ನೆ ಬೆಂಗಳೂರಿಗೆ ಬಂದಿದ್ದ ಪಕ್ಷದ ನಾಯಕ ಕೆ.ಸಿ.ವೇಣುಗೋಪಾಲ್ ಅವರನ್ನು ರಾಜ್ಯದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಭೇಟಿ ಮಾಡಿದ್ದರು. ಈ ಭೇಟಿಯ ಸಂದರ್ಭದಲ್ಲಿ ಅವರು ಕೆ.ಸಿ.ವೇಣುಗೋಪಾಲ್ ಅವರ ಬಳಿ ಒಂದು ಪ್ರಶ್ನೆ ಕೇಳಿದರಂತೆ. ಎರಡೂವರೆ ವರ್ಷಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಹೈಕಮಾಂಡ್ ತೀರ್ಮಾನಿಸಿದೆಯೇ? ಎಂಬುದು ಪರಮೇಶ್ವರ್ ಅವರ ಪ್ರಶ್ನೆ.

ತಮಗೆ ಎದುರಾದ ಈ ಪ್ರಶ್ನೆಯಿಂದ ವಿಸ್ಥಿತರಾದ ಕೆ.ಸಿ.ವೇಣುಗೋಪಾಲ್ ಅವರು, ಯಾವ ಕಾರಣಕ್ಕಾಗಿ ಈ ಪ್ರಶ್ನೆ ಕೇಳುತ್ತಿದ್ದೀರಿ ಪರಮೇಶ್ವರ್ ಜೀ ಎಂದು ಕೇಳಿದರು. ಆಗ ವಿಷಯಕ್ಕೆ ಬಂದ ಪರಮೇಶ್ವರ್ ಅವರು, ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಅಧಿಕಾರ ಹಂಚಿಕೆಯ ವಿಷಯ ಪದೇ ಪದೇ ಪ್ರಸ್ತಾಪವಾಗುತ್ತಿದೆ. ಎರಡೂವರೆ ವರ್ಷಗಳ ನಂತರ ಸಿದ್ದರಾಮಯ್ಯ ಅವರು ಕೆಳಗಿಳಿದು ಅವರ ಜಾಗಕ್ಕೆ ಬೇರೊಬ್ಬ ನಾಯಕರು

ಬರುತ್ತಾರೆ ಎಂಬ ಮಾತು ಕೇಳುತ್ತಿದೆ ಎಂದರು. ಅವರ ಈ ಮಾತು ಮುಂದುವರಿಯುವ ಮುನ್ನವೇ ಮಧ್ಯೆ ಪ್ರವೇಶಿಸಿದ ಕೆ.ಸಿ.ವೇಣುಗೋಪಾಲ್ ಅವರು, ನೋ, ನೋ ಹಾಗೆಲ್ಲ ಈ ವಿಷಯದ ಬಗ್ಗೆಚರ್ಚೆ ಮಾಡಬಾರದು ಎಂದು ಈಗಾಗಲೇ ಹೈಕಮಾಂಡ್ ರಾಜ್ಯದ ನಾಯಕರಿಗೆ ಸ್ಪಷ್ಟ ಸೂಚನೆ ನೀಡಿದೆಯಲ್ಲ? ಎಂದರಂತೆ.

ಆದರೆ ಪಟ್ಟು ಬಿಡದ ಪರಮೇಶ್ವರ್, ಈ ಪ್ರಶ್ನೆಯನ್ನು ನಿಮಗೇ ಏಕೆ ಕೇಳಿದೆ ಎಂದರೆ ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ ಎಂಬುದೇ ನಿಜವಾದರೆ ಸಿದ್ದರಾಮಯ್ಯ ಅವರು ಕೆಳಗಿಳಿದ ನಂತರ ಸಿಎಂ ಹುದ್ದೆಗೆ ನಾನು ಸೀರಿಯಸ್ ಕಂಟೆಂಡರ್ ಎಂಬುದು ನಿಮಗೆ ಗೊತ್ತಿರಲಿ ಎಂಬ ಕಾರಣಕ್ಕಾಗಿ ಹೇಳಿದೆ. ಏಕೆಂದರೆ ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ನಾವೂ ಕೆಲಸ ಮಾಡಿದ್ದೇವೆ. ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲ ಬೆವರು ಹರಿಸಿದ್ದೇವೆ. 2013ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೆ. ಆ ಸಂದರ್ಭದಲ್ಲಿ ನಾನು ಏನು ಕೆಲಸ ಮಾಡಿದೆ ಎಂಬುದು ನಿಮಗೂ ಗೊತ್ತು ಅಂತ ಪರಮೇಶ್ವರ್ ಹೇಳಿದಾಗ, ಐ ನೋ ಪರಮೇಶ್ವರ್ ಜೀ ಎಂದರಂತೆ ವೇಣುಗೋಪಾಲ್. ಗೊತ್ತಿದ್ದರೆ ಸಾಲದು ಸಾರ್, ಮುಂದಿನ ದಿನಗಳಲ್ಲಿ ಸಿಎಂ ಹುದ್ದೆಯಿಂದ ಸಿದ್ದರಾಮಯ್ಯ ಅವರು ಕೆಳಗಿಳಿಯುವುದು ನಿಜವೇ ಆದರೆ ಆ ಜಾಗಕ್ಕೆ ಬರಲು ನಾನು ರೆಡಿ ಇದ್ದೇನೆ. ನಾಯಕತ್ವ ಬದಲಾವಣೆಯಿಲ್ಲ ಅಂತ ಹೈಕಮಾಂಡ್ ತೀರ್ಮಾನಿಸಿದ್ದರೆ ನನ್ನ ವಿರೋಧವಿಲ್ಲ. ಆದರೆ ಬದಲಾವಣೆ ನಿಶ್ಚಿತ ಎಂದಾದರೆ ಸುಮ್ಮನಿರಲು ನಾನು ತಯಾರಿಲ್ಲ ಎಂದರು.

ಪರಮೇಶ್ವರ್ ಅವರ ಮಾತುಗಳಲ್ಲಿದ್ದ ಸ್ಪಷ್ಟತೆಯನ್ನು ನೋಡಿ ಮತ್ತಷ್ಟು ವಿಸ್ಥಿತರಾದ ಕೆ.ಸಿ.ವೇಣುಗೋಪಾಲ್, ನೋ, ನೋ ಪರಮೇಶ್ವರ್ ಜೀ. ಈ ವಿಷಯದಲ್ಲಿ ಹೈಕಮಾಂಡ್ ಯಾವ ತೀರ್ಮಾನವನ್ನೂ ತೆಗೆದುಕೊಂಡಿಲ್ಲ ಅಂತ ಚರ್ಚೆಗೆ ತೆರೆ ಎಳೆದರಂತೆ.

ದಲಿತರಿಗೆ ಶಕ್ತಿ ಕೊಡಿ: ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿರುವ ಆರ್. ಅಶೋಕ್ ಕಳೆದ ವಾರ ವಿಧಾನಸೌಧದ ಮೊದಲ ಅಂತಸ್ತಿನಲ್ಲಿರುವ ತಮ್ಮ ಕಚೇರಿಯಲ್ಲಿ ಪೂಜೆ ಇಟ್ಟುಕೊಂಡಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಹಿರಿಯ ನಾಯಕರೊಬ್ಬರು ಆಪ್ತರ ಜತೆ ಮಾತನಾಡುತ್ತಾ, ಸರ್ಕಾರಕ್ಕೆ ಯಾವ ಯಾವಹಂತಗಳಲ್ಲಿ ಸಲಹೆ ನೀಡಬಹುದು? ಎಂಬ ಬಗ್ಗೆ ಮಾತನಾಡುತ್ತಿದ್ದರು.

ಅವರ ಪ್ರಕಾರ, ಪರಿಶಿಷ್ಟರಿಗೆ ಶಕ್ತಿ ತುಂಬಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಸ್.ಸಿ.ಎಸ್.ಪಿ-ಟಿ.ಎಸ್.ಪಿ ಕಾಯ್ದೆಯ ರೂಪ ಬದಲಿಸಬೇಕು. ಕಾರಣ ಈ ಕಾಯ್ದೆಯಡಿ ದಲಿತರ ಕಲ್ಯಾಣಕ್ಕೆ ಅಂತ ಸರ್ಕಾರ ಪ್ರತಿ ವರ್ಷ 30 ಸಾವಿರ ಕೋಟಿ ರೂಪಾಯಿಗಳಷ್ಟು ಹಣ ಒದಗಿಸುತ್ತದೆ. ಪರಿಶಿಷ್ಟರ ಕಲ್ಯಾಣಕ್ಕೆ ಇಷ್ಟು ಪ್ರಮಾಣದ ಹಣವನ್ನು ಒದಗಿಸುವುದು ಸಾಮಾಜಿಕ ಕ್ರಾಂತಿ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಹೀಗೆ ಒದಗಿಸಿದ ಹಣವನ್ನು ಸರ್ಕಾರದ ವಿವಿಧ ಇಲಾಖೆಗಳ ಮೂಲಕ ವೆಚ್ಚ ಮಾಡಲಾಗುತ್ತಿದೆ. ಇದು ಹೇಗಿದೆ ಎಂದರೆ ಒಂದು ಮನೆ ಕಟ್ಟಲು ಹತ್ತು ಎಂಜಿನಿಯರುಗಳಿಗೆ ಹೇಳಿದಂತಿದೆ. ಏಕೆಂದರೆ ಮನೆ ಕಟ್ಟಲು ಇರುವ ಬಂಡವಾಳ ಒಂದೇ. ಆದರೆ ಮನೆ ಯಾವ ರೀತಿ ನಿರ್ಮಿಸಬೇಕು ಅಂತ ಹತ್ತು ಮಂದಿ ಯೋಚಿಸಬೇಕಾಗುತ್ತದೆ. ಇದರ ಪರಿಣಾಮ ರೂಪುಗೊಳ್ಳುವ ಮನೆಯ ಮೇಲಾಗುತ್ತದೆ.

ಇವತ್ತು ಎಸ್.ಸಿ.ಎಸ್.ಪಿ-ಟಿ.ಎಸ್.ಪಿ. ಯೋಜನೆಯ ಸ್ಥಿತಿಯೂ ಅಷ್ಟೇ. ಏಕೆಂದರೆ ಪರಿಶಿಷ್ಟರ ಕಲ್ಯಾಣಕ್ಕಾಗಿ ತಮ್ಮ ಇಲಾಖೆ ಮಾಡಬೇಕಿರುವ ಖರ್ಚಿನ ಬಗ್ಗೆ ಪ್ರತಿಯೊಂದು ಇಲಾಖೆಯೂ ತನ್ನದೇ ಯೋಜನೆ ರೂಪಿಸಿಕೊಳ್ಳುತ್ತದೆ. ಇದರಿಂದಾಗಿ ಪರಿಶಿಷ್ಟರ ಕಲ್ಯಾಣಕ್ಕಾಗಿ ನಿರ್ದಿಷ್ಟ ಯೋಜನೆಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರದ ವಿವಿಧ ಇಲಾಖೆಗಳಿಗೆ ತಮ್ಮದೇ ನಿರ್ದಿಷ್ಟ ಗುರಿ ಇರುತ್ತದೆ.

ಆರೋಗ್ಯ ಇಲಾಖೆ ಆರೋಗ್ಯಕ್ಕೆ ಸಂಬಂಧಿಸಿದ ಕೆಲಸ ಮಾಡಿದರೆ, ಶಿಕ್ಷಣ ಇಲಾಖೆ ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸ ಮಾಡುತ್ತದೆ. ಇದೇ ರೀತಿ ಸರ್ಕಾರದ ಎಲ್ಲ ಇಲಾಖೆಗಳಿಗೂ ತನ್ನದೇ ನಿರ್ದಿಷ್ಟ ಕೆಲಸವಿರುತ್ತದೆ. ಈ ಕೆಲಸದ ನಡುವೆ ಅದು ಪರಿಶಿಷ್ಟರ ಕಲ್ಯಾಣಕ್ಕಾಗಿ ಪ್ರತ್ಯೇಕ ಯೋಜನೆ ರೂಪಿಸಿಕೊಳ್ಳಬೇಕು ಎಂದಾಗ ಗೊಂದಲಕ್ಕೆ ಒಳಗಾಗುತ್ತದೆ. ಪರಿಣಾಮ ಸರ್ಕಾರದ ಬಹುತೇಕ ಇಲಾಖೆಗಳು ಪರಿಶಿಷ್ಟರ ಕಲ್ಯಾಣಕ್ಕಾಗಿ ಇಷ್ಟು ಹಣವನ್ನು ವೆಚ್ಚ ಮಾಡಲೇಬೇಕು ಎಂಬ ಅನಿವಾರ್ಯತೆಯಿಂದ ಕೆಲಸ ಮಾಡುತ್ತವೆ. ಹೀಗೆ ಅನಿವಾರ್ಯತೆಗೆ ಸಿಲುಕಿ ಮಾಡುವ ಕೆಲಸ ನಿಜವಾಗಿಯೂ ಪರಿಶಿಷ್ಟರ ಕಲ್ಯಾಣವನ್ನು ಸಾಧಿಸುತ್ತವೆ ಎಂದು ಹೇಳುವುದು ಕಷ್ಟ.

ಹೀಗಾಗಿ ಇವತ್ತು ಎಸ್.ಸಿ.ಎಸ್.ಪಿ-ಟಿ.ಎಸ್.ಪಿ. ಕಾಯ್ದೆಯಡಿ ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಡುವ ಹಣವೇನಿದೆ ಇದನ್ನು ಸಿಂಗಲ್ ವಿಂಡೋ ಏಜೆನ್ಸಿಯ ಮೂಲಕ ಖರ್ಚು ಮಾಡಬೇಕು. ಪರಿಶಿಷ್ಟರ ಕಲ್ಯಾಣವನ್ನು ಸಾಧಿಸಲು ದಶಕಗಳಿಂದ ಕೆಲಸ ಮಾಡುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಇದನ್ನು ತರಬೇಕು.

ಹಾಗಾದಾಗ ಈ ಪ್ರಮಾಣದ ಹಣವನ್ನು ಬಳಸಿ ಪರಿಶಿಷ್ಟರ ಕಲ್ಯಾಣವನ್ನು ಪರಿಣಾಮಕಾರಿಯಾಗಿ ಸಾಧಿಸಬಹುದು. ಇಲ್ಲದಿದ್ದರೆ ಕಷ್ಟ. ಅಂದ ಹಾಗೆ ಎಸ್.ಸಿ.ಎಸ್.ಪಿ-ಟಿ.ಎಸ್.ಪಿ. ಕಾಯ್ದೆ ಜಾರಿಗೆ ಬಂದು ಸುಮಾರು ಒಂಬತ್ತು ವರ್ಷಗಳಾಗಿವೆ. ಈ ಅವಧಿಯಲ್ಲಿ ಕಾಯ್ದೆಯಡಿ ಎರಡು ಲಕ್ಷ ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ.

ಈ ಪ್ರಮಾಣದ ಹಣ ಪರಿಶಿಷ್ಟರ ಕಲ್ಯಾಣಕ್ಕಾಗಿ ನಿಜವಾಗಿ ಬಳಕೆಯಾಗಿದ್ದರೆ ಅವರು ದೊಡ್ಡ ಮಟ್ಟದಲ್ಲಿ ಸಮಾಜದ ಮುಖ್ಯವಾಹಿನಿಗೆ ಬರಬೇಕಿತ್ತು. ಆದರೆ ಅದು ಸಾಧ್ಯವಾಗಿದೆಯೇ ಅಂತ ನೋಡಿದರೆ ನಿರಾಸೆ ಮೂಡುತ್ತದೆ. ಹೀಗಾಗಿ ಪರಿಶಿಷ್ಟರ ಕಲ್ಯಾಣ ಆಗಲೇಬೇಕು ಎಂದಾದರೆ ಎಸ್.ಸಿ.ಎಸ್.ಪಿ-ಟಿ. ಎಸ್.ಪಿ. ಕಾಯ್ದೆಯ ರೂಪ ಬದಲಾಗಬೇಕು.

ಹಾಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ನೀವು ಪ್ರತಿಪಕ್ಷದವರಾಗಿ ಸಲಹೆ ನೀಡಬೇಕು ಅಂತ ಈ ಹಿರಿಯ ನಾಯಕರು ಹೇಳುತ್ತಿದ್ದರೆ ಉಳಿದವರು ಮೂಕ ವಿಸ್ಮಿತರಾಗಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ