Mysore
22
broken clouds

Social Media

ಶುಕ್ರವಾರ, 11 ಜುಲೈ 2025
Light
Dark

ಭವಿಷ್ಯದ ಅಧಿಕಾರಕ್ಕಾಗಿ ಬಿಜೆಪಿ-ಜಾ.ದಳ ಬೇಗುದಿ

ಕಳೆದ ವಾರ ಕೇಂದ್ರ ಸಚಿವ, ಜಾ.ದಳ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಸ್ವಪಕ್ಷೀಯರ ಮುಂದೆ ಒಂದು ಗಂಭೀರ ವಿಷಯವನ್ನು ಪ್ರಸ್ತಾಪಿಸಿದರು.

ರಾಜ್ಯದಲ್ಲಿ ಬಿಜೆಪಿ ಜತೆಗಿನ ಹೊಂದಾಣಿಕೆ ಪ್ರಕ್ರಿಯೆ ನಿರ್ಧಾರವಾಗುವುದು ದೆಹಲಿಯಲ್ಲಿ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆಷ್ಟು ಸೀಟು ಬೇಕೋ ಅದನ್ನು ನಾನು ತರುತ್ತೇನೆ. ಆದರೆ ಅದೇ ಕಾಲಕ್ಕೆ ನೀವು ನಿಮ್ಮ ಕ್ಷೇತ್ರಗಳನ್ನು ಗಟ್ಟಿ ಮಾಡಿಕೊಳ್ಳಿ ಎಂಬುದು ಅವರ ಪ್ರಸ್ತಾಪ.

ಅಂದ ಹಾಗೆ ಬಿಜೆಪಿ ಮತ್ತು ಜಾ.ದಳ ನಡುವಣ ಹೊಂದಾಣಿಕೆ ಈಗಾಗಲೇ ಅಸ್ತಿತ್ವದಲ್ಲಿದೆ ಮತ್ತು ಅದರ ಭಾಗವಾಗಿ ಸ್ವತಃ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಧಾನಿ ಮೋದಿಯವರ ಸಂಪುಟದಲ್ಲಿ ಪ್ರಭಾವಿ ಮಂತ್ರಿಯಾಗಿದ್ದಾರೆ. ಹೀಗಿರುವಾಗ ಅವರೇಕೆ ಇಂತಹ ಮಾತುಗಳನ್ನಾಡಿದರು? ಹಾಗೆಂಬುದೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ನೋಡುತ್ತಾ ಹೋದರೆ ಬಿಜೆಪಿ ಮತ್ತು ಜಾ.ದಳ ನಡುವಣ ಮೈತ್ರಿಗೆ ಸಂಬಂಧಿಸಿದಂತೆ ಹಲವು ಮುಖಗಳು ಅನಾವರಣಗೊಳ್ಳತೊಡಗುತ್ತವೆ. ಈ ಮುಖಗಳು ಕರ್ನಾಟಕದಲ್ಲಿ ಉಭಯ ಪಕ್ಷಗಳ ನಡುವಣ ಸಂಬಂಧ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂಬ ಭಾವನೆಯನ್ನು ದಟ್ಟವಾಗಿಸುತ್ತವೆ.

ನೇರವಾಗಿ ಹೇಳಬೇಕೆಂದರೆ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಾಧಿತವಾದ ಬಿಜೆಪಿ-ಜಾ.ದಳ ನಡುವಣ ಮೈತ್ರಿ ಒಂದು ಮಟ್ಟದಲ್ಲಿ ಆ ಪಕ್ಷಗಳಿಗೆ ಲಾಭ ತಂದುಕೊಟ್ಟಿದ್ದು ನಿಜ. ಏಕೆಂದರೆ ಇಂತಹದೊಂದು ಮೈತ್ರಿ ಕರ್ನಾಟಕದ ಪ್ರಬಲ ಲಿಂಗಾಯತ, ಒಕ್ಕಲಿಗ ಮತಗಳನ್ನು ದೊಡ್ಡ ಮಟ್ಟದಲ್ಲಿ ಕ್ರೋಢೀಕರಿಸಿ ಮಿತ್ರಕೂಟ ಹತ್ತೊಂಬತ್ತು ಕ್ಷೇತ್ರಗಳಲ್ಲಿ ಗೆಲ್ಲುವಂತಾಯಿತು.

ಈ ಪೈಕಿ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಜಾ.ದಳ ಗೆಲುವು ಸಾಧಿಸಿದರೆ, ಬಿಜೆಪಿ ಹದಿನೇಳು ಲೋಕಸಭಾ ಕ್ಷೇತ್ರಗಳಲ್ಲಿ ಜಯ ಗಳಿಸಿತು. ಪರಿಣಾಮವಾಗಿ ಜಾ.ದಳದ ರಾಜ್ಯಾಧ್ಯಕ್ಷಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವರಾಗಿ ನೆಲೆಯಾದರು. ಆದರೆ ದಿನ ಕಳೆದಂತೆ ಇಂತಹದೊಂದು ಮೈತ್ರಿಯ ವಿಷಯದಲ್ಲಿ ಬಿಜೆಪಿಯ ಒಂದು ಪಾಳೆಯ ನಿರಾಸಕ್ತಿ ತೋರುತ್ತಿದೆ. ನೇರವಾಗಿ ಹೇಳಬೇಕೆಂದರೆ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಜಾ.ದಳ ಜತೆಗಿನ ಸಖ್ಯ ಸುತರಾಂ ಇಷ್ಟವಿಲ್ಲ.

ಕಾರಣ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ತನ್ನ ಆಂತರಿಕ ಕಚ್ಚಾಟಗಳ ಕಾರಣದಿಂದಲೇ ಜನಪ್ರಿಯತೆ ಕಳೆದುಕೊಳ್ಳುವುದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಶಕ್ತಿಯಿಂದ ಗೆಲುವು ಗಳಿಸುತ್ತದೆ. ಹೀಗಿರುವಾಗ ಜಾ.ದಳದ ಜತೆಗಿನ ಸಖ್ಯವನ್ನು ಉಳಿಸಿಕೊಂಡರೆ ಅದಕ್ಕೆ ಇಂತಿಷ್ಟು ಸೀಟುಗಳನ್ನು ಬಿಟ್ಟುಕೊಡಬೇಕು. ಅದೇ ರೀತಿ ಬಿಜೆಪಿ ಜತೆಗಿನ ಸಖ್ಯದಿಂದ ಅದಕ್ಕೆ ಅನುಕೂಲವಾಗುವುದರಿಂದ ಅದು ಐವತ್ತರಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಗಳಿಸಿದರೂ ಭವಿಷ್ಯದ ಸರ್ಕಾರದಲ್ಲಿ ಪ್ರಬಲ ಪಾಲು ನೀಡಬೇಕಾಗುತ್ತದೆ.

ಈ ಪಾಲು ನೀಡುವಾಗ ಜಾ.ದಳದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಕ್ಕರೂ ಅಚ್ಚರಿಯಿಲ್ಲ. ಏಕೆಂದರೆ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಮೂಲೋತ್ಪಾಟನೆ ಮಾಡಲು ಹವಣಿಸುತ್ತಿರುವ ಬಿಜೆಪಿ ವರಿಷ್ಠರು, ತಮ್ಮ ಮಿತ್ರ ಎಂಬ ಕಾರ ಕ್ಕಾಗಿ ಜಾ.ದಳದ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಪಟ್ಟವನ್ನು ಬಿಟ್ಟುಕೊಡುವ ಔದಾರ್ಯವನ್ನು ತೋರಿಸಬಹುದು.

ಹಾಗೇನಾದರೂ ಆದರೆ ಕೈಗೆ ಬಂದ ಅಧಿಕಾರವನ್ನು ಸುಖಾಸುಮ್ಮನೆ ಬೇರೆಯವರಿಗೆ ಬಿಟ್ಟುಕೊಟ್ಟಂತಾಗುತ್ತದೆ ಎಂಬುದು ಬಿ.ವೈ. ವಿಜಯೇಂದ್ರ ಅವರ ಲೆಕ್ಕಾಚಾರ. ಎಲ್ಲಕ್ಕಿಂತ ಮುಖ್ಯವಾಗಿ ಅವರು ಒಂದರ ಹಿಂದೊಂದರಂತೆ ಮಾಡಿಸುತ್ತಿರುವ ರಹಸ್ಯ ಸರ್ವೆಗಳು ಕರ್ನಾಟಕದಲ್ಲಿ ತಕ್ಷಣವೇ ವಿಧಾನಸಭಾ ಚುನಾವಣೆ ನಡೆದರೆ ಬಿಜೆಪಿ ಸ್ವಯಂಬಲದ ಮೇಲೆ ನೂರಾ ಮೂವತ್ತೈದರಿಂದ ನೂರಾ ನಲವತ್ತೊಂಬತ್ತು ಕ್ಷೇತ್ರಗಳಲ್ಲಿ ಗೆಲುವು ಗಳಿಸಲಿದೆ ಅಂತ ಹೇಳತೊಡಗಿವೆ. ಹೀಗೆ ತಮ್ಮ ಕೈ ಸೇರುತ್ತಿರುವ ಸರ್ವೆ ವರದಿಗಳು ಇಂತಹದೊಂದು ಅಂಶವನ್ನು ಒತ್ತಿ ಹೇಳುತ್ತಿರುವುದರಿಂದ ವಿಜಯೇಂದ್ರ ಅವರಿಗೆ ಜಾ.ದಳದ ಜತೆಗಿನ ಸಖ್ಯವನ್ನು ಮುಂದುವರಿಸುವುದು ಅಷ್ಟು ಇಷ್ಟವಾಗುತ್ತಿಲ್ಲ. ನಮ್ಮ ಬಲದಿಂದ ನಾವೇ ಗೆಲುವು ಗಳಿಸಲು ಸಾಧ್ಯವಿರುವಾಗ ವಿನಾಕಾರಣ ಬೇರೆಯವರ ಜತೆ ಮೈತ್ರಿ ಏಕೆ ಬೇಕು ಎಂಬುದು ಅವರ ಯೋಚನೆ.

ಅಂದ ಹಾಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ವಯಂಬಲದ ಮೇಲೆ ನೂರಾ ಹದಿನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ನೇರವಾಗಿ ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿಯವರೇ ಬರಬಹುದು. ಅದರಲ್ಲೂ ಪಕ್ಷದ ರಾಜ್ಯಾಧ್ಯಕ್ಷರಾಗಿರುವಾಗ ತಾವೇ ಆ ಹುದ್ದೆಯ ರೇಸಿನಲ್ಲಿ ಮುಂಚೂಣಿಗೆ ಬರಬಹುದು. ಆದರೆ ಜಾ.ದಳ ಜತೆ  ಸೇರಿ ಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ಕುಮಾರಸ್ವಾಮಿ ಅವರೇ ಎಲ್ಲರಿಗಿಂತ ಮುಂದೆ ಇರುತ್ತಾರೆ. ಸಾಲದೆಂಬಂತೆ ತಾವು ಇಷ್ಟಪಡದೇ ಹೋದರೂ ಜಾ.ದಳ ಜತೆಗಿನ ಸಖ್ಯ ಅನಿವಾರ್ಯ ಎಂದು ಭಾವಿಸುವ ಬಿಜೆಪಿ ನಾಯಕರು ಕರ್ನಾಟಕದಲ್ಲೂ ಇದ್ದಾರೆ, ದಿಲ್ಲಿಯಲ್ಲೂ ಇದ್ದಾರೆ ಮತ್ತು ಇಂತಹ ನಾಯಕರಿಗೆ ಜಾ.ದಳ ಜತೆಗಿದ್ದರೆ ಮಾತ್ರ ತಾವು ಮುಖ್ಯಮಂತ್ರಿ ಹುದ್ದೆಯ, ಪ್ರಭಾವಿ ಸಚಿವ ಸ್ಥಾನದ ಕನಸು ಕಾಣಬಹುದು ಎಂಬ ಮುಂದಾಲೋಚನೆಯೂ ಇದೆ.

ಇವತ್ತು ಪಕ್ಷದ ರಾಜ್ಯಾಧ್ಯಕ್ಷ ಪಟ್ಟದಿಂದಲೇ ವಿಜಯೇಂದ್ರ ಅವರನ್ನು ಅಲುಗಾಡಿಲು ಇವರಿಗೆ ಸಾಧ್ಯವಾಗುತ್ತಿಲ್ಲ. ಕಾರಣ ರಾಜ್ಯದಲ್ಲಿರುವ ಮೂವತ್ತೊಂಬತ್ತು ಮಂದಿ ಜಿಲ್ಲಾಧ್ಯಕ್ಷರ ಪೈಕಿ ಮೂವತ್ತೈದು ಮಂದಿ ಅದಾಗಲೇ ವಿಜಯೇಂದ್ರ ಅವರ ಜತೆಗಿದ್ದಾರೆ. ಹೀಗಿರುವಾಗ ನಾಳೆ ಅವರ ಸಾರಥ್ಯದಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಿ ಗೆದ್ದು ಬಂದರೆ ನಿಸ್ಸಂಶಯವಾಗಿ ಅವರೇ ಮುಖ್ಯಮಂತ್ರಿ ಹುದ್ದೆಯ ಮುಂಚೂಣಿಯಲ್ಲಿರುತ್ತಾರೆ ಎಂಬುದು ರಾಜ್ಯ ಬಿಜೆಪಿಯ ಈ ನಾಯಕರ ಲೆಕ್ಕಾಚಾರ.

ಹೀಗಾಗಿ ಇತ್ತೀಚೆಗೆ ಕರ್ನಾಟಕಕ್ಕೆ ಬಂದಿದ್ದ ಪಕ್ಷದ ಉಸ್ತುವಾರಿ ರಾಧಾಮೋಹನದಾಸ್ ಅಗರ್ವಾಲ್ ಅವರೊಂದಿಗೆ ಮಾತನಾಡಿದ ಈ ನಾಯಕರು, ಕರ್ನಾಟಕದಲ್ಲಿ ಜಾ.ದಳದ ಜತೆ ಹೊಂದಿಕೊಂಡು ಹೋಗಲು ವಿಜಯೇಂದ್ರ ಆಸಕ್ತರಾಗಿಲ್ಲ. ಆದರೆ ಹಾಗೆ ಮೈತ್ರಿ ಇಲ್ಲದೆ ಹೋದರೆ ಅಹಿಂದ ವರ್ಗಗಳ ಮತ ಬ್ಯಾಂಕನ್ನು ತನ್ನ ಹಿಂದಿಟ್ಟುಕೊಂಡಿರುವ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಸಾಧ್ಯವಿಲ್ಲ ಎಂದು ದೂರು ಹೇಳಿದ್ದಾರೆ.ಇಂತಹ ದೂರನ್ನು ಕೇಳಿದ ರಾಧಾಮೋಹನದಾಸ್ ಅಗರ್ವಾಲ್ ಅವರು, ಕರ್ನಾಟಕದಲ್ಲಿ ಜಾ.ದಳ ಜತೆಗಿನ ಸಖ್ಯವನ್ನು ಉಳಿಸಿಕೊಂಡು ಹೋಗುವಂತೆ ವಿಜಯೇಂದ್ರ ಅವರಿಗೆ ಸೂಚಿಸಿದ್ದಾರಂತೆ. ಇಷ್ಟಾದರೂ ವಿಜಯೇಂದ್ರ ಪಾಳೆಯದ ಭಾವನೆ ಎಷ್ಟು ಬಿಸಿಯಾಗಿದೆ ಎಂದರೆ ಅದರ ಝಳ ಜಾ.ದಳ ನಾಯಕರಿಗೆ ತಟ್ಟಿದೆ.

ಹೀಗಾಗಿ ಅವರು ಬಿಜೆಪಿ ಜತೆಗಿನ ಮೈತ್ರಿ ಉಳಿಯುತ್ತದೋ ಇಲ್ಲವೋ ಎಂಬ ಸಂಶಯ ವ್ಯಕ್ತಪಡಿಸಿದ್ದರಿಂದ ಕುಮಾರಸ್ವಾಮಿಯವರೇ ರಂಗ ಪ್ರವೇಶಿಸಿದ್ದಾರೆ. ಮೈತ್ರಿಯ ವಿಷಯವನ್ನು ನಾನು ದಿಲ್ಲಿಯಲ್ಲಿ ಸೆಟ್ಲ್ ಮಾಡಿಕೊಂಡು ಬರುತ್ತೇನೆ. ಪಕ್ಷಕ್ಕೆ ಬೇಕಾದಷ್ಟು ಸೀಟುಗಳನ್ನೂ ಪಡೆದುಕೊಂಡು ಬರುತ್ತೇನೆ ಎಂದು ಸ್ವಪಕ್ಷೀಯರಿಗೆ ಅಭಯ ನೀಡಿದ್ದಾರೆ. ಕೊನೆಯ ಮಾತು: ಅಂದ ಹಾಗೆ ಜಾ.ದಳ ಜತೆಗಿನ ಸಂಬಂಧದ ಬಗ್ಗೆ ವಿಜಯೇಂದ್ರ ಅವರಿಗಿರುವ ಭಾವನೆಯ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಇಂತಹ ಮಾತುಗಳನ್ನಾಡಿದರಲ್ಲ , ಇದರ ಬೆನ್ನಲ್ಲೇ ಕಳೆದ ಶುಕ್ರವಾರ ದಿಲ್ಲಿಯಿಂದ ಬಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಜಯೇಂದ್ರ ಅವರಿಗೆ ಸ್ಪಷ್ಟ ಮಾತುಗಳಲ್ಲಿ ಜಾ.ದಳದ ಜತೆಗಿನ ಸಂಬಂಧ ಮುಂದುವರಿಯುತ್ತದೆ ಎಂದು ಹೇಳಿ ಹೋಗಿದ್ದಾರೆ. ಪರಿಣಾಮ ವಿಜಯೇಂದ್ರ ಗೊಂದಲಕ್ಕೆ ಬಿದ್ದಿದ್ದಾರೆ.

” ದಿನ ಕಳೆದಂತೆ ಇಂತಹದೊಂದು ಮೈತ್ರಿಯ ವಿಷಯದಲ್ಲಿ ಬಿಜೆಪಿಯ ಒಂದು ಪಾಳೆಯ ನಿರಾಸಕ್ತಿ ತೋರುತ್ತಿದೆ. ನೇರವಾಗಿ ಹೇಳಬೇಕೆಂದರೆ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಜಾ.ದಳ ಜತೆಗಿನ ಸಖ್ಯ ಸುತರಾಂ ಇಷ್ಟವಿಲ್ಲ”

– ಆರ್.ಟಿ.ವಿಠ್ಠಲಮೂರ್ತಿ 

Tags:
error: Content is protected !!