Mysore
19
scattered clouds

Social Media

ಗುರುವಾರ, 16 ಜನವರಿ 2025
Light
Dark

ನಾಗರಿಕತೆಯತ್ತ ಸಾಗಲು ಒಂದು ನೀತಿ ಸಂಹಿತೆ ಬೇಕಿದೆ ; ಭಾಗ-2

-ನಾ ದಿವಾಕರ

ಮುಕ್ತ ಮನಸಿನಿಂದ ಯೋಚಿಸಿದರೆ ಇಂದಿನ ಎಲ್ಲ ರಾಜಕೀಯ ನಾಯಕರೂ ಇದರಿಂದ ಕಲಿಯುವುದಿದೆ. ಬಹುಶಃ ಇದೇ ಸೌಜನ್ಯ ಮತ್ತು ಸಂಯಮವನ್ನು ನಮ್ಮ ಜನಪ್ರತಿನಿಧಿಗಳು ಕಾಪಾಡಿಕೊಂಡು ಬಂದಿದ್ದಲ್ಲಿ, ಇತ್ತೀಚಿನ ನಿರ್ಬಂಧಗಳು ಅನಪೇಕ್ಷಿತವಾಗುತ್ತಿದ್ದವು. ಆದರೆ ಭಾರತದ ಅಧಿಕಾರ ರಾಜಕಾರಣದ ಪರಿಭಾಷೆ ಮನುಜ ಸಂವೇದನೆಯನ್ನೂ ಕಳೆದುಕೊಂಡಿರುವುದನ್ನು ನಾವು ಕಾಣುತ್ತಿದ್ದೇವೆ.

ಒಂದು ನಾಗರಿಕ ಸಮಾಜವಾಗಿ ನಾವು ನಿರ್ಬಂಧಿಸಬೇಕಿರುವುದು ಕೇವಲ ಸಂಸದೀಯ ನೆಲೆಯ ಪರಿಭಾಷೆಯನ್ನೇ ಅಲ್ಲ. ಸಾರ್ವಜನಿಕ ಬದುಕಿನಲ್ಲೂ ಕಳೆದ ಎರಡು ಮೂರು ದಶಕಗಳಿಂದ ನಾವು ಆಲಿಸುತ್ತಿರುವ ರಾಜಕೀಯ ಪರಿಭಾಷೆಯನ್ನೇ ಮರುಪರಿಷ್ಕರಣೆಗೆ ಒಳಪಡಿಸಬೇಕಿದೆ. ಶಿಕ್ಷಣದಿಂದ ಅಧ್ಯಾತ್ಮದವರೆಗೆ, ಸಾಂಸ್ಕೃತಿಕ ನೆಲೆಯಿಂದ ಧಾರ್ಮಿಕ ನೆಲೆಗಳವರೆಗೆ ಸಮಾಜದಲ್ಲಿ ರಾಜಕೀಯ ಪ್ರಜ್ಞೆ ಸೂಕ್ಷ್ಮವಾಗಿ ನುಸುಳಿರುವುದರ ಹಿನ್ನೆಲೆಯಲ್ಲಿ ಇಂದಿನ ಯುವ ಪೀಳಿಗೆಗೆ, ಯುವ ಸಮಾಜಕ್ಕೆ ರಾಜಕೀಯ ನಾಯಕರೇ ಬೌದ್ಧಿಕ ಸ್ಫೂರ್ತಿಯಾಗುತ್ತಿದ್ದಾರೆ. ಡಾ ಬಿ ಆರ್ ಅಂಬೇಡ್ಕರ್‌ಅವರ ನಂತರ ಭಾರತ ಒಬ್ಬ ಸಮಾಜ ಸುಧಾರಕನನ್ನು ಕಂಡಿಲ್ಲ ಎಂಬ ಸುಡುವಾಸ್ತವ ನಮ್ಮ ಗಮನದಲ್ಲಿರಬೇಕಿದೆ. ಏಕೆಂದರೆ ಸುಧಾರಣೆಯ ಎಲ್ಲ ನೆಲೆಗಳನ್ನೂ ಆವಾಹಿಸಿಕೊಂಡಿರುವ ರಾಜಕೀಯ ಪ್ರಜ್ಞೆ ಸಮಾಜ ಸುಧಾರಣೆಯ ಪರಿಕಲ್ಪನೆಯನ್ನೇ ವಿಕೃತಗೊಳಿಸಿದೆ.

ಜಾತಿ, ಮತ, ಧರ್ಮ, ಪಂಥ, ಭಾಷಿಕ ಮತ್ತು ಪ್ರಾದೇಶಿಕ ಅಸ್ಮಿತೆಗಳ ನೆಲೆಯಲ್ಲೇ ಮಾನವ ಸಮಾಜದ ಬೌದ್ಧಿಕ ವಿಕಾಸವನ್ನು ನಿಷ್ಕರ್ಷೆಗೊಳಿಡುವ ಒಂದು ನವ ಸಂಸ್ಕೃತಿಗೆ ಭಾರತ ತೆರೆದುಕೊಳ್ಳುತ್ತಿದೆ. ಹಾಗಾಗಿಯೇ ಸಂಸ್ಕೃತಿ ಎನ್ನುವುದೂ ಸಹ ಸಾಪೇಕ್ಷವಾಗಿದೆ.

ಸಮಾಜ ಸುಧಾರಣೆಯ ಕೂಗು ಅಸ್ಮಿತೆಗಳ ಚೌಕಟ್ಟಿನಲ್ಲಿ ಬಂಧಿತವಾಗಿರುವ ಸಂದರ್ಭದಲ್ಲಿ ಆಧ್ಯಾತ್ಮಿಕ ಮಠಗಳೂ, ಧಾರ್ಮಿಕ ಕೇಂದ್ರಗಳೂ ತಮ್ಮ ಸಾಮಾಜಿಕ ಹಾಗೂ ಸಾಮುದಾಯಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ರಾಜಕೀಯ ವೇದಿಕೆಗಳನ್ನೆ ಚಿಮ್ಮುಹಲಗೆಯಂತೆ ಬಳಸಿಕೊಳ್ಳುತ್ತಿವೆ. ಹಾಗಾಗಿಯೇ ಸುಧಾರಣೆಯ ಸ್ವರಗಳೂ ಕ್ಷೀಣಿಸುತ್ತಲೇ ಬರುತ್ತಿದ್ದು, ಸಾಂಸ್ಕೃತಿಕ ಪರಿಭಾಷೆಯೂ ಸಾಪೇಕ್ಷವಾಗುತ್ತಿದೆ. ಮಠಾಧೀಶರು, ಮಠೋದ್ಯಮಿಗಳು ಮತ್ತು ಮಠಾಧಿಪತಿಗಳು ರಾಜಕೀಯ ಪರಿಭಾಷೆಯಲ್ಲೇ ಮಾತನಾಡುತ್ತಿರುವುದರಿಂದಲೇ ಇಂದಿನ ಯುವ ಸಮೂಹಕ್ಕೆ ರಾಜಕೀಯ ನಾಯಕರೇ ಆದರ್ಶಪ್ರಾಯರಾಗಿ ಕಾಣುತ್ತಿದ್ದಾರೆ.

ಈ ಸಂದರ್ಭದಲ್ಲಿ ಯುವ ಪೀಳಿಗೆಯಲ್ಲಿ ಒಂದು ಆಶಾದಾಯಕ ಭವಿಷ್ಯದ ಕಲ್ಪನೆಯನ್ನು ಬಿತ್ತಬೇಕಾದ ರಾಜಕೀಯ ನಾಯಕರು ಸಾರ್ವಜನಿಕ ಬದುಕಿನಲ್ಲಿ ಬಳಸುತ್ತಿರುವ ಭಾಷೆ ಮತ್ತು ನಡೆಸುತ್ತಿರುವ ಜೀವನ ಎಷ್ಟರ ಮಟ್ಟಿಗೆ ಸುಸಂಸ್ಕೃತತೆಯನ್ನು ಪೋಷಿಸುತ್ತದೆ ಎಂದು ಪ್ರಜ್ಞಾವಂತರಾದರೂ ಯೋಚಿಸಬೇಕಿದೆ .

ದ್ವೇಷ, ಈರ್ಷೆ, ಮತ್ಸರ, ಹಿಂಸೆ, ಅಸಹನೆ ಇವೆಲ್ಲವೂ ಇಂದಿನ ರಾಜಕೀಯ ನಾಯಕರ ಭಾಷಣಗಳಲ್ಲಿ, ಹೇಳಿಕೆಗಳಲ್ಲಿ ಮತ್ತು ಟ್ವೀಟ್‌ಗಳಲ್ಲಿ ವಿಪುಲವಾಗಿ ಕಾಣುತ್ತಲೇ ಬಂದಿದ್ದೇವೆ. ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡುವಾಗಲೂ ತಾವು ಒಂದು ನಾಗರಿಕ ಸಮಾಜದ ನಡುವೆ ಇದ್ದೇವೆ ಎಂಬ ಪರಿವೆಯೇ ಇಲ್ಲದೆ ಮಾತನಾಡುವ ಅನೇಕಾನೇಕ ರಾಜಕೀಯ ನಾಯಕರು ನಮ್ಮ ನಡುವೆ ಉದಯಿಸಿದ್ದಾರೆ, ರಾರಾಜಿಸುತ್ತಿದ್ದಾರೆ, ಮುನ್ನಡೆಯುತ್ತಿದ್ದಾರೆ. ಪರಸ್ಪರ ದೋಷಾರೋಪಣೆ ಮತ್ತು ಟೀಕೆಗಳಿಗೂ ರಾಜಕಾರಣಕ್ಕೂ ಅವಿನಾಭಾವ ಸಂಬಂಧವಿರುವುದು ಸತ್ಯ. ಆದರೆ ಈ ಟೀಕೆಗಳ ಸಂದರ್ಭದಲ್ಲಿ ಬಳಸುವ ಭಾಷೆಗೂ ಸಾರ್ವಜನಿಕ ಸುಪ್ರಜ್ಞೆಗೂ ಇದೇ ರೀತಿಯ ಸೂಕ್ಷ್ಮ ಸಂಬಂಧ ಇರುವುದನ್ನು ಸಾರ್ವಜನಿಕ ನಾಯಕರು ಗಮನಿಸಬೇಕಲ್ಲವೇ ?

ಇಂದಿನ ಬಹುತೇಕ ರಾಜಕೀಯ ನಾಯಕರಲ್ಲಿ ಈ ಪ್ರಜ್ಞೆ ಇದ್ದಂತೆ ಕಾಣುವುದಿಲ್ಲ. ಹಾಗಾಗಿಯೇ ಇದೇ ನಾಯಕರನ್ನು ಅನುಕರಿಸುವ ಯುವಪೀಳಿಗೆಯಲ್ಲೂ ಭಾಷಾ ಸೌಜನ್ಯ ಮತ್ತು ಸಂಯಮ ಕ್ಷೀಣಿಸುತ್ತಲೇ ಇದೆ.

ಸಾಮಾಜಿಕ ಮಾಧ್ಯಮಗಳಲ್ಲಿ, ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮುಂತಾದ ತಾಣಗಳಲ್ಲಿ, ಯುಟ್ಯೂಬ್‌ಗಳಲ್ಲಿ ಯುವ ಪೀಳಿಗೆಯಿಂದ ವ್ಯಕ್ತವಾಗುವ ಅಭಿಪ್ರಾಯಗಳನ್ನು ಗಮನಿಸಿದಾಗ, ನಮ್ಮ ಸಮಾಜ ನಾಗರಿಕತೆಯಿಂದ ವಿಮುಖವಾಗುತ್ತಿದೆಯೇ, ಸಂವೇದನಾಶೂನ್ಯವಾಗುತ್ತಿದೆಯೇ ಎಂಬ ಆತಂಕ ಮೂಡುತ್ತದೆ. ಸಾರ್ವಜನಿಕ ವಲಯವನ್ನು ಇನ್ನೂ ಹೆಚ್ಚು ಪ್ರಭಾವಿಸುವ ವಿದ್ಯುನ್ಮಾನ ದೃಶ್ಯಮಾಧ್ಯಮಗಳನ್ನು, ಟಿ ವಿ ವಾಹಿನಿಗಳ ಧಾರಾವಾಹಿಗಳನ್ನು ಮತ್ತು ಸುದ್ದಿಮನೆಗಳ ನಿರೂಪಕರ ಮಾತಿನ ಶೈಲಿಯನ್ನು ಗಮನಿಸುತ್ತಾ ಹೋದರೆ ಈ ಆತಂಕಗಳೇ ಆಘಾತಕ್ಕೆ ಎಡೆಮಾಡಿಕೊಡುತ್ತದೆ. ರಾಜಕೀಯ ನಾಯಕರಿಗೆ ಭಾಷಾ ಸೌಜನ್ಯವನ್ನು ಕಾಪಾಡಿಕೊಳ್ಳುವಂತೆ ಎಚ್ಚರಿಸುವ ನೈತಿಕ ಹೊಣೆ ಹೊರಬೇಕಾದ ಮಾಧ್ಯಮಗಳು ಇಂದು ಆ ನೈತಿಕತೆಯನ್ನೇ ಕಳೆದುಕೊಳ್ಳುವ ಮಟ್ಟಿಗೆ ಸೌಜನ್ಯ-ಸಂಯಮ ಮತ್ತು ಸಂವೇದನೆಯನ್ನು ಕಳೆದುಕೊಂಡಿವೆ.

ದಿನನಿತ್ಯ ಕೋಟ್ಯಂತರ ಯುವಜನರನ್ನು ನೇರವಾಗಿ ತಲುಪುವ ಈ ಸಂವಹನ ಮಾಧ್ಯಮಗಳಲ್ಲಿ ಭಾಷಾ ಸೌಜನ್ಯ ಮತ್ತು ಸಂಯಮ ಇಲ್ಲವಾದರೆ, ಸಮಾಜ ಸುಧಾರಣೆ ಹೇಗೆ ಸಾಧ್ಯವಾದೀತು ? ಇದು ಯೋಚಿಸಬೇಕಾದ ವಿಚಾರ. ಈ ವಿಕೃತಿಯು ದಿನಗಳೆದಂತೆ ಹೆಚ್ಚಾಗುತ್ತಲೇ ಹೋಗುತ್ತಿದ್ದರೆ ಅದಕ್ಕೆ ರಾಜಕೀಯ ನಾಯಕರೂ ಭಾಗಶಃ ಹೊಣೆ ಹೊರಬೇಕಾಗುತ್ತದೆ. ಅಪರಾಧಗಳ ಮೂಟೆಗಳನ್ನು ಹೊತ್ತು ಶಾಸನಸಭೆಗಳನ್ನು ಪ್ರವೇಶಿಸುವ ಜನಪ್ರತಿನಿಧಿಗಳಲ್ಲಿ ಈ ನೈತಿಕತೆಯನ್ನು ಅಪೇಕ್ಷಿಸಲೂ ಸಾಧ್ಯವಿಲ್ಲ. ಎಷ್ಟೇ ಕ್ಷುಲ್ಲಕ ಎನಿಸಿದರೂ, ಅಪರಾಧಗಳಿಂದ ಕಳಂಕಿತರಾದವರನ್ನು ಅಧಿಕಾರ ರಾಜಕಾರಣದಿಂದ ದೂರ ಇರಿಸುವ ಇಚ್ಚಾಶಕ್ತಿಯನ್ನು ರಾಜಕೀಯ ವ್ಯವಸ್ಥೆ ಕಳೆದುಕೊಂಡಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ, ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿಯೂ ಸಹ ಇದನ್ನು ಅಪೇಕ್ಷಿಸಲಾಗದಷ್ಟು ಮಟ್ಟಿಗೆ ಅಪರಾಧ ಮತ್ತು ಪಾಪಪ್ರಜ್ಞೆಯನ್ನು ಸಾಪೇಕ್ಷಗೊಳಿಸಲಾಗಿದೆ. ಅಸ್ಮಿತೆಗಳ ಚೌಕಟ್ಟಿನಲ್ಲಿ ಅಪರಾಧಗಳನ್ನೂ ವಿವೇಚಿಸುವ ಒಂದು ಹೊಸ ಪರಂಪರೆಯನ್ನೇ ಹುಟ್ಟುಹಾಕಲಾಗಿದ್ದು, ಸಾರ್ವಜನಿಕವಾಗಿ ಅನಪೇಕ್ಷಿತವಾದ ಎಲ್ಲ ಅವಗುಣಗಳನ್ನೂ ಯಾವುದೋ ಒಂದು ಅಸ್ಮಿತೆಯ ಚೌಕಟ್ಟಿನಲ್ಲಿ ಅಪೇಕ್ಷಿತವಾಗಿ ಅಥವಾ ಸಹನೀಯವಾಗಿ ಕಾಣಲಾಗುತ್ತಿದೆ.

ಇಂದು ಸಮಾಜದಲ್ಲಿ ಜಾತಿ, ಮತ, ಧರ್ಮಗಳ ನೆಲೆಯಲ್ಲಿ ಅಸಹಿಷ್ಣುತೆ ಆಳವಾಗಿ ಬೇರೂರುತ್ತಿದೆ. ಅಸಹಿಷ್ಣುತೆ ಇರಲೇಬೇಕೆಂದರೆ ಅದು ಈ ಅವಗುಣಗಳ ಬಗ್ಗೆ ಇರಬೇಕಾಗುತ್ತದೆ. ಸಮಾಜದ ಸ್ವಾಸ್ಥ್ಯ ಮತ್ತು ಮನುಜ ಸಂವೇದನೆಯನ್ನು ಭಂಗಗೊಳಿಸುವ ಯಾವುದೇ ಭಾಷೆ ಅಥವಾ ಪರಿಭಾಷೆಯನ್ನು ನಾವು ಸಹಿಸಿಕೊಳ್ಳಲಾರೆವು ಎಂಬ ಸಂದೇಶವನ್ನು ಸಮಾಜ ನೀಡಬೇಕಿದೆ. ಹೀಗೆ ಅಧಿಕಾರಯುತವಾಗಿ ಆದೇಶಿಸಬೇಕಾದ ಒಂದು ಸಮಾಜವನ್ನು ರೂಪಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.

ಸಂಸತ್ ಕಲಾಪಗಳಿಂದ ನಿರ್ಬಂಧಿತವಾಗಿರುವ ಪದಗಳಷ್ಟೇ ಅಲ್ಲದೆ, ಸಾಮಾಜಿಕ ಸಂವೇದನೆಯನ್ನೇ ಹಾಳುಗೆಡಹುವಂತಹ ಅನೇಕಾನೇಕ ಪದಗಳು, ಪದಗುಚ್ಚಗಳು ನಮ್ಮ ಸಾರ್ವಜನಿಕ ಜೀವನದಲ್ಲಿ ರಾರಾಜಿಸುತ್ತಿವೆ. ಈ ಪದಬಳಕೆಯನ್ನು ಶಾಸನಬದ್ಧವಾಗಿ ನಿಷೇಧಿಸಲಾಗುವುದಿಲ್ಲ. ಆದರೆ ಒಂದು ಆರೋಗ್ಯಕರ ಸಮಾಜವನ್ನು ನಿರ್ಮಿಸುವ ಸದುದ್ದೇಶವನ್ನು ಹೊಂದಿರುವುದೇ ಆದರೆ ಪ್ರತಿಯೊಬ್ಬ ನಾಗರಿಕನೂ ಸ್ವಪ್ರೇರಣೆಯಿಂದ ಈ ನಿಷೇಧವನ್ನು ಹೇರಿಕೊಳ್ಳಬಹುದು.

ರಾಜಕೀಯ ನಾಯಕರು ಈ ನಿಟ್ಟಿನಲ್ಲಿ ಮುಂದಾಳತ್ವ ವಹಿಸುತ್ತಾರೆ ಎಂದು ಭಾವಿಸುವುದು ಅತ್ಯುತ್ಪ್ರೇಕ್ಷೆಯಾಗುತ್ತದೆ. ಆದರೆ ನಾಗರಿಕತೆಯತ್ತ ಸಾಗುತ್ತಿರುವ ಒಂದು ಸಮಾಜ ಮತ್ತು ಈ ಸಮಾಜ ಮುಂದಾಳತ್ವ ವಹಿಸಲು ಬಯಸುವ ಯಾವುದೇ ಸಾಂಸ್ಕೃತಿಕ ವೇದಿಕೆಗಳು ಈ ನಿಟ್ಟಿನಲ್ಲಿ ಯೋಚಿಸಬಹುದು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ