ಮಹಿಳಾ ಕುಸ್ತಿಪಟುಗಳು ನೀವ್ ಕಣ್ಣೀರ್ ಸುರಿಸಿದರೇನು, ಉಪವಾಸ ಕುಳಿತು ಸತ್ತರೆ ನಮಗೇನು, ಪೊಲೀಸ್ ಲಾಠಿ ಬೂಟಿನೇಟು ತಿಂದ್ರೇನು… ಒಲಿಂಪಿಕ್ ಪದಕಗಳನ್ನೆಲ್ಲ ಗಂಗೆಗೆ ತರ್ಪಣ ಬಿಟ್ಟರೆ ನಮಗೇನು, ಲೋಕಸಭೆ ಚುನಾವಣೇಲಿ ಸೀಟು ಗೆಲ್ಲೋದೇ ಮುಖ್ಯ… ಗೆಲ್ಲಿಸಿಕೊಡುವ ನಮ್ಮ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಕಟ್ಟಕಡೇವರೆಗೂ ರಕ್ಷಣೆ ಮಾಡೋದೇ ಸೈ ಅಂತ ಹೊರಟಿದ್ದಾರೆ ಪ್ರಧಾನಮಂತ್ರಿ ನರೇಂದ್ರ ಮೋದಿ.
ಉತ್ತರ ಪ್ರದೇಶದ ಪ್ರಚಂಡ ಪಾತಕಿ ಬ್ರಿಜ್ ಭೂಷಣ್ ಶರಣ್ ಕಳೆದ ಹನ್ನೊಂದು ವರ್ಷಗಳಿಂದ ಭಾರತೀಯ ಕುಸ್ತಿ ಫೆಡರೇಷನ್ನಿನ ಅಧ್ಯಕ್ಷ. ಆರು ಸಲ ಲೋಕಸಭೆಗೆ ಆಯ್ಕೆಯಾಗಿ ಬಂದಿದ್ದಾನೆ. ತನ್ನ ತವರು ಜಿಲ್ಲೆ ಗೊಂಡಾ ಮತ್ತು ಸುತ್ತಮುತ್ತಲ ಐದಾರು ಜಿಲ್ಲೆಗಳಲ್ಲಿ ಈತನ ದಟ್ಟ ಪ್ರಭಾವ ಹಬ್ಬಿ ನೆಲೆಸಿದೆ.
ಬಹ್ರೇಚ್, ಗೊಂಡಾ, ಬಲರಾಂಪುರ್, ಶ್ರಾವಸ್ತಿ ಹಾಗೂ ಅಯೋಧ್ಯಾ ಜಿಲ್ಲೆಗಳಲ್ಲಿ ಈತನ ಐವತ್ತು ಶಿಕ್ಷಣ ಸಂಸ್ಥೆಗಳಿವೆ. ಈ ಸಂಸ್ಥೆಗಳು ಈತನ ರಾಜಕೀಯ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಿವೆ. ತನ್ನ ಸೀಮೆಯಲ್ಲಿ ಈತ ಬಿಜೆಪಿಗಿಂತ ಬಲಿಷ್ಠ. ಇವನಿಗೆ ಬಿಜೆಪಿಯ ಅಗತ್ಯವಿರುವುದಕ್ಕಿಂತ ಹೆಚ್ಚಾಗಿ, ಬಿಜೆಪಿಗೆ ಇವನ ಅಗತ್ಯವಿದೆ.
ತಮ್ಮ ಭವಿಷ್ಯಕ್ಕಾಗಿ ಹಲ್ಲುಕಚ್ಚಿ ಸಹಿಸಿಕೊಂಡಿದ್ದ ಮಹಿಳಾ ಕುಸ್ತಿ ಪಟುಗಳು ಇವನ ಲೈಂಗಿಕ ಶೋಷಣೇನ ಇನ್ನು ತಡೆಯಲಾರೆವು ಎಂಬ ಹಂತ ಮುಟ್ಟಿ ಬಹಿರಂಗ ಪ್ರತಿಭಟನೆಗೆ ಇಳಿದರು. ಬ್ರಿಜ್ ಭೂಷಣನ ವಿರುದ್ಧ ಎಫ್‌ಐಆರ್ ದಾಖಲಿಸಿ ಕೊಳ್ಳಲು ದೆಹಲಿ ಪೊಲೀಸರು ನಿರಾಕರಿಸಿದರು.
ಒಂದು ಸಾಧಾರಣ ಎಫ್‌ಐಆರ್ ದಾಖಲಿಸಲು ಕಡೆಗೆ ಈ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಆದೇಶ ನೀಡಬೇಕಾಗುತ್ತದೆ ಎಂಬುದೇ ಬಹುದೊಡ್ಡ ವಿಡಂಬನೆ. ಕಡೆಗೂ ದೆಹಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ಬ್ರಿಜ್ ಭೂಷಣ್ ವಿರುದ್ಧ ದಾಖಲಿಸುತ್ತಾರೆ. ‘ದಿ ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಯ ವರದಿಗಾರ್ತಿ ಜಿಜ್ಞಾಸಾ ಸಿಂಗ್ ಈ ಎಫ್‌ಐಆರ್‌ಗಳನ್ನು ಜಾಲಾಡಿ ವರದಿ ಮಾಡಿದ್ದಾರೆ.
ಈ ವರದಿಯ ಪ್ರಕಾರ ಆರು ಮಂದಿ ವಯಸ್ಕ ಮಹಿಳಾ ಕುಸ್ತಿಪಟುಗಳ ಆಪಾದನೆಗಳನ್ನು ಮೊದಲನೆಯ ಎಫ್‌ಐಆರ್ ದಾಖಲಿಸಿದೆ.
ಎರಡನೆಯ ಎಫ್‌ಐಆರ್‌ನಲ್ಲಿ ಅಪ್ರಾಪ್ತ ವಯಸ್ಸಿನ ಕುಸ್ತಿಪಟುವಿನ ತಂದೆ ಮಾಡಿರುವ ಆಪಾದನೆಗಳಿವೆ. ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯಿದೆ (ಪೋಕ್ಸೋ)ಯನ್ನು ಬ್ರಿಜ್ ಭೂಷಣ್‌ಗೆ ಅನ್ವಯಿಸಲಾಗಿದೆ. ಮೊದಲನೆಯ ಎಫ್‌ಐಆರ್‌ನ ಆಪಾದನೆಗಳು ರುಜುವಾತಾದರೆ ಬ್ರಿಜ್‌ಭೂಷಣನಿಗೆ ಒಂದರಿಂದ ಮೂರು ವರ್ಷಗಳ ಜೈಲು ಶಿಕ್ಷೆಯಾಗಬೇಕು. ಎರಡನೆಯ ಎಫ್‌ಐಆರ್ ಪ್ರಕಾರ ಐದರಿಂದ ಏಳು ವರ್ಷಗಳ ಸಜೆ ಅನುಭವಿಸಬೇಕು.
ಅಪ್ರಾಪ್ತ ವಯಸ್ಸಿನ ಕುಸ್ತಿಪಟುವಿನ ತಂದೆಯ ದೂರಿನ ಪ್ರಕಾರ ತನ್ನ ಮಗಳು ತೀವ್ರ ಮಾನಸಿಕ ಕ್ಷೋಭೆಗೆ ಗುರಿಯಾಗಿದ್ದು, ಮಾಮೂಲಿನಂತಿಲ್ಲವಾಗಿದ್ದಾಳೆ. ಬ್ರಿಜ್ ಭೂಷಣನ ಲೈಂಗಿಕ ಕಿರುಕುಳ ಆಕೆಯನ್ನು ಈಗಲೂ ಮಾನಸಿಕವಾಗಿ ಎಡೆಬಿಡದೆ ಕಾಡಿದೆ. ಅಪ್ರಾಪ್ತ ವಯಸ್ಸಿನ ಕುಸ್ತಿಪಟು ಹೇಳುತ್ತಾಳೆ– ಪೋಟೋ ತೆಗೆಯಿಸಿಕೊಳ್ಳುವ ನೆಪದಲ್ಲಿ ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡ ಬ್ರಿಜ್ ಭೂಷಣ್, ಹಿಂಡುತ್ತ ತನ್ನೆಡೆಗೆ ಸೆಳೆದುಕೊಳ್ಳುತ್ತಾನೆ. ಆಕೆಯ ಭುಜವನ್ನು ಗಟ್ಟಿಯಾಗಿ ಅದುಮುತ್ತಾನೆ, ಆಕೆಯ ಸ್ತನಗಳನ್ನು ತನ್ನ ಹಸ್ತಗಳಿಂದ ಗಟ್ಟಿಯಾಗಿ ಸವರುತ್ತಾನೆ.
ಬ್ರಿಜ್ ಭೂಷಣನೊಂದಿಗೆ ಯಾವುದೇ ದೈಹಿಕ ಸಂಬಂಧ ತನಗೆ ಇಷ್ಟವಿಲ್ಲವೆಂದೂ, ತನ್ನನ್ನು ಬೆನ್ನುಹತ್ತಿ ಕಾಡುವುದನ್ನು ನಿಲ್ಲಿಸುವಂತೆ ನಿಚ್ಚಳವಾಗಿ ಹೇಳಿದರೂ ಅವನು ಕಿವಿ ಮೇಲೆ ಹಾಕಿಕೊಳ್ಳುವುದಿಲ್ಲ.
ವಯಸ್ಕ ಮಹಿಳಾ ಕುಸ್ತಿಪಟುಗಳ ಎಫ್‌ಐಆರ್‌ನಲ್ಲಿರುವ ಲೈಂಗಿಕ ಹಲ್ಲೆಯ ವಿವರಗಳು ಬೆಚ್ಚಿ ಬೀಳಿಸುವಂತಿವೆ.
ಮೊದಲನೆಯ ಮಹಿಳಾ ಕುಸ್ತಿಪಟು ತೋಡಿಕೊಂಡಿರುವ ಸಂಕಟ ಹೀಗಿದೆ–
ಒಂದು ದಿನ ನಾನು ಹೋಟೆಲಿನ ರೆಸ್ಟುರಾದಲ್ಲಿ ಊಟ ಮಾಡ್ತಿದ್ದಾಗ ಬ್ರಿಜ್ ಭೂಷಣ್ ಶರಣ್ ಸಿಂಗ್ ಫೋನ್ ಮಾಡಿ ತನ್ನ ಡೈನಿಂಗ್ ಟೇಬಲ್‌ಗೆ ಬರೋಕೆ ಹೇಳಿದ… ನನ್ಗೆ ಆಘಾತ ಆಶ್ಚರ್ಯ ಆಗಿದ್ದೇನಂದ್ರೆ ಇವ್ನು ನನ್ ಅನುಮತಿ ಇಲ್ಲದೇನೇ ನನ್ನ ಸ್ತನದ ಮೇಲೆ ಕೈ ಹಾಕಿ ತಡಕಾಡಿದ ಮತ್ತೆ ಕೈಯನ್ನು ನನ್ನ ಹೊಟ್ಟೇ ತನಕ ಕೆಳಕ್ಕೆ ಜಾರಿಸಿದ. ನನ್ಗೆ ಈಗ್ಲೂ ನಂಬೋಕೆ ಆಗ್ತಿಲ್ಲ, ಅವ್ನು ಅಲ್ಲಿಗೇ ನಿಲ್ಲಿಸ್ಲಿಲ್ಲ, ಮತ್ತೇ ಕೈಯನ್ನ ಮೇಲಕ್ಕೆ ನನ್ನ ಸ್ತನದತ್ತ ಮೇಲೆ ತಂದ. ನನ್ನ ಸ್ತನವನ್ನ ತಡಕಾಡಿ ಪುನಾ ಕೆಳಜಾರಿಸಿದ. ಮೂರ್ನಾಲ್ಕು ಸಲ ಮತ್ತೆ ಮತ್ತೆ ಕೈಯಾಡಿಸಿದ.
ಭಾರತೀಯ ಕುಸ್ತಿ ಫೆಡರೇಷನ್‌ನ ಕಚೇರೀಲಿ ನನ್ ಅಂಗೈ, ಮೊಣಕಾಲು, ತೊಡೆಗಳು, ಭುಜಗಳನ್ನು ನನ್ನ ಅನುಮತಿ ಇಲ್ಲದೇನೇ ಮುಟ್ಟಿದ. ಆ ಗಳಿಗೇಲಿ ನಾನು ಕೋಪ ಅಸಹ್ಯದಿಂದ ನಡುಗತೊಡಗಿದ್ದೆ. ಕುಳಿತುಕೊಂಡಾಗ ನನ್ ಕಾಲನ್ನ ಅವ್ನ ಕಾಲಿಂದ ಟಚ್ ಮಾಡ್ತಿದ್ದ… ಮೊಣಕಾಲುಗಳನ್ನ ಮುಟ್ಟಿದ… ನನ್ ಉಸಿರಾಟ ಚೆಕ್ ಮಾಡ್ತೀನಿ ಅಂತ ನೆಪ ಹೇಳಿ ನನ್ ಸ್ತನದ ಮೇಲೆ ಕೈಯಿಟ್ಟು ಹೊಟ್ಟೆ ತನಕಾ ಜಾರಿಸಿದ.
ಎರಡನೆಯ ಕುಸ್ತಿಪಟು ಹೇಳ್ತಾರೆ… ನಾನು ಚಾಪೆ ಮೇಲೆ ಮಲ್ಗಿದ್ದೆ. ಬ್ರಿಜ್ ಭೂಷಣ್ ನನ್ ಹತ್ರ ಬಂದು ಬಗ್ಗಿ ನನ್ ಪರ್ಮಿಶನ್ ಇಲ್ದೇನೇ ನನ್ ಟೀ ಶರ್ಟ್ ಮೇಲಕ್ಕೆ ಸರಿಸಿ ಸ್ತನದ ಮೇಲೆ ಕೈ ಇಟ್ಟು ಹೊಟ್ಟೆ ತಂಕಾ ಜಾರಿಸ್ದ. ನನ್ ಉಸಿರಾಟ ಚೆಕ್ ಮಾಡ್ತೀನಿ ಅಂತ ನೆಪ ಹೇಳ್ದ. ಮತ್ತೊಮ್ಮೆ ಫೆಡರೇಷನ್ ಆಫೀಸಿಗೆ ಹೋದಾಗ ಬ್ರಿಜ್‌ಭೂಷಣ್ ರೂಮಿಗೆ ನನ್ನನ್ನು ಕರೆಯಲಾಯ್ತು. ನನ್ ಜೊತೆ ಇದ್ದ ನನ್ನ ಸೋದರನನ್ನ ತಡೆದು ಹೊರಗಡೆಯೇ ನಿಲ್ಲಿಸಲಾಯಿತು. ಉಳಿದೋರು ರೂಮಿಂದ ಹೊರ ಹೋದನಂತರ ಬ್ರಿಜ್ ಭೂಷಣ್ ಬಾಗಿಲು ಹಾಕಿ ನನ್ನನ್ನ ತನ್ನತ್ತ ಎಳಕೊಂಡು, ಬಲಾತ್ಕಾರವಾಗಿ ದೈಹಿಕ ಸಂಪರ್ಕ ಬೆಳಸೋಕೆ ಪ್ರಯತ್ನ ಮಾಡ್ದ.
ಮೂರನೆಯ ಕುಸ್ತಿಪಟು–ಅವ್ನು ನನ್ ಅಪ್ಪ ಅಮ್ಮನ ಜೊತೆ ಪೋನ್‌ನಲ್ಲಿ ಮಾತಾಡಿಸಿದ… ಆಗ ನನ್ ಹತ್ತಿರ ನಂದೇ ಮೊಬೈಲ್ ಇರ್ಲಿಲ್ಲ. ಬ್ರಿಜ್ ಭೂಷಣ್ ತನ್ ಹಾಸಿಗೇ ಮೇಲೆ ಕುಳಿತಿದ್ದ, ನನ್ನೂ ಹಾಸಿಗೇಗೆ ಕರೆದ. ಏಕಾಏಕಿ ನನ್ನ ನನ್ ಪರ್ಮಿಶನ್ ಇಲ್ದೇನೇ ಬಲವಂತವಾಗಿ ಗಟ್ಟಿಯಾಗಿ ತಬ್ಕೊಂಡ.
ತನ್ನ ಲೈಂಗಿಕ ಇರಾದೆ ತೀರಿಸಿಕೊಳ್ಳೋಕೆ, ನನಗೆ ಲಂಚ ಕೊಡಕ್ಕೂ ಟ್ರೈ ಮಾಡಿದ. ನನ್ನ ಸಪ್ಲಿಮೆಂಟ್ಸ್‌ನ (ಕುಸ್ತಿಪಟುಗಳು ಸೇವಿಸುವ ಹೆಚ್ಚುವರಿ ಪ್ರೊಟೀನ್ ಲೇಹ್ಯ) ತಾನೇ ಖರೀದಿಸಿ ಕೊಡ್ತೀನಿ ಅಂದ. ತನ್ನ ಲೈಂಗಿಕ ಬೇಡಿಕೆ ಈಡೇರಿಸಿದ್ರೆ ಸಪ್ಲಿಮೆಂಟ್ಸ್ ಕೊಡಿಸ್ತೀನಿ ಅಂದ. ನಾಲ್ಕನೆಯ ಕುಸ್ತಿಪಟು– ಬ್ರಿಜ್ ಭೂಷಣ್ ನನ್ನ ಕರೆದು ನನ್ ಟೀ ಶರ್ಟಲ್ಲಿ ಕೈ ಹಾಕಿ ಹೊಟ್ಟೇ ತಂಕ ಇಳೀಬಿಟ್ಟ. ಉಸಿರಾಟ ಚೆಕ್ ಮಾಡ್ತೀನಿ ಅಂತ ಹೇಳಿ ನನ್ನ ಹೊಕ್ಕುಳ ಮೇಲೆ ಕೈಯಿಟ್ಟ. ಹೀಗೆ ಇವನ ಚಾಳಿ ಗೊತ್ತಿದ್ದಿದ್ರಿಂದ ನಾವೆಲ್ಲ ಹುಡ್ಗೀರು ಉಪಾಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟಕ್ಕೆ ಒಬ್ಬೊಬ್ರೇ ಹೋಗ್ದೇನೆ ಗುಂಪು ಗುಂಪಲ್ಲಿ ಹೋಗೋದು ಅಂತ ತೀರ್ಮಾನ ಮಾಡಿದೆವು.
ಐದನೆಯ ಕುಸ್ತಿಪಟು– ಟೀಮ್ ಫೋಟೋ ತೆಗೆಸಿಕೊಳ್ಳಕ್ಕೇಂತ ನಾನು ಕಡೇ ಸಾಲಲ್ಲಿ ನಿಂತಿದ್ದೆ. ಬ್ರಿಜ್ ಭೂಷಣ್ ಬಂದು ನನ್ ಪಕ್ಕ ನಿಂತ. ಸಡನ್ನಾಗಿ ನನ್ ನಿತಂಬದ ಮೇಲೆ ಅವನ ಕೈ ಫೀಲಾಯ್ತು. ಅಲ್ಲಿಂದ ಹೊರಡೋಕೆ ಪ್ರಯತ್ನ ಮಾಡಿದೆ. ಆದ್ರೆ ನನ್ ಭುಜಾ ಒತ್ತಿ ಹಿಡಿದು ಬಲ್ವಂತವಾಗಿ ಅಲ್ಲೇ ನಿಲ್ಲಿಸಿದ.
ಆರನೆಯ ಕುಸ್ತಿಪಟು– ನನ್ ಜೊತೆ ಫೋಟೋ ತೆಗೆಸ್ಗೊಳೋ ನೆಪ ಹಾಕಿ ನನ್ ಭುಜಾ ಹಿಡ್ದು ತನ್ನತ್ತ ಎಳಕೊಂಡ… ನನ್ನನ್ ನಾನು ರಕ್ಷಣೆ ಮಾಡ್ಕೋಬೇಕಿತ್ತು… ಹಿಂಗಾಗಿ ಅವ್ನಿಂದ ದೂರ ಸರಕೊಂಡೆ… ಅವ್ನ ನಡವಳಿಕೆ ಸ್ವಲ್ಪಾನೂ ಹಿಡಿಸ್ಲಿಲ್ಲ, ಅಲ್ಲಿಂದ ಪರಾರಿಯಾಗೋಕೆ ಅವನನ್ನ ದೂರ ತಳ್ತಾನೇ ಇದ್ದೆ. ಆಗ ನಂಗೆ ಬೆದರಿಕೆ ಹಾಕ್ದ– ಭಾಳಾ ಸ್ಮಾರ್ಟ್ ಆಗಕ್ಕೆ ನೋಡ್ತಿದ್ದೀಯಾ… ಮುಂದೆ ಯಾವ್ದೇ ಕಾಂಪೀಟೇಷನಲ್ಲ್ಲಿ ಆಡೋ ಇಷ್ಟ ಇಲ್ವಾ ಅಂತಾ ಆವಾಜ್ ಹಾಕ್ದ.
ತನ್ನ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಹಾಸ್ಟೆಲ್ ಕೊಠಡಿಯಲ್ಲಿ ಸ್ನಾನ ಮಾಡ್ತಿರೋ ಹತ್ತಾರು ವಿಡಿಯೋ ಕ್ಲಿಪ್‌ಗಳನ್ನಿಟ್ಟುಕೊಂಡು ಆಕೆಯನ್ನು ಲೈಂಗಿಕವಾಗಿ ಶೋಷಿಸಿದವನು ಸ್ವಾಮಿ ಚಿನ್ಮಯಾನಂದ ಅಲಿಯಾಸ್ ಕೃಷ್ಣಪಾಲ್ ಸಿಂಗ್. ವಾಜಪೇಯಿ ಮಂತ್ರಿಮಂಡಲದಲ್ಲಿದ್ದವನು. ಉತ್ತರಪ್ರದೇಶದ ಜೌನ್ಪುರದಿಂದ ಲೋಕಸಭೆಗೆ ಆರಿಸಿ ಬಂದಿದ್ದವನು. ಉನ್ನಾಂವ್ನ ಅಸಹಾಯಕ ಕುಟುಂಬದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದವನು ಬಿಜೆಪಿ ಶಾಸಕ ಕುಲದೀಪ್ ಸೆಂಗರ್. ಇವರಿಬ್ಬರನ್ನೂ ಕಡೆಯ ಗಳಿಗೆಯ ತನಕ ರಕ್ಷಿಸಲು ಬಿಜೆಪಿ ನಡೆಸಿದ ಕರಾಮತ್ತುಗಳ ನೆನಪಿದೆಯೇ? ಹಾಗೆಯೇ ರಜಪೂತ ಯುವಕರಿಂದ ಸಾಮೂಹಿಕ ಅತ್ಯಾಚಾರ ಮತ್ತು ಮಾರಣಾಂತಿಕ ಹಲ್ಲೆಗೆ ತುತ್ತಾದ ಉತ್ತರಪ್ರದೇಶದ ಹಥ್ರಸ್‌ನ ದಲಿತ ಯುವತಿಯನ್ನೂ ನೆನಪಿಗೆ ತಂದುಕೊಳ್ಳಿ. ಆಸ್ಪತ್ರೆಯಲ್ಲಿ ನಿಧನ ಹೊಂದಿದ ಆಕೆಯ ಶವವನ್ನು ಕುಟುಂಬಕ್ಕೆ ಒಪ್ಪಿಸದೆ ಪೊಲೀಸರು ರಾತ್ರೋರಾತ್ರಿ ತಾವೇ ಸುಟ್ಟು ಹಾಕಿದ್ದು, ಅತ್ಯಾಚಾರ ಆರೋಪಿಗಳಾದ ರಜಪೂತ ಯುವಕರನ್ನು ರಕ್ಷಿಸಲು ಪ್ರಯತ್ನಿಸಿದ್ದೆಲ್ಲ ನೆನಪಿಗೆ ಬಂದೀತು. ಕಥುವಾದ ಬಾಕರ್ವಾಲ್ ಸಮುದಾಯದ ಬಾಲೆ ಆಸೀಫಾಳಿಗೆ ಮತ್ತಿನ ಔಷಧಿ ಕೊಟ್ಟು ವಾರಗಟ್ಟಲೆ ಅತ್ಯಾಚಾರ ನಡೆಸಿ ಕಲ್ಲಿನಿಂದ ತಲೆ ಜಜ್ಜಿ ಕೊಂದದ್ದು, ಆರೋಪಿಗಳನ್ನು ಬೆಂಬಲಿಸಿ ರ‍್ಯಾಲಿ ನಡೆಸಿದ್ದು ಉಂಟಲ್ಲವೇ? ಪಟ್ಟಿ ಬೆಳೆಯುತ್ತಲೇ ಹೋದೀತು.
ಮುಸ್ಲಿಮರ ಮೇಲಿನ ದಾಳಿಗೆ ಬಳಸಿಕೊಳ್ಳಲು ಮಾತ್ರವೇ ಸೀಮಿತ ‘ಬೇಟೀ ಬಚಾವೊ’ ಘೋಷಣೆ. ಬಿಜೆಪಿಗೆ ವೋಟು ಹಾಕಿಸಬಲ್ಲ ಬಲಿಷ್ಠ ಜಾತಿಗಳ ಚಂಡಪ್ರಚಂಡ ಬಾಹುಬಲಿಗಳಿಂದ ಬೇಟಿಯರನ್ನು ಬಚಾವು ಮಾಡುವ ಜವಾಬ್ದಾರಿ ಬಿಜೆಪಿಗೆ ಇಲ್ಲ. ಮೋದಿ ಸರ್ಕಾರ ದೇಶದ ಬೇಟಿಯರನ್ನು ಬಚಾಯಿಸುತ್ತಿದೆಯೋ ಅಥವಾ ಹೆಣ್ಣುಬಾಕರಿಗೆ ಬಲಿ ಕೊಡುತ್ತಿದೆಯೋ ತಿಳಿಯದು.