ಭತ್ತದ ಖರೀದಿ ಕೇಂದ್ರ ತೆರೆಯಲು ವಿಳಂಬ ಏಕೆ?
ರಾಜ್ಯದಲ್ಲಿ ಭತ್ತದ ಕಣಜ ಎಂಬ ಹೆಸರು ಪಡೆದುಕೊಂಡಿರುವ ಕೃಷ್ಣರಾಜನಗರ ತಾಲ್ಲೂಕಿನಲ್ಲಿ ಭತ್ತ ಬೆಳೆದ ರೈತರು, ಅದರ ಮಾರಾಟಕ್ಕೆ ಒಂದು ಸೂಕ್ತ ಭತ್ತ ಖರೀದಿ ಕೇಂದ್ರವಿಲ್ಲದೆ ಪರದಾಡುವಂತಾಗಿದೆ. ತಾಲ್ಲೂಕಿನಲ್ಲಿ ಶೇ.70 ರಷ್ಟು ರೈತರು ಸಾಕಷ್ಟು ಖರ್ಚು ಮಾಡಿ ಮುಖ್ಯ ಬೆಳೆಯಾಗಿ ಭತ್ತವನ್ನು ಬೆಳೆಯುತ್ತಾರೆ. ಆದರೆ ಭತ್ತಕ್ಕೆ ಸೂಕ್ತ ಬೆಲೆ ಸಿಗದೆ ಪರದಾಡುವಂತಾಗಿದೆ. ಇದರೊಂದಿಗೆ ಭತ್ತದ ಕೆಲಸಗಳು ಮುಗಿದು ಎರಡು ತಿಂಗಳುಗಳಾದರೂ ತಾಲ್ಲೂಕಿನ ಯಾವ ಭಾಗದಲ್ಲೂ ಖರೀದಿ ಕೇಂದ್ರವನ್ನು ತಾಲ್ಲೂಕು ಮತ್ತು ಜಿಲ್ಲಾಡಳಿತ ತೆರೆಯದೇ ಇರುವುದು ರೈತರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಸರ್ಕಾರ ಕ್ವಿಂಟಾಲ್ ಭತ್ತಕ್ಕೆ ̧2000 ರೂ. ಬೆಲೆ ನಿಗದಿ ಮಾಡಿದ್ದರೂ, ರೈತರಿಗೆ ಆ ಬೆಲೆ ಸಿಗದೆ, ಮಧ್ಯವರ್ತಿಗಳ ಪಾಲಾಗುತ್ತಿದೆ ಎನ್ನಲಾಗಿದೆ. ರೈತರು ತಮ್ಮ ಬೆಳೆಗಳನ್ನು ರೈಸ್‌ಮಿಲ್‌ಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಾಲ್ಲೂಕಿನಲ್ಲಿ ಭತ್ತ ಖರೀದಿ ಕೇಂದ್ರವನ್ನು ತೆರೆದು ಸರ್ಕಾರದ ನಿಗದಿಪಡಿಸಿರುವ ಬೆಲೆಯನ್ನು ನೀಡಲು ಕ್ರಮ ಕೈಗೊಳ್ಳಬೇಕು.
–ನವೀನ್ ಹಾಡ್ಯ, ಕೃಷ್ಣರಾಜನಗರ ತಾಲ್ಲೂಕು.