ಮಳೆ ದೂಷಿಸುವುದರಿಂದೇನು ಫಲ!?
ಕೆರೆಗಳೆಲ್ಲ ಬಡಾವಣೆಗಳಾದರೆ
ಮಳೆಯ ನೀರು, ಹರಿಯುದಾದರೂ ಎಲ್ಲಿಗೆ?
ರಾಜ ಕಾಲುವೆಗಳೆಲ್ಲ ಒತ್ತುವರಿಯಾದರೆ
ಮಳೆಯ ನೀರು ಸೇರುವುದಾದರೂ ಎಲ್ಲಿಗೆ?
ಮನುಷ್ಯ ಮಾಡಿದ ತಪ್ಪಿಗೆ ಮಳೆಯ
ನೀರನ್ನು, ದೂಷಿಸುವುದರಿಂದೇನು ಫಲ?
ಅಕ್ರಮ ಅನಾಚಾರದಡಿ ಮಾನವ ಮಾಡುವ
ದುರಾಕ್ರಮಗಳಿಗೆ ಬೀಳಲಿ ಬೀಗ.
ಇಳೆಯ ನೀರು ಧರೆಗೆ
ಬಿದ್ದು ಹರಿಯಲಿ ಸರಾಗ!
– ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.
ಯೋಧರಿಂದ ದಸರಾ ಉದ್ಘಾಟನೆಯಾಗಲಿ
ವಿಶ್ವ ವಿಖ್ಯಾತ ದಸರಾ ಆರಂಭಕ್ಕೆ ಕೆಲವೇ ದಿನಗಳು ಉಳಿದಿದೆ. ದಸರಾ ಉದ್ಘಾಟನೆಗೆ ನಾನಾ ಕ್ಷೇತ್ರದ ಸಾಧಕರನ್ನು ಕರೆಸಿ ಉದ್ಘಾಟನೆ ಮಾಡಿಸುವುದು ವಾಡಿಕೆ (ನಟ ನಟಿಯರು, ಸಾಹಿತಿಗಳು, ಕ್ರೀಡಾಪಟುಗಳು, ಇತ್ಯಾದಿ). ಈ ಭಾರಿ ದಸರಾವನ್ನು ೭೫ನೇ ವರ್ಷದ ಅಮೃತ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಹೋರಾಡಿದವರು ಹಾಗೂ ದೇಶ ಕಾಯುವ ಸೈನಿಕರುಗಳನ್ನು ಕರೆಸಿ ಉದ್ಘಾಟನೆ ಮಾಡಿಸಬೇಕು. ಇದರಿಂದ ಅಮೃತ ಸ್ವಾತಂತ್ರ್ಯೋತ್ಸವಕ್ಕೂ ಅರ್ಥ ಬರುತ್ತದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಅನುಭವದ ಮಾತುಗಳು ಜನರಿಗೆ ಮತ್ತಷ್ಟು ಸ್ಫೂರ್ತಿ ಯಾಗುತ್ತವೆ. ಸಾರ್ವಜನಿಕರಿಗೆ ಹೋರಾಟಗಾರರ ಮೇಲೆ ಅಭಿಮಾನ ಹೆಚ್ಚಾಗುತ್ತದೆ. ಎಲ್ಲರಿಗೂ ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ಮೂಡುತ್ತದೆ. ಈ ವರ್ಷದ ದಸರಾ ಸ್ವಾತಂತ್ರ್ಯಹೋರಾಟಗಾರರು ಹಾಗೂ ದೇಶ ಕಾಯುವ ಸೈನಿಕರಿಂದಲೇ ಉದ್ಘಾಟನೆಯಾಗಬೇಕು!
-ಎಂ. ಎಸ್. ಉಷಾ ಪ್ರಕಾಶ್, ಎಸ್. ಬಿ.ಎಂ. ಕಾಲೋನಿ, ಮೈಸೂರು.
ಅಗತ್ಯ ಕ್ರಮಗಳಿಲ್ಲದೇ ಕೆರೆಗಳ ನಾಶ
ಪಿರಿಯಾಪಟ್ಟಣ ತಾಲ್ಲೂಕಿನ ಅರೇನಹಳ್ಳಿ ಗ್ರಾಮದಲ್ಲಿ ಎರಡು ಕೆರೆಗಳಿವೆ. ಒಂದು ಹೊಸಕಟ್ಟೆ ಇನ್ನೊಂದು ಮುಳ್ಳಕೆರೆ. ಇಲ್ಲಿ ಇತ್ತೀಚೆಗೆ ಹೊಸಕಟ್ಟೆಗೆ ಒಂದಷ್ಟು ಕಾಯಕಲ್ಪ ಒದಗಿಸಲಾಗಿದೆ. ಆದರೂ ನೀರಿನ ಸೋರಿಕೆಯನ್ನು ತಡೆಯಲಾಗಿಲ್ಲ. ಹಾಗೆಯೇ ಈ ಕೆರೆಗಳಿಗೆ ಸರಿಯಾದ ತಡೆಗೋಡೆ ಆಗಲಿ, ನೀರನ್ನು ಕೃಷಿ ಚಟುವಟಿಕೆಗಳಿಗೆ ಒದಗಿಸಲು ಸದಾಕಾಲ ನೀರು ಸಂಗ್ರಹಣೆ ಮಾಡುವ ಇತರೇ ಗೇಟ್‌ಗಳಾಗಲಿ ಇಲ್ಲ. ಮಳೆ ಸಂದರ್ಭದಲ್ಲಿ ಕಾಲುವೆಯಿಂದ ಬಂದ ನೀರು ಸದಾ ಹರಿದುಹೋಗುವು ದರಿಂದ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ. ಚಿಕ್ಕ ಗೇಟ್ (ಕೂನಿ ಬಾಯಿ)ಗಳ ಸರಿಯಾದ ನಿರ್ವಹಣೆ ಇಲ್ಲದೆ ನೀರು ಸೋರಿಹೋಗುತ್ತಿದೆ. ಹೀಗೆಲ್ಲಾ ಘಟಿಸಿ ಅಗತ್ಯ ಸಂದರ್ಭಗಳಲ್ಲಿ ಅಂದರೆ ಭತ್ತ ರಾಗಿ ಇತರೇ ಕೃಷಿಗೆ ನೀರೇ ಇಲ್ಲದಂತಾಗಿ ಆಹಾರಕ್ಕೆ ಕೊರತೆ ಉಂಟಾಗುತ್ತಿದೆ. ಕೆರೆ ಹೂಳೆತ್ತುವ ಕಾರ್ಯಗಳು ಆಗಾಗ ನೆಪಕ್ಕೆ ನಡೆಯುತ್ತವೆ. ಈಗ ಮತ್ತೆ ಹೂಳು ತುಂಬಿ ಕಡಿಮೆ ನೀರು ನಿಲ್ಲುವಂತಾಗಿದೆ. ಅದರಲ್ಲೂ ಸೋರಿಕೆ ಬೇರೆ. ಹೀಗಾದರೆ ನೀರು ಅಗತ್ಯಕ್ಕೆ ತಕ್ಕಂತೆ ಹೇಗೆ ದೊರಕುತ್ತದೆ? ಹೀಗಾಗಿ ಅಗತ್ಯ ಅಂಶಗಳನ್ನು ಗಣನೆಗೆ ತೆಗೆದು–ಕೊಂಡು ಕೆರೆ ನಿರ್ಮಾಣ ಪ್ರಾಧಿಕಾರ, ನೀರಾವರಿ ಇಲಾಖೆ, ಜತೆಗೆ ಸ್ಥಳೀಯ ಆಡಳಿತ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮವನ್ನು ತುರ್ತಾಗಿ ಕೈಗೊಳ್ಳಬೇಕಿದೆ.
-ಎ. ಎಸ್. ಗೋವಿಂದೇಗೌಡ, ಅರೇನಹಳ್ಳಿ ಗ್ರಾಮ, ಪಿರಿಯಾಪಟ್ಟಣ ತಾಲ್ಲೂಕು.
ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು!
ಬೈಲಹೊಂಗಲ ತಾಲ್ಲೂಕಿನ ನೇಗಿನಹಾಳ ಶ್ರೀಗುರು ಮಡಿವಾಳೇಶ್ವರ ಮಠದ ಬಸವ ಸಿದ್ದಲಿಂಗ ಸ್ವಾಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ಆಘಾತಕಾರಿಯಾದುದು. ಅವರು ಬರೆದಿಟ್ಟ ಪತ್ರದಲ್ಲಿ ತಾವೇನೂ ತಪ್ಪು ಮಾಡಿಲ್ಲ, ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಅಂಶವಿದೆ. ಚಿತ್ರದುರ್ಗದ ಮುರುಘಾ ಶ್ರೀಗಳ ಬಂಧನ ಮತ್ತು ನಂತರದ ಬೆಳವಣಿಗೆಗಳು ಆತ್ಮಹತ್ಯೆಗೆ ಕಾರಣ. ವೈರಲ್
ಆಗಿರುವ ಧ್ವನಿಮುದ್ರಿಕೆಯಲ್ಲಿ ಬಸವ ಸಿದ್ದಲಿಂಗ ಸ್ವಾಮಿಗಳ ಹೆಸರು ಪ್ರಸ್ತಾಪವಾಗಿರುವುದರಿಂದ ಅವರು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ಘಟನೆಯ ಸತ್ಯಾಸತ್ಯತೆ ಏನೇ ಇರಲಿ, ಜನರಿಗೆ ಧೈರ್ಯ ತುಂಬಬೇಕಾದ ಸ್ಥಾನದಲ್ಲಿದ್ದ ಬಸವ ಸಿದ್ದಲಿಂಗ ಸ್ವಾಮಿಗಳೇ ಆತ್ಮಹತ್ಯೆ ಮಾಡಿಕೊಂಡಿರುವುದು ಆಘಾತಕಾರಿ ಸಂಗತಿ. ಆತ್ಮಹತ್ಯೆಯೂ ಮಹಾಪಾಪಗಳಲ್ಲಿ ಒಂದಂತೆ. ಸ್ವಾಮಿಗಳು ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಬೇಕಿತ್ತು.
-ನವೀನ್ ಕುಮಾರ್, ಜೆ.ಪಿ.ನಗರ, ಮೈಸೂರು.